ಶುಕ್ರವಾರ, ಜೂನ್ 25, 2021
29 °C

ಸಾಮಾಜಿಕ ಸ್ವಾಸ್ಥ್ಯದ ಮಾದರಿ ಸಂಪಾದಕೀಯ

ನರಹಳ್ಳಿ ಬಾಲಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

1944ರಿಂದ 1965ರವರೆಗೆ ಇಪ್ಪತ್ತೊಂದು ವರ್ಷಗಳ ಕಾಲ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು `ಜೀವನ~ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಈ ಸುದೀರ್ಘ ಅವಧಿಯಲ್ಲಿ `ಜೀವನ~ ಪ್ರತಿ ತಿಂಗಳೂ ಒಂದನೇ ತಾರೀಖು ತಪ್ಪದೆ ಪ್ರಕಟವಾಗಿದೆ.

 

ಮಹಾತ್ಮ ಗಾಂಧಿ ನಿಧನರಾದ ಸಂದರ್ಭದಲ್ಲಿ (ಜನವರಿ 30) ಅವರ ಕುರಿತಂತೆ ಒಂದು ಲೇಖನ ಪ್ರಕಟಿಸುವ ಉದ್ದೇಶದಿಂದ ಆ ತಿಂಗಳ ಸಂಚಿಕೆ ನಾಲ್ಕನೇ ತಾರೀಖು ಹೊರಬಂದಿತು. ಉಳಿದಂತೆ ಎಂದೂ `ಜೀವನ~ ಅನಿಯಮಿತಕಾಲಿಕವಾಗಲಿಲ್ಲ.ನಿಯತಕಾಲಿಕೆ ಪತ್ರಿಕೆಗಳ ಇತಿಹಾಸದಲ್ಲಿ ಇದೊಂದು ದಾಖಲೆ ಮಾತ್ರವಲ್ಲ, ಪತ್ರಿಕಾ ಸಂಪಾದಕರ ಶ್ರದ್ಧೆ, ಶಿಸ್ತು, ಓದುಗರ ಬಗೆಗಿನ ಗೌರವ - ಎಲ್ಲಕಾಲಕ್ಕೂ ಒಂದು ಮಾದರಿ ಎನ್ನಬಹುದು.ಮಾಸ್ತಿಯವರು ತಮ್ಮ ಪತ್ರಿಕೆಗೆ ತಪ್ಪದೆ ಸಂಪಾದಕೀಯ ಟಿಪ್ಪಣಿ ಬರೆಯುತ್ತಿದ್ದರು. ಯಾವುದೇ ಪತ್ರಿಕೆಯಾಗಲಿ ಸಂಪಾದಕೀಯ ಅತ್ಯಂತ ಮಹತ್ವದ್ದು; ಅದು ಪತ್ರಿಕೆಯ ಆತ್ಮವಿದ್ದಂತೆ. ಸಂಪಾದಕೀಯ ಬರಹ ಪತ್ರಿಕೆಯ ನಿಲುವನ್ನು ಸೂಚಿಸುತ್ತದೆ, ಮಾತ್ರವಲ್ಲದೆ ಲೋಕ ಹಿತವಾದ ಅನೇಕ ಸಂಗತಿಗಳಲ್ಲಿ ಮಾರ್ಗದರ್ಶಕವೂ ಆಗಿರುತ್ತದೆ.ಸಮಕಾಲೀನ ಸಂಗತಿಗಳ ಆಗುಹೋಗುಗಳ ಅರಿವು, ಇತಿಹಾಸ ಪ್ರಜ್ಞೆ, ವಿಸ್ತಾರವಾದ ಅಧ್ಯಯನ, ಬಹುಜನಪರವಾದ ಸಾಮಾಜಿಕ ಕಾಳಜಿ- ಇವೆಲ್ಲವೂ ಸಂಪಾದಕೀಯ ಬರಹದ ವಿನ್ಯಾಸವನ್ನು ರೂಪಿಸುತ್ತವೆ. ಮಾಸ್ತಿಯವರ ಸಂಪಾದಕೀಯ ಬರಹಗಳು ಈ ದೃಷ್ಟಿಯಿಂದ ಅಧ್ಯಯನ ಯೋಗ್ಯ.ಮಾಸ್ತಿಯವರು 1951-1965ರವರೆಗೆ ಬರೆದ ಹದಿನಾಲ್ಕು ವರ್ಷಗಳ ಸಂಪಾದಕೀಯ ಟಿಪ್ಪಣಿಗಳನ್ನು ಐದು ಸಂಪುಟಗಳಲ್ಲಿ ಕಾಲಾನುಕ್ರಮ ರೀತಿಯಲ್ಲಿ 1967ರಲ್ಲಿ ಪ್ರಕಟಿಸಿದರು. ಈಗ `ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್~ (ಎಂ.