ಭಾನುವಾರ, ಜನವರಿ 16, 2022
28 °C
ಮೊದಲ ಬಹುಮಾನ

ಸಿರಿ ಗಂಧಮಯ ಈ ನನ ಹೃದಯ..ಏತಕೆ...

ಜಾಹ್ನವಿ ಆನಂದ ಹಳ್ಳೂರ Updated:

ಅಕ್ಷರ ಗಾತ್ರ : | |

ಲಲಿತ  ಅಂದ ಕೂಡ್ಲೆ ಮನಸ್ಸಿನ್ಯಾಗ ಸಾಲು ಸಾಲಾಗಿ ಚಿತ್ರಗಳು ಹಾಯಲಿಕ್ಕೆ ಸುರು ಮಾಡತಾವ. ಲಲಿತಾ ಸಹಸ್ರನಾಮ, ಲಲಿತಾ ಪುರಾಣ, ಹಳೆಯ ಹಿಂದಿ ನಟಿ ಲಲಿತಾ ಪವಾರ, ಪರಿಣಿತಾದ ನಾಯಕಿ ಲಲಿತೆ... ಗೀತ ಗೋವಿಂದದಲ್ಲಿ ಬರುವ ‘ಲಲಿತ ಲವಂಗ ಲತಾ ಪರಿಶೀಲನ..., ಒಂದsಸಮನ ಅಳ್ಳು ಹುರಿದಹಾಂಗ ಮಾತಾಡೋ ನನ್ನಕ್ಕ ಲಲಿತ..., ದೆವ್ವ ಮೈ ಮ್ಯಾಲೆ ಬರುತ್ತಿದ್ದ ಲಲಿತಕ್ಕಜ್ಜಿ,.. ರೊಕ್ಕದ ಭೂತವಾಗಿರುವ ಲಲಿತ್ ಮೊದಿ...ಹೀಂಗ ಮನಸ್ಸಿನ ಚಿತ್ರಾವಳಿ ತಿರುಗಲಿಕ್ಕೆ ಸುರು ಆಗ್ತದ. ಸಾಲ್ಯಾಗ ನನ್ನ ವಿದ್ಯಾರ್ಥಿಯೊಬ್ಬ ಲಲಿತಪ್ರಬಂಧ ಅಂದರ ‘ಏನ್ ಬೇಖಾದ್ದ, ಹೆಂಗ ಬೇಖಾದ್ದ ಬರೀಬಹುದು ಹೌದಲ್ರೀ ಮೇಡಮ್’ ಎಂದದ್ದು ನೆನಪಾಗುತ್ತದೆ. ನಾನು ಕನ್ನಡ ಎಮ್ ಏ ಮಾಡುತ್ತೇನೆಂದು ಅಂದಾಗ... ..‘ಅದೋಂದು ಬಾಕಿ ಇತ್ತು ನೀ ಮಾಡುವುದು!!’ ಎಂದು ಕುಹಕ ನಗಿ ನಕ್ಕು ನನ್ನ ಹೊಟ್ಯಾಗ ಬೆಂಕಿ ಇಟ್ಟ ನನ್ನ ಹಿಂದೀ ಪ್ರಾಧ್ಯಾಪಕಿ ಲಲಿತಾ ಮೇಡಮ್, ನನ್ನ ಕನ್ನಡ ಉತ್ತರಗಳನ್ನ ಕ್ಲಾಸಿನ್ಯಾಗ ಓದಿ ತೋರಿಶಿ ಸಂತಸದಿಂದ ನನ್ನ ಅಪ್ಪಿಗೋತಿದ್ದ ಲಲಿತಾಂಬಾ ಮಿಸ್ಸು ಎಲ್ಲರೂ ನನ್ನ ನೆನಪಿನ್ಯಾಗ ಬಂದು ಕೂಡ್ತಾರ. ಬರೇ ಒಂದು ಪದ ನನಗ ಇಷ್ಟೆಲ್ಲ ನೆನಪುಗಳ ಮಳಿಗರೀಲಿಖತ್ತದ...  ಇನ್ನ ಈ ಲಲಿತ ಅನ್ನೋ ಪದಕ್ಕ ಪ್ರಬಂಧ ಅನ್ನೋ ಪದ ಸೇರಿತಂ....ದ್ರ...ಇಲ್ಲೆ ಅಮೇರಿಕಾದಾಗ ಮೈನಸ್ ಡಿಗ್ರೀ ವಾತಾವರಣದಾಗ... ಹಿಮದೊಳಗ ಹಿಮವಾಗಿ.. ಕೂತಾಗ, ಮನದಾ ಭಿತ್ತಿಯೊಳಗ ನನ್ನೂರಿನ ನೆನಪು ಬೆಚ್ಚಗ ಹಿತವಾಗಿ ಬರೂವಾಗ... ಕಣ್ಣಾಗ ನೀರುತುಂಬಿ, ಎದೆಯಾಗ ಕಳಮಳ ಆಗಿ ಏನು ನೆನಪಿಗೆ ಬರ್ತದ ಗೊತ್ತನು?!... ...ನನ್ನ ಮಕ್ಕಳನ್ನು ಅಪ್ಪಿಗೊಂಡು ನಾ ದುಃಖ ಪಡೂವಾಗ ಯಾರು ನನ್ನ ಮನಸ್ಸಿನ್ಯಾಗ ಇರ್ತಾರ ಗೊತ್ತನೂ?!... ನನ್ನ ಯಜಮಾನನ ಎದೀ ಮ್ಯಾಲ ನಾ ನನ್ನ ಮೂಗುವರಸಿಕೋತ ವಾಪಸ್ಸು ಹೋಗಿಬಿಡೋಣರೀ ಅನ್ನುವಾಗ ನನ್ನ ಕಣ್ಣಾಗ ಯಾರ ಚಿತ್ತಾರ ಇರ್ತದ ಗೊತ್ತನೂ.?.!ಅಮ್ಮ, ಅಪ್ಪ ಅಲ್ಲರೀ... ನನ್ನ ಅಕ್ಕ ಅಣ್ಣಗೋಳಲ್ಲರೀ.. ಗೆಳತಿಯರು ಗೆಳೆಯರು ಅಲ್ಲರೀ ... ಅತ್ತಿ ಮನೀ ಅಂತೂ ಅಪ್ಪೂಟ ಅಲ್ಲರೀ..! ಮತ್ತ ಯಾರು ಗೊತ್ತನು? ಬೆಂಗಳೂರಿನ ನನ್ನ ಜೀವನ ಹಸನು ಮಾಡಿದ್ದsನನ್ನ ಪ್ರೀತಿಯ ದರ್ಶಿನಿಗಳsನನ್ನ ಮನದೊಳಗ ತುಂಬಿರ್ತಾವ.