ಶುಕ್ರವಾರ, ಏಪ್ರಿಲ್ 16, 2021
22 °C

ಸುಡುವ ಸೂರ್ಯ; ಅರವಟಿಗೆಗಳ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬೇಸಿಗೆಯ ಸುಡುವ ಬಿಸಿಲು ತನ್ನ ಆರ್ಭಟ ಶುರುಮಾಡುವ ಮುನ್ನವೇ ಸ್ವಯಂಸೇವಾ ಸಂಘಟನೆಗಳು ನಗರದಲ್ಲಿ ಕುಡಿಯುವ ನೀರಿನ ಅರವಟಿಗೆ ಆರಂಭಿಸಿವೆ.ಹೈದರಾಬಾದ್ ಕರ್ನಾಟಕದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ಸೂರ್ಯನ ಆರ್ಭಟ ಗಣನೀಯ ಪ್ರಮಾಣದಲ್ಲಿ ಕಡಿಮೆ. ಆದರೂ ಬಿಸಿಲುಕಾಲದ ಮಧ್ಯಾಹ್ನ ಸುಡುವ ಸೂರ್ಯನ ತಾಪ ಕಡೆಗಣಿಸುವಂತೇನು ಇರುವುದಿಲ್ಲ. ಸಂಜೆಯ ವೇಳೆಗೆ ವಾತಾವರಣ ತಣ್ಣಗಾಗುತ್ತದೆ ಎಂಬ ಸಮಾಧಾನ ಇದೆ. ಮಧ್ಯಾಹ್ನ ಮಾತ್ರ ಸೂರ್ಯನ ಆಟಾಟೋಪಕ್ಕೆ ಮಿತಿಯೇ ಇರುವುದಿಲ್ಲ.ನಗರದಲ್ಲಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿನ ಸೇರಿದಂತೆ ಸಾವಿರಾರು ಮರಗಳ ಆಹುತಿ ಅಗಿರುವುದರಿಂದ ಬೀದರ್‌ನ ಬೇಸಿಗೆಯು ಹಿಂದಿನ ವರ್ಷಗಳ ಬೇಸಿಗೆಗಿಂತ ಕಷ್ಟದಾಯಕವಾಗಿ ಪರಿಣಮಿಸಿದೆ. ಹಾದಿ ಬೀದಿಗಳಲ್ಲೆಲ್ಲ ಹಸಿರು ತುಂಬಿ ನಿಂತು ತಣ್ಣನೆಯ ತಂಗಾಳಿ ಬೀಸುತ್ತ ವಾತಾವರಣದ ಉಷ್ಣತೆ ಹತೋಟಿ ಮೀರದಂತೆ ನೋಡಿಕೊಳ್ಳುತ್ತಿದ್ದ ಮರಗಳ ಮಾರಣಹೋಮ ಬೇಸಿಗೆಯ ಬಿಸಿ ಹೆಚ್ಚುವಂತೆ ಮಾಡಿದೆ. ಆದ್ದರಿಂದ ಬೇಸಿಗೆಯ ದಿನಗಳ ಆರಂಭದಲ್ಲಿಯೇ ನೀರಿನ ದಾಹ ಹೆಚ್ಚುವುದಕ್ಕೆ ಕಾರಣವಾಗಿದೆ. ನಗರದಲ್ಲಿ ಬಹುತೇಕ ಮನೆಗೊಂದು ಬಾವಿ ಇದೆ. ಬಿಸಿಲಿನ ಕಾರಣದಿಂದ ಬಾವಿಗಳ ತಳ ಕಾಣಿಸಲು ಆರಂಭವಾಗುತ್ತದೆ. ಒಟ್ಟಾರೆಯಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತಹ ಸ್ಥಿತಿ ಇದೆ. ಆದರೂ ಸರಿಯಾಗಿ ನಿರ್ವಹಿಸದೇ ಇರುವುದರಿಂದ ಮತ್ತು ಮನುಷ್ಯ ನಿರ್ಮಿತ ಸಮಸ್ಯೆಗಳಿಂದಾಗಿ ಜನ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗುತ್ತದೆ. ಮೇಲಿಂದ ಮೇಲೆ ಕೈಕೊಡುವ ವಿದ್ಯುತ್ ಕೂಡ ನೀರು ಬಳಕೆಗೆ ದೊರೆಯದಂತೆ ಒತ್ತಡ ಹೇರುತ್ತದೆ.