ವಿ.ಜೆ.ಕೆ. ಟ್ರಸ್ಟ್) ಈ ಸಂಪಾದಕೀಯ ಬರಹಗಳನ್ನು ವಿಷಯಾನುಕ್ರಮವಾಗಿ ವಿಂಗಡಿಸಿ ಹನ್ನೆರಡು ಭಾಗಗಳಲ್ಲಿ ಪುನರ್ ಮುದ್ರಿಸಿದೆ.ಇದೊಂದು ಓದುಗ ಸ್ನೇಹಿ ಕ್ರಮ. ಇದರಿಂದ ಓದುಗರಿಗೆ ಆ ಕಾಲದ ವಿವರಗಳು, ಅದರ ಬಗ್ಗೆ ಮಾಸ್ತಿಯವರ ನಿಲುವು ತಕ್ಷಣ ಸಿಗುತ್ತದೆ. ಅಧ್ಯಯನ ಮಾಡುವವರಿಗೆ ಇದು ಅತ್ಯಂತ ಉಪಯುಕ್ತ. ಇಲ್ಲಿಯೇ ಮತ್ತೊಂದು ಮುಖ್ಯ ಸಂಗತಿಯನ್ನೂ ಪ್ರಸ್ತಾಪಿಸಬೇಕು.ನಮ್ಮ ಮಹತ್ವದ ಲೇಖಕರ ಕೃತಿಗಳು ಅಲಭ್ಯವೆನ್ನಿಸದೆ ಸಹೃದಯ ಓದುಗರಿಗೆ ಸಿಗುವಂತಿರಬೇಕು. ಸಮಾಜ ಜಡವಾಗದೆ ಜೀವಂತವಾಗಿರಬೇಕಾದರೆ ಶ್ರೇಷ್ಠ ಮನಸ್ಸುಗಳ ಚಿಂತನೆಗಳು ಸಮಕಾಲೀನ ಸನ್ನಿವೇಶಕ್ಕೆ ಒದಗಿಬಂದು ಚಲನಶೀಲತೆಗೆ ಕಾರಣವಾಗುವಂತಿರಬೇಕು.ಅಂಥ ಚಿಂತನೆಗಳ ಜೊತೆ ಸಂವಾದ ವಾಗ್ವಾದಗಳ ಮೂಲಕ ಹೊಸ ಹುಟ್ಟು ಸಾಧ್ಯ; ಬದಲಾವಣೆ ಸಾಧ್ಯ. ಎಂ.ವಿ.ಜೆ.ಕೆ. ಟ್ರಸ್ಟ್ ಮಾಸ್ತಿಯವರ ಎಲ್ಲ ಕೃತಿಗಳೂ ಓದುಗರಿಗೆ ಲಭ್ಯವಾಗುವ ವ್ಯವಸ್ಥೆ ಮಾಡುತ್ತಿರುವುದು ಸ್ತುತ್ಯಾರ್ಹ ಸಂಗತಿ.ಬೃಹತ್ ಗಾತ್ರದ ಈ ಸಂಪಾದಕೀಯ ಸಂಪುಟಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಮಾಸ್ತಿಯವರ ಓದಿನ, ತಿಳಿವಳಿಕೆಯ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುತ್ತದೆ. ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರಗಳನ್ನು ಅವರು ಇಲ್ಲಿ ಆಪ್ತವಾಗಿ ಮನೆಮಾತಿನ ಧಾಟಿಯಲ್ಲಿ ಚರ್ಚಿಸುತ್ತಾರೆ.ವಿನಯ ಬಿಡದೆ ಮೆಲುಮಾತಿನಲ್ಲೇ ತಮ್ಮ ನಿಲುವನ್ನು, ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸುತ್ತಾರೆ. ತಾವು ಒಪ್ಪದ ವಿಚಾರಗಳನ್ನೂ ಹೇಗೆ ಗೌರವದಿಂದ ಹೇಳಬಹುದು ಎಂಬುದಕ್ಕೆ ಮಾಸ್ತಿಯವರ ಈ ಬರಹಗಳು ಉತ್ತಮ ನಿದರ್ಶನ.

