ಭಾನುವಾರ, ಆಗಸ್ಟ್ 1, 2021
20 °C

ಸುಧಾರಣೆ ಕಾಣದ ಪೂರ್ವ ಪ್ರಾಥಮಿಕ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಮಗುವಿನ ಉತ್ತಮ ಶಿಕ್ಷಣದ ಪ್ರಗತಿಗೆ ಭದ್ರಬುನಾದಿ ಹಾಕುವುದು ಪೂರ್ವ ಪ್ರಾಥಮಿಕ ಶಿಕ್ಷಣ (ಪ್ರೀ ಪ್ರೈಮರಿ ಎಜುಕೇಶನ್). ಇದು ಮಗುವಿನ ಕೌಶಲ ಕಲಿಕೆ, ಉತ್ತಮ ನಡವಳಿಕೆ,  ಭಾಷೆ, ಚಿಂತನ ಸಾಮರ್ಥ್ಯದಂತಹ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಉತ್ತಮ ಪೂರ್ವ ಪ್ರಾಥಮಿಕ ಶಿಕ್ಷಣ ಪರಿಣಾಮಕಾರಿಯಾದ ಉನ್ನತ ಶಿಕ್ಷಣಕ್ಕೆ ಸೋಪಾನ ಇದ್ದಂತೆ. ಇಂದು ಎಲ್.ಕೆ.ಜಿ, ಯು.ಕೆ.ಜಿ, ನರ್ಸರಿ ಶಾಲೆ, ಶಿಶುವಿಹಾರ, ಅಂಗನವಾಡಿ ಶಾಲೆ - ಹೀಗೆ ವಿವಿಧ  ಪ್ರಕಾರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ.ದುಡಿಯುವ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆಯಿಂದ ಶಿಶುವಿಹಾರ ಪದ್ಧತಿ ಮೊದಲು ಜಾರಿಗೆ ಬಂದಿತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.ಇಂತಹ ಶಿಶುವಿಹಾರಗಳು ಮೊದಲು ಇಂಗ್ಲೆಂಡಿನಲ್ಲಿ ಆರಂಭವಾಗಿ ಕ್ರಮೇಣ ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳಿಗೆ ಹರಡಿತು ಎಂದು ಹೇಳಬಹುದು. ಇತಿಹಾಸವನ್ನು ಇನ್ನೂ ಕೆದಕಿದಲ್ಲಿ, 1862ರಲ್ಲಿ ಇಂಗ್ಲೆಂಡಿನ ಸಾಬರ್ಟ್ ಓವನ್ ಎಂಬಾತ ನೂಲಿನ ಗಿರಣಿಗಳ ದುಡಿಯುತ್ತಿದ್ದ ಕಾರ್ಮಿಕರ ಮಕ್ಕಳಿಗಾಗಿ ತುಂಬ ವ್ಯವಸ್ಥಿತವಾದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತಂದನು. 1832ರಲ್ಲಿ  ಜರ್ಮನಿಯಲ್ಲಿ ‘ಬಾಲ್ಯೋದ್ಯಾನ’ ಎಂಬ ಬಯಲು ಶಾಲೆಯನ್ನು ಚಿಕ್ಕ ಮಕ್ಕಳಿಗಾಗಿ ಶಿಕ್ಷಣತಜ್ಞ ಮಾಂಟೆಸೋರಿ ಎಂಬು ವವರು ಆರಂಭಿಸಿದರು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

 

ಇದು ಭಾರತವನ್ನು ತಲುಪಲು ಹೆಚ್ಚು ಸಮಯ ತೆಗೆದು ಕೊಳ್ಳಲಿಲ್ಲ. ಕಿಂಡರ್‌ಗಾರ್ಟನ್ ಮತ್ತು ನರ್ಸರಿ ಶಾಲೆಗಳು 1873ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಆರಂಭ ವಾಯಿತು. 1947ರಲ್ಲಿ 263 ಶಿಶು ವಿಹಾರಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದು ಇವುಗಳ ಸಂಖ್ಯೆ ಹಲವು ಲಕ್ಷಕ್ಕೂ ಅಧಿಕ.ಶಿಕ್ಷಣದ ಉದ್ದೇಶ:

