ಗುರುವಾರ , ಜೂನ್ 24, 2021
23 °C

ಸಿರಿಯಾದಲ್ಲಿ ರಕ್ತಪಾತ ಕೊನೆಗೊಂಡೀತೆ?

ಡಿ.ವಿ.ರಾಜಶೇಖರ Updated:

ಅಕ್ಷರ ಗಾತ್ರ : | |

ಸಿರಿಯಾದಲ್ಲಿ ರಕ್ತಪಾತ ಕೊನೆಗೊಂಡೀತೆ?

ಸಿರಿಯಾದಲ್ಲಿ ನಡೆಯುತ್ತಿರುವ ರಕ್ತಪಾತ ಕೊನೆಗೊಳ್ಳುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಅಂತರರಾಷ್ಟ್ರೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಮಧ್ಯಪ್ರಾಚ್ಯ ವಲಯದಲ್ಲಿ ಸಿರಿಯಾ ಬಹಳ ಪ್ರಮುಖವಾದ ರಾಷ್ಟ್ರ. ಅದರ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ದೇಶದಲ್ಲಿ ಸುನ್ನಿಗಳು ಬಹುಸಂಖ್ಯಾತರು. ಆದರೆ ಅಲ್ಪಸಂಖ್ಯಾತರಾದ ಅಲಾವಿಗಳೇ ಹಲವು ದಶಕಗಳ ಕಾಲದಿಂದ ಅಧಿಕಾರ ನಡೆಸುತ್ತ ಬಂದಿದ್ದಾರೆ. ಹೀಗಾಗಿಯೇ ಶಿಯಾ ಪ್ರಾಬಲ್ಯದ ಇರಾನ್ ಮತ್ತು ಲೆಬನಾನ್ ದೇಶಗಳು ಅಸ್ಸಾದ್‌ಗೆ ಬೆಂಬಲ ನೀಡುತ್ತಿವೆ. ಪ್ಯಾಲೆಸ್ಟೀನ್‌ನ ಹಮಾಸ್ ಮತ್ತು ಲೆಬನಾನ್‌ನ ಹೆಜಬುಲ್ಲಾ ಉಗ್ರಗಾಮಿಗಳು ಅಸ್ಸಾದ್ ಪರ ಇರುವುದರಿಂದ ಸಿರಿಯಾಕ್ಕೆ ಸಂಬಂಧಿಸಿದ ಯಾವುದೇ ಪ್ರತಿಕೂಲ ಬೆಳವಣಿಗೆ ಇಸ್ರೇಲ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು.   ಸಿರಿಯಾದ ಅಸ್ಸಾದ್ ವಿರೋಧಿ ಹೋರಾಟಗಾರರು ಬಹುಪಾಲು ಸುನ್ನಿ ಜನಾಂಗಕ್ಕೆ ಸೇರಿದವರು. ಆದ್ದರಿಂದ ಸೌದಿ ಅರೇಬಿಯಾ ಸೇರಿದಂತೆ ಸುನ್ನಿ ಪ್ರಾಬಲ್ಯದ ಅರಬ್ ರಾಷ್ಟ್ರಗಳು ವಿರೋಧಿ ಹೋರಾಟಗಾರರ ಬೆಂಬಲಕ್ಕೆ ನಿಂತಿವೆ. ಅಸ್ಸಾದ್ ವಿರೋಧಿಸುವ ಹಲವರಿಗೆ ವಿರೋಧಿ ಹೋರಾಟಗಾರರ ಜೊತೆ ಗುರುತಿಸಿಕೊಳ್ಳಲು ಮನಸ್ಸಿಲ್ಲ.

 

