ಸೋಮವಾರ, ಏಪ್ರಿಲ್ 19, 2021
31 °C

ಸಾವಿರದ ಬೆಳಕಿನಲ್ಲಿ ಆದ್ಯವಚನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವಿರದ ಬೆಳಕಿನಲ್ಲಿ ಆದ್ಯವಚನಕಾರ

ಜನಸಾಮಾನ್ಯರ ಬದುಕನ್ನು ಪ್ರೇರೇಪಿಸಿದ ವಚನ ಸಾಹಿತ್ಯ ಕನ್ನಡ ಸಾಹಿತ್ಯಚರಿತ್ರೆಯ ಹೊನ್ನಬೆಳೆ. ‘ವಿಕ್ರಮಾರ್ಜುನ ವಿಜಯಂ’ನ ಪಂಪನನ್ನು ಕನ್ನಡದ ಆದಿಕವಿ ಎನ್ನಲಾಗುತ್ತದೆ. ಆದರೆ, ತಮ್ಮ ಜೀವನಾನುಭವಗಳನ್ನು ದೇಸಿ ನುಡಿಗಟ್ಟಿನಲ್ಲಿ ನೇಯ್ದ ವಚನಗಳನ್ನು ಆದಿಕಾವ್ಯಗಳೆಂದು ಪರಿಭಾವಿಸಿ, ಮೊದಲ ವಚನಕಾರ ದೇವರ ದಾಸಿಮಯ್ಯನೇ ಆದಿಕವಿ ಎಂದು ಗುರುತಿಸುವವರೂ ಇದ್ದಾರೆ. ಅಂಥ ಮೊದಲಿಗನ ಜನಿಸಿ ಸಾವಿರ ವರ್ಷಗಳಾದವು.ಹೆಣ್ಣು - ಗಂಡು, ಮೇಲು - ಕೀಳು ಮುಂತಾದ ‘ಭೇದ’ಗಳನ್ನು ಗುರುತಿಸಿ, ಹಾಸುಹೊಕ್ಕಾಗಿದ್ದ ವ್ಯವಸ್ಥೆಯ ಅನ್ಯಾಯಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸಿದ ದಾಸಿಮಯ್ಯನನ್ನು ಸಾಮಾಜಿಕ ನ್ಯಾಯದ ‘ಆದಿ ಸಿದ್ಧಾಂತಿ’, ಸೃಷ್ಟಿ ರಹಸ್ಯಗಳನ್ನು ವಿಶ್ಲೇಷಿಸಿ, ಸೃಷ್ಟಿಕರ್ತನ ಸಾರ್ವಭೌಮತ್ವವನ್ನು ಗುರುತಿಸಿದ ‘ಆದಿ ವಚನಕಾರ’ ಎನ್ನುತ್ತಾರೆ. ತನ್ನೆಲ್ಲ ವಚನಗಳನ್ನು ‘ರಾಮನಾಥ’ನಿಗೆ ಅರ್ಪಿಸಿದ ಮೊದಲಿಗನೀತ. ‘ಭಕ್ತಿಯಿಲ್ಲದ ಬಡವ ನಾನಯ್ಯ, ಕಕ್ಕಯ್ಯನ ಮನೆಯಲು ಬೇಡಿದೆ. ಚೆನ್ನಯ್ಯನ ಮನೆಯಲು ಬೇಡಿದೆ. ದಾಸಯ್ಯನ ಮನೆಯಲು ಬೇಡಿದೆ. ಎಲ್ಲ ಪುರಾತರು ನೆರೆದು ಭಕ್ತಿ ಭಿಕ್ಷವನಿಕ್ಕಿದೆಡೆ ಎನ್ನ ಪಾತ್ರೆ ತುಂಬಿತ್ತು ಕೂಡಲ ಸಂಗಮದೇವ’ ಎಂದ ಬಸವಣ್ಣನ ‘ಪುರಾತನ’ರಲ್ಲೊಬ್ಬನಾದ ದಾಸಯ್ಯನೇ ವಚನ ವಾಙ್ಮಯದಲ್ಲಿ ಹಲವು ಪ್ರಥಮಗಳ ದಾಸಿಮಯ್ಯ.ಬಸವಣ್ಣನ ಮೇಲೆ ದಾಸಿಮಯ್ಯನ ವಚನಗಳ ಪ್ರಭಾವ ನಿರೂಪಿಸಲು ಇವರಿಬ್ಬರ ಇಪ್ಪತ್ತು ವಚನಗಳನ್ನು ಮುಖಾಮುಖಿಯಾಗಿಸಿ, ವಸ್ತು ಸಾಮ್ಯತೆಯನ್ನು ಕೆಲವು ಶಬ್ದಗಳನ್ನೂ ಅನಾಮತ್ತಾಗಿ ಬಳಸಿರುವುದನ್ನು ಸಂಶೋಧರು ಗುರುತಿಸಿದ್ದಾರೆ. ಅಂಬಿಗರ ಚೌಡಯ್ಯ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಸರ್ವಜ್ಞ - ಇವರುಗಳ ಕನಿಷ್ಠ ಒಂದು ವಚನದಲ್ಲಾದರೂ ದಾಸಿಮಯ್ಯನ ಪ್ರಭಾವ ಇರುವುದನ್ನು ಹೋಲಿಸಿ ನೋಡುತ್ತಾ ಈ ಪ್ರಥಮನ ವಚನಗಳ ಪ್ರಭಾವ ಇತರ ಪ್ರಮಥರ ಮೇಲೆ ಆಗಿರುವುದನ್ನು ಗುರುತಿಲಾಗಿದೆ.            