ಮನೆ ಮತ್ತು ಶಿಕ್ಷಣದ ಮಧ್ಯೆ ಪೂರ್ವ ಪ್ರಾಥಮಿಕ ಶಿಕ್ಷಣ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ಮುಖ್ಯವಾಗಿ ಮಕ್ಕಳಲ್ಲಿ ಭಾಷಾ ಕೌಶಲ, ಗಣಿತ ಪರಿಚಯ, ವಿಜ್ಞಾನ ಕೌಶಲ,   ಸಮಾಜ ಕೌಶಲ, ಅವಯವಗಳ ಬಳಕೆ, ಸ್ಪರ್ಶ ಕೌಶಲ,      ಅಭಿವ್ಯಕ್ತಿ ಕೌಶಲಗಳ ಬೆಳವಣಿಗೆಗೆ  ಬಹುಮುಖ್ಯ ಮಾಧ್ಯಮವಾಗಿದೆ.ಇಂತಹ ಕೌಶಲಗಳನ್ನು ಮಕ್ಕಳು ಸಾಮಾನ್ಯವಾಗಿ 1 ರಿಂದ 5 ವರ್ಷಗಳ ಅವಧಿಯಲ್ಲಿ ಕಲಿಯುತ್ತವೆ ಎಂಬುದು ಶಿಕ್ಷಣ ಮನೋತಜ್ಞರ ಅಭಿಪ್ರಾಯ. ಎಲ್ಲಾ ಮಕ್ಕಳು ಒಂದೇ ವೇಗದಲ್ಲಿ ಇವುಗಳನ್ನು ಕಲಿಯುವುದಿಲ್ಲ. ಮಕ್ಕಳ ಮೇಲೆ ಮನೆ ಮತ್ತು ಸಾಮಾಜಿಕ ವಾತಾವರಣವು ಸಾಕಷ್ಟು ಮಟ್ಟದಲ್ಲಿ ಪ್ರಭಾವ ಬೀರುತ್ತದೆ.ಸದ್ಯದ ಸ್ಥಿತಿಗತಿ

ಗುಣಾತ್ಮಕ ಪೂರ್ವ ಪ್ರಾಥಮಿಕ ಶಿಕ್ಷಣವು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಸುಲಭವಾಗಿ ಸಿಗುವಂತಾಗಬೇಕು ಎಂಬುದು ಶಿಕ್ಷಣದ ನೀತಿಯ ಗುರಿಗಳಲ್ಲಿ ಒಂದು. ರಾಷ್ಟ್ರೀಯ ಶಿಕ್ಷಣ ನೀತಿ (1980), 1964-66ರ ಕೊಠಾರಿ ಆಯೋಗ, 1968ರ ಗಂಗಾಸರಣ ಸಿನ್ಹಾ ಆಯೋಗ, 1972 ರ ಪೂರ್ವ ಪ್ರಾಥಮಿಕ ಶಿಕ್ಷಣ ಅಧ್ಯಯನ ಆಯೋಗ, 1974 ರ ರಾಷ್ಟ್ರೀಯ ಮಕ್ಕಳ ನೀತಿ ಮತ್ತು 1990 ರಾಮಮೂರ್ತಿ ಆಯೋಗವು ತಮ್ಮ ವರದಿಗಳಲ್ಲಿ ಗುಣಾತ್ಮಕ ಪೂರ್ವ ಪ್ರಾಥಮಿಕ ಶಿಕ್ಷಣದ ಅವಶ್ಯಕತೆ, ಪಠ್ಯಕ್ರಮ, ತರಬೇತಿ, ಬೋಧನಾ ವಿಧಾನ ಮೌಲ್ಯಮಾಪನ ಮುಂತಾದವುಗಳ ಬಗ್ಗೆ ಸುದೀರ್ಘವಾದ ಮಾಹಿತಿ ನೀಡಿವೆ. ಆದರೆ ಈ ಎಲ್ಲಾ ವರದಿಗಳು ಸರ್ಕಾರದ ಕಚೇರಿಗಳಲ್ಲಿ ಗೆದ್ದಲು ಹಿಡಿದಿವೆ. 1996ರ ಅಂದಿನ ಕೇಂದ್ರ ಸರ್ಕಾರ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣ ಎಂಬ ವಿವಾದಿತ ಕಾಯ್ದೆ ಜಾರಿಗೆ ತಂದು ಒಮ್ಮೆ ಕೈ ಸುಟ್ಟುಕೊಂಡಿತ್ತು. 1998ರಲ್ಲಿ ಆ ಕಾಯ್ದೆಯನ್ನು ಕೊನೆಗೆ ಸರ್ಕಾರವೇ ಕೈ ಬಿಡಬೇಕಾಯಿತು.