ಆಹಾ...! ಏನು ಬಿಶಿ ಬಿಶಿ ಇಡ್ಲಿ, ಸಾಂಬಾರ, ಎಂತಹ ಗರಿ ಗರಿ ಉದ್ದಿನವಡಿ, ಎಂಥಾ ಪರಿಮಳಪೂರ್ಣ ತರಹೇವಾರಿ ದ್ವಾಶಿಗಳು, ಕೇಸರಿಭಾತು ಖಾರಾಭಾತುಗಳು ಆಹಾಹಾ... ಸುವಾಸನಾ ಸಂಭ್ರಮ!.. ಈ ದರಿದ್ರ ಅಮೇರಿಕೆಯಲ್ಲೆಲ್ಲಿ ಅಂತಹ ಸೌಕರ್ಯ.?!.. ಏನು ಸುಖಾ ಇತ್ತರೀ... ಭಾನುವಾರ ಮುಂಜೇಲೆ ಎದ್ದು  ಅಡಿಗಿ ಮನಿಕಡೆ ಒಟ್ಟsಹಾಯದ, ಮನಿಯೊಳಗ ಎಲ್ಲಾರಿಗೂ ಎಷ್ಟೆಷ್ಟು ಇಡ್ಲಿ ಬೇಕಂತ ಕೇಳೀ  ಅಯ್ಯರನ ಅಂಗಡಿಗೆ ಹೋಗಿ ಅವನು ಮಾಡುತ್ತಿದ್ದ ಮಲ್ಲಿಗೆಯಂಥ ಇಡ್ಲಿಗಳನ್ನೂ ಅದರ ಜೋಡಿ ಅಂವಾ ಕೊಡತಿದ್ದ ಕೆಟ್ಟ ಖಾರದ ಚಟ್ಣೀ ತಂದು ಅದರ ಜೋಡಿ ಮೊಸರು ಹಚಗೊಂಡು ತಿಂದರ.... ನೋಡ್ರೀ... ನೋಡ್ರಿ.. ಮತ್ತ ಕಣ್ಣಾಗ ನೀರು ಬಂದವು!!! ಆ ಚಟ್ಣೀ ಖಾರ ನೆನಪಾತು ನೋಡ್ರಿ ಅದಕ್ಕs!!ನಿಮಗ ಆಶ್ಚರ್ಯ ಅನಸತಿರತದ.. ಅಲ್ಲವ್ವಾ, ಅಷ್ಟ ಮನಿ ಮಂದೀನ್ನ ಬಿಟ್ಟ ಬಂದೀ, ಅಂಥ ದೆವ್ವಿನಂಥ ಮನೀ ಬಿಟ್ಟ ಬಂದೀ, ಭಂಗಾರದಂಥ ಕೆಲಸಾ ಬಿಟ್ಟು ಬಂದೀ... ಮತ್ತ ಅವರನ್ನೆಲ್ಲಾ ವಟ್ಟs ನೆನಸದ ಹ್ವಾಟಲ್ಲ ನೆನಸತೀಯಲ್ಲ! ಅಂತ ನೀವು ಅನ್ನೋದು ಸಹಜ. ಏನ್ ಮಾಡೋದ್ರೀ?.. ನನ್ನ ಹುಡ್ರು ಸಣ್ಣವಿದ್ದಾಗ, ನನಗ ಅರಾಮಿಲ್ಲದಾಗ, ನನಗ ಅಡಿಗಿ ಮಾಡಲಿಕ್ಕೆsಬ್ಯಾಸರಾದಾಗ, ನನ್ನದs ಕೈಯಡುಗಿ ಉಂಡು ಉಂಡು ನನಗೂ, ನನ್ನ ಮನೀ ಮಂದೀಗೂ ಸಾಕಾಗಿ ಹೋದಾಗ, ನನ್ನ ಕೈ ಎಂದೂ ಬಿಟ್ಟಿಲ್ಲ ಈ ದರ್ಶಿನಿಗಳು. ನಮ್ಮ ಕಷ್ಟಕ್ಕ ಆದಾವರನ್ನ ನಾವು ನೆನೆಸಬೇಕರಿ.ಅಷ್ಟsಅಲ್ಲ... ತಂಪು ಹೊತ್ತಿನ್ಯಾಗ ನೆನಸಬೇಕರೀ. ಮತ್ತ ಇಲ್ಲೆ ನೋಡ್ರೀಲ್ಲೇ... ಅಮೇರಿಕಾ ಅನ್ನೋ ಈ ದೇಶದ, ಈ ಪೂರ್ವ ದಿಕ್ಕಿನ, ಈ ಜಗಾದಾಗ ಮೂರೂ ಹೊತ್ತೂ ತಂಪsಇರತದ. ಅದಕ್ಕsನಾ ನನ್ನ ಪ್ರೀತಿಯ ದರ್ಶಿನಿಗಳನ್ನು ಬಿಟ್ಟೂ ಬಿಡದsಮೂರೂ ಹೊತ್ತೂ ನೆನಸತೇನಿ. ಕನಸಿನ್ಯಾಗ ಆ ವಿವಿಧ ಭಕ್ಷ್ಯಗಳ ವಾಸನೀ ಮೂಸತೇನಿ.. ಛೇ.. ಆಘ್ರಾಣಿಸುತ್ತೇನಿ!... ಮೂಸತೇನಿ ಅಂದ್ರ ನನಗ ನಾಯಿ ಆಗಿಬಿಟ್ಟನೇನೋ ಅಂತ ಅನಸತದ. ಅದಕ್ಕs ಆಘ್ರಾಣಿಸುತ್ತೇನಿ.ನನಗ ಮತ್ತೇನು ನೆನಪಾಗ್ತಾವ ಗೊತ್ತನು? ಬೆಂಗಳೂರಿನ, ಹುಬ್ಬಳಿಯೊಳಗಿನ ಅಂಗಡಿಗಳು, ರಸ್ತೆಗಳು, ಗುಡಿಗಳು.... ಮತ್ತ ಅವುಗಳ ವಾಸನಿಗಳು...!! ವ್ಹಾಟ್? ಸ್ಮೆಲ್.....ದೆಟ್ ಟೂ ಫಾರ್ ಅ ರೋಡ್? ( ಏನು? ವಾಸನಿ? ಅದೂ ರಸ್ತೇಗೆ) ಅಂತ ಕೇಳತೀರಿ. ನಂಗೊತ್ತದರಿ. ಸ್ವಲ್ಪ ಆಶ್ಚರ್ಯ ಅಥವಾ ಕೌತುಕ ಇಲ್ಲಂದ್ರ ಸಿಟ್ಟು ಬಂದಾಗ ನಿಮ್ಮ ಮೈಯಾಗ ಇಂಗ್ಲಿಷ್‌ ತಾಯಿ ಬರತಾಳ.ಹಂಗ ಮಾತಾಡೋದು ಒಂದು ಪದ್ಧತೀನೇ ಅದ. ಅಂದ್ರ ನಡ ನಡುವ ಅಥವಾ ಝಗಳಾ ಆಡೋವಾಗ ಇಂಗ್ಲಿಷ್ ಮಾತಾಡೋದು. ನನ್ನ ಅಮ್ಮ ಎಂದೂ ಕನ್ನಡದಾಗ ಯಾರ ಜೋಡೀನೂ ಝಗಳಾ ಆಡಿಲ್ಲರಿ. ಝಗಳ ಏನಿದ್ರೂ ಇಂಗ್ಲಿಷ್ನ್ಯಾಗ... ಮನಿ ಕೆಲಸದಾಕಿ ಜೋಡೀನೂ..! ನಮ್ಮ ಅಪ್ಪನ ಜೋಡಿಯಂತೂ ಬಿಡ್ರಿ ಅಕಿ ಎಂದೂ ಕನ್ನಡದಾಗ ಮಾತಾಡೇ ಇಲ್ಲ.-ಅಮ್ಮಾ ನನ್ನ ಕ್ಷಮಿಸು... ಹಿಂಗ ಬರಿ ಅಂತ ಆ ಅಣ್ಣಾನ ಹೇಳಿಕೊಟ್ಟಾರ... ...!! ತೊಗೋರಿ  ‘...ಕೇಳದೆ ನಿಮಗೀಗ ದೂರದಲ್ಲಿ ಯಾರೋ ಝಗಳವಾಡಿದಂತೇ.... ಇಂಗ್ಲಿಷಿನಲ್ಲಿ... ಓ... ಒಂದು ಜಗಳ ಗೀತೆ..! ಛೆ..! ಈ ಲಲಿತ ಪ್ರಬಂಧ ಅಂದ್ರ ಹಿಂಗ ನೋಡ್ರೀ... ಲಂಗು ಇಲ್ಲ ಲಗಾಮಿಲ್ಲ..!

