ಗುರುವಾರ , ಜೂನ್ 24, 2021
27 °C
ಬಾಂಧವ್ಯ ಬೆಸೆದ ರಂಗಿನ ಹಬ್ಬ

ಸುಗ್ಗಿಯ ಸಡಗರ ಹೋಳಿಯಲ್ಲಿ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಸೋಮವಾರ ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಡಿದರು. ಮುಖಕ್ಕೆ ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಶುಭಾಶಯ ಕೋರಿದರು. ನಗರ, ಪಟ್ಟಣಗಳ ಪ್ರಮುಖ ರಸ್ತೆಯಲ್ಲಿ ಬೆಳಿಗ್ಗೆಯಿಂದಲೇ ಯುವಕರ ದಂಡು ಹೋಳಿ ಆಟದಲ್ಲಿ ತೊಡಗಿದ್ದರು. ದಾರಿ ಹೋಕರು, ವ್ಯಾಪಾರಿಗಳು ಎನ್ನದೇ ಎಲ್ಲರಿಗೂ ಬಣ್ಣ ಹಚ್ಚಿ ಸಂಭ್ರಮಿಸಿದರು.ಕೆಲವರು ಬೈಕ್‌ ಮೇಲೆ ಸವಾರಿ ಹೊರಟು ನಗರದಾದ್ಯಂತ ಹ್ಯಾಪಿ ಹೋಳಿ... ಹ್ಯಾಪಿ ಹೋಳಿ ಎಂದು ಕೂಗುತ್ತ ಪಾದಚಾರಿಗಳ ಮೇಲೆ ಬಣ್ಣ ಎರಚುತ್ತ ಸಾಗುತ್ತಿದ್ದರೆ, ಮತ್ತೆ ಕೆಲವರು ರಸ್ತೆ ಬದಿಯಲ್ಲಿ ನಿಂತು ಬಣ್ಣದ ನೀರು ಎರಚುತ್ತಿದ್ದರು. ಕೆಲವರು ನೀರನ್ನಷ್ಟೇ ಜನರ ಮೇಲೆ ಹಾರಿಸಿ ಸಡಗರ ಪಟ್ಟರು. ಮಕ್ಕಳು ಪಿಚ್ಕಾರಿಗಳಲ್ಲಿ ಬಣ್ಣದ ನೀರು ಹಾರಿಸಿ ಖುಷಿ ಪಟ್ಟರು. ವಾರದ ಹಿಂದಿನಿಂದ ಸುಗ್ಗಿ ಮೇಳ ಕಟ್ಟಿ ತಿರುಗಾಟ ನಡೆಸಿದವರು ಹೋಳಿ ಹಬ್ಬದ ದಿನ ವರ್ಷದ ಸುಗ್ಗಿಯ ಸಡಗರಕ್ಕೆ ವಿದಾಯ ಹೇಳಿದರು.ಕಾರವಾರದ ಹಬ್ಬುವಾಡಾ, ಅಂಬೇಡ್ಕರ್‌ ವೃತ್ತ, ಗೀತಾಂಜಲಿ ಚಿತ್ರಮಂದಿರದ ಬಳಿ ಬಣ್ಣ ಹಚ್ಚಲೆಂದೇ ಯುವಕರ ತಂಡ ನೆರೆದಿತ್ತು. ಕುಂಠಿ ಮಹಾಮಾಯಿ ದೇವಸ್ಥಾನ ಹಾಗೂ ಜಿಲ್ಲಾ ರಂಗಮಂದಿರದ ಎದುರು ಯುವಕ, ಯುವತಿಯರು ಸಿನಿಮಾ ಹಾಡುಗಳಿಗೆ ಹಜ್ಜೆ ಹಾಕುತ್ತ ಓಕುಳಿ ಆಡಿದರು.ಗುಜರಾತಿಗಳ ಹೋಳಿ: ಇಲ್ಲಿನ ಕೋಣೆವಾಡದ ಗುಜರಾತಿ ತಾಂಡಾದಲ್ಲಿ ಗುಜರಾತಿಗಳು ಹೋಳಿಯನ್ನು ವಿಶೇಷವಾಗಿ ಆಚರಿಸಿದರು. ಎಲ್ಲರೂ ಒಂದೆಡೆ ಸೇರಿ ಗುಜರಾತಿ ವಿಶೇಷ ಪಾಯಸ ಕುಡಿದು ಮೈಮರೆತು ಕುಣಿದು ಕುಪ್ಪಳಿಸಿದರು. ಪುರುಷರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರೆ, ಮಹಿಳೆಯರು ಹೋಳಿಯ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕಿದರು.ತುಂಬಿದ ಕಡಲ ತೀರ: ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಓಕುಳಿಯಲ್ಲಿ ಕಾರವಾರ ನಗರದ ಜನತೆ ಮಿಂದೆದ್ದರು. ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರಕ್ಕೆ ಬಂದು ಸಮುದ್ರ ಸ್ನಾನ ಮಾಡಿದರು. ಅಷ್ಟೊತ್ತಿಗೆ ಟ್ಯಾಗೋರ್‌ ಕಡಲ ತೀರ ಜನರಿಂದ ತುಂಬಿ ಹೋಗಿತ್ತು. ಕೆಲ ವಿದೇಶಿ ಮಹಿಳೆಯರು ಸಮುದ್ರ ದಡದಲ್ಲಿದ್ದವರಿಗೆ ಬಣ್ಣ ಹಚ್ಚಿ ಹೋಳಿ ಆಚರಿಸುತ್ತಿದ್ದದ್ದು ಕಂಡು ಬಂತು.ಅಂಗಡಿ ಮುಂಗಟ್ಟು ಬಂದ್‌: ಹಬ್ಬದ ನಿಮಿತ್ತ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು. ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕ ಸಂಚಾರವೂ ವಿರಳವಾಗಿತ್ತು. ಇದರಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪ ಮಟ್ಟಿನ ಅಸ್ತವ್ಯಸ್ತ ಉಂಟಾಯಿತು.ಕಾಮದಹನದ ಬೆಂಕಿಯಲ್ಲಿ ಕಾದ ನೀರು...

