ಶನಿವಾರ, ಮೇ 21, 2022
20 °C

ಸಾವಿನಲ್ಲಿ ಅಂತ್ಯವಾದ ಜಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾನಮತ್ತ ಸ್ನೇಹಿತರ ನಡುವೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯವಾದ ಘಟನೆ ಕಾಮಾಕ್ಷಿಪಾಳ್ಯ ಸಮೀಪದ ಬಿಆರ್‌ಐ ಕಾಲೊನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಬಿಆರ್‌ಐ ಕಾಲೊನಿ ನಿವಾಸಿ ನಾಗರಾಜ್ (55) ಸಾವನ್ನಪ್ಪಿದವರು. ಅವರ ಸ್ನೇಹಿತ ನಾರಾಯಣಪ್ಪನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.ಮೂಲತಃ ನೆಲಮಂಗಲ ತಾಲ್ಲೂಕಿನ ಅವರಿಬ್ಬರೂ ಬಿಆರ್‌ಐ ಕಾಲೊನಿಯಲ್ಲಿ ಅಕ್ಕಪಕ್ಕದ ಶೆಡ್‌ಗಳಲ್ಲಿ ವಾಸವಾಗಿದ್ದರು.ಮದ್ಯವ್ಯಸನಿಗಳಾದ ಅವರು ಕೂಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾನಮತ್ತರಾಗಿದ್ದ ಅವರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಈ ವೇಳೆ ನಾರಾಯಣಪ್ಪ, ನಾಗರಾಜ್ ಅವರನ್ನು ತಳ್ಳಿದ್ದಾನೆ. ಕೆಳಗೆ ಬಿದ್ದ ಅವರ ತಲೆಗೆ ಕಲ್ಲು ತಾಗಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಉದ್ದೇಶವಿಲ್ಲದೆ ಸಂಭವಿಸಿದ ಸಾವು ಆರೋಪದಡಿ ನಾರಾಯಣಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಮಹಿಳೆಯ ಕೊಲೆ: ದೇವರಚಿಕ್ಕನಹಳ್ಳಿ ಮುಖ್ಯರಸ್ತೆ ಬದಿಯ ಮೋರಿಯಲ್ಲಿ ಬುಧವಾರ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾಗಿರುವ ಮಹಿಳೆ ವಯಸ್ಸು ಸುಮಾರು 30 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಬೇರೊಂದು ಸ್ಥಳದಲ್ಲಿ ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ದೇವರಚಿಕ್ಕನಹಳ್ಳಿ ಮುಖ್ಯರಸ್ತೆ ಸಮೀಪದ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರು ಡಿಕ್ಕಿ: ಸಾವು

ಬೆಂಗಳೂರು:
ರಾಮಗೊಂಡನಹಳ್ಳಿ ಸಮೀಪ ಮಂಗಳವಾರ ರಾತ್ರಿ ರಸ್ತೆ ದಾಟುತ್ತಿದ್ದ ಚಂದ್ರಪ್ಪ (50) ಎಂಬುವರಿಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ರಾಮಗೊಂಡನಹಳ್ಳಿ ನಿವಾಸಿಯಾದ ಚಂದ್ರಪ್ಪ, ಕೂಲಿ ಕೆಲಸ ಮಾಡುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅವರು ಅಂಗಡಿಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಕುಂದಲಹಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅವರ ತಲೆಗೆ ತೀವ್ರತರದ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ವೈಟ್‌ಫೀಲ್ಡ್ ಸಂಚಾರ ಪೊಲೀಸರು ತಿಳಿಸಿದ್ದಾರೆ.ಮತ್ತೊಂದು ಪ್ರಕರಣ: ಉಪ್ಪಾರಪೇಟೆ ಸಮೀಪದ ಕೆ.ಎಚ್.ವೃತ್ತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರ ವಯಸ್ಸು ಸುಮಾರು 50 ವರ್ಷ ಎಂದ ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.