ಬುಧವಾರ, ಜೂನ್ 16, 2021
23 °C

ಸಿನಿಮಾ ಜತೆಗೆ ಮಸಾಜ್ ಮಜಾ!

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಚಿತ್ರಮಂದಿರಕ್ಕೆ ಪ್ರೇಕ್ಷಕನೇ ಪರಮಾತ್ಮ. ಈ ಪರಮಾತ್ಮನನ್ನು ತಣಿಸಲು ಎಷ್ಟೆಲ್ಲಾ ಉಪಾಯ! ಒಂದೊಂದು ಚಿತ್ರಮಂದಿರದ್ದೂ ಒಂದೊಂದು ಆಫರ್. ಒಂದು ದಂತಗೋಪುರದಂತೆ, ಮತ್ತೊಂದು ಮಜಬೂತು ಮಹಲಿನಂತೆ. ಒಂದಕ್ಕೆ ಒಳಾಂಗಣದತ್ತ ಚಿತ್ತ, ಮತ್ತೊಂದರ ಗಮನ ಬಡಿಸುವ ಊಟದತ್ತ. ಜತೆಗೆ ನಿತ್ಯನೂತನ ಆವಿಷ್ಕಾರಗಳನ್ನು ಎಳೆತರುವ ಯತ್ನ. ಹೀಗೆ ಹೊಸ ಐಡಿಯಾಗಳೊಡನೆ ಪ್ರೇಕ್ಷಕರನ್ನು ಸೆಳೆಯಲು ನಗರಕ್ಕೆ ಲಗ್ಗೆಯಿಟ್ಟಿದೆ ಮತ್ತೊಂದು ಮಲ್ಟಿಪ್ಲೆಕ್ಸ್. ಹೆಸರು `ಕ್ಯೂ ಸಿನಿಮಾಸ್~. ನಗರದ ಹದಿನಾಲ್ಕನೇ ಮಲ್ಟಿಪ್ಲೆಕ್ಸ್ ಇದು.ನಾಲ್ಕು ತೆರೆಗಳಿರುವ ಈ ಚಿತ್ರಮಂದಿರ ವೈಟ್‌ಫೀಲ್ಡ್ ಸುತ್ತಮುತ್ತಲಿನ ಪ್ರೇಕ್ಷಕರಿಗೆ `ಸಿನಿ~ತಿನಿಸು ಬಡಿಸಲು ಸಜ್ಜಾಗಿದೆ. ಅಸೆಂಡ್ಸ್ ಪಾರ್ಕ್ ಸ್ಕ್ವೇರ್ ಮಾಲ್‌ನಲ್ಲಿ ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ.ದಣಿದು ಬಂದ ಪ್ರೇಕ್ಷಕರಿಗಾಗಿ ಪಾದಗಳ ಮಸಾಜ್ ಮಾಡುವ ಸೌಲಭ್ಯ ಇಲ್ಲಿದೆ. ಚಿತ್ರಮಂದಿರದ ಮಾಲೀಕರ ಪ್ರಕಾರ ಇಂಥ ಯತ್ನ ದೇಶದಲ್ಲಿಯೇ ಮೊದಲು. ಅದು ಅವರ ಹೊಸತನದ ಹುಡುಕಾಟಕ್ಕೆ ಸಾಕ್ಷಿ.ಚಿತ್ರಮಂದಿರದಲ್ಲಿ ಐವರಿ ಹಾಗೂ ಗೋಲ್ಡ್ ಕ್ಲಾಸ್ ಎಂಬ ಎರಡು ವರ್ಗದ ಆಸನಗಳಿವೆ. ಐವರಿ ಕ್ಲಾಸ್ ವರ್ಗದ ಟಿಕೆಟ್ ಪಡೆದವರಿಗೆ ರಾಜಾತಿಥ್ಯ. ಬಟನ್ ಒತ್ತಿದರೆ ಸಾಕು ಕೂರುವ ಕುರ್ಚಿ ಮಲಗುವ ಆಸನವಾಗಿ ಬದಲಾಗುತ್ತದೆ.