 

ಮಾತ್ರವಲ್ಲ ಖಂಡಿಸಬೇಕಾದಾಗ ಸ್ಪಷ್ಟ ಮಾತುಗಳಲ್ಲಿ ವಿರೋಧಿಸಿ, ಆ ನಂತರ ಆ ವ್ಯಕ್ತಿ  ಅಥವಾ ಸಂಸ್ಥೆ ಅಥವಾ ರಾಷ್ಟ್ರ ಒಳ್ಳೆಯದು ಮಾಡಿದಾಗ ಅದನ್ನೂ ಮುಕ್ತವಾಗಿ ಪ್ರಶಂಸಿಸುವ ಕ್ರಮವೂ ಇಲ್ಲಿದೆ.ಅಂದರೆ ನಿಷ್ಪಕ್ಷಪಾತ ದೃಷ್ಟಿ ಇಲ್ಲಿಯ ಬರಹಗಳ ಮೂಲ ಗುಣ. ಇಡೀ ಬರಹದ ವಿನ್ಯಾಸವನ್ನು ಮಾಸ್ತಿಯವರು ಪ್ರಮುಖವಾಗಿ ಗೌರವಿಸುವ `ಸಂಯಮ~ ಹಾಗೂ `ಸ್ವಾತಂತ್ರ್ಯ~ - ಈ ಎರಡು ಮೌಲ್ಯಗಳು ರೂಪಿಸಿದಂತೆ ತೋರುತ್ತದೆ.ಪತ್ರಿಕಾ ಮಾಧ್ಯಮದ ಬಗ್ಗೆ ಮಾಸ್ತಿ ತಮ್ಮ ಸಂಪಾದಕೀಯ ಬರಹಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿ, ಅದರ ಮಹತ್ವವನ್ನು ಮನಗಾಣಿಸುತ್ತಾರೆ. ಒಂದು ಭಾಷೆಯ ಉನ್ನತಿಯ ಮುಖ್ಯ ಲಕ್ಷಣಗಳಲ್ಲೊಂದು ಆ ಭಾಷೆಯಲ್ಲಿ ಹಲವು ಉತ್ತಮ ಪತ್ರಿಕೆಗಳಿರುವುದು ಎಂದು ಮಾಸ್ತಿ ಭಾವಿಸುತ್ತಾರೆ.ಅದರಲ್ಲೂ ಸಾಹಿತ್ಯಕ ಕಿರು ಪತ್ರಿಕೆಗಳ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. ಶ್ರೇಷ್ಠ ಪತ್ರಿಕೆ ಎಂದರೆ ಅದರಲ್ಲಿ ಪ್ರಕಟವಾದ ಬರಹಗಳು ಮರ‌್ಯಾದೆ ಮೀರದೆ ಒಟ್ಟು ಸಮಾಜದ ಕ್ಷೇಮ ಚಿಂತನೆ ಮಾಡುವಂತಿರಬೇಕು; ಅಲ್ಪವಾದ ಕ್ಷುದ್ರ ಅಥವಾ ಸಂಕುಚಿತ ಎನ್ನಬಹುದಾದ ದೃಷ್ಟಿಯಿಂದ ಪ್ರೇರಿತವಾಗಿರಬಾರದು; ಅವು ಪ್ರಕಟಿಸುವ ಸಂಗತಿ ಶುಚಿಯಾಗಿರಬೇಕು. ಇಂಥ ಪತ್ರಿಕೆ ಜನಪ್ರಿಯವಾಗುವುದಿಲ್ಲ ನಿಜ; ಆದರೆ ಜನಹಿತ ಸಾಧಿಸುತ್ತವೆ.