ಹಳಿಯಾಳ:
ತಾಲ್ಲೂಕಿನಾದ್ಯಂತ ಹೋಳಿ ಹಬ್ಬದ ಅಂಗವಾಗಿ  ಬಣ್ಣದ ಓಕುಳಿಯನ್ನು ಸಂಭ್ರಮದಿಂದ ಅಚರಿಸಲಾಯಿತು.

ಬಡಾವಣೆಗಳಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳು ಮಹಿಳೆಯರು ಬಣ್ಣದ ಓಕುಳಿಯನ್ನು ಆಡಲು ಆರಂಭಿಸಿದರು. ಮಧ್ಯಾಹ್ನ 1ಗಂಟೆಯ ನಂತರ ಆಯಾ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮರತಿ ದೇವರ ಪ್ರತಿಮೆಯನ್ನು   ನಗರದ ವಿವಿಧ ಓಣಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕಾಮ ದಹನ ಮಾಡಲಾಯಿತು.ಹೋಳಿ ಹಬ್ಬದ ಅಂಗವಾಗಿ ಸ್ಥಳಿಯ ಮಜೀದ್, ಚರ್ಚ್‌  ಹಾಗೂ ವಿವಿಧ ಧರ್ಮಗಳ ಧಾರ್ಮಿಕ ಕ್ಷೇತ್ರಗಳಲ್ಲಿ  ಪೊಲೀಸ್‌ ಬಂದೋಬಸ್ತ್‌  ಏರ್ಪಡಿಸಲಾಗಿತ್ತು.ಕಾಮ ದಹನದ ನಂತರ ಕಾಮದಹನದ ಬೆಂಕಿಯ ಆವಾಲಾದಿಂದ ನೀರು ಕಾಯಿಸಿ ಮಕ್ಕಳಿಗೆ ಸ್ನಾನ ಮಾಡಿಸಲು ಅನೇಕ ಬಡಾವಣೆಗಳಲ್ಲಿ ಮಹಿಳೆಯರು ನೀರು ತುಂಬಿದ ಪಾತ್ರೆಯನ್ನು ಇಟ್ಟು ಸಾಗುತ್ತಿರುವುದು ಕಾಣಬರುತ್ತಿತ್ತು. ಇಂತಹ ಕಾಯಿಸಿದ ನೀರನ್ನು ತೆಗೆದು ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಮಕ್ಕಳಿಗೆ ಯಾವುದೇ ದೋಷ ತಲೆದೋರುವುದಿಲ್ಲ ಎಂಬ ನಂಬಿಕೆ ಸ್ಥಳೀಯ ಕೆಲವು ಬಡಾವಣೆಯ ನಾಗರಿಕರು ವ್ಯಕ್ತ ಪಡಿಸಿದರು. ಸಂಜೆ ಮತ್ತೆ ವಾದ್ಯ ಮೇಳ ದೊಂದಿಗೆ ಆಯಾ ಬಡಾವಣೆಯ ನಾಗರಿಗಕರು ನಗರದ ಸೀಮೆಯ ಹತ್ತಿರ ಸಾಗಿ ಹುಲ್ಲಿಗೆ ಬೆಂಕಿ ಹಚ್ಚಿ ಕರಿ ದಾಟಿದ ನಂತರ ಪ್ರಸಾದ ವಿತರಣೆ ಮಾಡಲಾಯಿತು.ಬಣ್ಣಗಳ ಎರೆಚಾಟ

ಯಲ್ಲಾಪುರ: ಪ
ಟ್ಟಣದಲ್ಲಿ ಸೋಮವಾರ ಸಂಭ್ರಮ ಹಾಗೂ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.

