ಶನಿವಾರ, ಮೇ 21, 2022
22 °C

ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಏಪ್ರಿಲ್ 13ರಂದು ನಡೆಯಲಿರುವ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವುದಿಲ್ಲ ಎಂದು ಕೇರಳದ ಆಡಳಿತಾರೂಢ ಎಲ್‌ಡಿಎಫ್‌ನ ಪ್ರಮುಖ ಅಂಗ ಪಕ್ಷ ಸಿಪಿಐ ಶನಿವಾರ ಹೇಳಿದೆ.  ‘ನಮ್ಮ ಸರ್ಕಾರದ ಸಾಧನೆ ಹಾಗೂ ರೂಪಿಸಿರುವ ಕಾರ್ಯಕ್ರಮಗಳ ಆಧಾರದ ಮೇಲೆ ನಮ್ಮ ಪಕ್ಷವು ಮತದಾರರ ಮುಂದೆ ಹೋಗಲಿದೆ’ ಎಂದು ಸಿಪಿಐನ ಕೇರಳ ರಾಜ್ಯ ಕಾರ್ಯದರ್ಶಿ ಸಿ.ಕೆ.ಚಂದ್ರಪ್ಪನ್ ಹೇಳಿದ್ದಾರೆ.‘ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾದ ಮುಖಂಡ ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಏನು ಮಾಡುವುದು? ನಮ್ಮ ದೇಶದಲ್ಲಿ ಚುನಾವಣೆ ನಡೆಯುವಾಗ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಲೇಬೇಕು ಎಂಬ ಮನಸ್ಥಿತಿ ಸಂಪ್ರದಾಯವಾಗಿ ಬೆಳೆದಿದೆ. ಆದರೆ ನಾವು ಅದನ್ನು ಪಾಲಿಸುವುದಿಲ್ಲ’ ಎಂದು  ಚಂದ್ರಪ್ಪನ್ ಸುದ್ದಿಗಾರರಿಗೆ ತಿಳಿಸಿದರು.ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರನ್ನೇ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂದ್ರಪ್ಪನ್, ‘ಅವರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಿಪಿಎಂಗೆ ಬಿಟ್ಟ ವಿಷಯ’ ಎಂದು ಉತ್ತರಿಸಿದರು. ‘ಅಚ್ಯುತಾನಂದನ್ ಅವರು ಕೇರಳ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರೇ ಹೇಳಿದ್ದಾರೆ. ಅವರ ನಿಲುವು ನನಗೆ ಸಂತಸ ತಂದಿದೆ’ ಎಂದು ಚಂದ್ರಪ್ಪನ್ ಹೇಳಿದರು.  ಚುನಾವಣೆ ಸಮೀಪಿಸುತ್ತಿರುವಾಗ ಎಲ್‌ಡಿಎಫ್, ಯುಡಿಎಫ್‌ನ ಮುಖಂಡರನ್ನು ವಿವಿಧ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.