ಬುಧವಾರ, ಮೇ 18, 2022
26 °C
ಬೆಂಗಳೂರು ಅಭಿವೃದ್ಧಿ

ಸಾರ್ವಜನಿಕ ಸಹಭಾಗಿತ್ವ ಇರಲಿ

ಡಾ.ಅಶ್ವಿನ್ ಮಹೇಶ್,(ಲೇಖಕರು ಲೋಕಸತ್ತಾ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ) Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಮೂಲಸೌಕರ್ಯ ವ್ಯವಸ್ಥೆ ಇಷ್ಟೊಂದು ಕಳಪೆ ಆಗಿರುವುದು ಏಕೆ? ನಮ್ಮ ರಸ್ತೆಗಳೆಲ್ಲಾ ಸಂಪೂರ್ಣ ಗುಂಡಿಮಯವಾಗಿರಲು ಕಾರಣ ಏನು? ರಾಜಕಾಲುವೆಗಳಲ್ಲಿ ಕೊಳಚೆ ನೀರು ತುಂಬಿ ತುಳುಕುತ್ತಿರುವುದು ಏಕೆ? ನಗರದ ಅರ್ಧದಷ್ಟು ಮನೆಗಳಿಗೆ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ- ನಮ್ಮ ಪ್ರಜಾಪ್ರಭುತ್ವದ `ಕೊಳಾಯಿ ವ್ಯವಸ್ಥೆ'ಯೇ ತುಂಡಾಗಿರುವುದು ಇದಕ್ಕೆಲ್ಲ ಕಾರಣ.ಕಟ್ಟಡಗಳು ಹಾಗೂ ರಸ್ತೆಗಳ ನಿರ್ಮಾಣದಿಂದ ವ್ಯವಸ್ಥೆಯನ್ನು ಸರಿಪಡಿಸಬಹುದು ಎಂದು ನಾವು ಭಾವಿಸಿದ್ದೇವೆ. ಆದರೆ, ಇದರಿಂದ ಸಮಸ್ಯೆ ಬಗೆಹರಿಯದು.ಸುಧಾರಣೆ ಆಗಬೇಕಾದ ವಿಷಯಗಳ ಪಟ್ಟಿ ದೊಡ್ಡದಿದೆ. ನಮ್ಮ ಸಾರ್ವಜನಿಕ ಮೂಲಸೌಕರ್ಯಗಳ ವಿನ್ಯಾಸವನ್ನು ಕಡ್ಡಾಯವಾಗಿ ಸುಧಾರಣೆ ಮಾಡಲೇಬೇಕಿದೆ. ನಮ್ಮ ಪಾದಚಾರಿ ಮಾರ್ಗಗಳತ್ತ (ಫುಟ್‌ಪಾತ್‌ಗಳು) ಗಮನಿಸಿದರೆ ಸಾಕು, ಅವುಗಳು ಜನ ನಡೆದಾಡುವುದಕ್ಕೆ ವಿನ್ಯಾಸಗೊಂಡವುಗಳೇ ಅಲ್ಲ ಎಂಬುದು ಮನದಟ್ಟಾಗುತ್ತದೆ.ನಾವು ನಿರ್ಮಿಸುವ ವ್ಯವಸ್ಥೆಗಳ ನಿರ್ವಹಣೆಯೂ ಚೆನ್ನಾಗಿರಬೇಕು. ದುರಂತದ ಸಂಗತಿಯೆಂದರೆ ನಿರ್ವಹಣೆಗಾಗಿ ಅನುದಾನ ಕಾದಿರಿಸುವುದನ್ನೇ ನಾವು ಮರೆತು ಬಿಡುತ್ತಿದ್ದೇವೆ. ಸರ್ಕಾರದಲ್ಲಿ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಣೆಯೂ ಅಗತ್ಯವಾಗಿ ಆಗಬೇಕಿದೆ. ಕೆಲವು ಪ್ರಮುಖ ಹುದ್ದೆಗಳಲ್ಲಿ ಅಸಮರ್ಥರೇ ತುಂಬಿದ್ದರೆ; ಇನ್ನುಳಿದ ಕೆಲವು ಹುದ್ದೆಗಳು ಖಾಲಿ ಉಳಿದಿವೆ. ನಾವು ಮಳೆ ನೀರು ಸಂಗ್ರಹ ಮಾಡುವ ಮಹತ್ವವನ್ನು ಅರಿತುಕೊಳ್ಳಬೇಕಿದೆ.ನಗರಕ್ಕೆ ಪೂರೈಕೆಯಾಗುವ ಕಾವೇರಿ ನೀರಿಗಿಂತ ಅಧಿಕ ಪ್ರಮಾಣದಲ್ಲಿ ರಾಜಧಾನಿಯಲ್ಲಿ ವರ್ಷಧಾರೆ ಸುರಿಯುತ್ತದೆ. ಬೇಸರದ ಸಂಗತಿಯೆಂದರೆ, ನಾವು ಯಾರೂ ಮಳೆ ನೀರು ಸಂಗ್ರಹ ಮಾಡುತ್ತಿಲ್ಲ.