ಗುರುವಾರ , ಮಾರ್ಚ್ 4, 2021
20 °C

ಸುನಿ: ತನ್ನನ್ನೇ ಕಂಡಂತೆ...

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಸುನಿ: ತನ್ನನ್ನೇ ಕಂಡಂತೆ...

ಸಿನಿಮಾವೊಂದರ ಚಿತ್ರಕಥೆಯ ತುಣುಕುಗಳಂಥ ಕೆಳಗಿನ ಪ್ರಸಂಗಗಳನ್ನು ನೋಡಿ:

ಕೈಯಲ್ಲಿ ಪೆನ್ನು ಕಾಗದ ಇದ್ದರೆ ಸಾಕು, ಸಾಲುಗಳು ಜೀವತಳೆಯುತ್ತಿದ್ದವು. ಹೀಗೆ ಸ್ಪರ್ಧೆಯೊಂದರಲ್ಲಿ ಸ್ಥಳದಲ್ಲಿಯೇ ಗೀಚಿದ ಪದ್ಯಕ್ಕೆ ಸಿಕ್ಕಿದ್ದು ಮೊದಲ ಬಹುಮಾನ. ಅದನ್ನು ಸಹಾಯಕ ನಿರ್ದೇಶಕರೊಬ್ಬರು ನೋಡಿದ್ದು, ಸಿನಿಮಾಕ್ಕೆ ಹಾಡು ಬರಿ ಎಂದು ಅವಕಾಶ ಕೊಟ್ಟಿದ್ದು ಆಕಸ್ಮಿಕ.ಆದರೆ ಚಿತ್ರ ಬಿಡುಗಡೆಯ ಭಾಗ್ಯ ಕಾಣಲಿಲ್ಲ. ಸಿನಿಮಾ ಸಾಹಿತ್ಯ ಸುಲಭವಲ್ಲ ಎಂಬ ವಾಸ್ತವ ಅರಿವಾಗಿದ್ದು ಅವಕಾಶಗಳನ್ನು ಅರಸತೊಡಗಿದಾಗ. ಸಿನಿಮಾದಲ್ಲಿ ನಿರ್ದೇಶಕನ ಸ್ಥಾನ ದೊಡ್ಡದು; ಆ ಸ್ಥಾನವೇ ಏಕೆ ತನ್ನದಾಗಬಾರದು ಎಂದು ಮೂಡಿದ ಪುಟ್ಟ ಕನಸಿಗೆ ರೆಕ್ಕೆಪುಕ್ಕ ಬೆಳೆದು ಏಳೆಂಟು ವರ್ಷಗಳೇ ಉರುಳಿ ಹೋಗಿದೆ. ಈಗ ನಿರ್ದೇಶಕನಿಗಿಂತಲೂ ದೊಡ್ಡ ಹೊಣೆಯಾದ ನಿರ್ಮಾಪಕನ ಸ್ಥಾನದಲ್ಲಿ ಕುಳಿತ ಅವರಿಗೆ ತನ್ನ ಕಥೆಗಳನ್ನು ತಿರಸ್ಕರಿಸಿದ ನಿರ್ಮಾಪಕರು ನೆನಪಿಗೆ ಬರುತ್ತಾರೆ.ಸಿನಿಮಾ ಮಾಡುತ್ತೇನೆ ಎಂದು ಹೊರಟ ಮಗನಿಗೆ, ‘ಒಂದು ವರ್ಷದಲ್ಲಿ ಸಿನಿಮಾದಲ್ಲಿ ಬದುಕು ಕಂಡುಕೊಳ್ಳುತ್ತೇನೆ ಎನ್ನುವುದನ್ನು ಸಾಬೀತುಪಡಿಸದಿದ್ದಲ್ಲಿ ನಾವು ಹೇಳಿದಂತೆ ಕೇಳಬೇಕು’ ಎಂದಿದ್ದ ಅಪ್ಪ ಅಮ್ಮ ತಮ್ಮ ಎಚ್ಚರಿಕೆ ಮಾತುಗಳನ್ನು ಮರೆತು ಖುಷಿಯಾಗಿದ್ದಾರೆ. ಆದರೆ ಗೆಲುವಿನ ಮೆಟ್ಟಿಲೇರಿ, ಒಂದೇ ಬಾರಿಗೆ ಹತ್ತಾರು ಭಾರಗಳನ್ನು ಹೆಗಲಿನ ಮೇಲೆ ಹೊತ್ತುಕೊಂಡಿರುವ ಈ ಯುವಕನಿಗೆ ಅಪ್ಪ ಅಮ್ಮನ ಸೂಚನೆಗಳು, ನಿರ್ಮಾಪಕರ ಮನೆಗೆ ಅಲೆದಾಡಿದ ದಿನಗಳು ಪದೇ ಪದೇ ನೆನಪಾಗುತ್ತಿರುತ್ತವೆ...

