ಶನಿವಾರ, ಜನವರಿ 18, 2020
19 °C

ಸಾರ್ವಜನಿಕ ಅಹವಾಲು- ಸ್ಪಂದನೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಪಟ್ಟಣದ ಕುಂದು-ಕೊರತೆಗಳ ಕುರಿತು ಪುರಸಭೆಯ ಗಮನ ಸೆಳೆದಿರುವ ಸಾರ್ವಜನಿಕ ಅಹವಾಲುಗಳನ್ನು ಮತ್ತು ಸಲಹೆಗಳನ್ನು ಪರಿಗಣಿಸಿ ಶೀಘ್ರ ಪರಿಹಾರ ಒದಗಿಸಲು ಯತ್ನಿಸುವುದಾಗಿ ಪುರಸಭಾಧ್ಯಕ್ಷ ಎಸ್.ರಮೇಶ್ ಭರವಸೆ ನೀಡಿದರು.ಇಲ್ಲಿನ ಪುರಸಭೆ ಆವರಣದಲ್ಲಿ ಸೋಮವಾರ  ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯಲ್ಲಿ ಮಾತನಾಡಿದ ಹಿರಿಯ ನಾಗರಿಕ ಟಿ.ಹನುಮಂತಪ್ಪ, 12ನೇ ವಾರ್ಡ್‌ನಲ್ಲಿ ಕೆಲವು ಕಡೆ ರಸ್ತೆಯುದ್ದಕ್ಕೂ ಮೆಳೆಗಳು ಬೆಳೆದಿದ್ದು ಹಂದಿಗಳ, ಕಳ್ಳಕಾಕರ ಭಯದಲ್ಲಿ ಜನ ಸಂಚಾರ ಮಾಡಬೇಕಾದ ಸ್ಥಿತಿ ಇದೆ.ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಗ್ರಾಹಕ ಹೋರಾಟ ಸಮಿತಿಯ ಬಿ.ವಿ.ಮಹೇಶ್ವರಪ್ಪ ಮಾತನಾಡಿ, ಪಟ್ಟಣದ ಅನೇಕ ಕಡೆ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಇನ್ನು ಕೆಲವರಿಗೆ ಆಸ್ತಿಗಿಂತ ಹೆಚ್ಚು ಅಳತೆಗೆ ಅಕ್ರಮವಾಗಿ ಖಾತೆ ಮಾಡಲಾಗಿದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಆಶ್ರಯ ನಿವೇಶನ ಕುರಿತಂತೆ ಮಾಹಿತಿ ನೀಡಿದ ಸಿಬ್ಬಂದಿ ಈವರೆಗೆ 1006 ಮನೆಗಳು ನಿರ್ಮಾಣಗೊಂಡು ಕೆಲವು ತಳಪಾಯ ನಿರ್ಮಾಣ ಹಂತದಲ್ಲಿವೆ. ನಿವೇಶನ ಖಾಲಿ ಬಿಟ್ಟಿರುವವರ ಕಂಪ್ಯೂಟರೀಕೃತ ಪಟ್ಟಿ ಮಾಡಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಬಿ.ಟಿ.ಚಂದ್ರಶೇಖರ್, ಬಸ್ ನಿಲ್ದಾಣದ ಮುಂದಿರುವ ಅಂಬೇಡ್ಕರ್ ಪ್ರತಿಮೆಯನ್ನು ರಸ್ತೆ ವಿಸ್ತರಣೆ ಸಮಯದಲ್ಲಿ ಸ್ಥಳಾಂತರಿಸುವ ಮಾಹಿತಿ ಇದ್ದು ಅಂಬೇಡ್ಕರ್‌ರ ಕಂಚಿನ ಪ್ರತಿಮೆ ನಿರ್ಮಿಸುವಂತೆ ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ಬಡವರಿಗೆ ನಿವೇಶನ ಹಂಚಿಕೆಯಾಗಿ ದಶಕ ಕಳೆದಿದೆ. ನಿವೇಶನಕ್ಕಾಗಿ ಗುರುತಿಸಿದ ಸ್ಥಳದಲ್ಲಿ ಗಿಡ, ಗೆಂಟೆಗಳು ಬೆಳೆದು ಹಾಳು ಬಿದ್ದಿದೆ.