ದಾರಿ ತಪ್ಪಿರುವ ಈ ವ್ಯವಸ್ಥೆಯನ್ನು ತಹಬಂದಿಗೆ ತರುವುದು ಸುಲಭದ ವಿಷಯವಲ್ಲ. ಈಗ ಎಚ್ಚೆತ್ತುಕೊಂಡರೂ ಈ ವ್ಯವಸ್ಥೆಯನ್ನು ಸರಿಪಡಿಸಲು ಅನೇಕ ವರ್ಷಗಳೇ ಬೇಕಾದೀತು. ನಮ್ಮ ಅಸಂತೃಪ್ತಿಗೆ ಕಾರಣವಾದ ವಿಚಾರಗಳು ರೋಗದ ಕೆಲವು ಲಕ್ಷಣಗಳು ಮಾತ್ರ ಎಂಬ ಕಟು ವಾಸ್ತವವನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ಯೋಜನೆ ರೂಪಿಸುವುದು, ಅನುದಾನ (ಬಜೆಟ್) ಹೊಂದಿಸುವುದು ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆ ಇಲ್ಲಿ ಚರ್ಚೆಯಾಗಬೇಕಾದ ಪ್ರಮುಖ ವಿಚಾರಗಳು. ಈ ವಿಚಾರಗಳನ್ನು ಸಮಂಜಸವಾಗಿ ನಿರ್ವಹಿಸದೇ ಇದ್ದಲ್ಲಿ, `ಹಿಂದುಳಿದ' ಎಂಬ ರೋಗಬಾಧೆಯಿಂದ ಬಹುಕಾಲ ಪರಿತಾಪ ಹೊಂದುತ್ತಲೇ ಇರಬೇಕಾಗುತ್ತದೆ.ಮೊಟ್ಟಮೊದಲು ನಗರದ ಅಭಿವೃದ್ಧಿಗೆ ಸೂಕ್ತವಾದ ಯೋಜನೆಯೊಂದನ್ನು ಹೊಂದಬೇಕು - ಅದರಲ್ಲಿ ಮೂಲಸೌಕರ್ಯ, ಉದ್ಯೋಗ, ಶಿಕ್ಷಣ, ಸಾರ್ವಜನಿಕ ಆಸ್ತಿ ಇನ್ನಿತರ ಎಲ್ಲ ಅಂಶಗಳೂ ಅಡಕವಾಗಿರಬೇಕು. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಅಸ್ವಿತ್ವಕ್ಕೆ ಬಂದ ದಿನದಿಂದಲೂ ನಿದ್ದೆ ಮಾಡುತ್ತಿದೆ. ಈ ಎಲ್ಲ ಯೋಜನೆಗಳನ್ನು ರೂಪಿಸಿ, ಅದಕ್ಕೆ ಬೇಕಾದ ನೀಲನಕ್ಷೆಯನ್ನು ಸಿದ್ಧಪಡಿಸುವಂತಾಗಲು ಅದಕ್ಕೆ ಚುರುಕು ಮುಟ್ಟಿಸಬೇಕಾಗಿದೆ. ಇದಾದ ಬಳಿಕ, ಅಂತಿಮ ಯೋಜನೆಗೆ ಎಲ್ಲ ಇಲಾಖೆಗಳೂ ಬದ್ಧವಾಗಿರಬೇಕು. ವಿವಿಧ ಇಲಾಖೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಯೋಜನೆ ರೂಪಿಸಿ ನಗರವನ್ನು ಹಾಳುಗೆಡಹುವುದಕ್ಕೆ ಅನುವು ಮಾಡಿಕೊಡಲೇಬಾರದು.ರಾಜ್ಯ ಸರ್ಕಾರವು ನಗರಕ್ಕೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ನಾವು ಈಗ ಪ್ರತಿವರ್ಷ ವ್ಯಯಿಸುತ್ತಿರುವುದಕ್ಕಿಂತ ಕನಿಷ್ಠಪಕ್ಷ 5,000 ಕೋಟಿ ರೂಪಾಯಿ ಅನುದಾನವಾದರೂ ಹೆಚ್ಚುವರಿಯಾಗಿ ಲಭಿಸಬೇಕು. ಈ ಅನುದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂಲಕ ವಿನಿಯೋಗಿಸುತ್ತೀರೋ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಒದಗಿಸುತ್ತೀರೋ, ಅಥವಾ ಇತರ ಮೂಲಸೌಕರ್ಯ ಇಲಾಖೆಗಳ ಮೂಲಕ ಅಭಿವೃದ್ಧಿಗೆ ವಿನಿಯೋಗಿಸಬೇಕೋ ಎಂಬುದು ಚರ್ಚೆ ಆಗಬೇಕಾದ ಸಂಗತಿ.