ಶನಿವಾರ, ಮೇ 28, 2022
30 °C

ಸುಲಭ ಜಯ ನಿರೀಕ್ಷಿಸಿರಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕೀನ್ಯಾ ತಂಡವನ್ನು ಲಘುವಾಗಿ ಪರಿಗಣಿಸಿರಲಿಲ್ಲ. ಬಲವನ್ನು ಒಗ್ಗೂಡಿಸಿ ಆಡುವ ನಿರ್ಧಾರ ಮಾಡಿದ್ದೆವು.ಹಾಗೆಯೇ ಮಾಡಿದೆವು. ಆದರೆ ಇಷ್ಟೊಂದು ಸುಲಭ ಜಯವನ್ನು ನಾನಂತೂ ಖಂಡಿತ ನಿರೀಕ್ಷಿಸಿರಲಿಲ್ಲ ಎಂದು ನ್ಯೂಜಿಲೆಂಡ್ ತಂಡದ ನಾಯಕ ಡೇನಿಯಲ್ ವೆಟೋರಿ ಪ್ರತಿಕ್ರಿಯಿಸಿದ್ದಾರೆ.ಸುಲಭದ ಗುರಿಯನ್ನು ಪಡೆದು ಕೀನ್ಯಾ ವಿರುದ್ಧ ಕೇವಲ ಎಂಟು ಓವರುಗಳಲ್ಲಿ ಗೆಲುವಿನ ಗುರಿ ಮುಟ್ಟಿದ ನ್ಯೂಜಿಲೆಂಡ್ ತಂಡದವರು ಹತ್ತು ವಿಕೆಟ್‌ಗಳ ಜಯದಿಂದ ಸಂತಸಗೊಂಡಿದ್ದಾರೆ. ಗೆಲುವನ್ನು ನಿರೀಕ್ಷೆ ಮಾಡಿದ್ದರೂ, ಇಷ್ಟೊಂದು ಬೇಗ ಅದು ಸಾಧ್ಯವಾಗುತ್ತದೆಂದು ಈ ತಂಡದವರು ಅಂದುಕೊಂಡಿರಲಿಲ್ಲ. ಅದನ್ನು ಸ್ವತಃ ನಾಯಕ ಒಪ್ಪಿಕೊಂಡಿದ್ದಾರೆ.‘ಕೀನ್ಯಾ ಎದುರು ಸುಲಭವಾಗಿ ಜಯಿಸಿದ್ದು ಒಂದು ರೀತಿಯಲ್ಲಿ ನಮಗೆ ಪ್ರಯೋಜನಕಾರಿ. ಮುಂದಿನ ಪಂದ್ಯದಲ್ಲಿ ಎದುರಾಗಲಿರುವುದು ಆಸ್ಟ್ರೇಲಿಯಾ. ಆದ್ದರಿಂದ ದುರ್ಬಲವಾದ ತಂಡವೊಂದರ ವಿರುದ್ಧ ನಾವು ಕಷ್ಟಪಡದೇ ಗೆದ್ದೆವು ಎನ್ನುವ ವಿಶ್ವಾಸವು ಆಟಗಾರರ ಮನೋಬಲವನ್ನು ಹೆಚ್ಚಿಸುತ್ತದೆ’ ಎಂದ ಅವರು ‘ಮೊದಲ ಪಂದ್ಯದಲ್ಲಿನ ಜಯಕ್ಕಾಗಿ ಭಾರಿ ಸಂಭ್ರಮ ಪಡುವ ಅಗತ್ಯವಿಲ್ಲ. ಆಸ್ಟ್ರೇಲಿಯಾದ ಎದುರು ಪ್ರಬಲ ಪೈಪೋಟಿ ನಡೆಸಿ ಗೆದ್ದರೂ ಅದು ನಿಜವಾಗಿ ಸಂಭ್ರಮಿಸುವಂಥ ಯಶಸ್ಸು’ ಎಂದು ವೆಟೋರಿ ಹೇಳಿದರು.ಕಾಂಗರೂಗಳ ವಿರುದ್ಧದ ಪಂದ್ಯವು ಭಾರಿ ಸವಾಲಿನದ್ದು ಎಂದು ಅಭಿಪ್ರಾಯಪಟ್ಟ ಅವರು ‘ಸತ್ವಪರೀಕ್ಷೆ ಮಾಡಿಕೊಳ್ಳುವಂಥ ಪಂದ್ಯವದು. ಆ ಪಂದ್ಯದಲ್ಲಿ ತಂಡದ ಪ್ರತಿಯೊಬ್ಬ ಆಟಗಾರನೂ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡುವುದು ಅಗತ್ಯ. ಆಗಲೇ ಮುಂದಿನ ಹಾದಿಯು ಸವಾಲಿನದ್ದೆನಿಸುವುದಿಲ್ಲ. ಇಲ್ಲಿ ಪಡೆದ ಜಯದಿಂದ ತೃಪ್ತಿಪಟ್ಟರೆ, ಮುಂದಿನ ಕಷ್ಟದ ಹಾದಿಯನ್ನು ಸವೆಸುವುದು ಸಾಕಷ್ಟು ಪ್ರಯಾಸದ ಕೆಲಸ ಆಗುತ್ತದೆ’ ಎಂದು ಅವರು ವಿವರಿಸಿದರು.‘ಚಿಪಾಕ್ ಅಂಗಳದಲ್ಲಿ ನಾವು ಮೊದಲು ಬ್ಯಾಟಿಂಗ್ ಮಾಡುವ ಉತ್ಸಾಹ ಹೊಂದಿದ್ದೆವು. ಟಾಸ್ ನಮ್ಮ ಪರವಾಗಲಿಲ್ಲ. ಆದರೂ ನಿರಾಸೆಯೇನಿಲ್ಲ. ನಮ್ಮ ಬೌಲರ್‌ಗಳು ಪ್ರಭಾವಿ ಎನಿಸಿದರು. ಎದುರಾಳಿ ಕೀನ್ಯಾವನ್ನು 69 ರನ್‌ಗಳಿಗೆ ಕಟ್ಟಿಹಾಕುವಲ್ಲಿಯೂ ಯಶಸ್ವಿಯಾದರು’ ಎಂದು ವೆಟೋರಿ ನುಡಿದರು.ಒತ್ತಡ ಸಹಿಸಿಕೊಳ್ಳಲಿಲ್ಲ: ‘ನಮ್ಮ ಆಟಗಾರರು ಒತ್ತಡವನ್ನು ಸಹಿಸಿಕೊಂಡು ಆಡುವಲ್ಲಿ ವಿಫಲರಾದರು. ಬೇಗ ಎದೆಗುಂದಿಬಿಟ್ಟರು’ ಎಂದು ಕೀನ್ಯಾ ತಂಡದ ನಾಯಕ ಜಿಮ್ಮಿ ಕಮಾಂಡೆ ಅವರು ಭಾನುವಾರದ ಪಂದ್ಯದ ನಂತರ ಸುದ್ದಿಗಾರರಿಗೆ ತಿಳಿಸಿದರು.ದುರ್ಬಲ ತಂಡವೆಂದು ತಮ್ಮನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದ ಈ ತಂಡದ ನಾಯಕ ಮೊದಲ ಪಂದ್ಯದಲ್ಲಿಯೇ ಎಡವಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.