ಶನಿವಾರ ಪ್ರತಿಷ್ಠಾಪಿಸಿದ ಕಾಮಣ್ಣನನ್ನು ಸೋಮವಾರ ಪಂಪ್ ಚೌಕಿನಲ್ಲಿ ದಹನ ಮಾಡಲಾಯಿತು. ಬೆಳಗ್ಗಿನಿಂದಲೇ ಪುಡಿ ಬಣ್ಣ ಎರಚುವ ಮೂಲಕ ಹಬ್ಬದ ಸಡಗರದಲ್ಲಿ ತೊಡಗಿದ್ದ ಜನರು ಕಾಮಣ್ಣ ಮೂರ್ತಿಯ ದಹನದ ನಂತರದಲ್ಲಿ  ಬಣ್ಣದೋಕುಳಿಯಾಡಿ ಸಂಭ್ರಮ ಪಟ್ಟರು ಮಹಿಳೆಯರೂ ತಾವೇನು ಕಮ್ಮಿ ಇಲ್ಲವೆಂಬಂತೆ ಹೋಳಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು.ಹೋಳಿ ಹಬ್ಬದ ಪ್ರಯುಕ್ತ ಪಟ್ಟಣ ಅಘೋಷಿತ ಬಂದ್‌ನಂತೆ ಕಾಣುತ್ತಿತ್ತು. ಬಹುತೇಕ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಹಬ್ಬ ಸಡಗರದಲ್ಲಿ ತೊಡಗಿದ್ದರೆ, ಹೋಳಿ ಆಡಲು ಇಚ್ಚಿಸದವರು  ಶಿರಸಿ ಜಾತ್ರೆಗೆ ತೆರಳಿ ಜಾತ್ರೆ ಮೋಜನ್ನು ಅನುಭವಿಸಿದರು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ತೆರೆದಿದ್ದರೂ ಗ್ರಾಹಕರಾರೂ ಅತ್ತ ಸುಳಿಯದೇ ಬಿಕೋ ಎನ್ನುತ್ತಿತ್ತು.  ಸಿಪಿಐ ಜಿ.ಟಿ.ನಾಯಕ ನೇತೃತ್ವದಲ್ಲಿ  ಬಂದೋಬಸ್ತ್‌ ಏರ್ಪಡಿಸಲಾಗಿತ್ತು.ಸಂಭ್ರಮದ ಹೋಳಿ 

ಸಿದ್ದಾಪುರ: ಪ
ಟ್ಟಣದಲ್ಲಿ ಸೋಮವಾರ  ಹೋಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ವಿವಿಧ ವೃತ್ತಗಳಲ್ಲಿ ಯುವಕರು ಬಣ್ಣ ಎರಚುವಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗಿನ ಅವಧಿಯಲ್ಲಿ ಬಹಳಷ್ಟು ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಅದರೊಂದಿಗೆ ರಸ್ತೆಗಳಲ್ಲಿ ಜನರ ಓಡಾಟ ಕೂಡ ವಿರಳವಾಗಿತ್ತು.ಗಲ್ಲಿಗಲ್ಲಿಯಲ್ಲಿ ಬಣ್ಣದೋಕುಳಿ

ದಾಂಡೇಲಿ: 
ಹೋಳಿ ಹಬ್ಬವನ್ನು ನಗರದಲ್ಲಿಯೂ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಾತಿ, ಮತ, ಧರ್ಮ ಎಂದು ಬೇಧ-ಭಾವವಿಲ್ಲದೇ ಎಲ್ಲರು ಹೋಳಿ ಹಬ್ಬವನ್ನು ಸಂತಸದಿಂದ ಆಚರಿಸಿಕೊಂಡರು.ಮಹಿಳೆಯರು, ಮಕ್ಕಳು, ಯುವತಿಯರು, ಯುವಕರೆನ್ನದೇ ಹಿರಿಯರು ನಗರದ ಗಲ್ಲಿ ಗಲ್ಲಿಗಳಲ್ಲಿ ಬಣ್ಣ ಬಣ್ಣದ ಬಣ್ಣವನ್ನು ಹಚ್ಚಿಕೊಂಡು ನಲಿದಾಡಿದರು. ಹೋಳಿ ಹಬ್ಬದ ಸಂಭ್ರಮದ ನಿಮಿತ್ತ ನಗರದ ಹೆಚ್ಚಿನ  ವ್ಯಾಪಾರಸ್ಥರು ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಿ ಹೋಳಿ ಹಬ್ಬವನ್ನು ಆಚರಿಸಿಕೊಂಡರು.ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಪೊಲೀಸ್  ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.