ರಿಯಲ್ ಎಸ್ಟೇಟ್, ಮಾಧ್ಯಮ, ಮನರಂಜನೆ, ಪ್ರವಾಸೋದ್ಯಮ, ಆರೋಗ್ಯ ರಕ್ಷಣೆ, ಹೋಟೆಲ್ ಹೀಗೆ ವಿವಿಧ ಉದ್ಯಮ ವಲಯಗಳಲ್ಲಿ ವಹಿವಾಟು ವಿಸ್ತರಿಸಿರುವ ಸಹಾರಾ ಸಮೂಹವು, ಮೂರು ಕೋಟಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣದಲ್ಲಿ ವಿವಾದಕ್ಕೆ ಗುರಿಯಾಗಿದೆ. ಆರ್ಥಿಕ ಒಕ್ಕೂಟ ಸಹರಾ ಇಂಡಿಯಾ ಪರಿವಾರದ ಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತೊ ರಾಯ್ (66), ಪೊಲೀಸ್ ಬಂಧನಕ್ಕೆ ಒಳಗಾಗಿ ಸುದ್ದಿಯಲ್ಲಿದ್ದಾರೆ.

ಪುಣೆ ವಾರಿಯರ್ಸ್ ಇಂಡಿಯಾ, ನ್ಯೂಯಾರ್ಕ್ನ ಪ್ಲಾಝಾ ಹೋಟೆಲ್, ಆಂಬಿ ವ್ಯಾಲ್ಲೆ ಸಿಟಿ, ಫೋರ್ಸ್ ಇಂಡಿಯಾ ಮುಂತಾದವುಗಳ ಮಾಲೀಕತ್ವ ಹೊಂದಿರುವ ಈ ಸಂಸ್ಥೆಯನ್ನು 1978ರಲ್ಲಿ ಸ್ಥಾಪಿಸಲಾಗಿತ್ತು.

ದೇಶದ ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಸುಬ್ರತೊ ರಾಯ್, ರೂ. 2,000ಗಳ ಆರಂಭಿಕ ಹೂಡಿಕೆಯ ಚಿಟ್ಫಂಡ್ನಿಂದ ವಹಿವಾಟು ಆರಂಭಿಸಿ ಸಹಾರಾ ಸಾಮ್ರಾಜ್ಯ ವಿಸ್ತರಿಸಿದ ಪರಿ ಬೆರಗುಗೊಳಿಸುವಂತಹದು.

ರೋಷನ್ ಲಾಲ್ ಕಾರಣ
ರಾಯ್, ಈಗ ಬಂಧನಕ್ಕೆ ಒಳಗಾಗಲು, ನಾಲ್ಕು ವರ್ಷಗಳ ಹಿಂದೆ ರೋಷನ್ ಲಾಲ್ ಎನ್ನುವವರು, ಷೇರುಪೇಟೆಯ ಕಾವಲು ಸಂಸ್ಥೆಯಾಗಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ದೂರು ನೀಡಿದ್ದೇ ಕಾರಣ. ಮೂರು ಕೋಟಿಗೂ ಹೆಚ್ಚು ಹೂಡಿಕೆದಾರರಿಂದ ರೂ. 24 ಸಾವಿರ ಕೋಟಿ ಸಂಗ್ರಹಿಸಲು ಸಹಾರಾ ಸಮೂಹವು ಹಲವಾರು ಅಕ್ರಮಗಳನ್ನು ಎಸಗಿದೆ ಎಂದು ಲಾಲ್ ದೂರಿದ್ದರು.

ಸಹಾರಾ ಸಮೂಹದ ನಿವ್ವಳ ಸಂಪತ್ತಿನ ಮೊತ್ತವು ರೂ. 68 ಸಾವಿರ ಕೋಟಿಗಳಷ್ಟು ಮತ್ತು ಒಟ್ಟು ಸಂಪತ್ತು ರೂ.1.5 ಲಕ್ಷ ಕೋಟಿಗಳಷ್ಟಿರುವ ಅಂದಾಜು ಇದೆ.