 ಅಂದಹಾಗೆ, ಮೇಲಿನದು ಚಿತ್ರಕಥೆಯ ತುಣುಕಲ್ಲ. ನಿರ್ಮಾಪಕ, ನಿರ್ದೇಶಕ ಸುನಿ ಅವರ ಸಿನಿಮಾ ಬದುಕಿಗೆ ಹಲವು ಮುಖಗಳವು. ತಾನು ಬೆಳೆಯುತ್ತಲೇ ಉಳಿದವರನ್ನೂ ಬೆಳೆಸುವ ನೀತಿಯನ್ನು ಬಹುಬೇಗನೇ ಅಳವಡಿಸಿಕೊಂಡವರು. ‘ಉಳಿದವರು ಕಂಡಂತೆ’, ‘ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ ಸ್ಟೋರಿ’, ‘ಬಹುಪರಾಕ್‌’, ‘ಮನಮೋಹಕ’ ಚಿತ್ರಗಳು ಅವುಗಳಿಗೆ ಉದಾಹರಣೆ.

ಶಾಲಾ ದಿನಗಳಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ನೋಡಿದ್ದ ಅವರಿಗೆ, ಸಿನಿಮಾ ಪಾಠಗಳನ್ನು ಹೇಳಿಕೊಟ್ಟಿದ್ದು ಕಾಲೇಜಿನ ಎದುರಿಗೆ ಇದ್ದ ‘ನವರಂಗ್‌’ ಚಿತ್ರಮಂದಿರ. ಅವರ ಪಾಲಿಗೆ ಚಿತ್ರಮಂದಿರವೇ ಸಿನಿಮಾ ಅಧ್ಯಯನ ಕೇಂದ್ರ! ಮುಂದೆ ನಿರ್ದೇಶಕ ದಿನೇಶ್‌ ಬಾಬು ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿಯುತ್ತಲೇ, ಕಥೆಗಳನ್ನು ಹೊಸೆದರು. ಇಡೀ ಸಿನಿಮಾದಲ್ಲಿ ಮಾತನ್ನೇ ನೆಚ್ಚಿಕೊಂಡು ಎರಡೇ ಪಾತ್ರ, ಒಂದೇ ಮನೆ ಎಂಬ ಸೂತ್ರ ಹಿಡಿದು ಅತಿ ಕಡಿಮೆ ಬಜೆಟ್‌ಗಾಗಿ ಹುಟ್ಟುಹಾಕಿದ ಕಥೆ ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’.ಸಿನಿಮಾ ಮಾಡಲು ಮುಂದೆ ಬಂದಿದ್ದ ನಿರ್ಮಾಪಕ ಕೈಕೊಟ್ಟಾಗ ಸ್ವತಃ ಹಣ ಹಾಕುವ ಸಾಹಸಕ್ಕೂ ಇಳಿದರು. ಅವರಿಗೇ ಗೊತ್ತಿಲ್ಲದಂತೆ ರಕ್ಷಿತ್‌ ಶೆಟ್ಟಿ, ಛಾಯಾಗ್ರಾಹಕ ಮನೋಹರ ಜೋಶಿ, ತಂತ್ರಜ್ಞ ಸಚಿನ್‌ ಮುಂತಾದ ಹುಮ್ಮಸ್ಸಿನ ಹುಡುಗರ ಬಳಗ ಜೊತೆಯಾಯಿತು. ಒಟ್ಟು 1.20 ಕೋಟಿ ರೂಪಾಯಿ ಬಂಡವಾಳದಲ್ಲಿ ಸಿದ್ಧವಾದ ‘ಸಿಂಪಲ್ಲಾಗ್‌...’ ಸುಮಾರು ನಾಲ್ಕೂವರೆ ಕೋಟಿ ರೂಪಾಯಿ ಲಾಭ ಕಂಡಿದ್ದು ಈಗ ಇತಿಹಾಸ.