ಮತ್ತ ಪರತ ಕೇಂದ್ರ ವಿಷಯಕ್ಕ ಬರೋಣು. ಪ್ರತಿಯೊಂದು ಜೀವಿಗೂ ನಿರ್ಜೀವ ವಸ್ತೂಗೂ ವಾಸನಿ ಇರ್ತದ. ‘ಜಗತ್ ಸರ್ವಮ್ ವಾಸನಾಮಯಮ್’. ಸಿನಿಕತನದಿಂದ, ‘ರಸ್ತೇಗೇನು?!! ಕಸದತೊಟ್ಟಿ ವಾಸನಿ ಇರ್ತದ!” ಅಂತ ನೀವು ಅಂತಿದ್ರ ಅನ್ನರಿ. ಆದರ ಆ ವಾಸನೀ ವಳಗೂ ವೈವಿಧ್ಯ ಇರತದ. ನಿಮ್ಮ ಮೂಗು ಮನಸ್ಸು ಆರೋಗ್ಯಪೂರ್ಣ ಆಗಿದ್ದರ ನಿಮಗ ನಾ ಹೇಳೋದು ಅರ್ಥ ಆಗೇ ಆಗತದ.ಗೌಳ್ಯಾರ ಓಣಿಗೆ ಹೋಗೀರೆನೂ? ಬ್ಯಾಡಗೀ ಮೆಣಶಿನಕಾಯಿ ಹೊಲದಾಗ ಒಕ್ಕಿದಾಗ, ಅದರ ಬಾಝೂಕ ಸುಮ್ಮನsಅಡ್ಯಾಡೀರೇನೂ? ರಸ್ತೇದಾಗ ಗಿರಣಿ ಇತ್ತಂದ್ರ ಮಸಾಲಿ, ಹಿಟ್ಟಿನ ವಾಸನಿ ಆ ರಸ್ತೇಕ್ಕsಇಡುಗಿರ್ತದ. ರಸ್ತೇದಾಗ ಮಿರ್ಚಿ ಭಜೀ ಅಂಗಡಿ ಇದ್ದರಂತೂ ಅಜ್ಜಿಲಿ ಅಪ್ಪಿಲಿ ಅಣ್ಣಿಲಿ ಮಾವಿಲಿ ಚಿಕ್ಕಪ್ಪಿಲಿಗಳು ಎಣ್ಣೀ ವಾಸನಿಗೆ ಅದ ರಸ್ತೇನ್ಯಾಗsವಾಕಿಂಗ್ ಮಾಡ್ತಾವ. ಈಗಿನ ಹುಡ್ರು ಚಾಟ್ ಅಂಗಡಿ ವಾಸನೀಗೆ ಜೀಂವಾ ಬಿಡ್ತಾವಲ್ಲ ಹಂಗs.ನಿಮ್ಮ ಊರಿನ ಕಾಯಿಪಲ್ಲೇದ ಸಂತೀವಳಗ ನಿಮಗ ಸೌತೀಕಾಯಿ, ಕೊತ್ತಂಬರಿ, ಮೆಣಶಿನಕಾಯಿ ವಾಸನಿ ನೆನಪದನೋ ಇಲ್ಲೋ? ಅಲ್ಲೇ ಬಾಜೂಕ ಖಬ್ಬಿನ ಹಾಲು ಅದರ ಬಾಜೂಕsಎಳನೀರು, ಹಾಂಗs ಮುಂದ ಹೋದರ ಪ್ಯಾರಲ, ಚಿಕ್ಕೂ, ಬಾರಿ ಹಣ್ಣಿನ ವಾಸನಿ ಮರೆತಿಲ್ಲ ಹೌದಲ್ಲೋ..? ನಮ್ಮ ಊರಿನ ಆಪೂಸ ಹಣ್ಣಿನ ನಾತಕ್ಕs ಡಯಾಬಿಟೀಸ್ ಜಾಸ್ತೀ ಆಗತದರೀ. ನಮ್ಮ ಹುಬ್ಬಳ್ಳಿ ಕಡೇ ಸಂಜಿಯನ್ನೋಣ, ಉಳ್ಳಾಗಡ್ಡಿ, ಬಳ್ಳೊಳ್ಳೀ, ಟಮಾಟಿ, ಮೆಣಶಿನಕಾಯಿ ವಗ್ಗರಣೀ ಗಮಲು ಹಿಡೀತದ. ಸೂಸಲಾ ಅವಲಕ್ಕಿಯದು ಚುರುಮುರಿದೂ.’‘ಗಮ ಗಮಡ್ಸ ತಾವ ಮಲ್ಲಿಗಿ....” ಅಂತ ಬೇಂದ್ರೆ ಅಜ್ಜ ಸುಮ್ಮನs ಬರದರೇನೂ? ಗಂಡು ಹೆಣ್ಣಿನ ಸರಸರಸದ ಸುವಾಸನಿ ಆ ಮಲ್ಲಿಗಿಯದು. ನಮ್ಮ ಕನ್ನಡ ಪ್ರಧ್ಯಾಪಕರೊಬ್ಬರು ರಾಗಿ ಮುದ್ದೆಯ ಸುವಾಸನಾ ವೈವಿಧ್ಯವನ್ನ ವರ್ಣಿಶಿದ್ದು ಇನ್ನೂ ನಿನ್ನೆಮೊನ್ನೆ ಕೇಳಿದಷ್ಟು ಮನಸ್ಸಿನ್ಯಾಗ ಕೂತದ. ಹಂಗsರಸ್ತೇದಾಗ ಎಲ್ಲ್ಯರ ಕಾಫಿ ವರ್ಕ್‌ ಅಂಗಡಿ ಇದ್ದರ ಎಲ್ಲರಿಗೂ ಕಾಫೀ ವಾಸನಿ ಫ್ರೀ.. ದಿನಾ ಮುಂಝೇಲೆ ಮನ್ಯಾಗ ಚಾ ಕುದಿಯುವ ಪರಿಮಳ. ಪರಿಮಳ ಅಂದ್ರ ಮಂತ್ರಾಲಯದ ಪರಿಮಳ ಪ್ರಸಾದನsನೆನಪಾತಲ್ಲ! ಒಂದು ಘಳಿಗಿ ರಾಯರನ್ನ ನೆನೆದs ಮುಂದುವರೀತೇನಿ.ಪರಿಮಳ ಗಳೋಳಗ ರಾಣೀ ‘ಮೀನಿನ’ ಪರಿಮಳ! ಹಾಂಕಾಂಗ್ ಅನ್ನೊ ದ್ವೀಪಾನ ಸುವಾಸಿತ ಬಂದರು ಅನ್ನೋ ಹೆಸರಿನಿಂದ ಕರೀತಾರ. ಅಲ್ಲೆ ಬರೇ ಈ ಮೀನಿನ ಪರಿಮಳ ವಣ ಮೀನು, ಹಶೀ ಮೀನು, ಹುರಿದ ಮೀನು, ಕರಿದ ಮೀನು ಒಟ್ಟೀನ್ಯಾಗ ಮೀನೋ ಮೀನು... ಅದರ ಪರಿಮಳವೋ ಪರಿಮಳ. ಮೀನು ಪ್ರಿಯಯರಿಗೆ ಅಪ್ಯಾಯಮಾನವಾದ ಜಾಗಾರಿ ಅದು. ಹೀಂಗ ಯಾವುದರsಒಂದು ವಾಸನಿ ಅಥವಾ ವಾಸನಿಗಳು ನಮ್ಮನ್ನ ನಮಗ ಗೊತ್ತಿಲ್ಲಧಾಂಗ ಆಳತಿರತಾವ.