ಗುರುವಾರ , ಜೂಲೈ 2, 2020
23 °C

ಸಿಎಂ ವಿರುದ್ಧ ತೆರಿಗೆ ವಂಚನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಎಂ ವಿರುದ್ಧ ತೆರಿಗೆ ವಂಚನೆ ಆರೋಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಅವರ ಕುಟುಂಬದವರು 11 ಕಂಪೆನಿಗಳನ್ನು ಸ್ಥಾಪಿಸಿ 642.23 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಹೊಂದಿದ್ದು, ಒಟ್ಟು 339.54 ಕೋಟಿ ರೂಪಾಯಿ ಆದಾಯ ತೆರಿಗೆ ವಂಚಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಗಂಭೀರ ಆರೋಪ ಮಾಡಿದರು.2006ರಿಂದ ಇಲ್ಲಿಯವರೆಗೆ ಅವರ ಕುಟುಂಬದವರು ಅಧಿಕೃತವಾಗಿ ಹಾಗೂ ಬೇನಾಮಿಯಾಗಿ ಸ್ಥಾಪಿಸಿರುವ ಕಂಪೆನಿಗಳು 176.79 ಕೋಟಿ ರೂಪಾಯಿಯ ಆಸ್ತಿ ಖರೀದಿಸಿವೆ. ವಾಸ್ತವವಾಗಿ ಇವುಗಳ ಬೆಲೆ 642.23 ಕೋಟಿ ರೂಪಾಯಿ. ವಾಮ ಮಾರ್ಗದ ಮೂಲಕ ಆಸ್ತಿ ಖರೀದಿಸಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ನಂತರ ಸ್ಥಾಪನೆಯಾಗಿರುವ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್‌ ಪ್ರೈ. ಲಿಮಿಟೆಡ್, ಭಗತ್ ಹೋಮ್ಸ ಪ್ರೈ. ಲಿಮಿಟೆಡ್, ಸಹ್ಯಾದ್ರಿ ಹೆಲ್ತ್‌ಕೇರ್ ಡಯಾಗ್ನಾಸ್ಟಿಕ್ಸ್ ಪ್ರೈ. ಲಿಮಿಟೆಡ್, ಆಕರ್ಷ ಪ್ರಾಪರ್ಟಿಸ್, ಜನ ಶಿಕ್ಷಣ ಸಂಸ್ಥೆ, ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್, ಕ್ಯಾಂಡೂರ್ ಬ್ಯುಸಿನೆಸ್ ಸಲ್ಯೂಷನ್ಸ್ ಪ್ರೈ. ಲಿಮಿಟೆಡ್, ಕೋಲ್ಕತ್ತ ಮೂಲದ ಇಂಡಿವರ್ ಕುಟೀರ್ ಪ್ರೈ. ಲಿಮಿಟೆಡ್, ರತ್ನಾ ಸಿಮೆಂಟ್ಸ್ ಸೇರಿದಂತೆ 11 ಕಂಪೆನಿಗಳಲ್ಲಿ ಯಡಿಯೂರಪ್ಪ ಕುಟುಂಬದವರು ಪಾಲುದಾರರಾಗಿದ್ದಾರೆ ಎಂದರು.ಈ ಕಂಪೆನಿಗಳು ತೆರಿಗೆ ವಂಚನೆ ಮಾಡಿರುವ ದಾಖಲೆಗಳನ್ನು ಬಹಿರಂಗಪಡಿಸಿದ ಅವರು, ಈ ಎಲ್ಲ ದಾಖಲೆಗಳನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ನೀಡಿ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು.ಯಡಿಯೂರಪ್ಪ ಅವರ ಸಹೋದರಿ ಗೌರಮ್ಮ ಮತ್ತು ಅವರ ಕುಟುಂಬದವರ ಹೆಸರಿಗೆ ಮೈಸೂರಿನಲ್ಲಿ `ಮೂಡಾ~ದಿಂದ 10 ನಿವೇಶಗಳು ಹಂಚಿಕೆಯಾಗಿವೆ. ಇದಲ್ಲದೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿದ್ದು, ಇವುಗಳ ಮಾರುಕಟ್ಟೆ ಮೌಲ್ಯ ನಾಲ್ಕು ಕೋಟಿ ರೂಪಾಯಿ. ಇವರು ಆದಾಯ ತೆರಿಗೆಯನ್ನು ಪಾವತಿಸುತ್ತಿಲ್ಲ, ಸ್ವತಂತ್ರವಾದ ಆದಾಯ ಮೂಲ ಹೊಂದಿಲ್ಲ. ಈ ಹಣ ಹೇಗೆ ಬಂತು ಎಂದು ಅವರು ಪ್ರಶ್ನಿಸಿದರು.