 

ವಿಶ್ವದಾದ್ಯಂತ ಸುದ್ಧಿಮಾಡಿರುವ ನಮ್ಮ ಸರ್ವಶಿಕ್ಷಣ ಅಭಿಯಾನವೂ  ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ  ಗಮನ ನೀಡುತ್ತಿಲ್ಲ.ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಮಾನವ ಸಂಪನ್ಮೂಲ ಸಚಿವಾಲಯದ ವ್ಯಾಪ್ತಿಯಲ್ಲಿ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವಾಪ್ತಿಯಲ್ಲಿದೆ. ಆದರೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಬಜೆಟ್‌ನಲ್ಲಿ ನಿಗದಿಪಡಿಸುವ ಹಣದ ಅರ್ಧ ಭಾಗವು ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಿಗುತ್ತಿಲ್ಲ ಎಂದರೆ ನೀವು ನಂಬಲೇಬೇಕು. 1975ರಲ್ಲಿ ಕೇಂದ್ರ ಸರ್ಕಾರ ಕ್ರೋಡೀಕೃತ ಮಕ್ಕಳ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿತು.

 

ಇದರ ಮೂಲಕ ಭಾರತದ ಕೋಟ್ಯಂತರ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಬುಡಕಟ್ಟು ಸಮಾಜದ ಅಂಗನವಾಡಿಯಲ್ಲಿ ಕಲಿಯುವ ಮಕ್ಕಳಿಗೆ ಆರೋಗ್ಯ ಯೋಜನೆ, ಪೌಷ್ಟಿಕಾಂಶ ಪೂರೈಕೆ, ಸಂವೇಗಾತ್ಮಕ ಮತ್ತು ಭಾವನಾತ್ಮಕ ಕೌಶಲ ಅಭಿವೃದ್ಧಿ ಮುಂತಾದವುಗಳ ಬೆಳವಣಿಗೆ ಈ ಯೋಜನೆಯ ಗುರಿಯಾಗಿತ್ತು. ಆದರೆ ಸೂಕ್ತ ನಿರ್ವಹಣೆ, ಹಣಕಾಸಿನ ಕೊರತೆ ಮತ್ತು ತಳಮಟ್ಟದ ಅಧಿಕಾರಿಗಳ ನಿರಾಸಕ್ತಿಯಿಂದ ಇಂದು ಈ ಯೋಜನೆ  ಕುಂಟುತ್ತ ಸಾಗಿದೆ.ಇಂದು ದೇಶದ ಹಳ್ಳಿ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಇದ್ದರೂ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿಲ್ಲ ಎಂಬುದು ಚಿಂತಿಸಬೇಕಾದ ವಿಚಾರ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸರ್ವೆಯ (2007) ವರದಿಯ ಪ್ರಕಾರ, ದೇಶದಾದ್ಯಂತ ಶೇಕಡ 57 ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಾಗಿದ್ದು, ಕೇವಲ ಶೇ 32 ರಷ್ಟು ಮಕ್ಕಳು ಮಾತ್ರ ಕ್ರಮಬದ್ಧವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿವೆ. ಈ ಹಂತದಲ್ಲೇ ಶಾಲೆಯನ್ನು ಅರ್ಧಕ್ಕೆ ಬಿಡುವ ಪ್ರವೃತ್ತಿ ಕಂಡುಬರುತ್ತಿದೆ. ಇದು ನಿಜವಾಗಲೂ ಆತಂಕಕಾರಿ ವಿಚಾರ. ಬುಡಕಟ್ಟು ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ತೀರಾ ಶೋಚನೀಯವಾಗಿವೆ.ಇಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಿಂದ ಮಾತ್ರ ಬುಡಕಟ್ಟು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದಾರೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಇದು ಗ್ರಾಮೀಣ ಭಾರತ ವಿಚಾರವಾದರೆ ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಅಷ್ಟು  ಹದಗೆಟ್ಟಿಲ್ಲ ಎಂಬುದು ಸಮಾಧಾನಕರ ವಿಚಾರ.ನಗರ ಪ್ರದೇಶಗಳಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಎನ್‌ಜಿಓಗಳು ಪೂರ್ವ ಪ್ರಾಥಮಿಕ ಶಿಕ್ಷಣ ಶಾಲೆಯನ್ನು ನಡೆಸುತ್ತಿವೆ. ಮಾಂಟೆಸರಿ ಶಾಲೆ, ಎಲ್‌ಕೆಜಿ/ಯುಕೆಜಿ ಮುಂತಾದ ಜನಪ್ರಿಯ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೇಶದಾದ್ಯಂತ ಒಟ್ಟು ಶೇಕಡ 22 ಅಂಗನವಾಡಿಗಳು ಬಯಲು ಪ್ರದೇಶದಲ್ಲಿ ನಡೆಯುತ್ತಿವೆ ಎಂಬ ಅಂಶವನ್ನು ಇತ್ತೀಚಿನ ಒಂದು ಎನ್‌ಜಿಓ ವರದಿ ದೃಢಪಡಿಸಿದೆ. ತರಬೇತಿ ಇಲ್ಲದ ಶಿಕ್ಷಕರು:

ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳು ಹಲವಾರು ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಡೇ ಕೇರ್ ಸೆಂಟರ್, ಅರ್ಲಿ ಲರ್ನಿಂಗ್ ಸೆಂಟರ್, ಪ್ಲೇ ಹೋಮ್, ಶಿಶುವಿಹಾರ, ಅಂಗನವಾಡಿ ಇತ್ಯಾದಿ. ಇವುಗಳ ಗುಣಮಟ್ಟ ಮಾತ್ರ ಕೇಳುವುದಕ್ಕೆ ಅಸಾಧ್ಯ. ಇಂತಹ ಖಾಸಗಿ ಕೇಂದ್ರಗಳಲ್ಲಿ ಮಕ್ಕಳನ್ನು ದನದ ದೊಡ್ಡಿಯಂತೆ ಕೂಡಿ ಹಾಕಿರುತ್ತಾರೆ. ಕೆಲವೊಂದು ಕೇಂದ್ರಗಳಲ್ಲಿ ಗಾಳಿ ಮತ್ತು ಬೆಳಕಿಗೂ  ಕೊರತೆ. ವಿದ್ಯಾವಂತ ನಿರುದ್ಯೋಗಿಗಳು, ಗೃಹಿಣಿಯರು, ಮುಂತಾದವರು ಇದನ್ನು ಹೆಚ್ಚಾಗಿ ನಡೆಸುತ್ತಿದ್ದಾರೆ. }ಇಲ್ಲಿ ಶೇ 95ರಷ್ಟು ಯಾರಿಗೂ ತರಬೇತಿ ಎಂಬುದು ಇರುವುದಿಲ್ಲ. ಹಣ ಮಾಡುವುದೇ ಹೆಚ್ಚಿನ ಕೇಂದ್ರಗಳ ಮುಖ್ಯ ಉದ್ದೇಶ ಎಂದರೆ ತಪ್ಪಲ್ಲ. ಕೆಲವರಿಗೆ ಇದು ಸಮಯ ಕಳೆಯುವ ಸಾಧನವಾದರೆ ಇನ್ನೂ ಕೆಲವರಿಗೆ ಒಂದು ರೀತಿಯ ಹವ್ಯಾಸ!. ಇಂತಹ ಕೇಂದ್ರಗಳನ್ನು ತೆರೆಯುವುದಕ್ಕೆ ಸರ್ಕಾರದ ಪೂರ್ವಾನುಮತಿ ಅವಶ್ಯಕತೆ ಇಲ್ಲದಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ.ಹಲವಾರು ಕೇಂದ್ರಗಳಲ್ಲಿ ಆಟದ ಮೈದಾನ, ಆಟದ ಸಾಮಾನು ಕೂಡ ಸಾಕಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಕೆಲವು ಕೇಂದ್ರಗಳು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಪ್ರವೇಶ ಪರೀಕ್ಷೆಯನ್ನು ನಡೆಸುವ ಸಾಹಸ ಕೂಡ ಮಾಡುತ್ತಿವೆ!.ಅಷ್ಟು ಸಣ್ಣ ಮಕ್ಕಳಿಗೆ ಆಗಲೇ ಪ್ರವೇಶ ಪರೀಕ್ಷೆ ಎದುರಿಸುವ ಅನಿವಾರ್ಯತೆ. ಇಂತಹ ಕೇಂದ್ರಗಳು ತಮಗೆ ತೋಚಿದಂತೆ ಪಠ್ಯಕ್ರಮ, ಬೋಧನಾವಿಧಾನ, ಮೌಲ್ಯಮಾಪನ ನಡೆಸುವ ಅಭ್ಯಾಸ ಇಟ್ಟುಕೊಂಡಿವೆ. ಇದಕ್ಕೆ ಯಾವುದೇ ವೈಜ್ಞಾನಿಕ ಲೇಪನ ಇರುವುದಿಲ್ಲ. ಯಾರೋ ನಾಲ್ಕು ಜನ ತರಬೇತಿ ಹೊಂದದ ಶಿಕ್ಷಕರನ್ನು ಸೇರಿಸಿ ಅವರ ಅಭಿಪ್ರಾಯದಂತೆ ಪಠ್ಯಕ್ರಮ ರೂಪಿಸಿಕೊಂಡಿರುತ್ತಾರೆ. ಅಲ್ಲದೆ ಶುಲ್ಕ ಭರಿಸಲು ತಂದೆ ತಾಯಿಗಳು ಸಾಕಷ್ಟು ಸ್ಥಿತಿವಂತರಾಗಿರಬೇಕು.ಸಾಮಾನ್ಯ ಪೋಷಕರಿಗೆ ಇಂತಹ ಕೇಂದ್ರಗಳು ಗಗನ ಕುಸುಮವಷ್ಟೆ. ಕೆಲವು ಕೇಂದ್ರಗಳು ಕಠಿಣ ಶಿಕ್ಷೆಯನ್ನು ಮಕ್ಕಳಿಗೆ ನೀಡಿ ಅವುಗಳ ಮಾನಸಿಕ ಸ್ಥಿತಿಗತಿ, ದೈಹಿಕ ಸ್ಥಿತಿಗತಿಗಳನ್ನು ಏರುಪೇರು ಮಾಡಿ ಕುಖ್ಯಾತಿಗೊಳಗಾಗಿವೆ. ಎಲ್ಲಾ ಕೇಂದ್ರಗಳೂ ಇಂತಹವು ಎಂದು ಹೇಳಲಾಗುವುದಿಲ್ಲ. ಕೆಲವು ಕೇಂದ್ರಗಳು ತುಂಬಾ ವೈಜ್ಞಾನಿಕವಾಗಿ ಮಕ್ಕಳಿಗೆ ಶಿಕ್ಷಣ ಕಲಿಸುತ್ತಿರುವ ಉದಾಹರಣೆಗಳೂ ಇವೆ.