ಮೀನು ಮಾರುವಾಕಿ... ಹೂವಾಡಗಿತ್ತಿ ಮನ್ಯಾಗ ಒಂದು ರಾತ್ರಿ ಮಲಗಿದಾಗ ಆ ಹೂವುಗಳ ವಾಸನೀಗೆ ಅಕೀಗೆ ತಲಿಶೂಲಿ ಎದ್ದು ನಿದ್ದಿ ಹತ್ತಲಾರದ ಒದ್ದ್ಯಾಡಿ, ಕಡೀಕೆ ತನ್ನ ಮೀನಿನ ಬುಟ್ಟಿ ತಲಿ ಬಾಜೂಕ ಇಟ್ಟಗೊಂಡು ಅದರ ವಾಸನಿ ತೊಗೋತ ತೊಗೋತ ಮಲಗಿ ನಿದ್ದೀ ಮಾಡಿದ ಕಥಿ ನಿಮಗೆಲ್ಲಾ ಗೊತ್ತಿರಬೇಕಲ್ಲರೀ..?! ಇಂಗ್ಲಿಷ್ ಸಿನೆಮಾ ‘ಸೆಂಟ್ ಆಫ್‌ ಅ ವುಮನ್’ ದ್ದು ಕಥಿ ಅಲ್ಲಿದು. ಅದು ಬ್ಯಾರೆ ಇದು ಬ್ಯಾರೆ.ಇದು ‘ಸೆಂಟ್ ಆಫ್‌ ಅ ಫಿಶರ್ ವುಮನ್’! ಮೀನಿನಂಥಾ ಯಕಶ್ಚಿತ್ ಪ್ರಾಣಿನ ತನ್ನ ಪರಿಮಳ ಪಸರಿಸೋವಾಗ ಮನಷಾ ಹ್ಯಂಗ ಹಿಂದುಳೀತಾನರೀ...? ಮನುಶ್ಯರೂ ಗಂಧೋತ್ಪಾದಕರೇ... ಸಿರಿಗಂಧಂತೂ ಅಲ್ಲ ಅಲ್ರೀ... ತಿಳೀತಿಲ್ಲೋ?! ಅದರಾಗೂನೂ ವೈವಿಧ್ಯತಾ ಇರ್ತದsಮತ್ತ, ಅದು ದಿನಾ ಅಗದಿ ತಾಜಾ ಆಗಿ ಉತ್ಪತ್ತಿಯಾಗೋ ಹೂ... ಅಲ್ಲಲ್ಲ ಪರಿಮಳ ದ್ರವ್ಯ... ಎಲ್ಲೆ ವಡೀಬಾರದಾಗಿರ್ತದೋ ಅಲ್ಲೇ ಈ ದ್ರವ್ಯದ ಬಾಟಲ್ಲು ವಡೀತದ.ಬಾಟಲೀ ವಡಿಯೋವಾಗ ಕೆಲವೊಮ್ಮೇ ಶಬ್ದಾಗತದ, ಕೆಲವೊಮ್ಮೆ ಸದ್ದಾಗುದುಲ್ಲ!! ಭಾಳ ಸಲ ನಿಶ್ಯಬ್ದದಾಗsಹೆಚ್ಚಿಗಿ ಶಕ್ತಿ ಇರತದ. ಈ ಶಕ್ತಿಯಿಂದ ನೀವು ಮಂದೀನ್ನ ಹೊಡೆದಾಟ ಇಲ್ಲದನsಚಿತ್ ಮಾಡಬಹುದು. ನಿಮ್ಮ ಶಕ್ತಿ ನಿಮಗ ಗೊತ್ತsಇರತದ. ಹೌದಲ್ರೀ..?! ನಿಮಗ ಗೊತ್ತಿಲ್ಲದಿದ್ರೂ ನಿಮ್ಮ ಬಾಜೂಕ ಕೂತವರಿಗೆ ಗೊತ್ತಿರಲಿಕ್ಕೇ ಬೇಕು. ಲಿಫ್ಟಿನ್ಯಾಗ, ಕಿಕ್ಕಿರಿದು ತುಂಬಿದ ಬಸ್ಸಿನ್ಯಾಗ, ಪರೀಕ್ಷಾ ಬರೆಯೋ ಹಾಲಿನ್ಯಾಗ, ಕಾರಿನ್ಯಾಗ, ಏರ್ ಕಂಡೀಷನ್ ಬಸ್ಸಿನ್ಯಾಗ ನಿಮ್ಮ ಈ ಶಕ್ತಿ ಪ್ರದರ್ಶನ ನಿಮ್ಮ ಪ್ರಯತ್ನವಿಲ್ಲದ ಅಥವಾ ಅಚಾನಕ್ಕಾಗಿ ಆಗೇsಇರತದ.ದಾಂಪತ್ಯದಾಗ ಸುದ್ದಾ ಈ ವಾಸನಿ ಗಂಡಾ ಹೆಂಡತಿ ನಡುವಿನ ಆತ್ಮೀಯತೇಯನ್ನ ಹೆಚ್ಚ ಮಾಡತದ. ಇದೂ ನಿಮಗೆಲ್ಲಾ ಗೊತ್ತಿದ್ದದ್ದs..! ...ಇಷ್ಟ ವರ್ಷಗಳಿಂದ ತಡಕೊಂಡೀರೀ..!! ನಿಮ್ಮದಲ್ಲರೀ..! ಅವರದ್ದು..! ಅಂದಹಾಂಗ ಒಂದಲ್ಲಾ ಒಂದು ಸರೆ ನೀವು ಸಣ್ಣಕೂಸಿರೋ ಮನಿಗೆ ಹೋಗೇ ಇರತೀರಿ? ಬೇಬಿ ಪಾವ್ಡರು ಮತ್ತು ಕೂಸಿನ ಒಂದೂ ಎರಡೂ ಇವ್ವು ಮೂರು ಕೂಡಿದ ವಾಸನಿ ಬರ್ತದಲ್ಲಾ? ಅದರ ಜೋಡೀ ಲೋಭಾನದ ಹೊಗೀ, ಬೆಳ್ಳುಳ್ಳಿ ವಗ್ಗರಣೀ, ತೊಪ್ಪಲ ಪಲ್ಲೇದ ವಾಸನೀನೂ ಸೇರಿಕೊಂಡಿರ್ತದ.ಎಷ್ಟ ಬೆಚ್ಚಗಿನ ಭಾವನಿ ಬರತದ! ಮುದ್ದಿನ ಅಜ್ಜೀಯ ಸೀರಿ ಸೆರಗಿನ ವಾಸನಿ, ಅಜ್ಜನ ನಾಶಿಪುಡೀಯ ವಾಸನಿ, ಅಂತಃಕರುಣಿ ಅಮ್ಮನ ಮೈ ವಾಸನಿ, ಅಕ್ಕರಿಯ ಅಪ್ಪನ ಬೆವರಿನ ವಾಸನಿ ಹೆಂಗ ಮರೀತದ ರೀ!? ಇನ್ನsಕೆಲವು ಮನ್ಯಾಗ ಈ ಸಣ್ಣ ಕೂಸಿನ ಜಗಾ ಅವರ ಪ್ರೀತಿಯ ಸಾಕು ಪ್ರಾಣಿಗಳು ತೊಗೊಂಡಿರತಾವ. ಅಂತಹ ನಾಯಿ ಬೆಕ್ಕು ಸಾಕಿದವ್ರ ಮನ್ಯಾಗೂ ಒಂಥರಾ ಬ್ಯಾರೆ, ಪ್ರಾಣಿಗಳಿಗೆ ಸಂಬಂಧ್ ಪಟ್ಟ ವಾಸನಿ ಬರತದ.