ಸ್ವತಃ ದಾಸಿಮಯ್ಯನೂ ಶರಣರ ‘ಸೂಳ್ನುಡಿಯ ನುಡಿಗಡಣ’ಗಳಿಂದ ಪ್ರಚೋದಿತನಾಗಿ, ಡೋಹರ ಕಕ್ಕಯ್ಯ, ಮಾದರ ಚೆನ್ನ, ಓಹಿಲದೇವ, ಉದ್ಭಟಯ್ಯ, ಭೋಗಯ್ಯ, ಕುಂಬಾರ ಗುಂಡಯ್ಯ, ನಂಬಿಯಂತಹ ಪ್ರಮಥರನ್ನು ನೆನಪಿಸಿಕೊಳ್ಳುವಲ್ಲಿಯೂ ಪ್ರಥಮವೆನಿಸಿಕೊಳ್ಳುತ್ತಾನೆ.ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ಒಡಲು ಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರು, ನೀ ನನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥಾ - ಎಂದು ದೇವರಿಗೆ ಸವಾಲು ಹಾಕಿದ ಮೊದಲಿಗನೂ, ಕ್ರೂರ ಒಡಲ ಹಸಿವಿನಿಂದಾಗಿ ಅನಾಹುತಗಳತ್ತ ಗಮನ ಸೆಳೆದ ಮೊದಲ ಚಿಂತಕನೂ ಆಗಿದ್ದಾನೆ.ಹೊಲೆಯರ ಬಾವಿಯಲೊಂದು ಎಲುವು ನಟ್ಟಿದ್ದರೆ, ಹೊಲೆ ಹೊಲೆಯೆಂಬುದೀ ಲೋಕವೆಲ್ಲ, ಹಲವೆಲುವಿದ್ದ ಬಾಯಿ ಒಲವರವ ನುಡಿದಡೆ, ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ ರಾಮನಾಥಾ - ಎಂದು ಬಣ್ಣಿಸಿ ಘೋರ ಅಸ್ಪೃಶ್ಯತೆಯನ್ನು ಪ್ರತಿಭಟಿಸಿದ ಪ್ರಥಮ ಸುಧಾರಕನಾಗಿದ್ದಾನೆ. ಗಂಡು ಹೆಣ್ಣಿನ ನಡುವೆ ‘ಸುಳಿವ ಆತ್ಮ ಒಂದೇ’, ಇವರ ನಡುವೆ ಭೇದ ಸಲ್ಲದು ಎಂದು ಪ್ರತಿಪಾದಿಸಿ ಸಮಾನತೆಗಾಗಿ ಧ್ವನಿ ಎತ್ತಿದ ಮೊದಲಿಗನಾಗಿದ್ದಾನೆ.ಹನ್ನೆರಡನೆಯ ಶತಮಾನದ ವಚನಕಾರರಿಗೆ ಸಿಕ್ಕಷ್ಟು ಪ್ರಚಾರ ಬಸವಪೂರ್ವ ವಚನಕಾರರಿಗೆ ಸಿಗಲಿಲ್ಲ. ಡಾ. ಫ.ಗು. ಹಳಕಟ್ಟಿಯವರು ದಾಸಿಮಯ್ಯನ ಹಲವು ವಚನಗಳನ್ನು ಸಂಗ್ರಹಿಸಿ ಪ್ರಪ್ರಥಮವಾಗಿ ಪ್ರಕಟಿಸಿದರು. ಮೈಸೂರು ಅರಸರ ವಿಶಾಲ ಮನೋಭಾವದಿಂದಾಗಿ, ಕೆಳವರ್ಗಗಳಿಗೂ ಸರಸ್ವತಿ ಮಂದಿರದ ಒಳಬಾಗಿಲು ತೆರೆಯಿತು. ವಿಶ್ವವಿದ್ಯಾಲಯಗಳೂ ಹುಟ್ಟಿದ್ದವು. ಸ್ವಾತಂತ್ರ್ಯ ಚಳವಳಿ, ಜಾತಿಗಳನ್ನು ಮುಖಾಮುಖಿಯನ್ನಾಗಿ ಮಾಡಿತು.ಇಷ್ಟೆಲ್ಲ ಗುಣಾತ್ಮಕ ಪ್ರಗತಿ ಕನ್ನಡದಲ್ಲಿ ನಡೆಯುತ್ತಿದ್ದರೂ, ದಾಸಿಮಯ್ಯನ ವಚನಗಳಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಯಾವ ವಿಶ್ವವಿದ್ಯಾಲಯವೂ ವಿಶೇಷ ಆಸಕ್ತಿ ವಹಿಸಲಿಲ್ಲವಾದರೂ, ಅಧ್ಯಯನನಿಷ್ಠರ ಗುರಿ ವಿಸ್ತಾರಗೊಳ್ಳುತ್ತಾ ಹೋದಂತೆ, ಈತನ ವಚನ ಸಂಗ್ರಹಗಳೂ ಪ್ರಕಟವಾಗತೊಡಗಿವೆ.

