ಸೋಮವಾರ, ಆಗಸ್ಟ್ 3, 2020
27 °C

ಸಿ.ಎಂ ರಾಜೀನಾಮೆ ನೀಡದಿದ್ದರೆ ವಿಧಾನಸಭೆ ಅಧಿವೇಶನ ಬಹಿಷ್ಕಾರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ:  `ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಪೀಕರ್ ರಾಜೀನಾಮೆ ನೀಡದಿದ್ದರೆ ಜೂನ್ ಮೊದಲ ವಾರದಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸದಿರಲು ಪಕ್ಷದ ಶಾಸಕರು ತೀರ್ಮಾನಿಸಿದ್ದಾರೆ. ಈ ನಿರ್ಧಾರ ಈ ಅಧಿವೇಶನಕ್ಕೆ ಸೀಮಿತ. ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕು ಎಂಬುದನ್ನು ನಮ್ಮ ಶಾಸಕರೇ ತೀರ್ಮಾನಿಸುತ್ತಾರೆ~ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನುಡಿದರು.ಮಂಗಳವಾರ ಹಾಸನಕ್ಕೆ ಬಂದಿದ್ದ ಅವರು ತಮ್ಮನ್ನು ಭೇಟಿಮಾಡಿದ ಪತ್ರಕರ್ತರೊಡನೆ ಮಾತನಾಡಿದರು.`ಪ್ರಜಾಪ್ರಭುತ್ವ ಇರುವ ವಿಶ್ವದ ಯಾವ ರಾಷ್ಟ್ರದಲ್ಲೂ ಸ್ಪೀಕರ್‌ಗೆ ಸುಪ್ರೀಮ್  ಕೋರ್ಟ್ ಛೀಮಾರಿ ಹಾಕಿರುವ ಉದಾಹರಣೆ ಇಲ್ಲ. ಸ್ಪೀಕರ್ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ.

 

ನ್ಯಾಯಾಲಯ ನೀಡಿರುವ ತೀರ್ಪಿನ ಒಂದೊಂದು ಚರಣವನ್ನೂ ಓದಿದ್ದೇನೆ. ಅವರಿಗೆ ಇನ್ನು ಆ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ. ಶಾಸನ ಸಭೆಯೊಳಗೆ ಶಾಸಕರು ಅವರನ್ನು ಏನೆಂದು ಸಂಬೋಧಿಸಬೇಕು ಎಂಬುದೇ ತಿಳಿಯದಾಗಿದೆ. ನೈತಿಕ ಹೊಣೆಹೊತ್ತು ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದರು.`ಬಿಜೆಪಿ ರಾಷ್ಟ್ರೀಯ ಪಕ್ಷ, ಆ ಪಕ್ಷದ ನಾಯಕರಿಗೆ ದೇಶವನ್ನು ಆಳಿದ ಅನುಭವ ಇದೆ. ಇತರರಿಗೂ ಮಾದರಿಯಾಗುವಂತೆ ನಡೆಯುವುದು ಅವರ ಜವಾಬ್ದಾರಿ. ಅವರಿಗೆ ಬಹುಮತವಿದೆ. ಬೇಕಾದರೆ ಅವರ ಪಕ್ಷದವರೇ ಬೇರೆ ಯಾರನ್ನಾದರೂ ಮುಖ್ಯಮಂತ್ರಿ ಅಥವಾ ಸ್ಪೀಕರ್ ಆಗಿ ಆಯ್ಕೆ ಮಾಡಿಕೊಳ್ಳಲಿ. ಆದರೆ ಇವರಿಬ್ಬರನ್ನು ಸ್ವೀಕರಿಸಲು ನಾವು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು.`ಈ ಬಾರಿ ಅಧಿವೇಶನವನ್ನು ಬಹಿಷ್ಕರಿಸಲು ನಾವು ತೀರ್ಮಾನಿಸಿದ್ದೇವೆ. ಮುಂದೆ ಏನುಮಾಡಬೇಕು, ಜನಾಂದೋಲನ ರೂಪಿಸಬೇಕೇ ಅಥವಾ ಬೇರೆ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಬೇಕೇ ಎಂಬುದನ್ನು ನಮ್ಮ ಶಾಸಕರೇ ತೀರ್ಮಾನಿಸುವರು~ ಎಂದು ತಿಳಿಸಿದ ದೇವೇಗೌಡ, ಸರ್ಕಾರದ ಕಾರ್ಯವೈಖರಿಯ ಬಗೆಗಾಗಲಿ, ಬಿಜೆಪಿ ನಾಯಕರು ಮಾಡಿದ ಟೀಕೆಗಳಿಗಾಗಲಿ ಉತ್ತರ ನೀಡಲು ನಿರಾಕರಿಸಿದರು.

ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್  ಮತ್ತಿತರರು ಜತೆಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.