ಬುಧವಾರ, ಜೂನ್ 23, 2021
22 °C

ಸಾಲುಕೊಪ್ಪಲಿನಲ್ಲಿ ಸಾಲು ಸಾಲು ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲಿಗ್ರಾಮ: ಸ್ವಚ್ಛತೆ ಕಾಣದೆ ಚರಂಡಿಯಿಂದ ಮನೆ ಮುಂದೆ ಕೊಳಚೆ ಪ್ರದೇಶ ನಿರ್ಮಾಣ, ಮುಖ್ಯರಸ್ತೆಯಲ್ಲೇ ತಲೆ ಎತ್ತಿರುವ  ಸಾಲು ಸಾಲು ತಿಪ್ಪೆಗುಂಡಿಗಳು, ಕುಡಿಯುವ ನೀರು ತರಲು ಮೈಲಿ ದೂರ ಅಲೆಯುವ ಪರಿಸ್ಥಿತಿ.-ಇವು ಸಾಲಿಗ್ರಾಮ ಹೋಬಳಿ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲುಕೊಪ್ಪಲು ಗ್ರಾಮದ ಸಮಸ್ಯೆಗಳು.ಈ ಗ್ರಾಮದಲ್ಲಿ ವಾಸ ಮಾಡುವ ಜನರಿಗೆ ಮೂಲಸೌಲಭ್ಯ ಮರೀಚಿಕೆ. ಎಲ್ಲಿ ನೋಡಿದರೂ ಕಸದ ರಾಶಿಯೇ ಕಾಣುತ್ತವೆ. ಮನೆಗಳ ಮುಂದೆ ದಶಕಗಳ ಹಿಂದೆ ನಿರ್ಮಿಸಿರುವ ಚರಂಡಿಯಲ್ಲಿ ನಿಂತಿರುವ ನೀರು ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ಜನರಿಗೆ ರೋಗಗಳು ಹರಡುವ ಭೀತಿ ಇದೆ. ಕುಡಿಯುವ ನೀರು ಸಮರ್ಪಕವಾಗಿ ಸಿಗದೆ ಮಹಿಳೆಯರು ಕೆರೆ ಕಟ್ಟೆಗಳನ್ನು ಆಶ್ರಯಿಸಿದ್ದಾರೆ.ಗ್ರಾಮದ ಮುಖ್ಯರಸ್ತೆಯಲ್ಲೇ ಸಾಲು ಸಾಲು ತಿಪ್ಪೆಗುಂಡಿಗಳು ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ಜನರು ಜ್ವರದಿಂದ ಬಳಲುವಂತೆ ಆಗಿದೆ. ಸ್ಥಳೀಯ ಆಡಳಿತ ಗ್ರಾಮದಲ್ಲಿ ಇರುವ ತಿಪ್ಪೆಗುಂಡಿಗಳನ್ನು ತೆರವು ಮಾಡಿಸಲು ಮುಂದಾಗಿಲ್ಲ ಎಂದು ಜನರು ಕಿಡಿಕಾರುತ್ತಾರೆ. ಕೆಲವು ವರ್ಷಗಳಿಂದ ಕೆಟ್ಟು ನಿಂತಿರುವ ಕೊಳವೆಬಾವಿಗಳನ್ನು ರಿಪೇರಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ಗ್ರಾಮದ ಮಹಿಳೆಯರು ಕುಡಿಯುವ ನೀರಿಗೆ ಮೈಲಿಗಳಷ್ಟು ದೂರ ನಡಿಗೆಯಲ್ಲಿ ಹೋಗಿ ನೀರು ತರುವ ಸ್ಥಿತಿ ಎದುರಾಗಿದೆ. ಆದರೂ ಸಂಬಂಧ  ಪಟ್ಟವರು ಇತ್ತ ಕಡೆ ಮುಖ ಹಾಕುತ್ತಿಲ್ಲ ಎಂದು ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ.ಈ ಗ್ರಾಮದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ 4 ಮೈಲಿ ದೂರದ ಸಾಲಿಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ  ನಡಿಗೆಯಲ್ಲೇ ತಲುಪಬೇಕು. ಅಲ್ಲಿಯ ರೋಗಿಗಳನ್ನು ಕಾಪಾಡುವವರು ಯಾರು ಎಂದು ಗ್ರಾಮದ ಮುಖಂಡ ಜವರೇಗೌಡ ಕೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.