 

ಜನಪ್ರಿಯತೆಯ ಹೆಸರಿನಲ್ಲಿ ರೋಚಕ ಬರಹಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದನ್ನು ದ್ರೋಹವೆಂದು ಮಾಸ್ತಿ ಭಾವಿಸುತ್ತಾರೆ. ಈ ಪತ್ರಿಕಾ ನಿಯಮಗಳನ್ನು ಅವರು ತಮ್ಮ ಸಂಪಾದಕತ್ವದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದರೆಂಬುದೂ ಮಹತ್ವದ ಸಂಗತಿ.ಪತ್ರಿಕೆ ಎಂದರೆ ಸಾಹಿತಿಗಳ ಕೆಲಸ ಎಂದು ಕೆಲವರು ಭಾವಿಸುತ್ತಾರೆ. ಪತ್ರಿಕೆಯ ಬರಹ, ಚಾಲನ ಸಾಹಿತಿಗಳ ಕೆಲಸ, ದಿಟ; ಆದರೆ ಅದರ ಪೋಷಣೆ ಜನತೆಯ ಕೆಲಸ, ಎಂದರೆ ದೇಶದ ಕಷ್ಟ ಸುಖಗಳನ್ನು ಕುರಿತು ಯೋಚಿಸಬಲ್ಲ ಪ್ರಬುದ್ಧರ ಕೆಲಸ.

 