ವಿಶ್ವಮಾನವರಾದ ಬಸವಣ್ಣ, ಕುವೆಂಪು ಅವರಂತೆ ನಾಡ ಸ್ವತ್ತುಗಳಲ್ಲಿ ಒಬ್ಬನಾದ ದಾಸಿಮಯ್ಯನ ಬಗೆಗೆ ಸಾಹಿತ್ಯ ಪ್ರೇಮಿಗಳ ಒತ್ತಡಕ್ಕೆ ಮಣಿದು, ತಡವಾಗಿಯಾದರೂ, ಸರ್ಕಾರ 2006-07ನೇ ಸಾಲಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದೇವರ ದಾಸಿಮಯ್ಯನ ಪೀಠ ಸ್ಥಾಪಿಸುವುದಾಗಿ ಘೋಷಿಸಿತು.ತುಳಿತಕ್ಕೊಳಗಾದ ನಿರಕ್ಷರಕುಕ್ಷಿ ಕುಲಕಸುಬಿನವರ ಮನೆಗಳಲ್ಲಿ ಹುಟ್ಟಿ, ಸ್ವಂತ ಬಲದಿಂದ ಜ್ಞಾನಿಗಳಾಗಿ ಸಾಹಿತ್ಯ ಸೃಷ್ಟಿಸಿದ ವಂದನೀಯರಿಗೆ ಗೌರವ ಸಿಗುವಂತಾಗಲು ದಾಸಿಮಯ್ಯನ ಜೊತೆಗೆ ಬಸವಪೂರ್ವ ವಚನಕಾರರಿಗೂ ವ್ಯಾಪಕ ಪ್ರಚಾರ ನೀಡಿ, ಇಂದಿನ ಪೀಳಿಗೆಯವರಿಗೆ ಅವರನ್ನೆಲ್ಲಾ ಪರಿಚಯಿಸಬೇಕಾಗಿದೆ. ವಿಶ್ವಮಾನ್ಯತೆ ಪಡೆದ ಬಸವಕಾಲೀನ ವಚನ ಸಾಹಿತ್ಯದ ಹುಲುಸು ಬೆಳೆಗೆ ದಾಸಿಮಯ್ಯ ಭೂಮಿಯನ್ನು ಹಸನುಗೊಳಿಸಿ, ಸರಳ ಬೇಸಾಯಕ್ಕಾಗಿ ನೆಲ ಸಿದ್ಧಪಡಿಸಿದ ಸತ್ಯವನ್ನು ಜಗತ್ತಿಗೆ ತಿಳಿಸಬೇಕಾಗಿದೆ. ದಾಸಿಮಯ್ಯನ ವಚನಗಳ ಒಪ್ಪ ಓರಣಗಳು ನಡೆದು, ಹಿಂದಿ - ಇಂಗ್ಲಿಷ್ ಸೇರಿದಂತೆ ಇತರೆಲ್ಲ ಭಾಷೆಗಳಿಗೆ ಭಾಷಾಂತರ ಚಟುವಟಿಕೆಗಳು ನಡೆದು, ಆತನ ಬಗೆಗೂ ಸಂಶೋಧನೆ ಮುಂದುವರಿಸಬೇಕಾಗಿದೆ.ದಾಸಿಮಯ್ಯನ ವೈವಿಧ್ಯಮಯ ಅಪೂರ್ವ ವಿಚಾರಧಾರೆಯನ್ನು ಕನ್ನಡ ಮನಸ್ಸುಗಳಿಗೆ ತಲುಪಿಸುವ ಹೊಣೆ ಅಧ್ಯಯನ ಪೀಠದ ಮೇಲಿದೆ.

