ಭಾನುವಾರ, ಏಪ್ರಿಲ್ 11, 2021
25 °C

ಸಾಮಾಜಿಕ ನ್ಯಾಯ ದೊರಕಿಸಿಕೊಡದಿದ್ದರೆ ದೇವರೂ ಕ್ಷಮಿಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ತಿರುಪತಿ ತಿಮ್ಮಪ್ಪನಿಗೆ 46 ಕೋಟಿ ರೂ.ಗಳ ಕಿರೀಟವನ್ನು ಹಾಕಿದರೂ, ಮುಖ್ಯಮಂತ್ರಿ ಆಗಿದ್ದರೂ ಜೈಲುವಾಸ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ. ಅಧಿಕಾರ ನಡೆಸುವವರು ಸಾಮಾಜಿಕ ನ್ಯಾಯ ದೊರಕಿಸಿಕೊಡದಿದ್ದರೆ ನಮ್ಮನ್ನು ದೇವರೂ ಕ್ಷಮಿಸುವುದಿಲ್ಲ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಜನಾರ್ದನ ರೆಡ್ಡಿ ಮತ್ತು ಯಡಿಯೂರಪ್ಪ ಅವರ ಹೆಸರನ್ನೇಳದೆ ಛೇಡಿಸಿದರು.ಭಾನುವಾರ ತಾಲ್ಲೂಕು ಕುರುಬರ ಸಂಘದವರು ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ ಅವರ ಸಹಕಾರದಿಂದ ನಿರ್ಮಿಸಿದ್ದ ಕನಕ ಭವನ ಉದ್ಘಾಟನೆ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಆಡಳಿತ ನಡೆಸುವವರು ಜನರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಮತ್ತು ಶಿಕ್ಷಣ ನೀಡದಿದ್ದರೆ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವೇ ಇಲ್ಲ. ಜನರಲ್ಲಿ ಸ್ವಾಭಿಮಾನ ಬರಬೇಕೆಂದರೆ ಎಲ್ಲರಿಗೂ ಉತ್ತಮ ಶಿಕ್ಷಣ ನೀಡಬೇಕು. ಮಾಜಿ ಶಾಸಕ ದಿವಂಗತ ದೊಡ್ಡೇಗೌಡರು ವಿದ್ಯಾವಂತರಲ್ಲದಿದ್ದರೂ ಬಡ ಮಕ್ಕಳು ವಿದ್ಯಾಭ್ಯಾಸ ಪಡೆಯಲು ಸಹಕಾರ ಆಗಲಿ ಎಂದು ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ನಿವೇಶನ ದೊರಕಿಸಿಕೊಟ್ಟು ಇಂದು ಮಕ್ಕಳು ಕಲಿಯಲು ಸಹಕಾರ ನೀಡಿದ್ದಾರೆ.ಇಂತಹ ಮನೋ ಭಾವ ಪ್ರತಿಯೊಬ್ಬ ರಾಜಕಾರಣಿಯಲ್ಲೂ ಇರಬೇಕು. ಬಸವಣ್ಣನವರು, ಕನಕದಸರು, ಪುರಸಂದರದಾಸರು 850 ವರ್ಷಗಳ ಹಿಂದೆಯೇ ವಚನಗಳ ಮೂಲಕ ಸಾಮಾಜಿಕ ನ್ಯಾಯದ ತಿರುಳನ್ನು ಸಾರಿದರು. ಆದರೆ ಯಾರೂ ಅದನ್ನು ಅಳವಡಿಸಿ ಕೊಳ್ಳಲಿಲ್ಲ. ಸಮಾಜ ಇದೇ ರೀತಿ ನಡೆದರೆ ಇನ್ನೂ ಹತ್ತು ಶತಮಾನಗಳು ಕಳೆದರೂ ಸಾಮಾಜಿಕ ನ್ಯಾಯ ಸಾಧ್ಯ ಇಲ್ಲ ಎಂದರು.ಶಾಸಕ ಎಚ್.ಡಿ. ರೇವಣ್ಣ, ಮಾಜಿ ಸಚಿವ  ಎಚ್.ಎಂ. ರೇವಣ್ಣ ಮಾತನಾಡಿದರು. ವಿವಿಧ ಮಠಗಳ ಮಠಾಧೀಶರು, ತಾಲ್ಲೂಕು ಕರುಬರ ಸಂಘದ ಅಧ್ಯಕ್ಷ ಮಾಳಿಗೇಗೌಡ, ಕಾರ್ಯದರ್ಶಿ ಎಂ.ವಿ. ದಾಶರಥಿ, ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ಪುರಸಭಾಧ್ಯಕ್ಷೆ ವಿನೋದಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲೇಶ್, ಹಾಸನ ಮೂಡಾ ಅಧ್ಯಕ್ಷ ನವಿಲೆ ಅಣ್ಣಪ್ಪ ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.