ಕಾರ್ಖಾನೆ ಕೈಗಾರಿಕೆ, ಉದ್ಯೋಗ ವ್ಯಾಪಾರ ಯಾವುದೇ ಉದ್ಯಮದಲ್ಲಿ ತೊಡಗಿರುವ ನಮ್ಮ ಹಿರಿಯರು ಇಂಥ ಪತ್ರಿಕೆಗಳಿಗೆ ಬೆಂಬಲ ನೀಡುವುದು ತಮ್ಮ ಕರ್ತವ್ಯ ಎಂದು ಕಾಣಬೇಕು. ಓದುಗರು ಕೊಂಡು ಓದುವ ಮೂಲಕ ಪತ್ರಿಕೆಯನ್ನು ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಬೇಕು; ಸರ್ಕಾರವೂ ಇಂಥ ಪತ್ರಿಕೆಗಳನ್ನು ಪ್ರೋತ್ಸಾಹಿಸಬೇಕು.ಮಾಸ್ತಿಯವರ ಪ್ರಕಾರ ಒಂದು ಪತ್ರಿಕೆಯನ್ನು ಬೆಳೆಸುವುದೆಂದರೆ ದೇಶ ಕಟ್ಟುವ ಕೆಲಸ. ಸಮೂಹ ಮಾಧ್ಯಮದ ಮಹತ್ವವನ್ನು, ಜವಾಬ್ದಾರಿಯನ್ನು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಅವರು ತಮ್ಮ ಸಂಪಾದಕೀಯ ಬರಹಗಳಲ್ಲಿ ಮನವರಿಕೆಯಾಗುವಂತೆ ಪ್ರತಿಪಾದಿಸುತ್ತಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಚಿಂತನೆ ಮನನೀಯವಾದುದು.ಮಾಸ್ತಿಯವರು ಮತ್ತೊಂದು ಮಹತ್ವದ ಸಂಗತಿಯನ್ನು ಪ್ರಸ್ತಾಪಿಸುತ್ತಾರೆ. ಸಾಹಿತ್ಯ, ಸಂಸ್ಕೃತಿ, ಸಮೂಹ ಮಾಧ್ಯಮ ಸರ್ಕಾರ ಪೋಷಿಸಬಹುದಾದ ಕ್ಷೇತ್ರವೇ ಹೊರತಾಗಿ ತಾನೇ ರೂಢಿಸಬಹುದಾದ ಕ್ಷೇತ್ರವಲ್ಲ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸಾಹಿತಿ, ಪತ್ರಕರ್ತ, ಅಧೀನನಲ್ಲದವ ಹೇಳಬಹುದಾದ ಅನೇಕ ಸಂಗತಿಗಳನ್ನು ಹೇಳಲಾಗದ ತೊಡಕಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ.ಪತ್ರಿಕೆ ಸರ್ಕಾರದಿಂದ ಸಹಾಯ ಪಡೆದ ಪತ್ರಿಕೆ ಆಗಬಹುದು; ಅದರ ಇಷ್ಟವನ್ನು ನಡೆಸುವ ಸೇವಕ ಆಗಬಾರದು. ಐದು ದಶಕಗಳ ಹಿಂದೆ ಮಾಸ್ತಿಯವರು ತಾಳಿದ ನಿಲುವು ಇಂದು ಮತ್ತೆ ಮತ್ತೆ ನಾವು ಚಿಂತಿಸಬೇಕಾದ ಸಂಗತಿಯಾಗಿದೆ. ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧವನ್ನು ಅವರಿಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.ಮಾಸ್ತಿಯವರು ತಮ್ಮ ಸಂಪಾದಕೀಯಗಳಲ್ಲಿ ತಮ್ಮ ಕಾಲದ ಸಾಹಿತ್ಯ, ಸಂಸ್ಕೃತಿ, ಭಾಷಾ ಸಮಸ್ಯೆ, ಏಕೀಕರಣ ಚಳವಳಿ, ಪ್ರಾಂತ್ಯವಿಚಾರ, ಕಾಶ್ಮೀರ ಸಮಸ್ಯೆ, ರಾಷ್ಟ್ರ ರಾಜಕಾರಣ, ಜಾಗತಿಕ ಬಿಕ್ಕಟ್ಟುಗಳು, ಆರ್ಥಿಕ ಸಂಗತಿ- ಹೀಗೆ ಅನೇಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ; ವಾಗ್ವಾದ ಸಂವಾದಗಳಿಗೆ ಓದುಗರನ್ನು ಆಹ್ವಾನಿಸಿದ್ದಾರೆ; ಬಂದ ಪ್ರತಿಕ್ರಿಯೆಗಳಿಗೆ ಮುಂದಿನ ಸಂಪಾದಕೀಯದಲ್ಲಿ ಸ್ಪಂದಿಸಿದ್ದಾರೆ. ಹೀಗೆ ಒಂದು ರೀತಿ ಈ ಬರಹಗಳು ಸಂವೇದನಾಶೀಲ ಮನಸ್ಸುಗಳೆಲ್ಲ ಸೇರಿ ಒಂದು ಸಾಮಾಜಿಕ ಚಲನೆಯುಂಟು ಮಾಡುವ ಪ್ರಯತ್ನದಂತೆ ತೋರುತ್ತದೆ.ನಾವು ಮಾಸ್ತಿಯವರು ಇಲ್ಲಿ ವ್ಯಕ್ತಪಡಿಸಿರುವ ಎಲ್ಲ ಅಭಿಪ್ರಾಯಗಳನ್ನೂ ಒಪ್ಪಬೇಕೆಂದಿಲ್ಲ; ಹಲವು ಸಲ ಒಪ್ಪುವುದೂ ಸಾಧ್ಯವಿಲ್ಲ. ಆದರೆ ಅವರ ವಿಚಾರಗಳನ್ನು ಗೌರವದಿಂದ ಚರ್ಚಿಸಬೇಕಾಗುತ್ತದೆ, ಉಪೇಕ್ಷಿಸಲು ಸಾಧ್ಯವಿಲ್ಲ. ಕೆಲವು ಸಲ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ಈ ಕಾಲಕ್ಕೂ ಸಲ್ಲುವಂಥವು. ಉದಾಹರಣೆಗೆ, ನೆಹರೂ ಅವರ ಬಗ್ಗೆ ಮಾಸ್ತಿಯವರ ಅಭಿಪ್ರಾಯ ಗಮನಿಸಿ: `ಪಂಡಿತ ನೆಹರೂ ವ್ಯಕ್ತಿತ್ವ ಅವರ ಜತೆಯ ಜನರ ತಲೆಯ ಮೇಲೆ ಮೂರು ಮೊಳ ಎದ್ದು ನಿಂತಿದೆ.ಅವರನ್ನು ಎದುರಿಸಲು ಯೋಗ್ಯತೆಯುಳ್ಳ ಧೀರ ಜನ ಕಾಂಗ್ರೆಸ್ಸನ್ನು ಬಿಟ್ಟು ನಡೆದಿದ್ದಾರೆ. ಹೀಗೆ ಏಕೈಕ ವೀರನಾಗಿ ಪಂಡಿತರು ಉದ್ದೇಶವಿಲ್ಲದೆ ಸರ್ವಾಧಿಕಾರದ ನೆಲೆಯಲ್ಲಿ ನಿಲ್ಲುವ ಸ್ಥಿತಿ ಒದಗಿದೆ. ಇದು ದೇಶಕ್ಕೆ ಕ್ಷೇಮವಲ್ಲ ಎನ್ನುವುದು ನಮ್ಮ ಸವಿನಯ ನಿವೇದನ~ (ಪುಟ 55, ಭಾಗ 1). ಒಂದು ಪಕ್ಷವಾಗಲೀ, ರಾಜ್ಯ, ರಾಷ್ಟ್ರಗಳಾಗಲೀ ಒಬ್ಬ ವ್ಯಕ್ತಿಯನ್ನು ಅನಗತ್ಯವಾಗಿ ವೈಭವೀಕರಿಸಿದರೆ ಅಥವಾ ಏಕವ್ಯಕ್ತಿಯ ಪ್ರಭಾವ ಇನ್ನಿಲ್ಲದಷ್ಟು ಆಕ್ರಮಿಸಿದರೆ ಆಗುವ ಅಪಾಯದ ಬಗ್ಗೆ ಮಾಸ್ತಿ ಇಲ್ಲಿ ಎಚ್ಚರಿಸುತ್ತಿದ್ದಾರೆ.ಪ್ರಸ್ತುತ ನಾವು ಇಂಥ ಅಪಾಯವನ್ನು ಕಾಣುತ್ತಿದ್ದೇವೆ. ಜನಸೇವಕರೆನ್ನಿಸಿಕೊಂಡ ಜನಪ್ರತಿನಿಧಿಗಳು ಸರ್ವಾಧಿಕಾರಿಗಳಾಗಿ ರೂಪುಗೊಳ್ಳುತ್ತಿರುವ, ತನ್ನಿಚ್ಛೆಗೆ ತಕ್ಕಂತೆ ಪಕ್ಷ, ಸಂಘಟನೆ, ರಾಜ್ಯ ಎಲ್ಲವನ್ನೂ ಬಳಸಿಕೊಳ್ಳುತ್ತಿರುವ ದುರಂತ ನಮ್ಮ ಕಣ್ಣ ಮುಂದಿದೆ.ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅ.ನ. ಕೃಷ್ಣರಾಯರು ಅಧ್ಯಕ್ಷ ಭಾಷಣ ಮಾಡಿದ್ದರ ಬಗ್ಗೆ ಮಾಸ್ತಿಯವರ ಟಿಪ್ಪಣಿ ಗಮನಿಸಿ: `ಶ್ರೀಮಾನ್ ಕೃಷ್ಣರಾಯರು ತಮ್ಮ ಭಾಷಣದಲ್ಲಿ ಹಲವಾರು ತಪ್ಪು ಮಾತುಗಳನ್ನಾಡಿದ್ದಾರೆ. ಈಚೆಗೆ ಇದನ್ನು ಇವರು ಒಂದು ಸಂಪ್ರದಾಯ ಮಾಡಿಕೊಂಡಿರುವಂತೆ ಕಾಣುತ್ತದೆ. ಇದು ತುಂಬಾ ವಿಷಾದಕರ (ಪುಟ 124, ಭಾಗ 2)~. ಮುಂದೆ ಮತ್ತೊಂದೆಡೆ ಮಾಸ್ತಿ ಅನಕೃ ಬಗ್ಗೆ ಪ್ರೀತಿಯಿಂದ ಮೆಚ್ಚಿ ಮಾತನಾಡಿದ್ದೂ ದಾಖಲಾಗಿದೆ.`ಸ್ವತಂತ್ರ ಭಾರತದಲ್ಲಿ ಸ್ತ್ರೀಯರ ಸ್ಥಾನ~ದ ಬಗ್ಗೆ ಮಾಸ್ತಿ ಅವರು ಚರ್ಚಿಸುತ್ತ ಕೌಟುಂಬಿಕ ಹಿನ್ನೆಲೆಯಲ್ಲಿ ಸ್ತ್ರೀಯ ಸಮಸ್ಯೆಯನ್ನು ವಿಶ್ಲೇಷಿಸುತ್ತಾರೆ; ಕುಟುಂಬ ರಕ್ಷಣೆ ಸ್ತ್ರೀಯ ಜವಾಬ್ದಾರಿ ಎಂಬ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. (ಪುಟ 98-105) ಮಾಸ್ತಿಯವರ ಚಿಂತನೆಯನ್ನು ಒಪ್ಪುವುದು ಕಷ್ಟ; ಅವರ ವಿಚಾರಗಳು ಪುರುಷ ಪ್ರಧಾನ ನೆಲೆಯ ಚಿಂತನೆಯ ಮುಂದುವರಿಕೆಯಂತೆ ತೋರುತ್ತವೆ.ಗಾಂಧಿ - ಅಂಬೇಡ್ಕರ್ ಇವರಲ್ಲಿ ನಿಸ್ಸಂದೇಹವಾಗಿ ಮಾಸ್ತಿಯವರ ಒಲವು ಗಾಂಧೀಜಿಯವರ ಕಡೆಗೆ. ಅಂಬೇಡ್ಕರ್ ಅವರ ವಿಚಾರಗಳನ್ನು ಮಾಸ್ತಿ ಕೆಲವು ಕಡೆ ಉಗ್ರವಾಗಿ ಖಂಡಿಸುತ್ತಾರೆ. ಒಂದು ಹಂತದಲ್ಲಿ, `ಅಂಬೇಡ್ಕರ್ ಮಹಾಶಯರು ತಮ್ಮ ಸ್ಥಾನದಲ್ಲಿ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ.

