ಭಾನುವಾರ, ಜನವರಿ 19, 2020
28 °C

ಸಾಗರಕ್ಕೆ ಜನಜಾಗೃತಿ ಜಾಥಾ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಪರಿಸರ ಸಂರಕ್ಷಣೆಯ ಮಹತ್ವ ನಮ್ಮ ಜನಪ್ರತಿನಿಧಿಗಳ ತಲೆಗೆ ಹೋಗಿದ್ದರೆ ಹೆಸರಿನಲ್ಲಿ ಈಗ ನಡೆದಿರುವ ಪರಿಸರದ ಮೇಲಿನ ದೌರ್ಜನ್ಯ ನಡೆಯುತ್ತಿರಲಿಲ್ಲ ಎಂದು ಪ್ರಗತಿಪರ ಕೃಷಿಕ ಕುರುವರಿ ಸೀತಾರಾಮ್ ಹೇಳಿದರು.ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಪಶ್ಚಿಮಘಟ್ಟ ಉಳಿಸಿ ಆಂದೋಲನದ ಅಂಗವಾಗಿ ಕುದುರೆಮುಖದಿಂದ ಕುಪ್ಪತ್ತಗುಡ್ಡದವರೆಗೆ  ಜನಜಾಗೃತಿ ಜಾಥಾ ಭಾನುವಾರ ಸಾಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರಕ್ಕೂ ಕೃಷಿಗೂ ಅವಿನಾಭಾವ ಸಂಬಂಧ ಇದೆ. ಪರಿಸರ ಉಳಿದರೆ ಮಾತ್ರ ಕೃಷಿ ಉಳಿಯಲು ಸಾಧ್ಯ. ಈ ಸತ್ಯವನ್ನು ಇನ್ನಾದರೂ ನಮ್ಮನ್ನಾಳುವವರು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮನುಕುಲಕ್ಕೆ ಭಾರೀ ಅಪಾಯ ಕಾದಿದೆ ಎಂದರು.ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್ ಮಾತನಾಡಿ, ಅನೇಕ ಅಣೆಕಟ್ಟುಗಳ ನಿರ್ಮಾಣದಿಂದ ಆಗಿರುವ ಅನಾಹುತ ನಮ್ಮ ಕಣ್ಣೆದುರು ಇದ್ದರೂ ರೈತರ ಜಮೀನು ಮುಳುಗಿಸಿ ದಂಡಾವತಿ ಅಣೆಕಟ್ಟು ನಿರ್ಮಿಸುವ ಮಾತನಾಡುತ್ತಿರುವುದು ಅವಿವೇಕತನದ ಪರಮಾವಧಿಯಾಗಿದೆ. ಅದೇ ರೀತಿ ನೇತ್ರಾವತಿ ನದಿಯ ಹರಿವನ್ನು ತಿರುಗಿಸಿ ಬಯಲುಸೀಮೆಗೆ ನೀರುಣಿಸುವ ಯೋಜನೆ ಕೂಡ ಅವೈಜ್ಞಾನಿಕ  ಮತ್ತು ಪರಿಸರ ವಿರೋಧಿಯಾಗಿದೆ ಎಂದರು.ಸಹ್ಯಾದ್ರಿ ಗಣಿ ವಿರೋಧಿ ವೇದಿಕೆಯ ಕುಂಟುಗೋಡು ಸೀತಾರಾಮ್ ಮಾತನಾಡಿ, ರಾಜಕಾರಣಿಗಳ ದುರಾಸೆಯಿಂದ ಪಶ್ಚಿಮಘಟ್ಟದ ಮೇಲೆ ಈಗಾಗಲೇ ಅನೇಕ ಆಕ್ರಮಣ ನಡೆದಿದೆ. ಈಗಲಾದರೂ ನಾವು ಈ ಬಗ್ಗೆ ಎಚ್ಚರ ವಹಿಸದೆ ಇದ್ದಲ್ಲಿ ಅಲ್ಲಿರುವ ಅಮೂಲ್ಯ ಸಸ್ಯ ಸಂಪತ್ತು ನಾಶವಾಗಲಿದೆ ಎಂದು ಹೇಳಿದರು.ಬಿ.ಸಿ. ಚಕ್ಕೇರಿ, ಸರೋಜ ಹವಳದ್, ಶಹನಾಜ್ ಪೌಜುಧಾರ್,  ಪರಮೇಶ್ವರ ದೂಗೂರು, ಮಲೆನಾಡು ಭೂರಹಿತರ ಹೋರಾಟ ವೇದಿಕೆ ಕಬಸೆ ಅಶೋಕಮೂರ್ತಿ, ಸರ್ಜಾಶಂಕರ್ ಹರಳಿಮಠ, ಕಲಸೆ ಚಂದ್ರಪ್ಪ, ಶಿವಾನಂದ ಕುಗ್ವೆ, ವಿಶ್ವನಾಥ ಗೌಡ ಅದರಂತೆ, ಕೆ.ಬಿ.ಸೇನಾಪತಿ, ವಾಮನಗೌಡರು, ಅಶ್ವಿನಿಕುಮಾರ್  ಹಾಜರಿದ್ದರು.

ಪ್ರತಿಕ್ರಿಯಿಸಿ (+)