‘ಉಳಿದವರು ಕಂಡಂತೆ’ ಚಿತ್ರಕ್ಕೆ ಬಂಡವಾಳ ಹೂಡಲು ಜೊತೆಯಾದದ್ದು ಹೇಮಂತ್‌ ಮತ್ತು ಅಭಿ. ಇಬ್ಬರೂ ಸುನಿಗೆ ಸಂಬಂಧದಲ್ಲಿ ಸಹೋದರರು. ಈ ವಾರ ತೆರೆಕಾಣುತ್ತಿರುವ ‘ಉಳಿದವರು...’ ಬಗ್ಗೆ ಸುನಿಗೆ ಅಪಾರ ನಿರೀಕ್ಷೆ ಇದೆ. ಒಂದು ಘಟನೆಯಲ್ಲಿ ಅದರ ಒಳಗಿದ್ದು ಉಳಿದವರು ಕಾಣುವುದು ಮತ್ತು ಅದರ ಹೊರಗಿರುವ ಉಳಿದವರು ಕಾಣುವುದು– ಇವೆರಡನ್ನೂ ಹೊಸಬಗೆಯಲ್ಲಿ ನಿರೂಪಿಸಿದ್ದೇವೆ ಎನ್ನುತ್ತಾರೆ ಸುನಿ.ನೈಜತೆಗೋಸ್ಕರ ಸ್ಥಳದಲ್ಲಿಯೇ ಮಾತುಗಳನ್ನು ಮುದ್ರಿಸಿಕೊಳ್ಳುವ ಪ್ರಯತ್ನದಿಂದಾಗಿ ಬಜೆಟ್‌ ಮೊತ್ತ ಏರಿಕೆಯಾಗಿದ್ದರ ಬಗ್ಗೆ ಅವರಲ್ಲಿ ಬೇಸರವಿಲ್ಲ. ಸಿನಿಮಾದಲ್ಲಿ ಹೊಸತನವಿರಬೇಕು. ಕಥೆ ಹೇಳುವ ಬಗೆಯೂ ಪ್ರೇಕ್ಷಕನಿಗೆ ತಾಜಾ ಅನುಭವ ನೀಡಬೇಕು. ಕಲಾತ್ಮಕತೆಯೂ ಬೇಕು, ಪ್ರೇಕ್ಷಕ ಬಯಸುವ ಮನರಂಜನೆಯೂ ಇರಬೇಕು ಎನ್ನುವ ಸೂತ್ರ ಅವರದು.ಸಿನಿಮಾ ರೂಪಿಸುವಲ್ಲಿ ಸುನಿ ತಮ್ಮದೇ ಆದ ಶೈಲಿ ಮೈಗೂಡಿಸಿಕೊಂಡಿದ್ದಾರೆ. ಅದಕ್ಕೆ ಪ್ರೇರಣೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ. ತೇಜಸ್ವಿಯವರ ಎಲ್ಲಾ ಪುಸ್ತಕಗಳನ್ನೂ ಆಸಕ್ತಿಯಿಂದ ಓದಿರುವ ಸುನಿಯನ್ನು ಅವರ ಬರವಣಿಗೆ ಶೈಲಿ ತೀವ್ರವಾಗಿ ಕಾಡಿದೆ. ‘ಜುಗಾರಿ ಕ್ರಾಸ್‌’ ಅನ್ನು ಸಿನಿಮಾ ಮಾಡಬೇಕು ಎನ್ನುವ ಆಸೆಯೂ ಇದೆ. ಓದಿನ ಹೊರತಾಗಿ ಸ್ಫೂರ್ತಿ ನೀಡುವುದು ಬೇರೇನೂ ಇಲ್ಲ. ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳನ್ನು ನೋಡುವುದೇ ಇಲ್ಲ. ಏಕೆಂದರೆ ಕನ್ನಡ ಹೊರತಾಗಿ ಅನ್ಯ ಭಾಷೆ ಬರುವುದಿಲ್ಲ ಎನ್ನುತ್ತಾರೆ ಅವರು. ಯಾವುದೇ ಕಥೆಯನ್ನಾದರೂ ಚಿತ್ರತಂಡಕ್ಕೆ ಅರ್ಥವಾಗುವಂತೆ ವಿವರಿಸುವುದು ಅವರಿಗೆ ಬಹಳ ಕಷ್ಟವಂತೆ. ‘ನಾನೊಬ್ಬ ಕೆಟ್ಟ ನರೇಟರ್‌’ ಎಂದು ನಗುತ್ತಾರೆ.