ಗುರುವಾರ , ಮೇ 13, 2021
22 °C

`ಸುಳ್ಳು ಭರವಸೆಯ ಲೈಂಗಿಕ ಸಂಪರ್ಕ: ಅತ್ಯಾಚಾರಕ್ಕೆ ಸಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರ ಎನಿಸಿಕೊಳ್ಳುತ್ತದೆ' ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.`ಮಹಿಳೆಯ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ಸಂಬಂಧ ಹೊಂದುವುದೂ ಅತ್ಯಾಚಾರ ಎನಿಸಿಕೊಳ್ಳುತ್ತದೆ. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಒಪ್ಪಿಸಿದರೂ ಭಾರತೀಯ ದಂಡ ಸಂಹಿತೆ ಪ್ರಕಾರ ಅದನ್ನು ಅತ್ಯಾಚಾರ ಪ್ರಕರಣವೆಂದೇ ಪರಿಗಣಿಸಲಾಗುತ್ತದೆ' ಎಂದು ನ್ಯಾಯಮೂರ್ತಿ ಆರ್.ವಿ.ಈಶ್ವರ್ ಹೇಳಿದ್ದಾರೆ.ಇಂಥ ಪ್ರಕರಣವೊಂದರಲ್ಲಿ ಅಭಿಷೇಕ್ ಜೈನ್ ಎಂಬುವವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.`ಅಭಿಷೇಕ್ ಮದುವೆಗೆ ಮುನ್ನ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಹೊಂದಿದ್ದರು. ಪೊಲೀಸರಿಗೆ ದೂರು ನೀಡಿದ ನಂತರ ನನ್ನನ್ನು ಮದುವೆ ಆದರು' ಎಂದು ಅಭಿಷೇಕ್ ಪತ್ನಿ ದೂರಿದ್ದರು.`2013ರ ಫೆ. 25ರಂದು ಮಹಿಳೆ ಈ ಸಂಬಂಧ ದೂರು ನೀಡಿದ್ದರು. ದೂರನ್ನು ವಾಪಸ್ ಪಡೆಯುವಂತೆ ಪುಸಲಾಯಿಸಲು ಅಭಿಷೇಕ್ ಈ ಮಹಿಳೆಯನ್ನು ಮದುವೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪತ್ನಿ ತನ್ನನ್ನು ಬಿಟ್ಟು ಹೋಗಲಿ ಎಂಬ ಕಾರಣಕ್ಕೆ ಮದುವೆಯಾದ ತಕ್ಷಣವೇ ಅಭಿಷೇಕ್ ಆಕೆಗೆ  ದೈಹಿಕ ಹಿಂಸೆ ನೀಡಲು ಶುರುಮಾಡಿದ್ದಾರೆ. ಆದರೆ ಈ ಸಂಬಂಧ ದೂರು ನೀಡಿದಾಗ ಬೇರೆ ದಾರಿ ಕಾಣದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ' ಎಂದೂ ಕೋರ್ಟ್ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.