ಶುಕ್ರವಾರ, ಮೇ 20, 2022
27 °C

ಸುಧಾರಿತ ಸೀತಾಫಲ ಅರ್ಕಾ ಸಹನ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

`ಬಡವರ ಸೇಬು~ ಎಂದೇ ಕರೆಯುವ ಸೀತಾಫಲ ಉಷ್ಣವಲಯದ ಬೆಳೆ. ಗುಡ್ಡಗಾಡು ಪ್ರದೇಶದಲ್ಲಿ ಸೀತಾಫಲ ಸಹಜವಾಗಿ ಬೆಳೆಯುತ್ತದೆ. ಚಿತ್ರದುರ್ಗ,ತುಮಕೂರು ಜಿಲ್ಲೆಗಳ ಗ್ರಾಮೀಣ ಜನರು ಸೀತಾಫಲದ ಹಣ್ಣುಗಳನ್ನು ಅಡವಿ ಹಲಸಿನ ಹಣ್ಣು ಎಂದೂ ಕರೆಯುತ್ತಾರೆ.ಮಳೆ ನೀರು ಹಾಗೂ ವಾತಾವರಣದಲ್ಲಿನ ತೇವಾಂಶ ಬಳಸಿಕೊಂಡು ಸಮೃದ್ಧವಾಗಿ ಬೆಳೆಯುವ ಸೀತಾಫಲ ಗಿಡಗಳಿಗೆ ವಿಶೇಷ ಆರೈಕೆ ಬೇಕಿಲ್ಲ. ಕಳೆದ 2-3 ದಶಕಗಳಲ್ಲಿ ಹೆಚ್ಚುತ್ತಿರುವ ಅರಣ್ಯ ನಾಶ, ಪರಿಸರಮಾಲಿನ್ಯದಿಂದಾಗಿ ಸಹಜವಾಗಿ ಬೆಳೆಯುವ ಸೀತಾಫಲದ ಗಿಡಗಳ ಸಂಖ್ಯೆ ಕಡಿಮೆಯಾಗಿದೆ.ಸೀತಾಫಲವನ್ನು ವಾಣಿಜ್ಯ ದೃಷ್ಟಿಯಿಂದ  ಬೆಳೆಯುವ ಪ್ರಯತ್ನಗಳು ಆರಂಭವಾಗಿವೆ. ಮಹಾರಾಷ್ಟ್ರ ರಾಜ್ಯದಲ್ಲಿ  ಅನೇಕ ರೈತರು ಸೀತಾಫಲವನ್ನು ತೋಟದ ಬೆಳೆಯಾಗಿ ಬೆಳೆಯುತಿದ್ದಾರೆ.

 

ಕರ್ನಾಟಕದ ಬೀದರ್,ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಸೀತಾಫಲ ಸಮೃದ್ಧವಾಗಿ ಬೆಳೆಯುತ್ತದೆ. ಒಣ ಹವೆಯ ಜಿಲ್ಲೆಗಳಲ್ಲಿ ಇದು ಅತ್ಯಂತ ಸಹಜವಾಗಿ ಬೆಳೆಯುತ್ತದೆ. ಅನೋನಾಸಿ ಕುಟುಂಬ ವರ್ಗಕ್ಕೆ ಸೇರಿದ ಸೀತಾಫಲದ ಸಸ್ಯಶಾಸ್ತ್ರೀಯ ಹೆಸರು `ಅನೋನ ಸ್ಕ್ವಾಮೋಸ~. ಇದರಲ್ಲಿ  ರಾಮಫಲ, ಲಕ್ಷ್ಮಣ ಫಲ, ಸೇರಿದಂತೆ ಒಟ್ಟು ಆರು ಪ್ರಭೇದಗಳಿವೆ. ಇವುಗಳ ಪೈಕಿ ಸೀತಾಫಲ ಹೆಚ್ಚು ರುಚಿ.ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ವಿಜ್ಞಾನಿಗಳು `ಅರ್ಕಾ ಸಹನ~ ಎಂಬ ಸುಧಾರಿತ ಸೀತಾಫಲ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಐಲ್ಯಾಂಡ್ ಜೆಮ್ ಮತ್ತು ಮ್ಯಾಮತ್ ತಳಿಗಳ ಸಂಕರಣದಿಂದ ರೂಪಿಸಲಾದ ಹೊಸ ತಳಿ.

