ಸೋಮವಾರ, ಏಪ್ರಿಲ್ 12, 2021
29 °C

ಸಾಮರ್ಥ್ಯ ತೋರಿಸಿಕೊಟ್ಟ ಮೈಕ್ ಹಸ್ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ಟ್ರೇಲಿಯಾ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್‌ಗಳಲ್ಲಿ ಮೈಕ್ ಹಸ್ಸಿ ಕೂಡಾ ಒಬ್ಬರು. ತಂಡವನ್ನು ಅಪಾಯದಿಂದ ಪಾರುಮಾಡುವುದರಲ್ಲಿ ಹಸ್ಸಿ ಅವರದ್ದು ಎತ್ತಿದ ಕೈ. ಈ ಹಿಂದೆ ಹಲವು ಬಾರಿ ಅದನ್ನು ತೋರಿಸಿಕೊಟ್ಟಿದ್ದಾರೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಸ್ಸಿ ಅರ್ಧಶತಕ ಗಳಿಸುವ ಮೂಲಕ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟರು.ಹಸ್ಸಿ ಗಾಯದ ಕಾರಣ ವಿಶ್ವಕಪ್ ಟೂರ್ನಿಗೆ ಆಸೀಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇದು ಅವರ ನಿರಾಸೆಗೆ ಕಾರಣವಾಗಿತ್ತು. ಗಾಯದಿಂದ ಚೇತರಿಸಿಕೊಳ್ಳುವ ವಿಶ್ವಾಸವಿದ್ದರೂ ನನ್ನನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದು ಅವರು ಬಹಿರಂಗವಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಟೀಕಿಸಿದ್ದರು. ಮಾತ್ರವಲ್ಲ ದೇಸಿ ಟೂರ್ನಿಯಲ್ಲಿ ಆಡಲು ಮುಂದಾಗಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ಅವರನ್ನು ಇದರಿಂದ ತಡೆಯಿತು ಎಂಬ ಸುದ್ದಿಯೂ ಹರಡಿತ್ತು. ಇದೆಲ್ಲಾ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.ಆದರೆ ಡಗ್ ಬೋಲಿಂಜರ್ ಅವರು ಗಾಯಗೊಂಡ ಕಾರಣ ಬದಲಿ ಆಟಗಾರನಾಗಿ ಹಸ್ಸಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡರು. ಮಾತ್ರವಲ್ಲ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ. ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಭಾನುವಾರ ಆಕರ್ಷಕ 54 ರನ್ ಗಳಿಸಿ ತನ್ನ ದೈಹಿಕ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನ ಬೇಡ ಎಂಬುದನ್ನು ಸಾರಿದರು.ಬೋಲಿಂಜರ್ ಅವರಿಗೆ ಬದಲಿ ಆಟಗಾರನನ್ನು ಸಿಎ ರಾಷ್ಟ್ರೀಯ ಆಯ್ಕೆ ಸಮಿತಿ ಬೇಗನೇ ಪ್ರಕಟಿಸಲಿಲ್ಲ. ಅವರು ತವರಿಗೆ ಮರಳಿ ಒಂದು ವಾರ ಕಳೆದ ಬಳಿಕವೇ ಬದಲಿ ಆಟಗಾರನಾಗಿ ಹಸ್ಸಿ ಅವರನ್ನು ಆಯ್ಕೆ ಮಾಡಲಾಯಿತು. ವೇಗದ ಬೌಲರ್‌ಗೆ ಬದಲಾಗಿ ಬ್ಯಾಟ್ಸ್‌ಮನ್‌ನ್ನು ತಂಡಕ್ಕೆ ಸೇರಿಸಿಕೊಳ್ಳುವ ಧೈರ್ಯದ ನಿರ್ಧಾರವನ್ನು ಆಸ್ಟ್ರೇಲಿಯಾ ತೆಗೆದುಕೊಂಡಿತು. ಪ್ರಮುಖ ವೇಗಿಗಳಾದ ಬ್ರೆಟ್ ಲೀ, ಮಿಷೆಲ್ ಜಾನ್ಸನ್ ಮತ್ತು ಶಾನ್ ಟೇಟ್ ಅವರು ಯಾವುದೇ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿಲ್ಲ. ಈ ಕಾರಣ ವೇಗದ ಬೌಲರ್ ಪೀಟರ್ ಸಿಡ್ಲ್‌ಗೆ ಬದಲು ಹಸ್ಸಿ ಅವರಿಗೆ ತಂಡವನ್ನು ಸೇರಿಕೊಳ್ಳುವ ‘ಅದೃಷ್ಟ’ ಒಲಿಯಿತು.ಆದರೆ ಭಾನುವಾರ ಕೀನ್ಯಾ ವಿರುದ್ಧದ ಪಂದ್ಯಕ್ಕೆ ಮೈಕ್ ಹಸ್ಸಿ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡಲು ಸಹೋದರ ಡೇವಿಡ್ ಹಸ್ಸಿ ಅವರನ್ನು ಹೊರಗೆ ಕುಳ್ಳಿರಿಸಲಾಯಿತು! ಮೈಕ್ ಹಸ್ಸಿಗೆ ಸ್ಥಾನ ನೀಡಲು ಯಾರನ್ನು ಕೈಬಿಡುವುದು ಎಂಬುದು ನಾಯಕ ರಿಕಿ ಪಾಂಟಿಂಗ್ ಅವರ ಚಿಂತೆಗೆ ಕಾರಣವಾಗಿತ್ತು. ಕೊನೆಗೆ ಡೇವಿಡ್ ಬದಲು ಅವರು ತಂಡ ಸೇರಿಕೊಂಡರು.ಕ್ಯಾಮರೂನ್ ವೈಟ್ ಅವರ ಸ್ಥಾನದಲ್ಲಿ ಮೈಕ್ ಹಸ್ಸಿ ಆಡುವುದಾಗಿ ನಿರೀಕ್ಷಿಸಲಾಗಿತ್ತು. ಆಲ್‌ರೌಂಡರ್ ವೈಟ್ ಇದುವರೆಗೆ ಪ್ರಭಾವಿ ಪ್ರದರ್ಶನ ನೀಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.