ಚುನಾವಣೆ, ಐಪಿಎಲ್‌ ಕ್ರಿಕೆಟ್‌ ಎಲ್ಲದರ ಕಾವು ಇಳಿದ ಬಳಿಕ ‘ಬಹುಪರಾಕ್‌’ ತೆರೆಗೆ ತರುವುದು ಅವರ ಉದ್ದೇಶ. ಶ್ರೀನಗರ ಕಿಟ್ಟಿ ಇಲ್ಲಿ ಮೂರು ಛಾಯೆಗಳಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೊಂದಲಗಳಲ್ಲಿ ಮುಳುಗಿರುವ ‘ಮನಸು’, ಹಣದ ಬೆನ್ನತ್ತುವ ‘ಮನಿ’, ಪ್ರಗತಿಪರ ಧೋರಣೆಯುಳ್ಳ ‘ಮೌನಿ’ ಕಿಟ್ಟಿ ಪಾತ್ರದ ಮೂರು ಮುಖಗಳು. ಅದಕ್ಕೆ ಸ್ನೇಹ ಮತ್ತು ಪ್ರೀತಿ ಎಂಬ ಎರಡು ಹೆಣ್ಣು ಹೃದಯಗಳೂ ಜೊತೆಯಾಗುತ್ತವೆ.ಇದೊಂದು ಬದುಕನ್ನು ಸಂಕೇತಿಸುವ ಚಿತ್ರ ಎನ್ನುವ ಸುನಿ, ಪ್ರೇಕ್ಷಕನಿಗೆ ಕನ್ನಡಿ ಹಿಡಿಯುವ ಕೆಲಸವನ್ನಿಲ್ಲಿ ಮಾಡಿದ್ದಾರಂತೆ. ಈ ಎಲ್ಲಾ ಛಾಯೆಗಳು ನಮ್ಮೊಳಗೂ ಇರುತ್ತವೆ ಎನ್ನುವುದನ್ನು ಚಿತ್ರದ ಅಂತ್ಯದಲ್ಲಿ ಅವರು ತೋರಿಸಿದ್ದಾರೆ. ಅಂದಹಾಗೆ, ಸುನಿ ಬಹುಪರಾಕ್‌ ಹೇಳುತ್ತಿರುವುದು ನಾಯಕನಿಗಲ್ಲ, ಪ್ರೇಕ್ಷಕನಿಗೆ.ಬಾಲ್ಯದಿಂದಲೂ ಶಿವರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಸುನಿ, ಶಿವಣ್ಣರನ್ನು ‘ಮನಮೋಹಕ’ದಲ್ಲಿ ವಿಭಿನ್ನವಾಗಿ ಚಿತ್ರಿಸುತ್ತಿದ್ದಾರೆ. ಅದಕ್ಕಾಗಿ 70ರ ದಶಕದ ಕಥನವನ್ನು ಸೃಷ್ಟಿಸಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಜನಿಸಿ ಸರಳ ಬದುಕನ್ನು ಅಪ್ಪಿಕೊಳ್ಳುವ ಮುಗ್ಧ ಪ್ರೇಮಿಯಾಗಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಹರೆಯದ ಯುವಕನಿಂದ ನರೆಗೂದಲ ಅಜ್ಜನವರೆಗೂ ಶಿವಣ್ಣನ ಪಾತ್ರ ವಿಸ್ತರಿಸಿಕೊಳ್ಳುವುದು ವಿಶೇಷ.