 

ಗಾತ್ರದಲ್ಲಿ ಮಾತ್ರವಲ್ಲದೇ ಬಣ್ಣ, ರುಚಿ, ಇಳುವರಿ ಹಾಗೂ ಹಣ್ಣಾದ ನಂತರ ಹೆಚ್ಚು ದಿನ ಉಳಿಯುವ ಶಕ್ತಿ ಇದೆ. ಮಿಲಿ ಬಗ್ (ಬಿಳಿ ತಿಗಣಿ) ಹೆಸರಿನ ಕೀಟಗಳ ನಿರೋಧಕ ಶಕ್ತಿ ಪಡೆದಿದೆ. ಅರ್ಕಾ ಸಹನ ಸುಧಾರಿತ ತಳಿಯನ್ನು ಐಐಎಚ್‌ಆರ್‌ನ ಹಣ್ಣಿನ ಬೆಳೆ ವಿಭಾಗದಲ್ಲಿ ಹಿರಿಯ ವಿಜ್ಞಾನಿಗಳಾದ ಎಸ್.ಎಚ್.ಜಾಲಿಕೊಪ್ಪ ಹಾಗೂ ಸಂಪತ್ ಕುಮಾರ್ ಅವರು 1999-2000ರಲ್ಲಿ ಅಭಿವೃದ್ಧಿಪಡಿಸಿ ಸಂಸ್ಥೆಯ ತಾಕುಗಳಲ್ಲಿ ಅನೇಕ ಪ್ರಯೋಗಗಳಿಗೆ ಒಳಪಡಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ.ಸೀತಾಫಲ ಹಣ್ಣುಗಳ ತಿರುಳು ಅತ್ಯಂತ ಸಿಹಿ. ಬೀಜಗಳು ಹೆಚ್ಚಾಗಿರುವುದರಿಂದ ಸಲೀಸಾಗಿ ತಿನ್ನುವುದು ಕಷ್ಟ. ಅರ್ಕಾ ಸಹನ ತಳಿಯ ಹಣ್ಣುಗಳಲ್ಲಿ ಬೀಜಗಳು ಕಡಿಮೆ ಇರುತ್ತವೆ. ನೂರು ಗ್ರಾಂ ತೂಕವಿರುವ ಒಂದು ಹಣ್ಣಿನಲ್ಲಿ ಏಳೆಂಟು  ಬೀಜಗಳಷ್ಟೆ ಇರುತ್ತವೆ. ನಿಧಾನವಾಗಿ ಪಕ್ವವಾಗುವ ಗುಣ ಪಡೆದಿದೆ.

 

