ಸೋಮವಾರ, ಜನವರಿ 27, 2020
27 °C

ಸಿ.ಎಂ ಮೇಲೆ ಪಟ್ಟಭದ್ರರ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನ್ಯಾಯಮೂರ್ತಿ ಬನ್ನೂರ ಮಠ ಅವರನ್ನೇ ಲೋಕಾಯುಕ್ತ ಹುದ್ದೆಗೆ ನೇಮಿಸುವಂತೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕ್ರಿಮಿನಲ್‌ಗಳು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಆರೋಪಿಸಿದರು.ಕೇಂದ್ರ ಚುನಾವಣಾ ಆಯೋಗವು ನಗರದ ಪುರಭವನದಲ್ಲಿ ಬುಧವಾರ ಏರ್ಪಡಿಸಿದ್ದ `ರಾಷ್ಟ್ರೀಯ ಮತದಾರರ ದಿನಾಚರಣೆ~ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.`ಬನ್ನೂರಮಠ ಅವರ ಹೆಸರನ್ನು ಈಗಾಗಲೇ ತಿರಸ್ಕರಿಸಿರುವ ಕಾರಣ ಅವರನ್ನು ನೇಮಿಸುವ ಪ್ರಶ್ನೆಯೇ ಇಲ್ಲ. ಸದಾನಂದಗೌಡ ಅವರು ಒಳ್ಳೆಯ ವ್ಯಕ್ತಿ, ಅವರ ಬಗ್ಗೆ ಗೌರವವಿದೆ. ನಿಧಾನವಾಗಿ ಶಕ್ತಿ ಪಡೆಯುತ್ತಿರುವ ಸದಾನಂದಗೌಡ ಅವರು ಯಶಸ್ಸು ಸಾಧಿಸಬೇಕು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಬನ್ನೂರಮಠ ಅವರ ಪರವಾಗಿ ಪತ್ರ ಬರೆಯುವಂತೆ ಅವರ ಮೇಲೆ ಒತ್ತಡ ಹೇರಿದ್ದಾರೆ. ಯಾರು ಒತ್ತಡ ಹೇರಿದ್ದಾರೆ, ಯಾರು ಪತ್ರ ಬರೆಯಿಸಿದ್ದಾರೆ ಎಂಬುದು ನನಗೆ ಗೊತ್ತಿದೆ~ ಎಂದರು.ಕಾನೂನು ಬದ್ಧವಾದ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ನಂತರವೇ ಬನ್ನೂರ ಮಠ ಅವರ ಹೆಸರನ್ನು ಕಳುಹಿಸಲಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಕೆಲವರಿಗೆ ವ್ಯವಸ್ಥೆ ಸರಿಯಾಗಬೇಕು ಎಂಬ ಕಾಳಜಿ ಇದ್ದರೆ ಇನ್ನೂ ಕೆಲವರಿಗೆ ಸುಧಾರಣೆ ಬೇಕಾಗಿಲ್ಲ. ಯಾರನ್ನು ನೇಮಕ ಮಾಡಬೇಕು ಎಂದು ನಿರ್ಧರಿಸುವ ಅಧಿಕಾರ ರಾಜ್ಯಪಾಲನಾಗಿ ನನಗೆ ಇದೆ. ಆದ್ದರಿಂದ ಬನ್ನೂರಮಠ ಅವರ ಹೆಸರನ್ನು ತಿರಸ್ಕರಿಸಿ ಅವರ ನೇಮಕ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದರು.ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಸವಿಸ್ತಾರವಾದ ವರದಿ ನೀಡಿದ್ದಾರೆ. ಅವರ ವರದಿ ಯಥಾವತ್ತಾಗಿ ಜಾರಿಯಾಗಬೇಕು. ಲೋಕಾಯುಕ್ತ ಸಂಸ್ಥೆ ತನಿಖೆ ಮುಂತಾದ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೆ  ದಕ್ಷವಾಗಿ ಮಾಡಬೇಕು ಎಂಬ ಕಾಳಜಿ ನನ್ನದು.ಆದ್ದರಿಂದ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಅವರು, ಲೋಕಾಯುಕ್ತದಲ್ಲಿದ್ದ ಡಿಐಜಿ ಪ್ರಣವ್ ಮೊಹಾಂತಿ ಮತ್ತು ಎಡಿಜಿಪಿ ಜೀವನ್‌ಕುಮಾರ್ ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.ಸಂತೋಷ್ ಹೆಗ್ಡೆ ಅವರಂತಹ ವ್ಯಕ್ತಿ ಲೋಕಾಯುಕ್ತರಾಗಿ ನೇಮಕ ಆಗಬೇಕು. ಕೆಲ ದಿನಗಳ ಹಿಂದೆ ಆರು ಮಂದಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ನಿವೃತ್ತರಾಗಿದ್ದಾರೆ. ಅವರಲ್ಲಿ ಒಬ್ಬ ಅರ್ಹ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಿದರೆ ಒಪ್ಪಿಗೆ ನೀಡಲು ಅಭ್ಯಂತರ ಇಲ್ಲ ಎಂದರು. 

ಪ್ರತಿಕ್ರಿಯಿಸಿ (+)