ಒಂದಂತೂ ಸ್ಪಷ್ಟ; ನಾವು ಈಗ ವ್ಯಯಿಸುತ್ತಿರುವ ಮೊತ್ತವು ಇಂದಿನ ಅಭಿವೃದ್ಧಿಯ ನಾಗಾಲೋಟದಲ್ಲಿ ಪಾಲ್ಗೊಳ್ಳಲು ಯಾವುದಕ್ಕೂ ಸಾಲದು. ಇದರೊಂದಿಗೆ ನಾವು ಆರ್ಥಿಕ ಅಭಿವೃದ್ಧಿಯ ಕಾರ್ಯತಂತ್ರವನ್ನೂ ರೂಪಿಸಬೇಕಿದೆ. ನಗರದ ಮೂಲಸೌಕರ್ಯದ ಸುಧಾರಣೆಗೆ ಆದ್ಯತೆ ನೀಡಬೇಕಿದೆ. ಉತ್ತಮ ಮೂಲಸೌಕರ್ಯ ಬೇಕು ನಿಜ, ಆದರೆ, ಅಭಿವೃದ್ಧಿಗೆ ಅದೊಂದೇ ಸಾಲದು. ಪ್ರಸ್ತುತ ಖಾಸಗಿ ರಂಗವೂ ಕೆಲವೊಂದು ವಲಯಗಳಲ್ಲಿ ಉದ್ಯೋಗ ಸೃಷ್ಟಿಸುತ್ತಿದೆ. ಇದು ಸರ್ಕಾರದ ಪರಿಧಿಯಿಂದ ಸಂಪೂರ್ಣ ಹೊರಗಿನ ವ್ಯವಸ್ಥೆ. ಸ್ಥಳೀಯ ಆರ್ಥಿಕತೆಯ ಪ್ರಮುಖ ಶಕ್ತಿ ಯಾವುದು? ನಮ್ಮ ನೇರ ಸ್ಪರ್ಧಿಗಳು ಯಾರು? ಭವಿಷ್ಯದ್ಲ್ಲಲೂ ಪ್ರಬಲ ಪೈಪೋಟಿ ಒಡ್ಡಲು ನಾವು ಏನೆಲ್ಲ ಮಾಡಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.ಆಡಳಿತದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಔಪಚಾರಿಕಗೊಳಿಸಬೇಕು. ಒಂದು ಕೋಟಿ ಜನಸಂಖ್ಯೆ ಹೊಂದಿರುವ ನಗರವನ್ನು ಕೆಲವೇ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಮಾತ್ರ ಆಳಲು ಸಾಧ್ಯವಾಗದು. ಹೆಚ್ಚು ಹೆಚ್ಚು ಜನರ ಭಾಗವಹಿಸುವಿಕೆಗೆ ಅನುವಾಗುವಂತೆ ವಾರ್ಡ್ ಸಮಿತಿಗಳನ್ನು ರಚಿಸಬೇಕು. ಅವು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು.ಪ್ರಸ್ತುತ, ಬೆರಳೆಣಿಕೆಯಷ್ಟು ವಾರ್ಡ್ ಸಮಿತಿಗಳು ಮಾತ್ರ ಸಕ್ರಿಯವಾಗಿವೆ. ಪ್ರತಿ ವಾರ್ಡ್ ಸಮಿತಿಯಲ್ಲಿ ನೆರೆಹೊರೆಯವರ ಸಂಕಷ್ಟವನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ಸದಸ್ಯರನ್ನು ಹೊಂದಬೇಕೇ ಹೊರತು ರಾಜಕೀಯ ಪುಢಾರಿಗಳ ಚೇಲಾಗಳನ್ನಲ್ಲ. ಇದಕ್ಕಾಗಿ ಸಾಮುದಾಯಿಕ ಸಹಭಾಗಿತ್ವಕ್ಕೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕಿದೆ. ಇಲ್ಲದಿದ್ದರೆ ಇದೊಂದು ಅಪಹಾಸ್ಯವಾಗಿಯೇ ಉಳಿಯಲಿದೆ.