ಶನಿವಾರ, ಜನವರಿ 25, 2020
28 °C
ಪಂಚರಂಗಿ

ಸೂಪರ್ ಸ್ಟಾರ್‌ಗಳ ಈದ್ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ  ಬಾರಿಯ ಈದ್ ಸಂದರ್ಭದಲ್ಲಿ ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳ ಸಿನಿಮಾ ಬಿಡುಗಡೆಗಾಗಿ ಚಿತ್ರಮಂದಿರಗಳ ಪರದೆಗಳು ಸಿದ್ಧವಾಗಿವೆ. ಶಾರುಖ್ ಖಾನ್ ಅವರ `ಚೆನ್ನೈ ಎಕ್ಸ್‌ಪ್ರೆಸ್' ಹಾಗೂ ಅಕ್ಷಯ್ ಕುಮಾರ್ ನಟಿಸಿರುವ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ 2' ಸಿನಿಮಾಗಳು ಈಗ ಗಲ್ಲಾಪೆಟ್ಟಿಗೆಯಲ್ಲಿ ಸ್ಪರ್ಧಿಸಲು ಸಜ್ಜಾಗಿವೆ. ಇದು ಇಬ್ಬರ ನಟರ ನಡುವಿನ ಜಿದ್ದಾಜಿದ್ದಿ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.`ಶಾರುಖ್ ವರ್ಸಸ್ ಅಕ್ಷಯ್ ಎಂಬ ಸ್ಪರ್ಧೆಯನ್ನು ನಾನು ಒಪ್ಪುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದೇ ಸಂತಸದ ವಿಷಯ. ಈ ಶುಭ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಉತ್ತಮ ಪ್ರದರ್ಶನ ಕಾಣಲಿದೆ ಎಂಬ ವಿಶ್ವಾಸವಿದೆ. ಮೊಸರಲ್ಲೂ ಕಲ್ಲು ಹುಡುಕುವ ಕೆಲಸ ಬೇಡ' ಎಂದು ಅಕ್ಷಯ್ ನುಡಿದಿದ್ದಾರೆ.2009ರ ಈದ್ ಸಂದರ್ಭದಲ್ಲಿ ಬಿಡುಗಡೆಗೊಂಡ ಸಲ್ಮಾನ್ ಖಾನ್ ನಟನೆಯ `ವಾಂಟೆಡ್' ಚಿತ್ರ ಗೆಲ್ಲಾಪೆಟ್ಟಿಗೆಯಲ್ಲಿ ಗೆದ್ದಿತು. ಇದರ ಯಶಸ್ಸಿನ ಬೆನ್ನುಹತ್ತಿದ ನಿರ್ಮಾಪಕರು ಪ್ರತಿ ವರ್ಷದ ಈದ್ ಸಂದರ್ಭಕ್ಕೆಂದೇ ಕಾದು ಕೂರುವ ಪರಿಪಾಠ ಮುಂದುವರಿದಿದೆ. ಪ್ರತಿ ವರ್ಷದ ಈದ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ ಕೆಲವು ನಟರು ಇದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಸಲ್ಮಾನ್ ಅವರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ.ರೋಹಿತ್ ಶೆಟ್ಟಿ ನಿರ್ದೇಶನದ `ಚೆನ್ನೈ ಎಕ್ಸ್‌ಪ್ರೆಸ್' ಪ್ರೇಮ-ಹಾಸ್ಯ ಬೆರೆತ ಸಿನಿಮಾ ಆಗಿದ್ದು, ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿದ್ದಾರೆ. `ಒನ್ಸ್ ಅಪಾನ್ ಎ ಟೈಮ್...' ಚಿತ್ರ `ಗ್ಯಾಂಗ್‌ಸ್ಟರ್ ಕಾಮಿಡಿ' ಸ್ವರೂಪದ್ದು. ಅಕ್ಷಯ್, ಇಮ್ರಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಈ ಚಿತ್ರದ ಮೊದಲ ಅವತರಣಿಕೆ 2010ರಲ್ಲಿ ಬಿಡುಗಡೆಗೊಂಡಿತ್ತು.ಇದೇ ರೀತಿ ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ಯಶ್ ಚೋಪ್ರಾ ಅವರ `ಜಬ್ ತಕ್ ಹೈ ಜಾನ್', ಅಜಯ್ ದೇವಗನ್ ಅವರ `ಸನ್ ಆಫ್ ಸರ್ದಾರ್' ಚಿತ್ರಗಳು ಬಿಡುಗಡೆಗೊಂಡಿದ್ದವು. ಆ ಸಂದರ್ಭದಲ್ಲಿ ಅಜಯ್ ದೇವಗನ್ ಅವರು ಯಶ್ ರಾಜ್ ಸಿನಿಮಾ ಬಿಡುಗಡೆಯು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿದ್ದರು.ಕರಣ್ ಜೋಹರ್ `ಯೇ ಜವಾನಿ ಹೈ ದಿವಾನಿ' ಚಿತ್ರವನ್ನೂ ಈದ್ ಸಂದರ್ಭದಲ್ಲಿ ತೆರೆಕಾಣಿಸುವ ಯೋಚನೆ ಮಾಡಿದ್ದರು. ಆದರೆ ಆಮೇಲೆ ಅವರಾಗಿಯೇ ಆ ಸ್ಪರ್ಧೆಯಿಂದ ಹಿಂದೆ ಸರಿದರು. ಈ ಕುರಿತು ಅಕ್ಷಯ್ ಅವರನ್ನು ಕೇಳಿದರೆ, `ಈ ವಿಷಯದ ಬಗೆಗೆ ಚರ್ಚೆ ಬೇಡ. ನಾವೆಲ್ಲರೂ ಸ್ನೇಹಿತರು. ಒಂದೇ ಕ್ಷೇತ್ರಕ್ಕೆ ಸೇರಿದವರಾದ್ದರಿಂದ ಸ್ಪರ್ಧೆಯ ಮಾತೆಲ್ಲಿ?' ಎಂದು ವಿಷಯವನ್ನು ತಿಳಿಗೊಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)