ಸೋಮವಾರ, ಮೇ 23, 2022
21 °C

ಸಿಕಂದರಾಬಾದ್: ಹೋಟೆಲ್ ಕುಸಿದು 10 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್): ಅವಳಿ ನಗರ ಹೈದರಾಬಾದ್-ಸಿಕಂದರಾಬಾದ್ ಮಧ್ಯದ ರಾಷ್ಟ್ರಪತಿ ರಸ್ತೆಯ ಎರಡು ಮಹಡಿಯ `ಸಿಟಿ ಲೈಟ್' ಹೋಟೆಲ್ ಕುಸಿದು 10 ಜನ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡ ದುರ್ಘಟನೆ ಸೋಮವಾರ ಬೆಳಿಗ್ಗೆ 6.30ಕ್ಕೆ ಘಟಿಸಿದೆ.ಅವಶೇಷಗಳ ಅಡಿ ಸಿಲುಕಿದ್ದ ಆರು ಶವಗಳನ್ನು ಹೊರತೆಗೆಯಲಾಗಿದೆ ಎಂದು ಹೈದರಾಬಾದ್‌ನ ಪೊಲೀಸ್ ಕಮಿಷನರ್ ಅನುರಾಗ್ ಶರ್ಮಾ ತಿಳಿಸಿದ್ದಾರೆ.ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಅಗ್ನಿ ಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 22 ಜನರನ್ನು ರಕ್ಷಿಸಿದ್ದಾರೆ. ಗಾಯಗೊಂಡ 15 ಜನರನ್ನು ಚಿಕಿತ್ಸೆಗಾಗಿ ಸರ್ಕಾರಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್(ಜಿಎಚ್‌ಎಂಸಿ), ಅಗ್ನಿಶಾಮಕ ಸಿಬ್ಬಂದಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಹಾಗೂ ಹೈದರಾಬಾದ್ ಮೆಟ್ರೊ ರೈಲ್ವೆ ಸಿಬ್ಬಂದಿ ಬೃಹತ್ ಯಂತ್ರಗಳನ್ನು ಬಳಸಿಕೊಳ್ಳುವ ಮೂಲಕ ಅವಶೇಷಗಳ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಜಿಎಚ್‌ಎಂಸಿಯ ಆಯುಕ್ತ ಕೃಷ್ಣ ಬಾಬು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆ (ಎನ್‌ಡಿಆರ್‌ಎಫ್) ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.