ಅನೇಕ ಕಡೆ ಖಾಸಗಿ ನಿವೇಶನಗಳಲ್ಲಿ ಕಳೆಗಿಡಗಳು ಬೆಳೆದಿದ್ದು ನಿವೇಶನ ಸ್ವಚ್ಛಗೊಳಿಸಲು ಪುರಸಭೆಯ ಜೆಸಿಬಿ ಯಂತ್ರ ಬಳಸಿ, ಸ್ವಚ್ಛತೆ ಖರ್ಚನ್ನು ನಿವೇಶನದಾರರಿಂದ ಕಂದಾಯ ವಸೂಲು ಸಮಯದಲ್ಲಿ ಪಾವತಿಸುವಂತೆ ಸೂಚಿಸಿ ಎಂದು ಸಾರ್ವಜನಿಕರು ಆಗ್ರಹಿಸಿದರು. ಇಂದಿರಾನಗರದಲ್ಲಿ ರಸ್ತೆ ವ್ಯವಸ್ಥೆ ಸರಿಯಿಲ್ಲ ಮತ್ತು ನೀರಿನ ಪೈಪ್ ಹೂಳಲು ತೆರೆದ ಗುಂಡಿ ಮುಚ್ಚದೆ ಸಂಚಾರಕ್ಕೆ ಅಡಚಣೆಯಾಗಿದೆ.ಇದನ್ನು ಸರಿಪಡಿಸುವಂತೆ ಅನೇಕರು ಒತ್ತಾಯಿಸಿದರು. ಖಾಸಗಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪಟ್ಟಣದ ಕೆಲವು ಕಡೆ ಹೈಮಾಸ್ಟ್ ವಿದ್ಯುದ್ದೀಪ ಕೆಟ್ಟು ನಿಂತಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಕಬ್ಬಿಣದ ರಾಡ್‌ಗಳನ್ನು ಬಳಸದೆ  ಕಡಿಮೆ ಸಿಮೆಂಟ್ ಬಳಸಿ ಕಳಪೆ ಕಾಮಗಾರಿ ಮಾಡಲಾಗಿದೆ.ಇವರ ವಿರುದ್ಧ ಕ್ರಮ ಜರುಗಿಸಿ. ಅನೇಕರು ಅಡಿಕೆ ಸಿಪ್ಪೆಯನ್ನು ರಸ್ತೆಬದಿ ಮತ್ತು ಮನೆಗಳ ಪಕ್ಕ ಹಾಕುತ್ತಿದ್ದು ಇದರಿಂದ ಸೊಳ್ಳೆಕಾಟ ವಿಪರೀತವಾಗುತ್ತಿದೆ. ಇದನ್ನು ತಪ್ಪಿಸಿ ಎಂದು ಸಾರ್ವಜನಿಕರು ಮನವಿ ಮಾಡಿದರು. ಪುರಸಭೆ ಎಂಜಿನಿಯರ್ ಭಾಸ್ಕರ್, ರಸ್ತೆ ಮುಂತಾದ ಕಾಮಗಾರಿಗಳನ್ನು  ಅನುದಾನದಲ್ಲಿ ನಿರ್ಮಿಸುತ್ತಿದ್ದು, ಸದಸ್ಯರ ಸೂಚನೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.ಆದ್ಯತೆ ಇರುವಲ್ಲಿ ಶೀಘ್ರ ಕ್ರಮ ಕೈಗೊಂಡು ಕುಂದು- ಕೊರತೆ ಸರಿಪಡಿಸುವುದಾಗಿ ತಿಳಿಸಿದರು. ಈ ಎಲ್ಲ ವಿಷಯಗಳ ಕುರಿತು ಉತ್ತರಿಸಿದ ಪುರಸಭಾಧ್ಯಕ್ಷ ಎಸ್.ರಮೇಶ್, ಅಹವಾಲುಗಳನ್ನು ಗಮನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.ಸಭೆಯಲ್ಲಿ ಮುಖ್ಯಾಧಿಕಾರಿ ಓಂಕಾರ ಮೂರ್ತಿ, ಉಪಾಧ್ಯಕ್ಷೆ ಬಿ.ಟಿ.ಸಾಕಮ್ಮ, ಸದಸ್ಯರಾದ ದಯಾನಂದ್,ರುದ್ರಪ್ಪ, ಶಶಿಧರ್, ರುದ್ರಪ್ಪ, ಕುಮಾರ ಸ್ವಾಮಿ, ಖಲೀಲ್,ಜಯರಾಂ ,ಲೋಕೇಶಪ್ಪ, ದೇವರಾಜ್, ಸುಕನ್ಯಾ ಪ್ರಭುಕುಮಾರ್, ಮಲ್ಲಪ್ಪ, ಸಾರ್ವಜನಿಕರ ಪರವಾಗಿ ಕೆ.ಎಸ್.ಸೋಮಶೇಖರ್, ಪ್ರಸನ್ನಕುಮಾರ್ ಬಾಲ ಕೃಷ್ಣ, ಮಂಜುನಾಥ್, ಕುಮಾರಶಾಸ್ತ್ರಿ, ಸತೀಶ್, ಸೋಮಣ್ಣ, ಬಸವರಾಜ್ ಇದ್ದರು.

ಪ್ರತಿಕ್ರಿಯಿಸಿ (+)