 

ಮೈ ಚಾಚಿ ಮಲಗಿ ಸಿನಿಮಾ ನೋಡಬಹುದು. ಜತೆಗೆ ಹೊಟ್ಟೆ ತುಂಬುವಷ್ಟು ಪೇಯ ಖಾದ್ಯಗಳ ಸರಬರಾಜೂ ಇದೆ. ಎಷ್ಟು ಬೇಕಾದರೂ ಕೇಳಿ ಪಡೆಯುವ ಸೌಲಭ್ಯವಿದೆ. ಸಿನಿಮಾ ಎಂದರೆ ಕುಟುಂಬ ಸಹಿತ ನೋಡುವ ಪ್ರಕ್ರಿಯೆ. ಹೀಗಾಗಿ ಮಕ್ಕಳ ಬಗ್ಗೆಯೂ ಚಿತ್ರಮಂದಿರಕ್ಕೆ ಅಪಾರ ಕಾಳಜಿ. ಚಿತ್ರಮಂದಿರದ ಹೊರಗೆ ಮಕ್ಕಳ ಮನರಂಜನೆಗೆಂದು ಪ್ರತ್ಯೇಕ ಆವರಣವಿದೆ.ಅಲ್ಲಿ ಆಡಿ ಕುಣಿದು ನಲಿಯಬಹುದು. ಭಯಪಡಿಸುವ `ಸ್ಕೇರಿ ಹೌಸ್~, ಪುಟ್ಟ ಗಾಲ್ಫ್ ಮಕ್ಕಳನ್ನು ಆಕರ್ಷಿಸದೇ ಇರದು. ಚಿಕ್ಕವರ ಜತೆಗೆ ದೊಡ್ಡವರೂ ಕಲೆಯಬಹುದು. ಅದಕ್ಕೆಂದೇ ಬಿಲಿಯರ್ಡ್ಸ್ ಮತ್ತಿತರ ಸೌಲಭ್ಯಗಳಿವೆ.

 

ತಣ್ಣಗೆ ಒಂದಷ್ಟು ಹೊತ್ತು ಕೂರಬಹುದಾದ ಆರಾಮ ಕೊಠಡಿಗಳೂ ಇಲ್ಲಿವೆ. ಮಕ್ಕಳ ಬಟ್ಟೆ ಬದಲಿಸಲು, ಮುಖ ತೊಳೆದು ಫ್ರೆಶ್ ಆಗಲು ಬೇಕಾದ ಸಕಲ ಸೌಲಭ್ಯವೂ ಇವುಗಳಲ್ಲಿ ಉಂಟು. ವೃದ್ಧರು, ಅಂಗವಿಕಲರಿಗಾಗಿ ವಿನೂತನ ವ್ಯವಸ್ಥೆ ಮಾಡಲಾಗಿದೆ.ಮಾಲ್‌ನ ಕೆಳ ಅಂತಸ್ತಿಗೆ ಬರುತ್ತಿದ್ದಂತೆ ದೈಹಿಕವಾಗಿ ಅಶಕ್ತರಾದ ಪ್ರೇಕ್ಷಕರಿಗೆ ಚಿತ್ರಮಂದಿರದವರೆಗೂ ಸಿಬ್ಬಂದಿಯೇ ಕರೆದೊಯ್ಯುತ್ತಾರಂತೆ.ಚಿತ್ರಮಂದಿರದ ಒಳಾಂಗಣವೂ ಅದ್ದೂರಿಯಾಗಿದೆ. 2ಕೆ ಕ್ರಿಸ್ಟಿ ಪ್ರೊಜೆಕ್ಷನ್, ಡಿಜಿಟಲ್ ಸರೌಂಡ್ ಸೌಂಡ್ ವ್ಯವಸ್ಥೆ (ಜೆಬಿಎಲ್ ಹಾಗೂ ಡಿಜಿಟಲ್ ಡಾಲ್ಬಿ) ದೃಶ್ಯ ಶ್ರವ್ಯವನ್ನು ಆಸ್ವಾದಿಸುವ ಪ್ರೇಕ್ಷಕರಿಗಾಗಿ ಹೇಳಿ ಮಾಡಿಸಿದಂತಿವೆ. ಅಲ್ಲದೆ ಅಲಂಕಾರಕ್ಕೆ ಇನ್ನಿಲ್ಲದ ಆದ್ಯತೆ ನೀಡಲಾಗಿದೆ. ಸಮಕಾಲೀನ ವಿನ್ಯಾಸದ ಮೂಲಕ ಕಂಗೊಳಿಸವುದು ಇವುಗಳ ವಿಶೇಷ.150 ಆಸನಗಳ ಚಿಕ್ಕ ಚಿತ್ರಮಂದಿರದಿಂದ ಹಿಡಿದು 240 ಆಸನಗಳ ದೊಡ್ಡ ಚಿತ್ರಮಂದಿರವನ್ನೂ ಇಲ್ಲಿ ಕಾಣಬಹುದು. ಅಂತರ್ಜಾಲ, ದೂರವಾಣಿ ಹಾಗೂ ಎಸ್‌ಎಂಎಸ್ ಮೂಲಕವೂ ಟಿಕೆಟ್ ಖರೀದಿಸುವ ವ್ಯವಸ್ಥೆ ಇದೆ.

