ಬೆಂಗಳೂರು: ‘ಅಕ್ರಮ ಗಣಿಗಾರಿಕೆ ಕುರಿತಂತೆ ಮುಖ್ಯಮಂತ್ರಿಗಳು ಬರೆದ ಪತ್ರ ನನಗೆ ತೃಪ್ತಿ ತಂದಿಲ್ಲ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸೋಮವಾರ ತಿಳಿಸಿದರು.
ರಾಜಭವನದಲ್ಲಿ ನಡೆದ ‘ದಿ ರಾಜಭವನ್ ಕರ್ನಾಟಕ ಥ್ರೂ ದಿ ಏಜಸ್’ ಪುಸ್ತಕ ಬಿಡುಗಡೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರೆದಿರುವ ಪತ್ರದಲ್ಲಿ ಕೇವಲ ಎರಡು ಸಾಲಿನ ಉತ್ತರವಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಲಭಿಸಿಲ್ಲ. ಅಕ್ರಮ ಗಣಿಗಾರಿಕೆ ತಡೆಗೆ ರಾಜ್ಯಪಾಲರ ಸಹಕಾರ ಬೇಕು ಎಂದು ಹೇಳುವ ಅವರು ಒಮ್ಮೆಯೂ ನನ್ನೊಂದಿಗೆ ಚರ್ಚಿಸಿಲ್ಲ’ ಎಂದರು.
‘ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣವನ್ನು ಸಚಿವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಇದನ್ನೇ ನಾನು ಪ್ರಶ್ನಿಸುತ್ತಿದ್ದೇನೆ’ ಎಂದರು. ‘ನನ್ನನ್ನು ಕಾಂಗ್ರೆಸ್ ವ್ಯಕ್ತಿ, ಪಕ್ಷಪಾತಿ ಎಂದು ಟೀಕಿಸಿರುವುದು ಗಮನಕ್ಕೆ ಬಂದಿದೆ. ಹಾಗೆ ಟೀಕಿಸುವವರು ಟೀಕಿಸುತ್ತಲೇ ಇರಲಿ. ಜನರಿಗೆ ನ್ಯಾಯ ಅನ್ಯಾಯದ ಬಗ್ಗೆ ಅರಿವಿದೆ. ಕಾನೂನಿನ ವಿರುದ್ಧವಾಗಿ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.