ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಾಳಜಿ

Last Updated 12 ಫೆಬ್ರವರಿ 2011, 19:30 IST
ಅಕ್ಷರ ಗಾತ್ರ

ಚಿತ್ರ: ಸೂಸೈಡ್

ಕುಡಿತ, ಪರಸ್ತ್ರೀ ಮೋಹಕ್ಕೆ ಬಲಿಯಾದ ಸಿನಿಮಾ ನಿರ್ಮಾಪಕನೊಬ್ಬ ಶ್ರೀಮಂತ ಯುವತಿಯನ್ನು ಮದುವೆಯಾಗುತ್ತಾನೆ. ಈತ ನೀಡುವ ಹಿಂಸೆ ಹಾಗೂ ದಾಂಪತ್ಯದಲ್ಲಿನ ನಿರಾಸಕ್ತಿಯಿಂದಾಗಿ ಆಕೆಗೆ ಬೇಸರ. ಈ ನಡುವೆ ನಟನಾಗುವ ಕನಸು ಕಂಡು ನಿರ್ಮಾಪಕನ ಮನೆ ಸೇರುವ ನಾಯಕನ ಸದ್ಗುಣವನ್ನು ಮೆಚ್ಚಿ, ಆಕೆ ಆತನನ್ನು ಪ್ರೇಮಿಸುತ್ತಾಳೆ. ದುಶ್ಚಟಗಳ ದಾಸನಿಂದ ಹೆಂಡತಿಗೊಂದು ಅಚ್ಚರಿ ‘ಉಡುಗೊರೆ’ ಸಿಗುತ್ತದೆ. ಅದನ್ನು ಆಕೆ ಪ್ರಿಯಕರನಿಗೆ ವರ್ಗಾಯಿಸುತ್ತಾಳೆ. ಈ ಅಚ್ಚರಿಯ ‘ಉಡುಗೊರೆಗೆ’ ಬೆಚ್ಚಿ ನಾಯಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಂತರ ಆಕೆಯೂ ಆತನನ್ನೇ ಅನುಸರಿಸುತ್ತಾಳೆ. ಆ ಉಡುಗೊರೆಯೇ ಎಚ್‌ಐವಿ!

ಇಂಥ ಸಾಮಾಜಿಕ ಸಂದೇಶವನ್ನು ಹೊತ್ತು ಈ ವಾರ ತೆರೆಕಂಡ ಚಿತ್ರ ‘ಸೂಸೈಡ್’. ಎಚ್‌ಐವಿ, ಏಡ್ಸ್ ಕುರಿತು ಎಚ್ಚರಿಕೆ ಹಾಗೂ ಆತ್ಮಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಮಹಾತ್ವಾಕಾಂಕ್ಷೆ ಹೊತ್ತ ನಿರ್ಮಾಪಕ ಪ್ರಸಾದ್ ಗುರು ಈ ಚಿತ್ರದ ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಿ ತಾವೇ ನಿರ್ದೇಶಿಸಿದ್ದಾರೆ. ಮದುವೆಯ ಮಾರನೇ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವಕನಿಂದ ಆರಂಭವಾಗುವ ಚಿತ್ರ, ಪತ್ತೇದಾರಿ ಕಥೆಯಂತೆ ಸಾಗುತ್ತದೆ. ಪ್ರಕರಣ ಭೇದಿಸಲು ಹೋದ ಪೊಲೀಸರಿಗೆ ಸಿಗುವ ನಾಯಕಿಯ ದಿನಚರಿಯಿಂದ ಚಿತ್ರ ಫ್ಲಾಷ್‌ಬ್ಯಾಕ್‌ಗೆ ಹೊರಳುತ್ತದೆ.

ಚಿತ್ರದ ಮೊದಲರ್ಧ ವೇಗವಾಗಿದೆ. ದ್ವಿತಿಯಾರ್ಧದಲ್ಲಿ ಕೆಲವೊಂದು ತಾಂತ್ರಿಕ ದೋಷ ಹಾಗೂ ತರ್ಕಕ್ಕೆ ನಿಲುಕದ ದೃಶ್ಯಗಳಿವೆ. ಇಡೀ ಚಿತ್ರ ‘ವಸು’ ಎಂಬ ನಾಯಕಿಯ ಪಾತ್ರದ ಸುತ್ತ ಗಿರಕಿ ಹೊಡೆಯುತ್ತದೆ. ‘ಒಬ್ಬರಿಗಿಂಥ ಹೆಚ್ಚು ಹೆಂಡತಿಯರನ್ನಿಟ್ಟುಕೊಂಡ ಪುರುಷ ನಮ್ಮ ಸಮಾಜದಲ್ಲಿ ದೇವರ ಸ್ಥಾನದಲ್ಲಿ ನಿಲ್ಲುತ್ತಾನೆ. ಆದರೆ ಇದೇ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಹೆಣ್ಣಿಗೆ ಕೆಳಮಟ್ಟದ ಸ್ಥಾನ ದೊರೆಯುತ್ತದೆ’ ಎಂದು ಸವಾಲೊಡ್ಡುವ ನಾಯಕಿ ಪಾತ್ರವನ್ನು ಕಿರುತೆರೆ ನಟಿ ಕಲ್ಯಾಣಿ ಸಮರ್ಥವಾಗಿ ನಿಭಾಯಿಸಿದ್ದಾರೆ. ದುಃಖದ ಸನ್ನಿವೇಶಗಳಲ್ಲಿ ಕೊಂಚ ಆಯ ತಪ್ಪಿದಂತೆ ಕಂಡರೂ ಒಟ್ಟಾರೆ ಅವರ ಅಭಿನಯ ಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ.

ಸುಚೇಂದ್ರ ಪ್ರಸಾದ್ ಕುಡುಕ ಗಂಡನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಪೊಲೀಸ್ ಅಧಿಕಾರಿ ಪಾತ್ರಧಾರಿ ಶರತ್ ಲೋಹಿತಾಶ್ವ ಹಾಗೂ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಸಂಗೀತಾ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ. ಸಾಹಸ ದೃಶ್ಯಗಳಲ್ಲಿ ಚುರುಕಾಗಿರುವ ನಾಯಕ ನಟ ಋತ್ವಿಕ್ ಅಭಿನಯದಲ್ಲಿ ಇನ್ನಷ್ಟು ಪಕ್ವವಾಗಬೇಕು.

ಬಹುಪಾಲು ಮಡಿಕೇರಿಯಲ್ಲೇ ಚಿತ್ರೀಕರಿಸಲಾದ ಈ ಚಿತ್ರ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಪ್ರೇಕ್ಷಕನಿಗೆ ನೀಡುವಲ್ಲಿ ವಿಫಲವಾಗಿದೆ. ಒಳಾಂಗಣದಲ್ಲಿ ಉತ್ತಮವಾಗಿರುವ ಛಾಯಾಗ್ರಹಣ, ಹೊರಾಂಗಣದಲ್ಲಿ ‘ಓವರ್ ಎಕ್ಸ್‌ಪೋಸ್’ ಎಂಬಂತೆ ಭಾಸವಾಗುತ್ತದೆ (ಛಾಯಾಗ್ರಹಣ: ಸುರೇಂದ್ರನಾಥ ಬೇಗೂರು). ರವೀಶ್ ಅವರು ನೀಡಿರುವ ಸಂಗೀತ ಹಾಗೂ ಕೆ.ರಾಮನಾರಾಯಣ್ ಹಾಗೂ ಪಾಂಡು ಅವರ ಸಾಹಿತ್ಯದಿಂದ ಹೊರಹೊಮ್ಮಿರುವ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT