ಸೋಮವಾರ, ಏಪ್ರಿಲ್ 12, 2021
31 °C

ಸಾಕುಪ್ರಾಣಿಗೆ ಕ್ಯಾಬ್‌ ಸೇವೆ

–ವಿದ್ಯಾಶ್ರೀ ಎಸ್. Updated:

ಅಕ್ಷರ ಗಾತ್ರ : | |

ಮನೆಯಲ್ಲಿ ಯಾರಾದರೂ ಒಮ್ಮಿಂದೊಮ್ಮೆಲೇ ಅನಾರೋಗ್ಯಕ್ಕೆ ತುತ್ತಾದರೆ ಗಡಿಬಿಡಿಯಿಂದ ಆಸ್ಪತ್ರೆಗೆ ಸಾಗಿಸಿ ಅಗತ್ಯ ಚಿಕಿತ್ಸೆ ಕೊಡಿಸುತ್ತೇವೆ. ಅದೇ ಮನೆಯ ಮಕ್ಕಳಂತೆ ಸಾಕಿರುವ ಸಾಕುಪ್ರಾಣಿಗಳಿಗೆ ಈ ಸಮಸ್ಯೆ ಎದುರಾದರೆ ಆಸ್ಪತ್ರೆಗೆ ಸಾಗಿಸುವುದು, ಚಿಕಿತ್ಸೆ ಕೊಡಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಮನೆಯಲ್ಲಿ ವಾಹನಗಳಿಲ್ಲದೇ ಇರುವಾಗ, ತಡರಾತ್ರಿಯಲ್ಲಿ ಇಂತಹ ಸನ್ನಿವೇಶ ಬಂದರಂತೂ ಫಜೀತಿ ಹೇಳತೀರದು.ನಗರದ ಬಹುತೇಕ ಜನರ ಈ ಸಮಸ್ಯೆಯನ್ನು ಅರಿತೇ ಸಂತೋಷ್‌ ಶೇಖರ್‌ ‘ಪೆಟ್‌ ಕ್ಯಾಬ್‌’ ಪ್ರಾರಂಭಿಸಿದ್ದಾರೆ. ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲೇ ಮೀಸಲಾದ ವಿನೂತನ ಕ್ಯಾಬ್‌ ಸೇವೆ ಇದು.