ಸಹಾರಾ ಸಮೂಹದ ರಿಯಲ್ ಎಸ್ಟೇಟ್ ಅಂಗಸಂಸ್ಥೆಯಾಗಿರುವ ಸಹಾರಾ ಪ್ರೈಮ್ ಸಿಟಿಯು, ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ 2009ರ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿತ್ತು. ಇದೇ ಇಂದಿನ ವಿವಾದಕ್ಕೆ ಮೂಲ ಕಾರಣ.

ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪ್ ಲಿಮಿಟೆಡ್ (SIRECL) ಮತ್ತು ಸಹಾರಾ ಹೌಸಿಂಗ್ ಇನ್ ವೆಸ್ಟ್ ಮೆಂಟ್ ಕಾರ್ಪ್ ಲಿಮಿಟೆಡ್ಗಳ (SHICL) ಮೂಲಕ ದೊಡ್ಡ ಮೊತ್ತದ ಬಂಡವಾಳ ಸಂಗ್ರಹಿಸಲು ಉದ್ದೇಶಿಸಲಾಗಿತ್ತು.

ಈ ಎರಡೂ ಸಂಸ್ಥೆಗಳು ‘ಐಚ್ಛಿಕ ಸಂಪೂರ್ಣ ಪರಿವರ್ತಿಸಬಹುದಾದ ಬಾಂಡ್’ ಹೆಸರಿನಲ್ಲಿ ಹಣ ಸಂಗ್ರಹಿಸಲೂ ಮುಂದಾಗಿದ್ದವು. ಇದು ಕಾನೂನುಬಾಹಿರ ಕ್ರಮ ಎನ್ನುವ ಆರೋಪಗಳು ‘ಸೆಬಿ'ಗೆ 2010ರ ಜನವರಿ ತಿಂಗಳಲ್ಲಿ ಸಲ್ಲಿಕೆಯಾದವು. ರೋಷನ್ ಲಾಲ್ ಸಲ್ಲಿಸಿದ ದೂರು ಆಧರಿಸಿ ‘ಸೆಬಿ’, ಸಹಾರಾ ಸಮೂಹದಿಂದ ಸ್ಪಷ್ಟನೆ ಬಯಸಿತ್ತು.

ಪಡೆಯದ ಪೂರ್ವಾನುಮತಿ
50 ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆದಾರರಿಗೆ ಷೇರುಪತ್ರ ನೀಡುವ ಪ್ರಕರಣದಲ್ಲಿ ‘ಸೆಬಿ’ಯ ಪೂರ್ವಾನುಮತಿ ಅಗತ್ಯವಾಗಿತ್ತು. ಈ ಪ್ರಕರಣದಲ್ಲಿ ಹೂಡಿಕೆದಾರರ ಸಂಖ್ಯೆ ಕೋಟಿಗಳಷ್ಟಿದ್ದರೂ ಅಗತ್ಯ ಅನುಮತಿ ಪಡೆದುಕೊಂಡಿರಲಿಲ್ಲ.

2010ರ ನವೆಂಬರ್ ನಲ್ಲಿ ‘ಸೆಬಿ’ ಈ ಎರಡೂ ಸಂಸ್ಥೆಗಳಿಗೆ ಆದೇಶ ನೀಡಿ, ಸಂಗ್ರಹಿಸಲಾದ ಹಣವನ್ನು ಹೂಡಿಕೆದಾರರಿಗೆ ಮರಳಿಸಬೇಕು ಎಂದು ಸೂಚಿಸಿತ್ತು. 2011ರ ಜೂನ್ನಲ್ಲಿ ಈ ಸಂಬಂಧ ಅಂತಿಮ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಸಹಾರಾ ಸಮೂಹವು, ಷೇರುಗಳ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ‘ಸೆಬಿ’ ಆದೇಶ ಎತ್ತಿ ಹಿಡಿದ ನ್ಯಾಯಮಂಡಳಿಯು, ಹೂಡಿಕೆದಾರರಿಗೆ ರೂ. 25,781 ಕೋಟಿಗಳನ್ನು ಮರಳಿಸಬೇಕು ಎಂದು 2011ರ ಅಕ್ಟೋಬರ್ ನಲ್ಲಿ ಆದೇಶ ನೀಡಿತ್ತು. ಆನಂತರ ಸಮೂಹವು ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು.

