ಬುಧವಾರ, ಮೇ 25, 2022
31 °C

ಸಿದ್ದಾಪುರ ಬಂದ್, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಪಟ್ಟಣದ ನೈರ್ಮಲ್ಯವನ್ನು ಕಾಪಾಡಲು ವಿಫಲವಾಗಿರುವ ಗ್ರಾ.ಪಂ. ಆಡಳಿತದ ವಿರುದ್ಧ ಸೋಮವಾರ ಇಲ್ಲಿನ ವರ್ತಕರು ಹಾಗೂ ವಿವಿಧ ಸಾರ್ವಜನಿಕ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಕೊಡಗು ಜಿಲ್ಲಾ ಟಿಂಬರ್ ವರ್ಕರ್ಸ್‌ ಅಂಡ್ ಹೆಡ್ ಲೋಡರ್ಸ್‌ ಯೂನಿಯನ್ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಬಂದ್ ನಡೆಸಿ ನಂತರ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಲಾಯಿತು.ಪಟ್ಟಣದಲ್ಲಿ ಅನೇಕ ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೇ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಾರಿ ಪಟ್ಟಣದ ಶುಚಿತ್ವವನ್ನು ಕಾಪಾಡಲು ಮನವಿ ಸಲ್ಲಿಸಿ ಪ್ರತಿಭಟನೆಗಳು ನಡೆದಿದ್ದರೂ ಗ್ರಾ.ಪಂ. ಆಡಳಿತ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಕಳೆದ ಎರಡು ದಿನಗಳ ಹಿಂದೆ ವರ್ತಕರು, ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೊಳೆತ ತ್ಯಾಜ್ಯಗಳನ್ನು ‘ಸೆಸ್ಕ್’ ಕಚೇರಿ ಬಳಿ ಸುರಿದು ವಿವಾದಕ್ಕೆ ದಾರಿ ಮಾಡಿಕೊಡಲಾಗಿತ್ತು.ಇದೊಂದು ಶಾಶ್ವತ ಪರಿಹಾರವಲ್ಲವೆಂದು ದೂರಿದ ಪ್ರತಿಭಟನಾಕಾರರು, ಸೋಮವಾರ ಎರಡು ಗಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪಂಚಾಯಿತಿ ಆಡಳಿತ ವೈಖರಿಯನ್ನು ಖಂಡಿಸಿ ಮೆರವಣಿಗೆ ನಡೆಸಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆನಂತರ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿ, ಮುಂದಿನ ಹದಿನೈದು ದಿನಗಳ ಒಳಗೆ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾಕಾರರು ಗ್ರಾ.ಪಂ. ಕಚೇರಿ ಎದುರು ಜಮಾವಣೆಗೊಂಡಾಗ ಅಧ್ಯಕ್ಷರೂ ಸೇರಿದಂತೆ ಸರ್ವ ಸದಸ್ಯರು ಗೈರು ಹಾಜರಾಗಿದ್ದನ್ನು ಖಂಡಿಸಿ, ‘ಇದೊಂದು ಬೇಜವಾಬ್ದಾರಿಯಿಂದ ಕೂಡಿದ ಆಡಳಿತ ವ್ಯವಸ್ಥೆ’ ಎಂದು ಟೀಕಿಸಿದರಲ್ಲದೆ, ತ್ಯಾಜ್ಯ ಸುರಿಯಲು ಸೂಕ್ತ ಜಾಗ ಗೊತ್ತು ಮಾಡದೆ ಟ್ರ್ಯಾಕ್ಟರ್ ಖರೀದಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ‘ಟ್ರ್ಯಾಕ್ಟರ್ ಮಾರಾಟ ಮಾಡಿ, ಜಾಗ ಖರೀದಿಸಿ ಜನರ ಆರೋಗ್ಯವನ್ನು ಕಾಪಾಡಿ’ ಎಂದು ಮನವಿ ಮಾಡಿದರು.     ಪ್ರತಿಭಟನೆಯಲ್ಲಿ ಜಿಲ್ಲಾ ಟಿಂಬರ್ ವರ್ಕರ್ಸ್‌ ಮತ್ತು ಹೆಡ್ ಲೋಡರ್ಸ್‌ ಅಧ್ಯಕ್ಷ ವಿ.ಎಸ್. ಶಜಿ  ಪ್ರಧಾನ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ, ಚೇಂಬರ್ ಆಫ್ ಕಾಮರ್ಸ್‌ನ ಮಾಜಿ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್, ಶಾಲಿ, ಸುಲೇಮಾನ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.