 

ಕೌಂಟರ್‌ನಲ್ಲಿ ಕಾಯುವ ಬದಲು ಸ್ವಯಂಚಾಲಿತ ಯಂತ್ರಗಳಿಂದ ಟಿಕೆಟ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ.ಮಧ್ಯಾಹ್ನ 12ಕ್ಕೆ ಮೊದಲು ಹಾಗೂ ನಂತರ ಎಂದು ಟಿಕೆಟ್ ದರವನ್ನು ವಿಂಗಡಿಸಲಾಗಿದೆ. ವೀಕೆಂಡ್‌ನ ಹೆಚ್ಚುವರಿ ದರದ ಹೊರೆ ಇರುವುದಿಲ್ಲವಂತೆ. ಬಾಲಿವುಡ್, ಹಾಲಿವುಡ್ ಸಿನಿಮಾಗಳು ಮಾತ್ರವಲ್ಲದೆ ಪ್ರಾದೇಶಿಕ ಸಿನಿಮಾಗಳಿಗೆ ಕೂಡ ಒತ್ತು ನೀಡಲಾಗಿದೆ.

 

ಉಳಿದ ಸಿನಿಮಾಗಳಿಗೆ ಹೋಲಿಸಿದರೆ ತಮಿಳು, ತೆಲುಗು ಮಲಯಾಳಂ, ಕನ್ನಡ ಸಿನಿಮಾಗಳ ದರ ಕಡಿಮೆ ಇದೆ. ಅಂದಹಾಗೆ ಇಲ್ಲಿನ ಕೆಫೆ ಹೊಸ ಬಗೆಯ ಆಹಾರಕ್ಕೆ ಒತ್ತು ನೀಡಿದೆ. ಪಿಜ್ಜಾ, ಬರ್ಗರ್ ಸವಿಯಬಲ್ಲಷ್ಟೇ ಸಲೀಸಾಗಿ ಸ್ಥಳೀಯ ಖಾದ್ಯಗಳ ರುಚಿ ನೋಡಬಹುದು. ಸ್ನಾಕ್ಸ್ ಜತೆಗೆ ಊಟದ ವ್ಯವಸ್ಥೆ ಇದೆ.ಬೆಂಗಳೂರಿಗರನ್ನೇ ಕೇಂದ್ರವಾಗಿಟ್ಟುಕೊಂಡು ಇಲ್ಲಿನ ಬಾಣಸಿಗರು ಅಡುಗೆ ತಯಾರಿಸಬಲ್ಲರು. ಕೆಳ ಅಂತಸ್ತಿನಲ್ಲಿ ವಿಸ್ತಾರವಾದ ಪಾರ್ಕಿಂಗ್ ಜಾಗವಿದೆ. ಹೀಗಾಗಿ ವಾಹನಗಳ ಮಾಲೀಕರು ಹೆಚ್ಚೇನೂ ತಲೆ ಕೆಡಿಸಿಕೊಳ್ಳುವಂತಿಲ್ಲ.`ವೈಟ್‌ಫೀಲ್ಡ್ ಪ್ರದೇಶಕ್ಕೆ ಇಂಥ ಚಿತ್ರಮಂದಿರದ ಅವಶ್ಯಕತೆ ಬಹುದಿನಗಳಿಂದ ಇತ್ತು. ಇಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಅಧ್ಯಯನ ಮಾಡಿ ಚಿತ್ರಮಂದಿರ ತೆರೆಯಲಾಗಿದೆ. ನಾಲ್ಕು ತೆರೆಗಳ ಚಿತ್ರಮಂದಿರಕ್ಕೆ ಸುಮಾರು 9 ಕೋಟಿ ರೂಪಾಯಿ ವೆಚ್ಚವಾಗಿದೆ.