ಇನ್ನು ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಅಂಗನವಾಡಿಗಳ ಸಮಸ್ಯೆಯಂತೂ ಅಧ್ವಾನವಾಗಿದೆ ಎಂದರೆ ತಪ್ಪಿಲ್ಲ. ಶೇಕಡ 87ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಗಾಳಿ, ನೀರು, ಬೆಳಕು, ಶೌಚಾಲಯ ವ್ಯವಸ್ಥೆಯು ಸರಿಯಾಗಿಲ್ಲ. ಬಿರುಕು ಮೂಡಿರುವ ಕಟ್ಟಡ ಅಥವಾ  ಬಯಲು ಪ್ರದೇಶಗಳಲ್ಲಿ ಅನೇಕ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಕೆಲಸ ಮಾಡುವ ಶಿಕ್ಷಕರ ವೇತನವಂತೂ ತೀರಾ ಕಡಿಮೆ. ಇವರುಗಳಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ.ಹೆಚ್ಚಿನ ಅಂಗನವಾಡಿ ಕೇಂದ್ರಗಳು ಮಕ್ಕಳ ಆರೋಗ್ಯದ ಬಗ್ಗೆ ಮಾತ್ರ ಗಮನ ವಹಿಸುತ್ತಿರುವುದರಿಂದ ನಿಜವಾದ ಶಿಕ್ಷಣದ ಕಲಿಕೆ ಸರಿಯಾದ ದಿಕ್ಕಿನಲ್ಲಿ ಸಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಪೋಷಕರ ನಿರ್ಲಕ್ಷ್ಯ ಇಲ್ಲಿನ ಇನ್ನೊಂದು ಮುಖ್ಯ ಸಮಸ್ಯೆ. ಹಲವಾರು ಬಾರಿ ಶಿಕ್ಷಕರು ಪ್ರತಿ ಮನೆಗೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳನ್ನು ಕೇಂದ್ರಕ್ಕೆ ಕರೆತರಬೇಕಾಗುತ್ತದೆ.ಇಂತಹ ಕೇಂದ್ರಗಳಲ್ಲಿ ಕಲಿಕೆಗೆ ಬೇಕಾದ ಕಲಿಕಾ ಸಾಧನಗಳ ಕೊರತೆಯಂತೂ ಅಗಾಧವಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಸುಂದರವಾದ ಕಲಿಕಾ ಸಾಧನಗಳು ಆಟದ ಸಾಮಾನುಗಳ ಕೊರತೆ ಮುಂತಾದವುಗಳಿಂದ, ಹೆಚ್ಚಿನ ಮಕ್ಕಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅನೇಕ ಶಿಕ್ಷಕರ ಅಭಿಪ್ರಾಯ. ಹೆಚ್ಚಿನ ಗ್ರಾಮೀಣ ಪೋಷಕರಿಗೆ ಅಂಗನವಾಡಿ ಕೇಂದ್ರಗಳು ಎಂದರೆ ಮಧ್ಯಾಹ್ನ ಊಟ ನೀಡುವ ಕೇಂದ್ರಗಳಷ್ಟೇ.  ಇನ್ನು ಕೆಲವರಿಗೆ, ಮನೆಯಲ್ಲಿ ಮಕ್ಕಳ ಗಲಾಟೆ ತಪ್ಪಿಸಲು, ಪತಿ, ಪತ್ನಿ ಇಬ್ಬರು ಕೆಲಸಕ್ಕೆ ತೆರಳಿದರೆ ಮಕ್ಕಳನ್ನು ನೋಡಿಕೊಳ್ಳಲು ಇಂತಹ ಕೇಂದ್ರಗಳು ಇರುವುದು ಎಂಬಂತಹ ಅಭಿಪ್ರಾಯ. ಸರ್ಕಾರದ ಸೂಕ್ತ ಅನುದಾನದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ, ಪೂರ್ವ ಪ್ರಾಥಮಿಕ ಶಿಕ್ಷಣದ ತರಬೇತಿ ಕೇಂದ್ರಗಳ ಕೊರತೆ, ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಾಮರಸ್ಯ ಇಲ್ಲದಿರುವುದು ಈ ಸಮಸ್ಯೆಗಳಿಗೆ ಮುಖ್ಯ ಕಾರಣ.ಸುಧಾರಣೆ ಹೇಗೆ?

ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸಹ ಮೂಲಭೂತ ಹಕ್ಕಿನಲ್ಲಿ ಸೇರಿಸಬೇಕಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನಿರ್ವಹಿಸಲು ಪ್ರತ್ಯೇಕ  ಹೊಸ ಇಲಾಖೆಯನ್ನು ತೆರೆಯಲು ಸರ್ಕಾರ ಚಿಂತಿಸಬೇಕಿದೆ. ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳನ್ನು ತೆರೆಯಲು ಕಡ್ಡಾಯವಾಗಿ ಸರ್ಕಾರದ ಪೂರ್ವ ಅನುಮತಿಯನ್ನು ಪಡೆಯುವಂತೆ ಮಾಡುವುದು. 3 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡದಂತೆ ನಿಯಮ ರೂಪಿಸಲು ಕ್ರಮ ಕೈಗೊಳ್ಳಬೇಕು.ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕಡ್ಡಾಯವಾಗಿ ತರಬೇತಿ ಹೊಂದಿರುವುದನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ದೃಢಪಡಿಸಬೇಕು.

ಖಾಸಗಿ ಸಂಸ್ಥೆಗಳು ನಡೆಸುವ ಕೇಂದ್ರಗಳಲ್ಲಿ ಸುರಕ್ಷತೆ, ನೈರ್ಮಲ್ಯ, ಶುಲ್ಕ ನಿಯಂತ್ರಣಕ್ಕೆ ಒತ್ತು ನೀಡುವಂತೆ ನೋಡಿಕೊಳ್ಳುವುದು; ಪ್ರತಿ ಶಾಲೆಯೂ ಸಾಕಷ್ಟು ಪ್ರಮಾಣದಲ್ಲಿ ಕಲಿಕಾ ಸಾಧನಗಳು ಆಟದ ಮೈದಾನ, ಶೌಚಾಲಯ, ಉತ್ತಮ ಕೊಠಡಿಗಳನ್ನು ಹೊಂದಿರುವಂತೆ ನಿಯಮವನ್ನು ಜಾರಿಗೆ ತರಬೇಕು.ಗ್ರಾಮೀಣ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಕರ ವೇತನ ಸುಧಾರಣೆ, ಉದ್ಯೋಗ ಭದ್ರತೆ ಇತ್ಯಾದಿ ಬಗೆಗೆ ಸರ್ಕಾರ ಚಿಂತಿಸಬೇಕು.ಪೂರ್ವ ಪ್ರಾಥಮಿಕ ಶಿಕ್ಷಣದ ಮಕ್ಕಳಿಗೆ ಪ್ರತ್ಯೇಕವಾದ ವೈಜ್ಞಾನಿಕ, ಏಕರೂಪದ ಪಠ್ಯಪುಸ್ತಕ, ಮಾತೃಭಾಷೆ, ಬೋಧನವಿಧಾನ, ಮೌಲ್ಯಮಾಪನವನ್ನು ಜಾರಿಗೆ ತರುವುದೂ ಅವಶ್ಯ. ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರತ್ಯೇಕ ಸ್ವಾಯತ್ತ ನಿಯಂತ್ರಣ ಆಯೋಗವನ್ನು ರಚಿಸುವುದು ಸೂಕ್ತ. ಪರಿಣತ ತಜ್ಞರು, ಮನೋವಿಜ್ಞಾನ ತಜ್ಞರು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಇದರ ಸದಸ್ಯರಾಗಬೇಕು.