 

ಇಂಥವರು ರಾಷ್ಟ್ರದಲ್ಲಿ ಮಂತ್ರಿಯಾಗಬಾರದು. ಅಂಬೇಡ್ಕರ್ ಇಷ್ಟರಲ್ಲೇ ಮಂತ್ರಿ ಸ್ಥಾನದಿಂದ ಬಿಡುಗಡೆ ಹೊಂದಬಹುದು ಎಂಬ ಸುದ್ದಿ ಹೊರಟಿದೆ. ಅದನ್ನು ಹೊಂದುವುದು ಅಂಬೇಡ್ಕರರಿಗೂ ಒಳಿತು; ರಾಷ್ಟ್ರಕ್ಕೂ ಒಳಿತು~ (ನೋಡಿ 129-131, ಭಾಗ 9) ಎಂದು ಅಭಿಪ್ರಾಯ ಪಡುತ್ತಾರೆ.ಈ ಎಲ್ಲವೂ ವಾಗ್ವಾದವನ್ನು, ಚರ್ಚೆಯನ್ನು ಬೆಳೆಸಬಹುದಾದಂಥ ವಿಚಾರಗಳು. ಜಾಗತಿಕ ಸಮಸ್ಯೆಗಳ ಬಗ್ಗೆಯೂ ಮಾಸ್ತಿಯವರ ಅನೇಕ ಅಭಿಪ್ರಾಯಗಳನ್ನು ನಾವು ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ.ಆರೋಗ್ಯಕರ ಚರ್ಚೆ, ಸಂವಾದ ಯಾವುದೇ ಸಮಾಜದಲ್ಲೂ ಬೆಳವಣಿಗೆಯ, ಆರೋಗ್ಯದ ಲಕ್ಷಣ. ವೈಭವೀಕರಣ ಅಥವಾ ಅಧೀನ ಸಂಸ್ಕೃತಿ ಒಂದು ಸಮಾಜವನ್ನು ಅವನತಿಯ ಹಾದಿಯ ಕಡೆಗೆ ಕೊಂಡೊಯ್ಯುತ್ತದೆ.

 

ಮಾಸ್ತಿಯವರ ಸಂಪಾದಕೀಯ ಬರಹಗಳು ಆರೋಗ್ಯಕರ ಚರ್ಚೆಗೆ ಅವಕಾಶ ಕಲ್ಪಿಸುತ್ತವೆ; ಭಿನ್ನಾಭಿಪ್ರಾಯಗಳನ್ನು ದಿಟ್ಟವಾಗಿ ವ್ಯಕ್ತಪಡಿಸುತ್ತಾ ಪ್ರಭುತ್ವವನ್ನು ಪ್ರಶ್ನಿಸುವ ಮೂಲಕ ಜನಸಾಮಾನ್ಯರ ಆತ್ಮಗೌರವವನ್ನು ಎತ್ತಿ ಹಿಡಿಯುತ್ತವೆ. ಸಂವೇದನಾಶೀಲ ಮನಸ್ಸುಗಳನ್ನು ಚರ್ಚೆಗೆ ಆಹ್ವಾನಿಸುತ್ತವೆ.ಮಾಸ್ತಿ ಸಮಗ್ರ ಸಂಪಾದಕೀಯ

ಪು: 2523; ಬೆ: ರೂ. 1700

ಪ: ಎಂ.ವಿ.ಜಿ.ಕೆ. ಟ್ರಸ್ಟ್, ಮಾಸ್ತಿ ಮನೆ, ಗವೀಪುರ ವಿಸ್ತರಣೆ, ಬೆಂಗಳೂರು - 560019

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.