ರಸ್ತೇದಾಗ ಪೆಟ್ರೋಲ ಬಂಕು ಇದ್ದರ ಪೆಟ್ರೋಲಿನ ವಾಸನಿ. ಕೆಲವೊಬ್ಬರಿಗೆ ಈ ಪೆಟ್ರೋಲು, ಶೂ ಪಾಲೀಶು, ಸಿಗರೇಟಿನ ವಾಸನೀ ಕುಡಿಯೋದು ಚಟ ಇರ್ತದಂತ... ಚಿಗರೇಟಿನ ಚಟ ಇದ್ದಹಂಗ, ನನಗೂ ಒಂದು ಚಟ ಅದ, ಈ ಹೊಸ ಪುಸ್ತಕದ ವಾಸನಿ ನೋಡ್ಕೋತ ಕೂಡೋ ಚಟಾ. ನಮ್ಮಪ್ಪ ಗಣಿತದ ಪುಸ್ತಕ ಕೈಯಾಗ ಕೊಟ್ಟುಬರೇ ವಾಸನೀ ನೋಡಬ್ಯಾಡವಾ ಲೆಖ್ಖಾನೂ ಬಿಡಸು ಅಂತಿದ್ದರು... ನಾ ಬಿಡಸೋದು ಬಿಟ್ಟೆ, ಪುಸ್ತಕದವಾಸನಿ ನೋಡ್ಕೋತs ಉಳಿದೆ.ಇಲ್ಲೆ ನೋಡ್ರಿ, ನನಗ ಕನ್ನಡ ಕಥೀ ಪುಸ್ತಕ, ಕಾದಂಬರಿ, ಮಾತ್ರ ವಾಸನಿಯಿಂದನsಪತ್ತೇ ಹತ್ತಿ ಬಿಡತಿತ್ತು. ‘ಸುಧಾ’, ‘ಕಸ್ತೂರಿ’, ‘ಮಯೂರ’ಗಳ ಹಳೇ ಪುಸ್ತಕಗಳೂ ಅವುಗಳ ವಾಸನಿಯೂ ನನ್ನ ಬಾಲ್ಯದ ನೆನಪಿನ ಅವಿಭಾಜ್ಯ ಅಂಗನsಆಗೇದ. ಇರಲಿ ಇರಲಿ. ಇನ್ನ ಈ ರಸ್ತೇದಾಗ ಕಲ್ಯಾಣ ಮಂಟಪ ಇದ್ದರ ಅದೊಂದ ನಮೂನಿ ವಾಸನಿ ಇರತದ. ಲಗ್ನದ ಮನಿಗೇನsಒಂದು ಸುಗಂಧ ಇರ್ತದ. ಹೋಮದ ಹೊಗಿ ವಾಸನಿ, ಪಕ್ವಾನ್ನಗಳು ಮತ್ತ ಬ್ಯಾರೆ ಬ್ಯಾರೆ ಹೂವುಗಳ ಘಮ ಇವು ಮೂರೂ ಬೆರೆತ ಒಂದು ವಾಸನಿ. ನೆನಪಾತಲ್ಲ?! ದೇವರ ಗುಡೀಯೊಳಗ ಹೂವ್ವು, ಊದಿನ್ ಖಡ್ಡಿ, ಅಂಗಾರ, ಕೇಸರಿ ಗಂಧ, ತೆಂಗಿನ ನೀರಿನ, ಎಣ್ಣಿ ಜಿಡ್ಡಿನ ವಾಸನಿ ಇರ್ತದ.ದರಗಾದಾಗ ಲೋಭಾನದ ಖುಶಬೂ ಇರತದ. ಚರ್ಚಿನ್ಯಾಗ ಇನ್ನೊಂದ್ ನಮೂನಿ ಸೆಂಟು. ನಮ್ಮ ಊರು ಒಂದು ಸಣ್ಣ ಹಳ್ಳಿರಿ. ಆ ಹಳ್ಳಿಯೊಳಗ ಒಂದsಅಂಗಡಿರೀ. ಆ ಅಂಗಡಿ ವಳಗ ಒಂದsನಮೂನಿ ಬ್ರಾಂಡಿನ ಊದಿನಖಡ್ಡಿ ಸಿಗತದ. ಹಿಂಗಾಗಿ ಊರಿನ ಎಲ್ಲಾರ ಮನ್ಯಾಗೂ, ಎಲ್ಲಾ ಗುಡಿ ವಳಗೂ ಅದsಒಂದsಊದಿನ ಖಡ್ಡಿ ಹಚ್ಚತಾರ. ಇದsಕಾರಣಾಗಿ ಇಡೀ ಊರಿಗೂರ ಸಂಜ್ಯಾದ ಕೂಡ್ಲೆ ಒಂದsನಾತ ಹಿಡೀತದರಿ. ಅದಕ್ಕ ನನ್ನ ಊರಂದ ಕೂಡ್ಲೆ ನನಗ ಆ ಚಿತ್ರಕ್ಕಿಂತ ಮೊದಲ... ಮನಸ್ಸಿನ ಮೂಗಿಗೆ ಆ ನಾತ ಬಡೀತದ.ತಲಿಸೂಲಿ ಏಳದ ಇನ್ನೇನಾಗತದ?! ಅಲ್ಲೆ ಬರೇ ಟೈಗರ್ ಬಾಮ್ ಅಷ್ಟsಸಿಗೂದ್ರೀ... ಇಂಥಾ ನಮ್ಮ ಊರಿನ ಪುರೋಹಿತರ ಮನೀ ಸೀತಕ್ಕ ತನ್ನ ಮಗಳ ಬಾಣಂತನಕ್ಕ ಈ ಅಮೇರಿಕಕ್ಕ ಬಂದಿದ್ದಳು. ಅಕೀಗೆ ಈ ಮಳಿ, ಥಂಡಿ, ಹಿಮ, ಸ್ನಾನ, ಸಂಡಾಸ, ಫ಼ಾಯರ್ ಅಲಾರಾಮ್ ಎಲ್ಲಾ ನೀಗಲಾರದಹಂಗ ಆಗಿ ತಲಿ ಚಿಟ್ಟ ಹಿಡದಿತ್ತು. ಮಗಳ ಹೆರಿಗಿ ಟೈಮಿನ್ಯಾಗ ಅಳಿಯಾ ನಮ್ಮ ಸೀತಕ್ಕನ್ನೂ ಹಾಸ್ಪಿಟಲ್ಲಿಗೆ ಕರ್ಕೊಂಡು ಬಂದ. ನಾನೂ ಹೋಗಿದ್ದೆ.ಅಲ್ಲೇನನಬೇಕಕಿ..? ‘ಅಯ್ಯ ಸುಡ್ಲಿ... ಇದಕ್ಕೇನ ಹೆರಗಿ ದವಾಖಾನಿ ಅಂತಾರsಮಹರಾಳ... ಸ್ವಲ್ಪೂ ಔಷಧದ ವಾಸನೀನೇ ಇಲ್ಲಲ್ಲ ಇಲ್ಲೇ!!’ ಟಿಂಕ್ಚರ್ರು, ಡೆಟ್ಟಾಲು ಹೋಗಲಿ, ಅಕೀಗೆ ಕಡೀ ಪಕ್ಷ ಟೈಗರ್ ಬಾಮಿಂದರ ವಾಸನಿ ಬಂದಿದ್ದರ ಸಮಾಧಾನ ಆಗತಿತ್ತೋ ಏನೋ? ನೋಡ್ರಿ ವಾಸನಿಲ್ಲಂದ್ರ... ಯಾವ ಸಾಮಾನಿಗೂ ಏನೂ ಬೆಲಿನsಇಲ್ಲ! ಅಮೇರಿಕಾದ ಹಾಸ್ಪಿಟಲ್ಲಿಗೂ! ವಾಸನಿ ಇಲ್ಲದ ಇರೋ ಕೆಲವು ಸಾಮಾನು ಹೇಳ್ರಿ ನೋಡೋಣು. ಬೆಳಕು?!!. ಭಾರೀ ಭೇಷನೆ ಉತ್ತರಾ ಹೇಳಿದಿರಿ... ಆದ್ರ ಬೆಂಕಿಗೆ ಹೊಗೀ ವಾಸನಿ, ಘಾಳಿಗೆ ಹೂವಿ(ಸಿ) ನ ಗಂಧ. ನೀರಿಗೆ ಮೀನಿನ ಘಮ ಇದ್ದs ಇರತದ.ಮೊದಲ ಮಳಿಗೆ ಮೈ ಅರಳಿಸೋ ಭೂಮಿಯ ಆ ಮಣ್ಣಿನ ಗಂಧ. ಮೃದ್ಗಂಧ... ಅದೂ ನಮ್ಮ ತಾಯ್ನಾಡಿನ ಮಣ್ಣಿನ ವಾಸನಿ... ಅದರಷ್ಟು ದಿವ್ಯ ಗಂಧ ಇನ್ನೇನೂ ಇರಲಿಕ್ಕೇ ಇಲ್ಲ. ನನ್ನ ಎದ್ಯಾಗ ಮಳಿ ಸುರು ಆತು ಕಾಣಿಸ್ತದ... ಅದಕ್ಕ.. ಕಣ್ಣಾಗ ನೀರಿನ ಸೊನಿ. ತಾಯ್ನೆಲದ ವಾಸನಾ ಅಷ್ಟು ಸುಲಭದಾಗ ಕಳೆಯೂದುಲ್ಲ! ಈ ವಾಸನಾ ಪದದ ಅರ್ಥ ಅದ ಅಲ್ಲ ಅದರ ಅರ್ಥ ಸ್ವಲ್ಪ ಬ್ಯಾರೇ. ದೆವ್ವದ ಲಲಿತಕ್ಕ ಅಂತ ಒಬ್ಬರು ನಮ್ಮ ದೂರದ ಸಂಬಂಧಿಕರು ಆಗಿ ಹೋದರು. ಅವರ ಮೈ ಮ್ಯಾಲೆ ಒಂದು ದೆವ್ವ ಬರತಿತ್ತಂತ. ಆ ದೆವ್ವಕ್ಕ ಅಕಿನ್ನ ಕಂಡರ ಭಾಳ ಪ್ರೀತ್ಯಂತ.ಗಾಣಗಾಪುರದಾಗ ಆ ದೆವ್ವ ‘ನಾ ಇಕಿ ಮ್ಯಾಲೆ ಭಾಳ ವಾಸನಾ ಇಟಗೊಂಡೀನಿ ಅದಕ್ಕ ಅಕೀ ಮ್ಯಾಲೆ ಬರತೇನಿ’ಅಂತ ಹೇಳ್ತಂತ. ಈ ವಾಸನಾ ಬ್ಯಾರೇರಿ. ಲಲಿತ ಮೋದೀಗೆ ರೊಕ್ಕದ ವಾಸನಾ ಅದ ನೋಡ್ರಿ. ಅದು ತೀರೋ ಮಟ ಅವ ರೊಕ್ಕದ ಭೂತ ಆಗಿ ಗರ ಗರ ತಿರುಗ್ತನs ಇರತಾನ. ಯಾವುದೇ ತೀರದ ಆಶಾಕ್ಕ ವಾಸನಾ ಅಂತಾರ. ಇಂಥಾ ಮನಸ್ಸಿನ ಆಶಾ ಪೂರ್ಣ ತೀರಿಸಿಗೊಂಡ  ಒಂದು ಅಗದೀ ಹಿಲೇರಿಯಸ್ ಘಟನಾ ಹೇಳ್ತೇನಿ ಕೇಳ್ರಿ.ನನ್ನ ಗೆಳೆಯಾ ಒಬ್ಬಾಂವ ಸಿಂಗಪೂರಿನಿಂದ ಚೆನ್ನೈಕ್ಕ ಹೊಂಟಿದ್ದನಪಾ. ಈ ವಿಮಾನ ಹತ್ತೂವಾಗ ಎಲ್ಲಾ ಪ್ರಯಾಣಿಕರ ಕೈ ಚೀಲ ತಪಾಸು ಮಾಡೋದು ಪೋಲೀಸರ ಕೆಲಸ. ಅವರು ತಪಾಸು ಮಾಡಿ ಯಾವುದರ ಗೈರ ಕಾನೂನಿನ ಸಾಮಾನು ಒಯ್ಯುತ್ತಿದ್ದರ, ಅಥವಾ ವಿಮಾನದಾಗ ಒಯ್ಯಬಾರದ ಸಾಮಾನಿದ್ದರ ಅದನ್ನ ತೆಗೆಸಿ ಬಿಡತಾರ. ಈ ನನ್ನ ಗೆಳೆಯಾನ ಗೆಳೆಯ ತನ್ನ ಕೈಚೀಲದಾಗ ಒಂದು ಹೊಸ ಡೀಯೋ ಡರೆಂಟ್ ಇಟ್ಗೊಂಡಾನ.ಪೋಲೀಸು ಅದನ್ನ ಹೊರಗ ತೆಗೆಶಿ, ಅದು ಒಯ್ಯಬಾರದಂತ ತಾಕೀತು ಮಾಡ್ಯಾನ. ಈ ನಮ್ಮ ಡಿಯೋಡರೆಂಟ್ ಗೆಳೆಯನ ಮಾರಿ ಸಣ್ಣಗಾಗೇದ. ಅದನ್ನ ನೋಡಿ ಆ ಪೋಲೀಸಿನಾಂವ...‘ನೀವು ಬೇಕಾದರ ಈಗಲೇ ಅದನ್ನು ಉಪಯೋಗಿ ಸಬಹುದು’ ಅಂತ ಹೇಳಿದನಂತ. ಆ ಪೋಲೀಸನ  ಮಾತು ಮುಗಿಯೋದ ತಡ ಈ ಮಹರಾಯ ಆ ಡೀಯೋಡರೆಂಟ್ ಬಾಟಲಿಯನ್ನು ತನ್ನ ಮೈಗೆ ಇಡೀ.. ಮೂರು ನಾಲ್ಕು ಸರೇ ಹೊಡಕೊಂಡು ಖಾಲೀ ಮಾಡಿ ಸಮಾಧಾನದಿಂದ ಕೂತನಂತ..!ಆ ಏರೋಪ್ಲೇನಿನ ಮಂದಿ ಈ ಸೌಗಂಧಿಕಾ ಪುರುಷ ಪುಷ್ಪವನ್ನ ಹೆಂಗ ತಡಕೊಂಡರೋ ಏನೋ? ನನ್ನ ಗೆಳೆಯ ಅಂತೂ ತನ್ನ ಮೂಗು, ತಲಿ ಕೆಡಿಸಿಕೊಂಡು ಚೆನ್ನೈ ಮುಟ್ಟಿದ ಕೂಡ್ಲೆ ವಿಮಾನದ ಖಿಡಕ್ಯಾಗಿಂದನ ಜಿಗದು ಓಡಿ ಪಾರಾಗಿ ಬಂದೆ ಅಂತ ಏದುಸಿರು ಬಿಡ್ಲಿಖತ್ತಿದ್ದ.

