ಬುಧವಾರ, ಮೇ 25, 2022
23 °C

ಸಾರಿಗೆ ಸೌಲಭ್ಯ ವಂಚಿತ ಗ್ರಾಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಸ್ವಾತಂತ್ರ್ಯ ಬಂದು 64 ವಸಂತಗಳನ್ನು ಕಳೆದರೂ ತಾಲ್ಲೂಕಿನ ಹಲವಾರು ಗ್ರಾಮಗಳು ಇನ್ನೂ ಸಾರಿಗೆ ಸೌಲಭ್ಯದಿಂದ ವಂಚಿತವಾಗಿವೆ ಎಂದರೆ ಆಶ್ಚರ್ಯವಾಗಬಹುದಲ್ಲವೇ! ಆದರೂ ಇದು ಸತ್ಯ.ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಹೇಳುವ ಜನಪ್ರತಿನಿಧಿಗಳು ನಂತರ ಅದನ್ನು ಮರೆತು ಬಿಡುತ್ತಾರೆ ಎಂಬುದಕ್ಕೆ ಇನ್ನೂ ಸಾರಿಗೆ ವ್ಯವಸ್ಥೆ ಕಾಣದ ಹಳ್ಳಿಗಳೇ ಸಾಕ್ಷಿಯಾಗಿವೆ. ಕೆಲವು ಗ್ರಾಮಗಳ ಜನರು ಆಟೋಗಳಿಗೆ ಹೆಚ್ಚು ಹಣ ತೆತ್ತು ಪಟ್ಟಣ ಪ್ರದೇಶಗಳಿಗೆ ಬಂದರೆ, ಕೆಲವು ಗ್ರಾಮಗಳ ಜನರಿಗೆ ಇನ್ನೂ ನಡೆದುಕೊಂಡೇ ಬರುವ ಪರಿಸ್ಥಿತಿ ಇದೆ. ಆಟೋ, ಲಗೇಜ್ ಆಟೋಗಳು ಇಲ್ಲದೇ ಇದ್ದರೆ ಈ ಗ್ರಾಮೀಣ ಭಾಗದ ಜನರು ಪಟ್ಟಣದ ಪ್ರದೇಶಗಳಿಗೆ ಬರಲು ಹರಸಾಹಸಪಡಬೇಕಾಗಿತ್ತು.ತಾಲ್ಲೂಕಿನ ಕುಳೇನೂರು, ಶಿವಕುಳೇನೂರು, ಹೊನ್ನೆಮರದಹಳ್ಳಿ, ಬೊಮ್ಮೇನಹಳ್ಳಿ, ಗೊಲ್ಲರಹಳ್ಳಿ, ಚಿಕ್ಕಬ್ಬಿಗೆರೆ, ಈರಗನಹಳ್ಳಿ, ವಡ್ಡರ ರಾಮೇನಹಳ್ಳಿ, ಕೆ. ರಾಮೇನಹಳ್ಳಿ, ನಿಂಬಾಪುರ, ಹಿರೇಉಡ ತಾಂಡಾ, ಚನ್ನೇನಹಳ್ಳಿ, ಅಣಪುರ, ಅಸ್ತಾಫನಹಳ್ಳಿ, ಶೆಟ್ಟಿಹಳ್ಳಿ, ಕೆ. ಲಕ್ಷ್ಮೀಸಾಗರ, ಮಲ್ಲಿಗೆರೆ, ದಿಗ್ಗೇನಹಳ್ಳಿ, ಸಾರಥಿ, ಸಾರಥಿ ಹೊಸೂರು, ಮಿಯಾಪುರ, ಚಿಕ್ಕಕುರುಬರಹಳ್ಳಿ, ಮಾದೇನಹಳ್ಳಿ, ಗುರುರಾಜಪುರ, ಎನ್. ಬಸವಾಪುರ, ಗರಗ, ಗುಳ್ಳೇಹಳ್ಳಿ, ಮುದಿಗೆರೆ, ಶ್ರೀನಿವಾಸಪುರ, ತಿಪ್ಪಗೊಂಡನಹಳ್ಳಿ, ಮೇದುಗೊಂಡನಹಳ್ಳಿ, ಬೀಡುಗೊಂಡನಹಳ್ಳಿ, ನಾರಶೆಟ್ಟಿಹಳ್ಳಿ, ಸೋಮಶೆಟ್ಟಿಹಳ್ಳಿ, ಸಿದ್ದಾಪುರ, ಮಲಹಾಳ್ ಗೊಲ್ಲರಹಟ್ಟಿ, ರೊಪ್ಪದಹಟ್ಟಿ, ದಂಡಿಗೇನಹಳ್ಳಿ, ಹಲಕನಾಳ್, ಜಮ್ಮಾಪುರ ತಾಂಡಾ, ಉಪನಾಯಕನಹಳ್ಳಿ, ದುರ್ವಿಗೆರೆ ಮುಂತಾದ ಗ್ರಾಮಗಳು ಇದುವರೆಗೆ ಸಾರಿಗೆ ಸೌಲಭ್ಯದಿಂದ ವಂಚಿತವಾಗಿವೆ.ಇನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ದಾವಣಗೆರೆಯಿಂದ ಬೆಂಗಳೂರಿಗೆ ಖಾಲಿಯಾಗಿ ಒಂದರ ಹಿಂದೆ ಒಂದರಂತೆ ಸಂಚರಿಸುತ್ತವೆ. ಇದರಿಂದ ಸಂಸ್ಥೆಗೆ ನಷ್ಟವುಂಟಾಗುತ್ತಿದೆ.ಆದರೂ, ದಾವಣಗೆರೆ ಡಿಪೋದಿಂದ ತಾಲ್ಲೂಕಿನ ಚನ್ನಗಿರಿ ಪಟ್ಟಣಕ್ಕೆ ದಾವಣಗೆರೆಯಿಂದ ಕೇವಲ ಆರು ಬಸ್‌ಗಳನ್ನು ಬಿಟ್ಟಿರುವುದನ್ನು ಬಿಟ್ಟರೆ ಗ್ರಾಮೀಣ ಪ್ರದೇಶಗಳಿಗೆ ಯಾವುದೇ ರೀತಿಯ ಬಸ್‌ಗಳನ್ನು ಕಲ್ಪಿಸಿಲ್ಲ. ಚನ್ನಗಿರಿಯಿಂದ ಚಿತ್ರದುರ್ಗ ಹಾಗೂ ಶಿವಮೊಗ್ಗ ನಗರ ಪ್ರದೇಶಗಳಿಗೆ ಹೋಗಲು ಸಾಕಷ್ಟು ಸಾರಿಗೆ ಸಂಸ್ಥೆ ಬಸ್‌ಗಳನ್ನು ಬಿಡಲಾಗಿದೆ.ಆದ್ದರಿಂದ ತಾಲ್ಲೂಕಿನ ಸಾರಿಗೆ ವ್ಯವಸ್ಥೆ ವಂಚಿತ ಗ್ರಾಮಗಳಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸೌಲಭ್ಯ ಕಲ್ಪಿಸಿದರೆ ಹಲವಾರು ಗ್ರಾಮಗಳ ಜನರಿಗೆ ಪಟ್ಟಣ ಪ್ರದೇಶಗಳಿಗೆ ಬರಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಕರೇಕಟ್ಟೆಯ ಶಿವರುದ್ರಪ್ಪ, ರಂಗಸ್ವಾಮಿ ಕಬ್ಬಳ, ಹಲವು ಗ್ರಾಮಗಳ ಗ್ರಾಮಸ್ಥರ ಒಕ್ಕೊರಲ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.