ನಗರಕ್ಕೆ ತಂತ್ರಜ್ಞಾನದ ಬೆನ್ನೆಲುಬನ್ನು ಅಗತ್ಯವಾಗಿ ನಿರ್ಮಿಸಬೇಕಿದೆ. ನಗರಾಡಳಿತ ವ್ಯವಸ್ಥೆಯ ಎಲ್ಲ ಅಂಶಗಳನ್ನು ಇದರೊಂದಿಗೆ ಜೋಡಿಸಬೇಕು ಹಾಗೂ ಇಲಾಖೆಗಳ ನಡುವೆ ಮಾಹಿತಿ ವಿನಿಮಯಕ್ಕೂ ಉನ್ನತ ವ್ಯವಸ್ಥೆಯನ್ನೂ ಹೊಂದಬೇಕಿದೆ. ಸಾರ್ವಜನಿಕ ಸುರಕ್ಷತೆಯಂತಹ ಕೆಲವೊಂದು ಕ್ಷೇತ್ರಗಳಲ್ಲಿ ಇಂತಹ ವ್ಯವಸ್ಥೆಗೆ ಸಾಕಷ್ಟು ವರ್ಷ ಹಿಂದೆಯೇ ಚಾಲನೆ ನೀಡಬೇಕಿತ್ತು. ಆದರೆ, ಈ ವಿಷಯದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಸ್ಫೋಟಿಸುವ ಪ್ರತಿಯೊಂದು ಬಾಂಬ್ ಕೂಡಾ ನಾವು ಯಾವ ವ್ಯವಸ್ಥೆ ರೂಪಿಸಿಕೊಳ್ಳಬೇಕಿತ್ತು ಎಂಬುದನ್ನು ನೆನಪಿಸುತ್ತಲೇ ಇದೆ. ಇಷ್ಟಾಗಿಯೂಯಾರೊಬ್ಬರಿಗೂ ಈ ವಿಚಾರ ಚುಚ್ಚಿದಂತೆ ಕಾಣುತ್ತಿಲ್ಲ.ಪ್ರತಿ ವಲಯದ ಪ್ರಗತಿಯನ್ನು ನಾವು ಅಳೆಯಬೇಕಿದೆ. ನಮ್ಮ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರೆಯೇ? ವಿವಿಧ ಕಾಯಿಲೆ ಪ್ರಕರಣಗಳ ಸಂಖ್ಯೆ ಎಷ್ಟಿದೆ? ಪ್ರತಿಯೊಂದು ಮಾರ್ಗದಲ್ಲಿ ಸಂಚಾರ ದಟ್ಟಣೆ ಎಷ್ಟು ಹೆಚ್ಚಿದೆ? ಇವೆಲ್ಲ ವಿಚಾರಗಳನ್ನೂ ನಿರಂತರವಾಗಿ ಮೌಲ್ಯಮಾಪನ ನಡೆಸಬೇಕಿದೆ. ಆಗ ಇದರಿಂದ ಕಲೆಹಾಕಿದ ದತ್ತಾಂಶಗಳ ಆಧಾರದಲ್ಲಿ ಸ್ಪಂದಿಸುವುದು ಸರ್ಕಾರಕ್ಕೆ ಸುಲಭವಾಗಲಿದೆ.

ಕುರುಡನೊಬ್ಬ ಆನೆಯನ್ನು ವರ್ಣಿಸುವ ರೀತಿ ನಾವು ವರ್ತಿಸುತ್ತಿದ್ದೇವೆ! ನಾವು ವರ್ಣಿಸುತ್ತಿರುವ ಪ್ರಾಣಿ ಆನೆ ಎಂಬ ಅಂಶವೂ ನಮಗೆ ತಿಳಿದಿಲ್ಲ! ಈ ಎಲ್ಲವನ್ನೂ ಕಾರ್ಯಗತಗೊಳಿಸಬೇಕಿದ್ದರೆ, ಮಾಡುವ ಪ್ರತಿಯೊಂದು ಕಾರ್ಯದ ಪ್ರತಿಫಲದ ಗ್ರಹಿಕೆ ನಮಗಿರಬೇಕು.ಪ್ರಸ್ತುತ ಎಲ್ಲ ಇಲಾಖೆಗಳೂ, ಅಂತಿಮವಾಗಿ ಏನು ಪ್ರಯೋಜನವಾಯಿತು, ಅದರ ಪ್ರತಿಫಲವೇನು ಎಂಬುದನ್ನು ಬಿಟ್ಟು ನಾವೇನು ಮಾಡಿದ್ದೇವೆ ಎಂಬುದರ ಆಧಾರದಲ್ಲೇ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುತ್ತಿವೆ. ಕೆಲವೊಂದನ್ನು ಸಾಧಿಸಲು ಸಾರ್ವಜನಿಕ ಬದ್ಧತೆಯೂ ಮುಖ್ಯ. ಇದನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿರಬೇಕು. ಅಭಿವೃದ್ಧಿ ಎಂದರೆ ಏನೆಂದು ಸ್ಪಷ್ಟವಾಗಿ ತಿಳಿಯದ ಹೊರತು ನಾವು `ಅಭಿವೃದ್ಧಿ' ಹೊಂದುವುದಕ್ಕೆ ಸಾಧ್ಯವೇ ಇಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.