ಗುರುವಾರ , ಜನವರಿ 30, 2020
18 °C

ಸಾರಿಗೆ ಕಚೇರಿ ಉದ್ಘಾಟನೆ ನೆರವೇರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ಪಟ್ಟಣದ  ಹೊರವಲಯದ ರಾಷ್ಟ್ರೀಯ ಹೆದ್ದಾರಿ 9ರ ಬಳಿ ನಿರ್ಮಿಸುತ್ತಿರುವ ಸಹಾಯಕ ಸಾರಿಗೆ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ವಿದ್ಯುತ್‌ ಸೇರಿದಂತೆ ಇತರ  ಸೌಲಭ್ಯ ಕೊರತೆ ಕಾರಣ ಕಚೇರಿ ಉದ್ಘಾಟನೆ ನನೆಗುದಿಗೆ ಬಿದ್ದಿದೆ.ಬಿ.ಎಸ್‌.­ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಡುಗಡೆಯಾದ ₨ 1ಕೋಟಿ ಮೊತ್ತದ (ಎ.ಆರ್‌.ಟಿ.ಒ)ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ಅವಧಿ ಪೂರ್ಣ­ಗೊಂಡರೂ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ಉದ್ಘಾಟನೆ­ಯಾಗಲಿಲ್ಲ. ಈ ಕುರಿತು ಸಂಬಂಧಪಟ್ಟವರನ್ನು ವಿಚಾರಿಸಿದರೇ ಶೇ. 99ರಷ್ಟು ಕೆಲಸ ಪೂಣರ್ಗೊಂಡಿವೆ. ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಹೇಳುತ್ತಿದ್ದಾರೆ.  ಅನಗತ್ಯ ವಿಳಂಬ ಧೋರಣೆ ಅನುಸರಿಸದೇ ಶೀಘ್ರ ಉದ್ಘಾಟನೆ ನೆರವೇರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೆಜೆಪಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಸೋಮನಾಥ ವಿ.ಪಾಟೀಲ ಒತ್ತಾಯಿಸಿದ್ದಾರೆ.‘ಕಟ್ಟಡ ಶಂಕುಸ್ಥಾಪನೆ ಎರಡು ವರ್ಷ ಹಿಂದೆ ನೆರವೇರಿಸಲಾಗಿತ್ತು. ಕಟ್ಟಡದ ಸಿವಿಲ್‌ ಕೆಲಸ ಕಳೆದ 6ತಿಂಗಳ ಹಿಂದೆಯೇ ಪೂರ್ಣ­ಗೊಂಡಿವೆ. ವಿದ್ಯುತ್‌ ಸಂಪರ್ಕ, ಪ್ರಾಂಗಣದಲ್ಲಿ ನಿರ್ಮಿಸಲು ಉದ್ದೇಶಿ­ಸಿದ್ದ ಕಿರು ಉದ್ಯಾನ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಬಾಕಿ ಉಳಿದ ಕೆಲಸ ಪ್ರಗತಿಯಲ್ಲಿದ್ದು ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸಲಾಗು­ವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವರಾಜ ಮದಕಟ್ಟಿ ಹೇಳುತ್ತಾರೆ.ಕಟ್ಟಡ ಉದ್ಘಾಟನೆ ನೇರವೇರಿಸುವಂತೆ ಸಾರಿಗೆ ಸಚಿವರಿಗೆ ಆಹ್ವಾನಿಸಲಾಗಿದೆ. ಅವರು ದಿನಾಂಕ ನಿಗದಿಗೊಳಿಸಿದ ತಕ್ಷಣ ಸಾಧ್ಯವಾದಷ್ಟು ಶೀಘ್ರ ಉದ್ಘಾಟಿಸಿ, ಸೇವೆಗೆ ಸಮರ್ಪಿಸಲಾಗುವುದು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)