ದೇವರ ದಾಸಿಮಯ್ಯನ ಕಾರ್ಯಕ್ಷೇತ್ರವಾದ ಮುದನೂರು ಸಾಂಸ್ಕೃತಿಕ ಕೇಂದ್ರವಾಗಿ ಮೆರೆದಿತ್ತಾದರೂ ಈಗ ವಿಘ್ನ ಶಕ್ತಿಗಳಿಗೆ ಬಲಿಯಾಗಿದೆ. ಇಂದಿಗೂ ಕೆಲವು ಗುಡಿಗಳು ಜೀರ್ಣಾವಸ್ಥೆಯಲ್ಲಿದ್ದು ಮುರಿದುಬಿದ್ದ ಕಟ್ಟಡಗಳ ಕಲ್ಲುಗಳನ್ನೇ ಬಳಸಿ, ವಾಸದ ಮನೆಗಳನ್ನು ಕಟ್ಟಿರುವ ಸಾಧ್ಯತೆಗಳಿವೆ ಎನ್ನುವ ಸಂಶೋಧಕರು, ಹಲವು ಪ್ರಾಚೀನ ಶಿಲ್ಪಗಳನ್ನು ಅವಶೇಷಗಳಡಿಯಲ್ಲಿ ಪತ್ತೆ ಹಚ್ಚಿದ್ದಾರೆ. ಪುರಾತತ್ವ ಇಲಾಖೆಯವರ ಸಹಕಾರ ಪಡೆದು ಮುದನೂರಿನ ಇತಿಹಾಸ ಕಟ್ಟಿ ಕೊಡಬೇಕಾಗಿದೆ. ಹಂಪಿಯಂತೆ ಮುದನೂರಿಗೂ ವಿಶ್ವಪರಂಪರೆಯ ಸಂರಕ್ಷಿತ ಸ್ಥಳವನ್ನಾಗಿ ಆರಿಸಲು ಬೇಕಾದ ಅರ್ಹತೆಗಳಿದ್ದು ವಿಶ್ವಸಂಸ್ಥೆಗೆ ಕೋರಿಕೆ ಸಲ್ಲಿಸಲು ಸರ್ಕಾರ, ದೃಶ್ಯ ಮತ್ತು ಬರಹ ಮಾಧ್ಯಮಗಳು ಆಸಕ್ತಿ ವಹಿಸಬೇಕಾಗಿದೆ.ದೇವರ ದಾಸಿಮಯ್ಯ ಜಯಂತಿಯನ್ನು ಪ್ರತಿ ವರ್ಷ ಆಚರಿಸುತ್ತಿರುವ ಸಂಘ ಸಂಸ್ಥೆಗಳು, ಸಹಸ್ರಮಾನೋತ್ಸವ ಆಚರಣಾ ಸಮಿತಿಯವರು ದಾಸಿಮಯ್ಯನ ಹುಟ್ಟಿದ ವರ್ಷವನ್ನು ಖಚಿತಪಡಿಸುವಂಥ ಸಂಶೋಧನೆಗೆ ಏರ್ಪಾಡು ಮಾಡಬೇಕು. ಸರ್ಕಾರವು ‘ದಾಸಿಮಯ್ಯ ಜಯಂತಿ’ ಆಚರಣೆಯ ನಿಮಿತ್ತ ಬರುವ ಏಪ್ರಿಲ್ 9ರಂದು ನಿರ್ಬಂಧಿತ ರಜೆ ಘೋಷಿಸಿದೆ. ದಾಸಿಮಯ್ಯ ಜನ್ಮ ಸಹಸ್ರಮಾನೋತ್ಸವವನ್ನೂ ಸರ್ಕಾರವೇ ನಡೆಸಿಕೊಡುವುದರ ಜೊತೆಗೆ ಮುದನೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ, ಅದು ಸಾಹಿತ್ತಾಸಕ್ತರ ಯಾತ್ರಾಸ್ಥಳ ಆಗುವಂತೆ ಮಾಡಬೇಕು. ಆದ್ಯವಚನಕಾರ ಎಂಬ ಕಾರಣಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಲಿ, ಅಂದಿನ ಕಲ್ಬುರ್ಗಿ ಜಿಲ್ಲೆಯ ಮುದನೂರಿನಲ್ಲಿ ಹುಟ್ಟಿ ನಾಡಿಗೆ ಕೀರ್ತಿ ತಂದವನಾದುದರಿಂದ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕಾಗಿ ದೇವರ ದಾಸಿಮಯ್ಯನ ಹೆಸರಿಡಲು ಸರ್ಕಾರ ತೀರ್ಮಾನ ಕೈಗೊಳ್ಳಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.