ಐತಿಹಾಸಿಕ ತೀರ್ಪು
ಸುಪ್ರೀಂ ಕೋರ್ಟ್ ಕೂಡ, 2012 ರ ಆಗಸ್ಟ್ 31ರಂದು ಐತಿಹಾಸಿಕ ತೀರ್ಪು ನೀಡಿ, ಹೂಡಿಕೆದಾರರಿಗೆ ನೀಡಬೇಕಾಗಿರುವ ರೂ. 24 ಸಾವಿರ ಕೋಟಿಗಳನ್ನು ಮರಳಿಸಲು ‘ಸೆಬಿ’ ಬಳಿ ಠೇವಣಿ ಇಡಲು ಸೂಚಿಸಿತ್ತು. ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ‘ಸೆಬಿ’ ಮತ್ತೆ ಸಹಾರಾ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿತು. ಮೂರು ಕಂತುಗಳಲ್ಲಿ ಹಣ ಠೇವಣಿ ಇಡಬೇಕೆಂದು ಕೋರ್ಟ್, ಸಹಾರಾ ಸಂಸ್ಥೆಗೆ ಸೂಚಿಸಿತ್ತು.

ಮೊದಲ ಕಂತಾಗಿ ರೂ. 5,120 ಕೋಟಿ ಠೇವಣಿ ಇರಿಸಿದ ಸಂಸ್ಥೆ, ಉಳಿದ ಎರಡು ಕಂತುಗಳನ್ನು ಠೇವಣಿ ಇರಿಸಲು ವಿಫಲಗೊಂಡಿತು. ಹೂಡಿಕೆದಾರರಿಗೆ ತಾನು ರೂ. 20 ಸಾವಿರ ಕೋಟಿಗಳಿಗಿಂತಲೂ ಹೆಚ್ಚು ಹಣವನ್ನು ಈಗಾಗಲೇ ಪಾವತಿಸಿರುವುದಾಗಿಯೂ ಹೇಳಿಕೊಂಡಿತು.

ಸಹಾರಾ ಸಂಸ್ಥೆಯ ಹೇಳಿಕೆ ನಂಬದ ‘ಸೆಬಿ’, ಸಂಸ್ಥೆಯ ಬ್ಯಾಂಕ್ ಖಾತೆ ಮತ್ತು ಇತರ ಸಂಪತ್ತು ಜಪ್ತಿ ಮಾಡಲು 2013ರ ಫೆಬ್ರುವರಿ 13ರಂದು ಆದೇಶ ನೀಡಿತಲ್ಲದೇ, ಸಂಸ್ಥೆಯ ಮುಖ್ಯಸ್ಥ ಸುಬ್ರತೊ ಮತ್ತು ಮೂವರು ನಿರ್ದೇಶಕರು ತನ್ನೆದುರು ಹಾಜರಾಗಲು ಸೂಚಿಸಿತ್ತು.
ಅಂತಿಮವಾಗಿ ಸಹಾರಾ ಸಮೂಹವು ಸಹಾರಾ ಪ್ರೈಮ್ ಸಿಟಿ ಯೋಜನೆಯನ್ನು 2013ರ ಏಪ್ರಿಲ್ನಲ್ಲಿ ಅಧಿಕೃತವಾಗಿ ಕೈಬಿಟ್ಟಿತು.

ಜಾಹೀರಾತು ಸಮರ
ಈ ಮಧ್ಯೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ಸಂಸ್ಥೆಯು, ಬಾಂಡ್ ಹೊಂದಿರುವವರಿಗೆ ಹಣ ಪಾವತಿಸಲಾಗಿದೆ ಎಂದು ಸ್ಪಷ್ಟನೆ ನೀಡಿತು. ಇದಕ್ಕೆ ಪ್ರತಿಯಾಗಿ ‘ಸೆಬಿ’ ಕೂಡ ಜಾಹೀರಾತು ನೀಡಿ ಹೂಡಿಕೆದಾರರು ಸಹಾರಾ ಸಮೂಹದ ಜತೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಕಿವಿ ಮಾತು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.