ಶಿವಣ್ಣನಿಗೆ ಜೋಡಿಯಾಗುವ ಮುಸ್ಲಿಂ ಯುವತಿಯ ಪಾತ್ರಕ್ಕೆ ಅವರಿನ್ನೂ ಹುಡುಕಾಟ ನಡೆಸಿದ್ದಾರೆ. ಗೋವಾ ಮತ್ತಿತರ ತಾಣಗಳನ್ನು ಎಪ್ಪತ್ತರ ದಶಕಗಳಿಗೆ ಕೊಂಡೊಯ್ಯುವ ಸವಾಲು ಅವರ ಮುಂದಿದೆ. ಇದರ ನಡುವೆಯೇ ‘ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ ಸ್ಟೋರಿ’ಯ ಸುದ್ದಿಯೂ ಹೊರಬಿದ್ದಿದೆ. ಅದೇ ಬಳಗದ ಚಿತ್ರವಾದರೂ ಯಾವುದೂ ಅಂತಿಮಗೊಂಡಿಲ್ಲ ಎನ್ನುತ್ತಾರೆ ಸುನಿ. ತಂತ್ರಜ್ಞ ಸಚಿನ್‌ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಸಂಭಾಷಣೆ ಒದಗಿಸಿ, ಬಂಡವಾಳವನ್ನೂ ಸುನಿ ಹೂಡುತ್ತಿದ್ದಾರೆ. ರಕ್ಷಿತ್‌ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವುದರಿಂದ ತಾರಾಬಳಗದ ಆಯ್ಕೆ ಅವರ ಮುಂದಿರುವ ಸಮಸ್ಯೆ.ಲವ್‌ ಸ್ಟೋರಿಯನ್ನು ಇಷ್ಟು ಸರಳ ಎಂದು ತೋರಿಸಿದ್ದ ಸುನಿಗೆ ನಿಜಜೀವನದಲ್ಲಿ ಪ್ರೀತಿ ಸರಳವಲ್ಲ, ಸಂಕೀರ್ಣ ಎನ್ನುವುದು ಅರಿವಿಗೆ ಬಂದಿದೆ. ಪ್ರೀತಿ ಗೀತಿಯಲ್ಲಿ ಅಷ್ಟಾಗಿ ಆಸಕ್ತಿ ತೋರದಿದ್ದ ಅವರಿಗೆ ಈಗ ಪ್ರೀತಿಯ ‘ಆಂತರ್ಯ’ ದಕ್ಕುತ್ತಿದೆ. ಗೆಳತಿಯದೂ ಸಿನಿಮಾದ ದೋಣಿಯೇ ಆದರೂ ದಡ ಸೇರುವುದು ಸುಲಭವಲ್ಲ ಎಂದು ಅವರಿಗೆ ಅನಿಸಿದೆ. ಜುಲೈ 12ರಂದು  ಶಿವರಾಜ್‌ಕುಮಾರ್‌  ಜನ್ಮದಿನದಂದು ‘ಮನಮೋಹಕ’  ಸೆಟ್ಟೇರಲಿದೆ. ಈ ಸಿನಿಮಾ ಮುಗಿದ ಬಳಿಕ ಸುನಿ ಅವರ ಲವ್‌ ಸ್ಟೋರಿಗೆ ಮದುವೆಯ ತಿರುವು ದೊರಕಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.