ಇದೆಲ್ಲ ಒಂದೆಡೆಯಾದರೆ, ಸುಡುವ ಬಿಸಿಲಿನಲ್ಲಿ ನಗರದಲ್ಲಿ ಓಡಾಡುವ ಜನರಿಗೆ ನೀರು ಕುಡಿಸುವ ವ್ಯವಸ್ಥೆಗಳೂ ಕಾಣಿಸಿಕೊಳ್ಳುತ್ತವೆ. ವಿವಿಧ ಸಂಘಟನೆಗಳು, ಸಂಸ್ಥೆಗಳು ಕುಡಿಯುವ ನೀರಿನ ಅರವಟ್ಟಿಗೆಗಳನ್ನು ಆರಂಭಿಸುತ್ತವೆ. ಬಿಸಿಲಿನ ತಾಪ ಹೆಚ್ಚುತ್ತ ಹೋದಂತೆ ಅರವಟ್ಟಿಗೆಗಳ ಸಂಖ್ಯೆಯೂ ಏರುತ್ತ ಹೋಗುತ್ತದೆ. ಸದ್ಯ ನಗರದ ನಾಲ್ಕಾರು ಕಡೆಗಳಲ್ಲಿ ಅರವಟ್ಟಿಗೆಗಳನ್ನು ಇಟ್ಟು ಹಾದಿಹೋಕರ ದಾಹ ತಣಿಸಲಾಗುತ್ತಿದೆ. ಅರವಟ್ಟಿಗೆಗಳಲ್ಲಿ ದೊರೆಯುವ ತಣ್ಣೀರು ಬಾಯಾರಿದವನಿಗೆ ಅಮೃತ ಸಿಂಚನ ಉಂಟಾಗುವಂತೆ ಮಾಡುತ್ತದೆ.ಸ್ವಯಂ ಸೇವಾ ಸಂಘಟನೆಗಳು, ವಿವಿಧ ಧರ್ಮ- ಸಮುದಾಯಗಳಿಗೆ ಸೇರಿದ ಸಂಸ್ಥೆಗಳು ಬೇಸಿಗೆಯಲ್ಲಿ ನೀರು ಪೂರೈಸುವ ಪುಣ್ಯದ ಕೆಲಸ ಆರಂಭಿಸುತ್ತವೆ.ಸಾರ್ವಜನಿಕ ಅರವಟಿಗೆಗಳ ಜೊತೆಗೆ ವ್ಯಾಪಾರಿಗಳು ಕೂಡ ತಮ್ಮ ಅಂಗಡಿಗಳ ಮುಂಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಪರಿಪಾಠವೂ ಇದೆ. ವ್ಯಾಪಾರಿಗಳು ತಮ್ಮ ಅಂಗಡಿಗೆ ಬರುವ ಗಿರಾಕಿಗಳು, ಸಿಬ್ಬಂದಿಗಾಗಿ ನೀರಿನ ವ್ಯವಸ್ಥೆ ಮಾಡಿರುತ್ತಾರೆ. ಆದರೆ, ಹಾದಿಯಲ್ಲಿ ಹೋಗುವ ಸಾರ್ವಜನಿಕರು ಕೂಡ ಇಂತಹ ನೀರು ಕುಡಿದು ದಾಹ ಹಿಂಗಿಸಿಕೊಳ್ಳಬಹುದು.ಮನುಷ್ಯರಾದರೋ ಕುಡಿಯುವ ನೀರು ಹುಡುಕಿಕೊಂಡು ಅರವಟ್ಟಿಗೆಗಳಿಗೆ ಹೋಗುತ್ತಾರೆ. ಪ್ರಾಣಿಗಳಿಗೆ ಮಾತ್ರ ನೀರು ಸಮಸ್ಯೆಯಾಗಿ ಕಾಡುತ್ತದೆ. ಬಿಸಿಲು ಹೆಚ್ಚುತ್ತಿದ್ದಂತೆಯೇ ಆಸಕ್ತರು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ. ಸೂರ್ಯ ಯುಗಾದಿಗೆ ತನ್ನ ಪ್ರಖರತೆ ತೋರಿಸಲು ಆರಂಭಿಸುತ್ತಾನೆ. ಆದರೆ, ಕಳೆದ ಕೆಲವು ದಿನಗಳಿಂದ ಇರುವ ಮೋಡ ಕವಿದ ವಾತಾವರಣ ಮತ್ತು ಎರಡು ದಿನಗಳ ಹಿಂದೆ ಸುರಿದ ಮಳೆ ಬಿಸಿಲಿನ ತಾಪ ತಟ್ಟನೆ ಹೆಚ್ಚದಂತೆ ಮಾಡಿದೆ ಎನ್ನುವುದೇ ಸದ್ಯ ಸಮಾಧಾನ ಪಡುವ ಸಂಗತಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.