`ಇಷ್ಟೊಂದು ಕಂಪೆನಿಗಳ ಒಡೆತನ ಹೊಂದಿರುವ ಯಡಿಯೂರಪ್ಪ ಅವರದು ರೈತ ಕುಟುಂಬವಲ್ಲ, ಇಂಡಸ್ಟ್ರಿಯಲ್ ಹೌಸ್~ ಎಂದು ವ್ಯಂಗ್ಯವಾಡಿದ ಅವರು, ಕುಟುಂಬದವರು, ಸಂಬಂಧಿಕರು, ಬೇನಾಮಿಗಳ ಹೆಸರಿನಲ್ಲಿ ಅಪಾರ ಆಸ್ತಿ ಮಾಡಿದ್ದಾರೆ. ಬಿಜೆಪಿ ನಾಯಕರೇ ಈ ಎಲ್ಲ ಮಾಹಿತಿಗಳನ್ನು ನಮಗೆ ನೀಡುತ್ತಿದ್ದಾರೆ. ಅಧಿಕಾರಿಗಳು ಅಲ್ಲ~ ಎಂದು ಸ್ಪಷ್ಟಪಡಿಸಿದರು.ಯಡಿಯೂರಪ್ಪ ಪಾರದರ್ಶಕವಾಗಿದ್ದರೆ ಅವರ ಕಚೇರಿಯಲ್ಲಿನ ಆಪ್ತ ಸಹಾಯಕರನ್ನು ವರ್ಗಾವಣೆ ಮಾಡಿದ್ದು ಏಕೆ? ಅವರು ಅವ್ಯವಹಾರದಲ್ಲಿ  ತೊಡಗಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ನ್ಯಾಯಯುತವಾಗಿ ನಡೆದುಕೊಂಡಿದ್ದರೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದರು.ನ್ಯಾಯಾಂಗ ನಿಂದನೆ: ಯಡಿಯೂರಪ್ಪ ತಮಗೆ ನ್ಯಾಯಾಲಯದಲ್ಲಿ ನಂಬಿಕೆ ಇಲ್ಲ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ನಂಬಿಕೆ ಇಲ್ಲದಿದ್ದರೆ ಒಂದು ನಿಮಿಷವೂ ಅಧಿಕಾರದಲ್ಲಿ ಇರಬಾರದು ಎಂದರು.`ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಹಳ ಪಾಂಡಿತ್ಯವುಳ್ಳವರು. ಅಂತಹವರ ಬಗ್ಗೆ ಮಾತನಾಡುವುದು ಸರಿಯಲ್ಲ. ನಾನು ಅವರಷ್ಟು ಓದಿಲ್ಲ, ಬರೆದಿಲ್ಲ. ಸಂವಿಧಾನ ತಜ್ಞನಲ್ಲ~ ಎಂದು ವ್ಯಂಗ್ಯವಾಡಿದರು.ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್, ನಿವೇಶನಗಳ ಮಾರಾಟದಿಂದ 50 ಸಾವಿರ ಕೋಟಿ ರೂಪಾಯಿ ರಾಜ್ಯದ ಸಂಪತ್ತು ಲೂಟಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಸಿದ್ದಲಿಂಗಸ್ವಾಮಿ ಆಸ್ತಿ 35 ಕೋಟಿ

ಬೆಂಗಳೂರು:
ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಿದ್ದಲಿಂಗಸ್ವಾಮಿ ಬೆಂಗಳೂರು, ಶಿವಮೊಗ್ಗ, ಮೈಸೂರು ಮತ್ತು ಶಿಕಾರಿಪುರದಲ್ಲಿ ಸುಮಾರು 35 ಕೋಟಿ ರೂಪಾಯಿ ಬೆಲೆಬಾಳುವ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಆದರೆ, ಅವರು ತಮ್ಮದೇ ಆದ ಯಾವುದೇ ಆದಾಯ ಮೂಲಗಳನ್ನು ಹೊಂದಿಲ್ಲ. ಆದಾಯ ತೆರಿಗೆ ಇಲಾಖೆಯವರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.