ಹೀಂಗ ಬರಕೋತ ಕೂತಾಗ... ಅಯ್ಯೋ.. ! ಏನೋ ಸುಟ್ಟ ವಾಸನಿ ಬಂತಲ್ಲ!......ಅವ್ವಯ್ಯಾ... ಒಲೀಮ್ಯಾಲೆ ಹಾಲಿಟ್ಟಿದ್ದೆ!.. ಅಟ್ಟಿಸಿದವೋ ಏನೋ.. ಅನ್ಕೋತ ನಾ ನನ್ನ ಯಜಮಾನರಿಗೆ ‘ಏನದು ವಾಸನಿ?’ ಅಂತ ಕೇಳಿದೆ. ಅವರು ಪ್ರಶ್ನಾರ್ಥಕವಾಗಿ ನನ್ನ ನೋಡಿ... ಸಾವಕಾಶೆ ಅಂದರು.. ‘ಯಾಕರೀ? ನನಗ ಒಟ್ಟ ವಾಸನಿ ಬರೂದುಲ್ಲ ಹತ್ತು ವರ್ಷಾತು ಮೂಗಿನ್ ಆಪರೇಷನ್ ಆಗಿ.. ಮರತಿರಿ ಏನು?’ lತೀರ್ಪುಗಾರರ ಟಿಪ್ಪಣಿ

‘ಮನಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ ಭಾವಲೋಕವನ್ನು ಅನಾವರಣಗೊಳಿಸಿ’ ಎಂದು ‘ಭೂಮಿಕಾ’ ನೀಡಿದ ಲಲಿತ ಪ್ರಬಂಧ ಸ್ಪರ್ಧೆಗೆ 673 ಮಹಿಳೆಯರು ಸ್ಪಂದಿಸಿದರು ಎಂಬುದು ಇಂದಿನ ಕಾಲಮಾನದಲ್ಲಿ ನಿಜಕ್ಕೂ ಅಚ್ಚರಿಯ ಸಂಗತಿ. ಈ ಎಲ್ಲ ಲೇಖಕಿಯರಿಗೆ ನಮ್ಮ  ಅಭಿನಂದನೆಗಳು. ಇಷ್ಟೊಂದು ಮನಸುಗಳಿಗೆ ತಮ್ಮ ಭಾವನೆಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿದ್ದು ಹಾಗೂ ಇದಕ್ಕಾಗಿ ಬರವಣಿಗೆಯ ಮಾರ್ಗವನ್ನು ನೆಚ್ಚಿಕೊಂಡಿದ್ದು ನಿಜಕ್ಕೂ ಕುತೂಹಲಕಾರಿ ಅಂಶ.

ಇವರಲ್ಲಿ ಬಹುತೇಕ ಮಹಿಳೆಯರು ಇದೇ ಮೊದಲ ಬಾರಿಗೆ ಬರಹದ ಲೋಕಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ 

ಅನ್ನಿಸುತ್ತದೆ. ಅದು ಬರವಣಿಗೆಯಲ್ಲಿಯೂ ಕಾಣುತ್ತದೆ. ನಮ್ಮನ್ನು ತಲುಪಿದ ಪ್ರಬಂಧಗಳ ಓರೆಕೋರೆಗಳು ಏನೇ ಇರಲಿ, ಬಹಳಷ್ಟು ಬರವಣಿಗೆಯಲ್ಲಿ ಒಂದು ಬಗೆಯ ತಾಜಾತನ ಇದ್ದುದನ್ನು ಒಪ್ಪಿಕೊಳ್ಳಲೇಬೇಕು.ಲಲಿತ ಪ್ರಬಂಧ ಉಳಿದ ಪ್ರಕಾರಗಳಿಗಿಂತ ಭಿನ್ನವಾಗುವುದು ಭಾಷೆ, ಭಾವಗಳ ಲಾಲಿತ್ಯದಿಂದಾಗಿಯೇ. ಅದು ಹಗುರ ನಿರೂಪಣೆಯಿಂದ ಹರಟೆಯಾಗಿ ಬಿಡುವ, ಅಥವಾ ಸಂಕೀರ್ಣತೆಯಿಂದ ವೈಚಾರಿಕ ಪ್ರಬಂಧವಾಗುವ ಅಪಾಯದಿಂದ ಪಾರಾಗಬೇಕು. ಈಚಿನ ಎರಡು ಮೂರು ದಶಕಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಪ್ರಕಾರಗಳಲ್ಲಿ ಆದ ಬದಲಾವಣೆಗಳು ಲಲಿತ ಪ್ರಬಂಧ ಪ್ರಕಾರದಲ್ಲಿಯೂ ಆಗಿವೆ. ಕಥಾ ಪ್ರಬಂಧ, ಭಾವ ಪ್ರಬಂಧ, ಭಾವಗೀತಾತ್ಮಕ ಪ್ರಬಂಧ ಮುಂತಾಗಿ ಗುರುತಿಸಬಹುದಾದ ಪ್ರಬಂಧಗಳು ಕನ್ನಡದಲ್ಲಿ ಬಂದಿವೆ.ಈ ಹಿನ್ನೆಲೆಯಲ್ಲಿ ಗಮನಿಸಿದಾಗ ನಾವು ಓದಿದ ಪ್ರಬಂಧಗಳಲ್ಲಿಯೂ ಈ ಅಂಶಗಳು ಕ್ವಚಿತ್ತಾಗಿಯಾದರೂ ಇದ್ದವು.