ವಿರೋಧಿ ಸುನ್ನಿ ಹೋರಾಟಗಾರರಲ್ಲಿ ಜನಾಂಗ ಪ್ರಾಬಲ್ಯ ಸಾಧಿಸುವ ಆಸೆ ಮತ್ತು ಇಸ್ಲಾಮೀಕರಣದ ಗುರಿ ಇದೆ ಎಂಬ ಅನುಮಾನದಿಂದಲೇ ಕೆಲವು ಅಸ್ಸಾದ್ ವಿರೋಧಿಗಳು ಹೋರಾಟದ ಜೊತೆ ಗುರುತಿಸಿಕೊಂಡಿಲ್ಲ. ಹೀಗಾಗಿ ವಿರೋಧಿಗಳಲ್ಲಿ ಒಗ್ಗಟ್ಟು ಕಾಣುತ್ತಿಲ್ಲ. ಅಸ್ಸಾದ್ ಪದಚ್ಯುತಿ ಆಗದಿರಲು ಇದೂ ಒಂದು ಮುಖ್ಯ ಕಾರಣ. ಲೆಕ್ಕಾಚಾರ ಸ್ವಲ್ಪ ತಪ್ಪಿದರೂ ಇರಾನ್ ಮತ್ತು ಇಸ್ರೇಲ್ ಮುಖಾಮುಖಿಯಾಗಿ ನಿಂತು ಸಿರಿಯಾವನ್ನು ಅಂತರರಾಷ್ಟ್ರೀಯ ಘರ್ಷಣೆಯ ತಾಣವಾಗಿ ಪರಿವರ್ತನೆ ಮಾಡಬಹುದು. ಸಮಸ್ಯೆ ಇಷ್ಟು ಸೂಕ್ಷ್ಮವಾಗಿರುವುದರಿಂದ ಅಂತರರಾಷ್ಟ್ರೀಯ ಸಮುದಾಯ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.   ಅಧ್ಯಕ್ಷ ಅಸ್ಸಾದ್ ವಿರೋಧಿ ಪ್ರತಿಭಟನಾಕಾರರನ್ನು ಬಗ್ಗು ಬಡಿಯುವ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ. ವಿರೋಧಿಗಳನ್ನು ಮುಗಿಸಲು ಸರ್ಕಾರ ತೀರ್ಮಾನಿಸಿರುವುದಕ್ಕೆ ಹಾಮ್ಸ ನಗರದ ಮೇಲೆ ನಡೆದ ಮಿಲಿಟರಿ ದಾಳಿಯೇ ಉತ್ತಮ ಉದಾಹರಣೆ. ಈ ನಗರದ ಹೊರವಲಯ ಬಾಬಾ ಆಮರ್ ವಿರೋಧಿ ಹೋರಾಟಗಾರರ ಭದ್ರ ಕೋಟೆಯಾಗಿತ್ತು. ಅದು ಈಗ ಸಿರಿಯಾ ಮಿಲಿಟರಿ ಪಡೆಗಳ ತೆಕ್ಕೆಗೆ ಬಿದ್ದಿದೆ. ಮಿಲಿಟರಿ ಪಡೆಗಳು ನಗರವನ್ನು ಸುತ್ತುವರಿದು ಒಂದು ತಿಂಗಳು ಕಳೆದಿದೆ.

 

