ಮಂಗಳವಾರ, ಮಾರ್ಚ್ 9, 2021
23 °C
ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಪ್ರೊ. ಎಂ.ಐ.ಸವದತ್ತಿ

ಸಾಹಿತ್ಯಕ್ಕಷ್ಟೇ ಅಲ್ಲ; ವಿಜ್ಞಾನಕ್ಕೂ ಇರಲಿ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯಕ್ಕಷ್ಟೇ ಅಲ್ಲ; ವಿಜ್ಞಾನಕ್ಕೂ ಇರಲಿ ಪ್ರೀತಿ

ಧಾರವಾಡ: ‘ಸರ್ಕಾರವು ಸಾಹಿತ್ಯ ಹಾಗೂ ಕನ್ನಡಕ್ಕೆ ಮಾಡುವಷ್ಟು ಖರ್ಚನ್ನು ವಿಜ್ಞಾನ ಕ್ಷೇತ್ರಕ್ಕೆ ಮಾಡಿದ್ದರೆ ವೈಜ್ಞಾನಿಕ ಚಿಂತನೆ ಹಾಗೂ ಕಂದಾಚಾರ ಮುಕ್ತ ಸಮಾಜ ನಿರ್ಮಾಣದ ಕನಸು ಎಂದೋ ಈಡೇರುತ್ತಿತ್ತು’ ಎಂದು ವಿಶ್ರಾಂತ ಕುಲಪತಿ ಪ್ರೊ. ಎಂ.ಐ.ಸವದತ್ತಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು.‘ಸಾಹಿತ್ಯ ಎನ್ನುವುದು ದೇಶ, ನಾಡು ಹಾಗೂ ಬದುಕಿನ ಹಾದಿಯನ್ನು ಉತ್ತಮಗೊಳಿಸುವ ಕಡೆ ಬಳಕೆಯಾಗಬೇಕಿತ್ತು. ಆದರೆ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಹಿತಿಗಳು ತಮ್ಮ ಹಾದಿ ಕಂಡುಕೊಂಡರು. ಸರ್ಕಾರವೂ ಸಾಹಿತ್ಯಕ್ಕೆ ನೀಡುವಷ್ಟು ಮಹತ್ವವನ್ನು ವಿಜ್ಞಾನಕ್ಕೆ ನೀಡದ ಕಾರಣ ಅದು ನೇಪಥ್ಯಕ್ಕೆ ಸರಿಯಿತು’ ಎಂದರು.ಕೂಲಿಕಾರರನ್ನು ಸೃಷ್ಟಿಸುವ ಮೇಕ್‌ ಇನ್ ಇಂಡಿಯಾ:‘ಸದ್ಯದ ಪರಿಸ್ಥಿತಿಯಲ್ಲಿ ಕಲಿಸುವ ವಿದ್ಯೆ ಅವೈಜ್ಞಾನಿಕವಾಗಿದೆ. ಅದರಿಂದ ಯಾವುದೇ ತಂತ್ರಜ್ಞಾನವಾಗಲೀ ಅಥವಾ ಹೊಸ ಅನ್ವೇಷಣೆಯಾಗಲೀ ಹುಟ್ಟದು. ದೇಶದಲ್ಲಿ ಲಕ್ಷಾಂತರ ಪೇಟೆಂಟ್‌ಗಳಿದ್ದರೂ ಅವು ಯಾವುವೂ ತಂತ್ರಜ್ಞಾನವಾಗಿ ಬದಲಾಗಲಿಲ್ಲ. ‘ಮೇಡ್‌ ಇನ್‌ ಇಂಡಿಯಾ’ ಮಾಡುವ ಬದಲು ಇಂದಿನ ಪ್ರಧಾನಿ ‘ಮೇಕ್‌ ಇನ್ ಇಂಡಿಯಾ’ ಎಂದು ಕೂಲಿಕಾರರನ್ನು ಸೃಷ್ಟಿಸಿಕೊಡುವುದಾಗಿ ಹೇಳುತ್ತಿದ್ದಾರೆ. ಇದನ್ನು ಸಾಧಿಸಿ ದೇಶದ ಜಿಡಿಪಿ 10ರ ಗಡಿ ದಾಟಿದರೂ ದೇಶ ಅಭಿವೃದ್ಧಿಯಾಗದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಎಲ್ಲ ಧರ್ಮಗಳಲ್ಲೂ ಕಂದಾಚಾರ ಇದೆ. ಕಂದಾಚಾರ ಹಾಗೂ ಧರ್ಮದ ನಡುವಿನ ವ್ಯತ್ಯಾಸ ಅರಿಯುವುದು ಬಹಳ ಮುಖ್ಯ. ನಂಬಿಕೆಗಳು ವಿಜ್ಞಾನದ ಆಚೆಗಾದರೂ ಮನುಷ್ಯನ ಬುನಾದಿಯೂ ಅದೇ ನಂಬಿಕೆಗಳಲ್ಲೇ ಇರುತ್ತದೆ ಎನ್ನುವುದನ್ನು ಮರೆಯಬಾರದು. ಮನುಷ್ಯಶಕ್ತಿಗೂ ಮೀರಿದ ಶಕ್ತಿಯೊಂದು ಇದೆ ಎಂಬುದನ್ನು ವಿಜ್ಞಾನ ಲೋಕವೂ ಒಪ್ಪಿಕೊಂಡಿದ್ದು, ಅದರ ಅನ್ವೇಷಣೆಯಲ್ಲಿದೆ. ಹೀಗಾಗಿಯೇ ದೇವಕಣದ ಹುಡುಕಾಟ ಆರಂಭವಾದದ್ದು’ ಎಂದು ಪ್ರೊ. ಸವದತ್ತಿ ಹೇಳಿದರು.‘ಈ ಕ್ರಿಯೆಯಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದು. ಸ್ವಾಯತ್ತ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು ಯಾವುದಕ್ಕೂ ಹೆದರದೇ ಇಂಥ ಮೌಢ್ಯಗಳ ನಿವಾರಣೆ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ಬೋಧನೆ ಮಾಡುವ ಕಡೆ ಗಮನ ಹರಿಸಬೇಕು. ಹೀಗಾದಾಗ ಮಾತ್ರ ಕಂದಾಚಾರ ಮುಕ್ತ ಹಾಗೂ ವೈಜ್ಞಾನಿಕ ಚಿಂತನೆಯ ಸಮಾಜ ನಿರ್ಮಾಣ ಸಾಧ್ಯ’ ಎಂದು ಅವರು ತಿಳಿಸಿದರು.***

ಸಣ್ಣ ಕಂದಾಚಾರವನ್ನು ಎಲ್ಲರೂ ದೊಡ್ಡದನ್ನಾಗಿ ಮಾಡುತ್ತಾರೆ; ದೊಡ್ಡದನ್ನು ಮುಚ್ಚಿ ಹಾಕುತ್ತಾರೆ. ದೇಶದ ದೇವಾಲಯಗಳ ಹುಂಡಿ ಸೇರುವ ಕಪ್ಪು ಹಣ ತಡಗಟ್ಟಲು ಸರ್ಕಾರ ಯಾವ ವೈಜ್ಞಾನಿಕ ಕ್ರಮ ಕೈಗೊಂಡಿದೆ?

-ಪ್ರೊ. ಎಂ.ಐ.ಸವದತ್ತಿ, ವಿಶ್ರಾಂತ ಕುಲಪತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.