ಇಲ್ಲಿಯ ಅನೇಕ ಬರಹಗಳು ಗಂಡು ಹೆಣ್ಣಿನ ಅಸಮ ನೆಲೆ, ದಾಂಪತ್ಯ, ಗೃಹಕೃತ್ಯ, ಸಮಯ ನಿರ್ವಹಣೆ ಮುಂತಾದ ವಸ್ತುಗಳನ್ನು ಒಳಗೊಂಡಿವೆ. ಕಲ್ಪನೆ ಅಥವಾ ಲಘಿಮಾ ಕೌಶಲಕ್ಕೆ ಇಲ್ಲಿ ಅವಕಾಶವೇ ಇಲ್ಲದಾಗಿದೆ. ನಾವು ಆಯ್ಕೆ ಮಾಡಿರುವ ಮೊದಲ ಮೂರು ಪ್ರಬಂಧಗಳಲ್ಲಿ, ‘ಅಲ್ಲಿ ಅವಳೇ ಇದ್ದಿದ್ದರೆ’ ಭಾವಗೀತಾತ್ಮಕವಾಗಿ ಆರಂಭವಾಗುತ್ತದೆ.‘ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ, ನೀಡುವಿಕೆಯ ಹಂಬಲದ ಅವನು, ಜ್ಞಾನದ ಹೊಸ್ತಿಲಲ್ಲಿ ನಿಂತು ರಾತೋರಾತ್ರಿ ಹೊರಟ’ ಸಿದ್ದಾರ್ಥನ ಪಕ್ಕದಲ್ಲಿಯೇ ಇದ್ದ  ‘ಅವಳು’ ‘ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ ಇದ್ದು ತೋರಿಸುತ್ತಿದ್ದಳೇನೋ’ ಎಂಬ ಬೀಜಭಾವ ಹೊತ್ತ ಪ್ರಬಂಧ, ಸ್ವಗತದ ಧಾಟಿಯಲ್ಲಿದೆ. ಇದು ಮಧ್ಯದಲ್ಲಿ ಭಾವಲೋಕವನ್ನು ತೊರೆದು ಭಾಷಣದ ಮಟ್ಟಕ್ಕೆ ಇಳಿದುಬಿಡುತ್ತದೆ. ಆದರೂ ಇದೊಂದು ಅತ್ಯುತ್ತಮ ಪ್ರಯತ್ನ ಎಂಬ ಕಾರಣಕ್ಕಾಗಿ ಮೂರನೆಯ ಸ್ಥಾನ ಪಡೆದಿದೆ.ಪ್ರಾಣಿ ದಯೆ, ಜೀವಪ್ರೀತಿ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಯುವತಿಯೊಬ್ಬಳ ಶ್ವಾನಪ್ರೀತಿ ಸ್ನೇಹ ಸಖ್ಯ ಮಮಕಾರ ಸಹಜ, ಲಲಿತಮಯ ನಿರೂಪಣೆಯೊಂದಿಗೆ ಕಥೆ ಹೇಳುವಂತೆ ಸಾಗುವ ‘ಕೈ ಮಗು’ ಒಂದು ವಿಶಿಷ್ಟ ಯತ್ನ. ಹೀಗಾಗಿ ಇದು ಎರಡನೆಯ ಬಹುಮಾನ ಪಡೆದಿದೆ. ಸಾಂಪ್ರದಾಯಿಕ ಲಲಿತಪ್ರಬಂಧದ ಶೈಲಿಯಲ್ಲಿಯೇ ಇರುವ ‘ಸಿರಿಗಂಧಮಯ ಈ ನನ ಹೃದಯ ಏತಕೆ...’ ಅತ್ಯಂತ ಲವಲವಿಕೆಯಿಂದ ಕೂಡಿದೆ.‘ಲಲಿತ ಅಂದ ಕೂಡ್ಲೆ.. ಬರೇ ಒಂದು ಪದ ನನಗ ಎಷ್ಟೆಲ್ಲ ನೆನಪುಗಳ ಮಳೀಗರೀಲಿಖತ್ತದ...’ ಎಂದು ಲಹರಿಯ ಬೆನ್ನೇರಿ ಲಲಿತಮಯವಾಗಿ ಬಿಚ್ಚಿಕೊಳ್ಳುತ್ತ ಮನಸಿಗೆ ಮುದ ನೀಡುತ್ತದೆ. ಆಡು ಮಾತಿನಲ್ಲಿ ಆಪ್ತವಾಗಿ ಎದುರು ಕೂರಿಸಿಕೊಂಡು ಆ – ಈ ಸುದ್ದಿ ಹೇಳುತ್ತ ತನ್ನ ನೆನಪಿನಂಗಳದಲ್ಲಿ ವಿಹರಿಸುವ ಮನದ ಭಿತ್ತಿ ಚಿತ್ರ ಈ ಪ್ರಬಂಧ. ಹರಡಿಕೊಳ್ಳುವ ಈ ಬರಹ ಮೊದಲ ಸ್ಥಾನದಲ್ಲಿದೆ.ದಾಂಪತ್ಯದ ವಿಷಮ ಸಂಬಂಧ ಚಿತ್ರಿಸಿದ ಕೆಲವಾರು ಬರಹಗಳಲ್ಲಿ ‘ತೂಗುತಕ್ಕಡಿಯ ಸಂಬಂಧಗಳು’ ಹೆಚ್ಚು ಸೂಕ್ಷ್ಮವಾಗಿದ್ದು, ಗಮನಾರ್ಹವಾಗಿದೆ. ಸ್ಥೂಲಕಾಯದ ವಿಷಯವುಳ್ಳ ಪ್ರಬಂಧಗಳಲ್ಲಿ ತೀರ ಭಿನ್ನವಾಗಿರುವ ‘ಕೃಶಕಾಯದ ಕರಕರೆ’ ಜೀವಂತಿಕೆಯನ್ನು ಹಿಡಿದಿಟ್ಟಿದೆ. ಎರಡು ಕೈಗಳ ಮಹತ್ವವನ್ನು ಬಣ್ಣಿಸುತ್ತಲೇ ಎದುರೇ ಇದ್ದು ಕಾಣುವ ಕೈಗಳೇ ಇಲ್ಲದ ವ್ಯಕ್ತಿಯ ಚಿತ್ರವನ್ನು ಮನೋಜ್ಞವಾಗಿ ಹಿಡಿದಿಡಲು ‘ಕಾಡುವ ಕೈಗಳು’ ಯತ್ನಿಸಿದೆ. ಈ ಮೂರೂ ಪ್ರಬಂಧಗಳು ನಮ್ಮ ಮೆಚ್ಚುಗೆಗೆ ಅರ್ಹವಾಗಿವೆ.  ಇಷ್ಟೊಂದು ಸಂಖ್ಯೆಯಲ್ಲಿ ವಿಶೇಷ ಉತ್ಸಾಹದಿಂದ ಪಾಲ್ಗೊಂಡ ಎಲ್ಲ ಮಹಿಳೆಯರಿಗೂ ನಮ್ಮ ಹಾರ್ದಿಕ ಅಭಿನಂದನೆಗಳು.

–ಹೇಮಾ ಪಟ್ಟಣಶೆಟ್ಟಿ ಮತ್ತು ಚಂದ್ರಶೇಖರ ಆಲೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.