ಮನೆ ಮನೆಯನ್ನು ಶೋಧಿಸಿ ವಿರೋಧಿಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಹೊರ ಜಗತ್ತಿನ ಜೊತೆಗಿನ ಎಲ್ಲ ಸಂಪರ್ಕಗಳನ್ನು ಕಡಿದು ಹಾಕಲಾಗಿದೆ. ಆಹಾರ ಧಾನ್ಯ, ನೀರು ಮತ್ತು ಔಷಧಗಳು ಸಿಗದಂತೆ ಮಾಡುವ ಮೂಲಕ ಜನರು ಅವರು ಎಲ್ಲಿದ್ದಾರೋ ಅಲ್ಲಿಯೇ ಸಾಯುವಂತೆ ಮಾಡಲಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲೂ ಮಿಲಿಟಿರಿ ಅವಕಾಶ ಕೊಡದಿರುವುದು ಮಾನವ ಹಕ್ಕು ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಭಾರಿ ಪ್ರಮಾಣದಲ್ಲಿ ಮಿಲಿಟರಿ ದಾಳಿ ನಡೆದದ್ದರಿಂದಾಗಿ ಅದನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ವಿರೋಧಿ ಹೋರಾಟಗಾರರು ಆ ಪ್ರದೇಶದಿಂದ ಪಲಾಯನ ಮಾಡಿದ್ದಾರೆ.ಮತ್ತೆ ಆ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಇದೇನೇ ಇದ್ದರೂ ಅಸ್ಸಾದ್ ಮಿಲಿಟರಿ ದಾಳಿಯನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎನ್ನುವುದು ವಿರೋಧಿಗಳಿಗೆ ಈಗ ಗೊತ್ತಾಗಿದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿರೋಧಿ ಹೋರಾಟಗಾರರಿಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ಪೂರೈಸುವ ಬಗ್ಗೆ ಅರಬ್ ರಾಷ್ಟ್ರಗಳ ನಡುವೆ ಚರ್ಚೆ ನಡೆಯುತ್ತಿದೆ. ಲಿಬಿಯಾ ವಿಚಾರದಲ್ಲಿ ಗಡಾಫಿ ವಿರೋಧಿ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಪೂರೈಸಬೇಕೆಂಬ ಪ್ರಸ್ತಾಪ ಬಂದಾಗ ಕೆಲವು ಅರಬ್ ರಾಷ್ಟ್ರಗಳು ವಿರೋಧ ವ್ಯಕ್ತಮಾಡಿದ್ದವು. ಈಗ ಸಿರಿಯಾ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಪೂರೈಸಬೇಕೆಂದು ಅದೇ ದೇಶಗಳು ಸಲಹೆ ಮಾಡಿವೆ.ಇಂತಹ ಪ್ರಸ್ತಾವಕ್ಕೆ ಮೊದಲು ಅಮೆರಿಕ ಒಲವು ತೋರಿದ್ದರೂ ಕಡೇ ಗಳಿಗೆಯಲ್ಲಿ ಆ ಬಗ್ಗೆ ಪುನರಾಲೋಚನೆ ಮಾಡಲು ನಿರ್ಧರಿಸಿದೆ. ಕುಖ್ಯಾತ ಭಯೋತ್ಪಾದಕ ಸಂಘಟನೆಗಳು ಅದರಲ್ಲಿಯೂ ಅಲ್ ಖೈದಾ ಸಿರಿಯಾದಲ್ಲಿ ತನ್ನ ನೆಲೆ ಸ್ಥಾಪಿಸಿಕೊಳ್ಳಲು ಈ ಹೋರಾಟವನ್ನು ಬಳಸಿಕೊಳ್ಳುತ್ತಿದೆ ಎಂಬ ಗುಪ್ತಚರ ವರದಿಗಳಿಂದಾಗಿ ಅಮೆರಿಕ ಅಂಥ ಪ್ರಸ್ತಾವಕ್ಕೆ ಸದ್ಯಕ್ಕೆ ಸಮ್ಮತಿ ಸೂಚಿಸಿಲ್ಲ. ಆದರೆ ಬೇರೆ ದೇಶಗಳು ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ಕಳುಹಿಸಿಕೊಡುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ ಸಿರಿಯಾ ಮತ್ತೊಂದು ಲಿಬಿಯಾ ಆಗುವುದರಲ್ಲಿ ಅನುಮಾನವಿಲ್ಲ. ಅಧ್ಯಕ್ಷ ಅಸ್ಸಾದ್ ಇಂಗ್ಲೆಂಡಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು. ಇಂಗ್ಲೆಂಡಿನಲ್ಲಿ  ಉನ್ನತ ಶಿಕ್ಷಣ ಪಡೆದರೂ ಅವರು ಎಂದೂ ಪ್ರಜಾತಂತ್ರ ವಾದಿಯಾಗಲಿಲ್ಲ. ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಂಡವರಲ್ಲ. ಅವರ ತಂದೆಯಂತೆ ಬಂದೂಕಿನ ಬಲದಿಂದಲೇ ಅಧಿಕಾರದಲ್ಲಿ ಮುಂದುವರಿಯುತ್ತ ಬಂದವರು. ಕಳೆದ ವರ್ಷ ಅವರು ರಾಜಕೀಯ ಸುಧಾರಣೆಗಳ ಬಗ್ಗೆ ಮಾತನಾಡಿದಾಗ ದೇಶದಲ್ಲಿ ಬದಲಾವಣೆ ತರಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು.ಆದರೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ವಿರೋಧಿ ಚಳವಳಿಯನ್ನು ಹತ್ತಿಕ್ಕಿದ ರೀತಿಯನ್ನು ನೋಡಿದರೆ ಅವರು ಮುಖವಾಡ ಹಾಕಿಕೊಂಡು ಸುಧಾರಣೆಗಳ ಬಗ್ಗೆ ಮಾತನಾಡಿದಂತೆ ಕಾಣುತ್ತದೆ.  `ಅರಬ್ ವಸಂತ~-ಟ್ಯುನೀಸಿಯಾ ಮತ್ತು ಈಜಿಪ್ಟ್‌ನಲ್ಲಿ ಕಂಡು ಬಂದ ಜನಾಂದೋಲನಗಳಿಂದ ಪ್ರಭಾವಿತಗೊಂಡು ಸಿರಿಯಾದಲ್ಲಿ ಕಳೆದ ಮಾರ್ಚ್‌ನಲ್ಲಿ ಆರಂಭವಾದ ಅಸ್ಸಾದ್ ವಿರೋಧಿ ಹೋರಾಟದಲ್ಲಿ ಇದುವರೆಗೆ 7500ಕ್ಕೂ ಹೆಚ್ಚು ಜನರು ಸತ್ತಿದ್ದಾರೆಂದು ಹೇಳಲಾಗಿದೆ.