ಒಂದು ಸಾಮಾನ್ಯ ಸೀತಾಫಲದಲ್ಲಿ 1.33 ಗ್ರಾಂ ಪ್ರೊಟೀನ್, 17.05 ಗ್ರಾಂ ರಂಜಕ ಮತ್ತು 159 ಮಿ.ಗ್ರಾಂ ಕ್ಯಾಲ್ಸಿಯಂ ಅಂಶವಿದ್ದರೆ, ಅರ್ಕಾ ಸಹನದಲ್ಲಿ  2.49 ಗ್ರಾಂ ಪ್ರೊಟೀನ್, 42.29 ಮಿ.ಗ್ರಾಂ ರಂಜಕ ಮತ್ತು 225 ಮಿ. ಗ್ರಾಂ ಕ್ಯಾಲ್ಸಿಯಂ ಇದೆ. ಸಾಮಾನ್ಯ ಸೀತಾಫಲ ಹಣ್ಣಾದ ಮೇಲೆ 3-4 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಆದರೆ ಅರ್ಕ ಸಹನಾ ಹಣ್ಣು 7- 8 ದಿನಗಳು ಕೆಡದೆ ಉಳಿಯುತ್ತದೆ.ಸಾಮಾನ್ಯ ಸೀತಾಫಲ ಹಣ್ಣುಗಳು 100-150 ಗ್ರಾಂ ತೂಕ ಇರುತ್ತವೆ. ಅರ್ಕ ಸಹನ ತಳಿಯ ಹಣ್ಣುಗಳು ಕನಿಷ್ಠ 400 ರಿಂದ 600 ಗ್ರಾಂ ತೂಗುತ್ತವೆ. ಸಾಮಾನ್ಯ ಸೀತಾಫಲದ ಹಣ್ಣಿನ ಬೆಲೆ ಕೇಜಿಯೊಂದಕ್ಕೆ 70-80 ರೂ ಇದೆ. ಈಗ ಮುಂಬೈ ಮಾರುಕಟ್ಟೆಯಲ್ಲಿ ಸಿಗುವ ಅರ್ಕ ಸಹನ ಸೀತಾಫಲ ಹಣ್ಣು ಕೇಜಿಗೆ 150 ರೂ ಎನ್ನುತ್ತಾರೆ ಸಂಸ್ಥೆಯ ಪ್ರಧಾನ ವಿಜ್ಞಾನಿ ಸಂಪತ್‌ಕುಮಾರ್. ಅರ್ಕ ಸಹನ ತಳಿಯ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಕಾಲದಲ್ಲಿ ಕೃತಕ ಪರಾಗಸ್ಪರ್ಶ ಮಾಡುವುದು ಬಹುಮುಖ್ಯ. ಸಕಾಲದಲ್ಲಿ ಪರಾಗಸ್ಪರ್ಶ ಮಾಡದಿದ್ದರೆ ಗುಣಮಟ್ಟದ ಹಣ್ಣು ಪಡೆಯಲು ಸಾಧ್ಯವಿಲ್ಲ. ಸೀತಾಫಲದಲ್ಲಿ ಗಂಡು ಮತ್ತು ಹೆಣ್ಣು ಹೂವಿನ ಪರಾಗ ರೇಣುಗಳು ಬೇರೆ -ಬೇರೆ ಸಮಯದಲ್ಲಿ ಪಕ್ವವಾಗುತ್ತವೆ.ಕೃತಕ ಪರಾಗಸ್ಪರ್ಶದಿಂದ ಶೇ.90ರಷ್ಟು ಏಕ ರೂಪರ ದೊಡ್ಡ ಗಾತ್ರದ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ಅರ್ಕಾ ಸಹನ ಹೂಗಳು ದೊಡ್ಡವಾಗಿರುವುದರಿಂದ ಒಂದು ಗಂಟೆಗೆ 150 ರಿಂದ 200 ಹೂಗಳಿಗೆ ಕೃತಕ ಪರಾಗಸ್ಪರ್ಶವನ್ನು ಮಾಡಬಹುದು. ಪ್ರತಿ ಹೆಕ್ಟರ್‌ಗೆ 25 ಟನ್ ಇಳುವರಿ ಪಡೆಯಬಹುದು.ಬೆಳೆಯುವ ವಿಧಾನ:

ಅರ್ಕ ಸಹನ ತಳಿ ಒಣ ಹವೆಯ, ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗಿಡದಿಂದ ಗಿಡಕ್ಕೆ 15 ಅಡಿ ಅಂತರವಿರುವಂತೆ ನೋಡಿಕೊಂಡು ಎಕರೆಗೆ 170 ಗಿಡಗಳನ್ನು ನಾಟಿ ಮಾಡಬಹುದು. 2x2x2 ಅಳತೆಯ ಗುಂಡಿ ತೆಗೆದು ನಾಟಿ ಮಾಡಬೇಕು. ನಾಟಿ ಮಾಡಿದ ಮೂರು ವರ್ಷಗಳ ನಂತರ ಗಿಡವು ಫಲ ಕೊಡಲು ಪ್ರಾರಂಭಿಸುತ್ತದೆ. ಒಂದು ಗಿಡ ಏಳು ವರ್ಷದ ವೇಳೆಗೆ ಸುಮಾರು 160ರಿಂದ 170 ಹಣ್ಣುಗಳನ್ನು ಬಿಡುತ್ತದೆ. ಒಂದು ಗಿಡ 25 ವರ್ಷಗಳ ಕಾಲ ಬದುಕುತ್ತದೆ ಎನ್ನುತ್ತಾರೆ ಸಂಪತ್‌ಕುಮಾರ್. ಆಸಕ್ತರು ಸಸಿಗಳಿಗಾಗಿ ಇಲ್ಲವೇ ಸಸಿಗಳನ್ನು ಬೆಳೆಸಿಕೊಳ್ಳುವ ಮತ್ತು ಕೃತಕ ಪರಾಗಸ್ಪರ್ಶ ಇತ್ಯಾದಿಗಳ ಮಾಹಿತಿಗಳಿಗಾಗಿ ನಿರ್ದೇಶಕರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರಘಟ್ಟ ಬೆಂಗಳೂರು -560089 ವಿಳಾಸಕ್ಕೆ ಸಂಪರ್ಕಿಸಬಹುದು.

 

ಅಥವಾ ಈ ಕೆಳಗಿನ ದೂರವಾಣಿ ಮೂಲಕ ಸಂಪತ್ ಕುಮಾರ್ ಅವರನ್ನು ಸಂಪರ್ಕಿಸಬಹುದು. - 080 28466420/23, 94490 23869.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.