ದಿನದ 24 ಗಂಟೆಯೂ ಇದರ ಸೇವೆ ಲಭ್ಯವಿದ್ದು, ಆಸ್ಪತ್ರೆ ಮಾತ್ರವಲ್ಲದೆ ಸಾಕುಪ್ರಾಣಿಗಳನ್ನು ಏರ್‌ ಪೋರ್ಟ್‌, ಸ್ಪಾ, ಪಿಕ್‌ನಿಕ್‌ಗೂ ಈ ಕ್ಯಾಬ್‌ ಕರೆದೊಯ್ಯುತ್ತದೆ.ಈ ಸಂಸ್ಥೆಯ ಹುಟ್ಟಿನ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ. ಎಂಬಿಎ ಪದವೀಧರರಾಗಿರುವ ಸಂತೋಷ್‌ ಸ್ವಂತ ಕಂಪೆನಿ ನಡೆಸುತ್ತಿದ್ದರು. ಇವರಿಗೆ ನಾಯಿಗಳೆಂದರೆ ವಿಪರೀತ ಮೋಹ. ಬಿಡುವಿನ ವೇಳೆಯಲ್ಲಿ ಸ್ನೇಹಿತರ ನಾಯಿ ಬೋರ್ಡಿಂಗ್‌ನಲ್ಲಿ ಕಾಲ ಕಳೆಯುವುದು ಇವರ ಹವ್ಯಾಸ. ‘ಪೆಟ್‌ ಕ್ಯಾಬ್‌’ ಪ್ರಾರಂಭಿಸುವ ಆಲೋಚನೆ ಮೊಳೆತಿದ್ದೂ ಅಲ್ಲಿಯೇ.‘ನಾಯಿಯನ್ನು ಬೋರ್ಡಿಂಗ್‌ಗೆ ಬಿಡಲು ಕೆಲವರು ದುಬಾರಿ ಕಾರುಗಳಲ್ಲಿ ಬರುತ್ತಿದ್ದರು. ಕಾರಿನಲ್ಲಿ ಕೆಲವು ನಾಯಿಗಳು ಗಲೀಜು ಮಾಡಿದರೆ, ಇನ್ನು ಕೆಲವು ನಾಯಿಗಳು ಕಾರನ್ನು ತರಚಿ ಅದರ ಅಂದವನ್ನೇ ಹಾಳುಗೆಡವುತ್ತಿದ್ದವು. ನಾಯಿಯ ಮೇಲೆ ಅವರಿಗೆ ವಿಪರೀತ ಮೋಹವಿದ್ದರೂ ದುಬಾರಿ ಬೆಲೆ ತೆತ್ತು ಕೊಂಡ ಕಾರಿನ ಅವಸ್ಥೆ ನೋಡಿ  ಮಾಲೀಕರಿಗೆ ಬೇಸರ.ಇದನ್ನು ನಿರಂತರವಾಗಿ ಗಮನಿಸುತ್ತಿದ್ದ ನನಗೆ ನಾನೇಕೆ ಸಾಕುಪ್ರಾಣಿಗಳನ್ನು ಪಿಕ್‌ ಅಂಡ್‌ ಡ್ರಾಪ್‌ ಮಾಡುವ ಒಂದು ಸಂಸ್ಥೆಯನ್ನು ಹುಟ್ಟುಹಾಕಬಾರದು ಎಂಬ ಯೋಚನೆ ಹೊಳೆಯಿತು. ತಕ್ಷಣ ಕಾರ್ಯರೂಪಕ್ಕೆ ತರಲು ಸಿದ್ಧನಾದೆ’ ಎಂದು ಸಂಸ್ಥೆಯ ಹುಟ್ಟಿನ ಬಗ್ಗೆ ವಿವರಿಸುತ್ತಾರೆ  ಸಂತೋಷ್‌. ಇವರ ಜೊತೆಗೆ ನವೀನ್, ಕಾರ್ತಿಕ್‌, ಸರ್ವಾನಂದ್‌, ಸಚಿನ್‌  ಕೈಜೋಡಿಸಿದ್ದಾರೆ.ಮೈಸೂರ್‌ ಕೆನಲ್ ಕ್ಲಬ್‌ ಷೋ ಆಯೋಜಿಸಿದ್ದ ‘ಡಾಗ್‌ ಷೋ’ನಲ್ಲಿ ಮಳಿಗೆ ಹಾಕಿ, ಪೆಟ್‌ ಕ್ಯಾಬ್‌ ಯೋಜನೆಯ ಹಿಂದಿನ ಉದ್ದೇಶವನ್ನು ಸಾರಿದ್ದರು.‘ಇದೊಂದು ಹೊಸ ಪ್ರಯೋಗವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.   ಕೆಲವು ಪಶು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ವೈದ್ಯರೇ ಕ್ಯಾಬ್‌ ಸೇವೆಯ ಬಗ್ಗೆ ಸಾಕುಪ್ರಾಣಿಗಳ ಪೋಷಕರಿಗೆ ತಿಳಿಸುತ್ತಾರೆ. ಪೆಟ್‌ ಕ್ಯಾಬ್‌ ಬಗ್ಗೆ ನಾವು ಪ್ರಚಾರ ಮಾಡಿದ್ದಕ್ಕಿಂತ ಹೆಚ್ಚಾಗಿ ಮೌಖಿಕ ಪ್ರಚಾರವೇ ಹೆಚ್ಚು ಲಾಭ ಗಳಿಸಿಕೊಟ್ಟಿದೆ’ ಎನ್ನುತ್ತಾರೆ ಸಂತೋಷ್.