ವರ್ಷದ ಎಲ್ಲಾ ಕಾಲದಲ್ಲೂ ಇಂತಹ ಕೇಂದ್ರಗಳಿಗೆ ಸೇರಲು ಮಕ್ಕಳಿಗೆ ಮುಕ್ತ ಅವಕಾಶ ಇರಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ಸುಧಾರಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಲೇಬೇಕು. ಪಠ್ಯಕ್ರಮ ಆ ವಯಸ್ಸಿನ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅನುಗುಣವಾಗಿ ಇರಬೇಕು. ಸಾಧ್ಯವಾದಷ್ಟು ಮಹಿಳಾ ಶಿಕ್ಷಕರು ಮಾತ್ರ  ಶಿಕ್ಷಣ ಬೋಧಿಸುವಂತೆ ಕ್ರಮ ಕೈಗೊಳ್ಳಬೇಕು. ಬಿ.ಎ.,ಡಿ.ಎಡ್ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರ ಪೂರ್ವ ತರಬೇತಿ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.ಮಕ್ಕಳು ಸಾಮಾನ್ಯ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವ ಮುಂಚಿತವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸುವುದು ತೀರಾ ಅವಶ್ಯಕವೆಂದು ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. ಇದನ್ನು ಹಲವಾರು ಸಂಶೋಧನೆಗಳು ದೃಢಪಡಿಸಿವೆ. ದೇಶದ ಹಲವಾರು ಶಿಕ್ಷಣ ಸಂಶೋಧನಾ ಸಂಸ್ಥೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ವಿವಿಧ ಸಮಸ್ಯೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿದ ಮಕ್ಕಳು ಯಶಸ್ವಿಯಾಗಿ ಸಾಮಾನ್ಯ ಮತ್ತು ಉನ್ನತ ಶಿಕ್ಷಣವನ್ನು ಮುಗಿಸುತ್ತವೆ ಎಂಬುದನ್ನು ಇಂದು ಸಂಶೋಧನೆಗಳು ದೃಢಪಡಿಸಿವೆ. ಗುಣಾತ್ಮಕ ಮತ್ತು ಸಮಾನ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಎಲ್ಲರನ್ನು ಒಳಗೊಂಡ ಶಿಕ್ಷಣದ(ಇನ್‌ಕ್ಲುಸಿವ್ ಎಜುಕೇಷನ್) ತತ್ವಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವೆಂದು ಇತ್ತೀಚಿನ ವರದಿ ತಿಳಿಸಿದೆ. ಉನ್ನತ ಶಿಕ್ಷಣದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಸರ್ಕಾರಗಳು ಒಂದು ಆದ್ಯತಾ ವಲಯವನ್ನಾಗಿ ಪರಿಗಣಿಸಬೇಕು.ಇದಕ್ಕೆ ಪ್ರತ್ಯೇಕ ಅನುದಾನವನ್ನು ಬಜೆಟ್‌ನಲ್ಲಿ ನಿಗದಿಪಡಿಸಬೇಕು.ಖಾಸಗಿ ಸಹಭಾಗಿತ್ವದಲ್ಲಿ ಈ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಸಾಧ್ಯವೆ ಎಂಬುದನ್ನು ಚಿಂತಿಸಬೇಕಾಗಿದೆ.ಇಂತಹ ಶಿಕ್ಷಣ ಕೇಂದ್ರಗಳು ವಾಣಿಜ್ಯೀಕರಣಗೊಳ್ಳುವುದನ್ನು ತಪ್ಪಿಸಬೆಕು. 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.