ಬುಧವಾರ, ಏಪ್ರಿಲ್ 21, 2021
30 °C

ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಗುಂದ: ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪ್ರತಿಯೊಬ್ಬರು ಗ್ರಾಮದ ನೈರ್ಮಲೀಕರಣದ ಸಾಮಾಜಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಸ್ವಾಮೀಜಿ ಕರೆ ನೀಡಿದರು.  ಸಮೀಪದ ಚಿಂಚಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಂಚಲಿ ಕಾರ್ಯಕ್ಷೇತ್ರದ ಸಹಯೋಗದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುಟುಂಬದ ಸದಸ್ಯರು ಆರೋಗ್ಯಯುತ ಜೀವನ ನಡೆಸಲು ಗ್ರಾಮ ಸ್ವಚ್ಛತೆಯ ಪರಿಕಲ್ಪನೆಯ ಬಗ್ಗೆ ಮೊದಲು ಮಹಿಳೆಯರು ಜಾಗೃತರಾಗಬೇಕು. ಮಕ್ಕಳಲ್ಲಿಯೂ ಉತ್ತಮ ಸಂಸ್ಕಾರದ ಶಿಸ್ತುನ್ನು ರೂಢಿಸಬೇಕು’ ಎಂದರು.   ಯೋಜನಾಧಿಕಾರಿ ಎಂ ರಾಘವ ಮಾತನಾಡಿ, ‘ಪರಸ್ಪರ ಸಹಕಾರ, ಸಹಬಾಳ್ವೆಯ ಒಗ್ಗಟ್ಟಿನ ಮೂಲಕ ಗ್ರಾಮೀಣ ಸಾಮರಸ್ಯ ಹಾಗೂ ಆರ್ಥಿಕ ಸದೃಢತೆಗೆ ರಚಿಸಲಾಗಿರುವ ಪ್ರಗತಿಬಂಧು ಸ್ವಸಹಾಯ ಸಂಘಗಳಿಂದ ವ್ಯವಸ್ಥೆಯನ್ನು ಬಲಪಡಿಸಲು ಪ್ರತಿಯೊಬ್ಬರು ಸಕ್ರೀಯವಾಗಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು. ಕೆವಿಎಸ್‌ಆರ್ ಮಹಾವಿದ್ಯಾಲಯದ ಉಪನ್ಯಾಸಕಿ ಶೈಲಜಾ ಮಾಳಿಕೊಪ್ಪಮಠ ಮಾತನಾಡಿ, ಮಹಿಳೆ ಸುಶಿಕ್ಷಿತರಾದರೆ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆ ಯಶಸ್ವಿಯಾಗಲು ಸಾಧ್ಯ’ ಎಂದರು.ಗ್ರಾ.ಪಂ. ಅಧ್ಯಕ್ಷ ಶರೀಫಸಾಬ್ ನದಾಫ್ ಅಧ್ಯಕ್ಷತೆ ವಹಿಸಿದ್ದರು. ಎನ್.ಎಂ. ಅರಮನಿ, ಸಿ.ಎಸ್. ಬಾಲರಡ್ಡಿ, ಮಲ್ಲಪ್ಪ ಬಾಲರಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಒಕ್ಕೂಟದ ಪದಾಧಿಕಾರಿಗಳು, ವಲಯದ ಸೇವಾನಿರತರು, ಮಹಿಳಾ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.ಸಮನ್ವಯಾಧಿಕಾರಿ ಸುಶೀಲಾ ಸ್ವಾಗತಿಸಿದರು.ನಾಗರತ್ನ ಜಿ.ನಾಯ್ಕ ನಿರೂಪಿಸಿದರು.  ಎಚ್.ಎಸ್. ಉಮ್ಮಣ್ಣವರ ವರದಿ ವಾಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.