ಈ ಸೇವೆ ಪ್ರಾರಂಭವಾಗಿ ಆರು ತಿಂಗಳಾಗಿದೆ. ಮೊದಲು ಕೇವಲ ಒಂದು ಕ್ಯಾಬ್‌ ವ್ಯವಸ್ಥೆ ಇತ್ತು. ಬೇಡಿಕೆ ಹೆಚ್ಚಾದ ಕಾರಣ ನಗರದಲ್ಲಿ ಈಗ ಮೂರು ಕ್ಯಾಬ್‌ಗಳು ಸಂಚರಿಸುತ್ತಿವೆ.ಪೆಟ್‌ ಕ್ಯಾಬ್‌ ಪ್ರಾರಂಭಿಸುವ ಮೊದಲು ಹಲವು ಡಾಕ್ಟರ್‌ ಮತ್ತು ಸಾಕುಪ್ರಾಣಿಗಳ ಮಾಲೀಕರಿಂದ ಮಾಹಿತಿ ಸಂಗ್ರಹಿಸಿ, ಪ್ರಾಣಿಗಳಿಗೆ ಅನುಕೂಲಕರವಾಗುವಂತೆ ಕ್ಯಾಬ್‌ ಒಳಾಂಗಣ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಕ್ಯಾಬ್‌ನೊಳಗೆ ಶೇ 75ರಷ್ಟು ವೈದ್ಯಕೀಯ ಪರಿಕರಗಳಿವೆ.ಡಾಕ್ಟರ್‌, ಸಲೂನ್‌ಗಳಲ್ಲಿ ಭೇಟಿ ನಿಗದಿಯಾಗಿದ್ದರೆ ಪಶು ಪೋಷಕರು ಮೊದಲೇ ಬುಕ್‌ ಮಾಡಿಸುತ್ತಾರಂತೆ. ತೀರ ಅವಶ್ಯಕತೆಯಿದ್ದಾಗ ತುರ್ತು ಸಂದರ್ಭಗಳಲ್ಲಿಯೂ ಇವರು ಕ್ಯಾಬ್‌ ಕಳುಹಿಸುತ್ತಾರೆ. ರಾತ್ರಿ ವೇಳೆ ತುರ್ತು ಕರೆಗಳು ಹೆಚ್ಚು ಬರುತ್ತವೆಯಂತೆ. ‘ಎಲ್ಲಾ ಸಮಯದಲ್ಲೂ ಸಾಕುಪ್ರಾಣಿಗಳ ಪೋಷಕರು ನಮ್ಮೊಂದಿಗೆ ಬರುವುದಿಲ್ಲ. ನಾವೇ ಜೋಪಾನವಾಗಿ ಕರೆದುಕೊಂಡು ಹೋಗಿ ಬರುತ್ತೇವೆ. ದುಬಾರಿ ನಾಯಿಗಳಾದರೆ ಮಾತ್ರವೇ ಮಾಲೀಕರು ನಮ್ಮ ಜೊತೆ ಬರುತ್ತಾರೆ’ ಎನ್ನುತ್ತಾರೆ.‘ಇಲ್ಲಿಯವರೆಗೆ ನಾಯಿ ಮತ್ತು ಬೆಕ್ಕುಗಳನ್ನು ಕರೆದೊಯ್ಯಲು ಮಾತ್ರವೇ ನಮಗೆ ಕರೆ ಬಂದಿದೆ. ಆದರೆ ಬೇರೆ ಪ್ರಾಣಿಗಳನ್ನು ಕರೆದೊಯ್ಯಲೂ ನಾವು ತಯಾರಿದ್ದೇವೆ’ ಎಂದು ತಮ್ಮ ಸೇವೆಯನ್ನು ವಿಸ್ತರಿಸುವ ಸೂಚನೆ ನೀಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.