 

ಟ್ಯುನೀಸಿಯಾ ಮತ್ತು ಈಜಿಪ್ಟ್‌ನಲ್ಲಿ ಜನಾಂದೋಲನ ನಡೆಯುತ್ತಿದ್ದಾಗ ಅಲ್ಲಿನ ಗೋಡೆಗಳ ಮೇಲೆ `ಆಡಳಿತಗಾರರು ಅಧಿಕಾರದಿಂದ ಕೆಳಗಿಳಿಯುವುದನ್ನು ಜನರು ಬಯಸುತ್ತಾರೆ~ ಎಂಬ ಬರಹ ಬಹು ಜನಪ್ರಿಯವಾಗಿತ್ತು. ಸಿರಿಯಾದ ಡೇರಾ ನಗರದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಅದೇ ಗೋಡೆ ಬರಹ ಮೊದಲ ಬಾರಿಗೆ ಕಾಣಿಸಿಕೊಂಡಿತು. ಅದನ್ನು ಬರೆದವರು ಶಾಲಾ ಮಕ್ಕಳು ಎಂಬುದನ್ನು ಪತ್ತೆ ಮಾಡಿದರು. ಆ ಸಂಬಂಧವಾಗಿ ಪೊಲೀಸರು ಹದಿನೈದು ಶಾಲಾ ಮಕ್ಕಳನ್ನು ಬಂಧಿಸಿದರು. ಆ ಮಕ್ಕಳ ಬಿಡುಗಡೆಗಾಗಿ ತಂದೆ ತಾಯಿಯರು ಸಾರ್ವಜನಿಕರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದರು.

 

ಆ ಪ್ರತಿಭಟನೆಯನ್ನು ತುಳಿಯಲು ಪೊಲೀಸರು ಯತ್ನಿಸಿದರು. ಇದೇ ಮುಂದೆ ದೊಡ್ಡ (ಅಸ್ಸಾದ್ ವಿರೋಧಿ) ಹೋರಾಟಕ್ಕೆ ನಾಂದಿಯಾಯಿತು. ಯಾವುದೇ ಸರ್ವಾಧಿಕಾರಿ ತಾನು ಶಾಶ್ವತ ಎಂದು ತಿಳಿದುಕೊಂಡರೆ ಅವನಿಗಿಂತ ಮೂರ್ಖ ಬೇರೊಬ್ಬನಿಲ್ಲ. ಸರ್ವಾಧಿಕಾರಿ ಆಡಳಿತಗಳು ಬಹಳ ಕಾಲ ಉಳಿಯಲಾರವು. ಉಳಿಯಬಾರದು. ಆದರೆ ಅವರು ಅಧಿಕಾರದಿಂದ ತೊಲಗುವಂತೆ ಮಾಡುವುದು ಹೇಗೆ ಎಂಬುದೇ ಈಗ ಅಂತರರಾಷ್ಟ್ರೀಯ ಸಮುದಾಯದ ಮುಂದೆ ಇರುವ ಪ್ರಶ್ನೆ.

 

ಕಳೆದ ವಾರ ಸಿರಿಯಾ ಬಿಕ್ಕಟ್ಟನ್ನು ಬಗೆಹರಿಸುವ ಮತ್ತು ಸಂಘರ್ಷದ ಮಧ್ಯೆ ಸಿಕ್ಕಿಕೊಂಡಿರುವ ಜನರನ್ನು ರಕ್ಷಿಸುವ ಉದ್ದೇಶದಿಂದ ಸುಮಾರು 60 ದೇಶಗಳ ಪ್ರತಿನಿಧಿಗಳು ಟ್ಯುನೀಶಿಯಾದಲ್ಲಿ ಸಭೆ ಸೇರಿದ್ದರು. ಆದರೆ ಆ ಸಭೆ ಒಂದು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಯಿತು. ಸಿರಿಯಾ ವಿರೋಧಿಗಳಲ್ಲಿ ಒಗ್ಗಟ್ಟಿಲ್ಲದಿರುವುದೂ ಇದಕ್ಕೆ ಒಂದು ಕಾರಣ. ಸಿರಿಯನ್ ನ್ಯಾಷನಲ್ ಕೌನ್ಸಿಲ್ ಎಂಬ ಸಂಘಟನೆಗೆ ಕೆಲವು ದೇಶಗಳು ಮಾತ್ರ ಮಾನ್ಯತೆ ನೀಡಿವೆ.