ಕೇವಲ ಸಿನಿಮಾ ತೋರಿಸುವುದಷ್ಟೇ ನಮ್ಮ ಕೆಲಸವಲ್ಲ. ಪ್ರೇಕ್ಷಕರ ಮನಸ್ಸಿಗೆ ಒಪ್ಪುವಂತೆ ಸಿನಿಮಾ ತೋರಿಸುವುದು ನಮ್ಮ ಧ್ಯೇಯ~ ಎಂದರು ಕ್ಯೂ ಸಿನಿಮಾಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೈಯದ್ ಸಲೀಂ. ಕ್ಯೂ ಸಿನಿಮಾಸ್ ಒಂದೇ ವರ್ಷದಲ್ಲಿ ನಗರದಲ್ಲಿ ನಿರ್ಮಿಸಿದ ಮೂರನೇ ಚಿತ್ರಮಂದಿರ ಇದು. ಅಲ್ಲದೆ ಇದು ದೇಶದ ವಿವಿಧ ಭಾಗಗಳಿಗೂ ಚಾಚಿಕೊಳ್ಳುವ ಉತ್ಸಾಹದಲ್ಲಿದೆ.ಚಿತ್ರಮಂದಿರ ಉದ್ಘಾಟನೆಯಾದ ಖುಷಿಯಲ್ಲಿರುವ ಮಾಲೀಕರು ಪ್ರೇಕ್ಷಕರಿಗಾಗಿ ಮೂರುವಾರಗಳ ಕಾಲ ಕೆಲ ರಿಯಾಯ್ತಿಗಳನ್ನೂ ಘೋಷಿಸಿದ್ದಾರೆ. ಅದೇನೆಂಬುದನ್ನು ಚಿತ್ರಮಂದಿರಕ್ಕೆ ಬಂದೇ ತಿಳಿಯಿರಿ ಎಂಬ ಮನವಿ ಅವರಿಂದ.ಪ್ರೇಕ್ಷಕನಿಗೆ ಮಸಾಜು, ಮಕ್ಕಳಿಗೆ ಆಡಲು ವಿಶೇಷ ಜಾಗ, ಭಯಪಡಿಸುವ ಸ್ಕೇರಿ ಹೌಸ್, ದೈಹಿಕವಾಗಿ ಅಸಮರ್ಥರಾಗಿರುವವರನ್ನು ಕರೆದೊಯ್ಯುವ ಸಿಬ್ಬಂದಿ- ಹೊಸದಾಗಿ ತಲೆ ಎತ್ತಿರುವ `ಕ್ಯೂ ಸಿನಿಮಾಸ್~ ಮಲ್ಟಿಪ್ಲೆಕ್ಸ್‌ನಲ್ಲಿ ಇವೆಲ್ಲವೂ ಉಂಟು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.