 

ಅಸ್ಸಾದ್ ವಿರುದ್ಧ ಹೋರಾಡಲು ಅಗತ್ಯವಾದ ಶಸ್ತ್ರಾಸ್ತ್ರ ಸರಬರಾಜು ಮತ್ತು ಹಣ ಬೇಕಿದೆ. ಅದು ದೊರಕುತ್ತಿಲ್ಲ. ಸಿರಿಯಾ ಸೇನೆಯನ್ನು ತ್ಯಜಿಸಿ ಹೋರಾಟಕ್ಕಿಳಿದ ಮಾಜಿ ಸೈನಿಕರು ಚದುರಿದಂತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವರನ್ನು ಕೂಡಾ ಒಂದು ವೇದಿಕೆಯಡಿ ತರಬೇಕಿದೆ. ಈಜಿಪ್ಟ್‌ನಲ್ಲಿರುವಂತೆ ಮುಸ್ಲಿಂ ಬ್ರದರ್‌ಹುಡ್ ಸಂಘಟನೆ ಅಸ್ಸಾದ್ ಆಡಳಿತದ ವಿರುದ್ಧ ಪ್ರಬಲವಾದ ಪ್ರತಿರೋಧ ಒಡ್ಡುತ್ತಲೇ ಬಂದಿದೆ. ಆದರೆ ಅದು ಕಟ್ಟಾ ಇಸ್ಲಾಂವಾದಿ ಸಂಘಟನೆ. ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಗಾಗಿ ನಡೆದ ಈಜಿಪ್ಟ್ ಚುನಾವಣೆಗಳಲ್ಲಿ ಕಟ್ಟಾ ಇಸ್ಲಾಂವಾದಿ ಮುಸ್ಲಿಂ ಬ್ರದರ್‌ಹುಡ್ ಹೆಚ್ಚು ಸ್ಥಾನಗಳಿಸಿ ಅಧಿಕಾರ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿ ಸಂಘಟನೆಯ ಭಾಗವಾಗಿ ಮಾಡಿಕೊಳ್ಳುವುದಕ್ಕೆ ಸಿರಿಯಾ ಮೈತ್ರಿರಾಷ್ಟ್ರಗಳ ವಿರೋಧವಿದೆ.

 

ಹೀಗಾಗಿ ಅಸ್ಸಾದ್ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಾಧ್ಯತೆಗಳು ಇಲ್ಲವಾಗಿವೆ.

 ಸಿರಿಯಾ ಜೊತೆಗಿನ ಮೈತ್ರಿಯನ್ನು ಬಳಸಿಕೊಂಡು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ರಷ್ಯಾ ಮತ್ತು ಚೀನಾ ಪ್ರಯತ್ನಿಸುತ್ತಿವೆ. ಈವರೆಗೆ ಆ ದೇಶಗಳ ನಾಯಕರ ನಡುವೆ ಮಾತುಕತೆ ನಡೆದಿಲ್ಲ. ಈ ಮಧ್ಯೆ ಹೊಸ ಸಂವಿಧಾನದ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮುಗಿದಿದೆ. ಈ ತಿದ್ದುಪಡಿ ಪ್ರಕಾರ ಈಗಿನ ಒಂದು ಪಕ್ಷದ ಆಡಳಿತಕ್ಕೆ ಬದಲಾಗಿ ಬಹು ಪಕ್ಷಗಳ ಆಡಳಿತಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಡಳಿತ ಬಾತಾ ಪಕ್ಷ ತನ್ನ ಸಾರ್ವಭೌಮತ್ವವನ್ನು ಕಳೆದುಕೊಳ್ಳುತ್ತದೆ. ಆದರೆ ಇದೆಲ್ಲಾ ನಾಟಕ ಎನ್ನುವುದು ವಿರೋಧಿಗಳ ಅಭಿಪ್ರಾಯ. ಪಾರ್ಲಿಮೆಂಟ್‌ಗೆ, 2014ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯ ಇಲ್ಲ. ಅಸ್ಸಾದ್ ಕುಟುಂಬದ ಸದಸ್ಯರೇ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದು ಬಹುಸಂಖ್ಯಾತ ಸುನ್ನಿಗಳನ್ನು ಸಂಪೂರ್ಣವಾಗಿ ತುಳಿಯಲಾಗಿದೆ. ಈಗ ದೇಶದಲ್ಲಿ ಇರುವುದು ಅಸ್ಸಾದ್ ಸರ್ವಾಧಿಕಾರ. ಅಸ್ಸಾದ್ ಪದಚ್ಯುತಿಗೊಂಡರೆ ಬರುವುದು ಇಸ್ಲಾಂವಾದಿ ಸುನ್ನಿ ಸರ್ವಾಧಿಕಾರ. ಅತ್ತ ದರಿ ಇತ್ತ ಪುಲಿ- ಎನ್ನುವಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರು ಸಿಕ್ಕಿಕೊಂಡು ನರಳುತ್ತಿದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.