ಶುಕ್ರವಾರ, ಮೇ 7, 2021
26 °C

ಸೂರ್ಯಂಗೂ ಭೂಮಿಗೂ ಬಂದಾರ ಒಲವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸೂರ್ಯ ಮತ್ತು ಭೂಮಿಗಿಂತ ಮಿಗಿಲಾದ ಅದ್ಭುತ ಪ್ರೇಮಿಗಳಿಲ್ಲ. ಸೂರ್ಯನಿಲ್ಲದೆ ಭೂಮಿ ಇಲ್ಲ. ಭೂಮಿಯನ್ನು ಆತ ಪೋಷಣೆ ಮಾಡುತ್ತಾನೆ. ತನ್ನ ಸುತ್ತ ಸುತ್ತಲು ಸೂರ್ಯನಿಗೂ ಭೂಮಿ ಬೇಕು. ಸೂರ್ಯ ಮತ್ತು ಭೂಮಿ ಅಮರ ಪ್ರೇಮಿಗಳು. ಅಂತಹ ಪ್ರೀತಿಯ ಆಳವನ್ನು ತೆರೆಯ ಮೇಲೆ ನವಿರಾಗಿ ಬಿಂಬಿಸುವ ಯತ್ನವಿದು~ ಹೀಗೆ ಭಾವಲೋಕದಲ್ಲಿ ಮುಳುಗಿದವರಂತೆ ಮಲ್ಲಿಕಾರ್ಜುನ್ ಹೇಳುತ್ತಾ ಹೋದರು.ಕೆಎಎಸ್ ಅಧಿಕಾರಿಯಾಗಿರುವ ಬಿ.ಎಚ್.ಮಲ್ಲಿಕಾರ್ಜುನ್ ಚಿತ್ರ ನಿರ್ಮಾಣ ಮಾಡಬೇಕೆಂಬ ತಮ್ಮ 20 ವರ್ಷದ ಹಿಂದಿನ ಕನಸು ನನಸಾಗುತ್ತಿರುವ ಸಂತಸದಲ್ಲಿದ್ದರು. ಮಲ್ಲಿಕಾರ್ಜುನ್ ವಿದೇಶದಲ್ಲಿರುವ ತಮ್ಮ ಸ್ನೇಹಿತರಾದ ಪ್ರಭು ಎಂ.ಹಂಚಿನಮನೆ ಮತ್ತು ಅರುಣ್ ಎ.ಚಿಕ್ಕಮೇನಹಳ್ಳಿ ಜೊತೆಗೂಡಿ ಹುಟ್ಟುಹಾಕಿರುವ ಸೃಷ್ಠಿ-ದಿ ಕ್ರಿಯೇಷನ್ ಸಂಸ್ಥೆ ಮೂಲಕ `ಈ ಭೂಮಿ ಆ ಭಾನು~ ಎಂಬ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.ಬೆಂಗಳೂರಿನ ಜಯನಗರದ ವಿನಾಯಕ ದೇವಸ್ಥಾನದಲ್ಲಿ ಗೌರಿಹಬ್ಬದ ದಿನ ಚಿತ್ರದ ಮುಹೂರ್ತಕ್ಕೆ ಆಗಮಿಸಿದ ನಟ ಅಂಬರೀಶ್, ಕವಿ ಡಾ.ಸಿದ್ಧಲಿಂಗಯ್ಯ, ನಿರ್ದೇಶಕ ಶಶಾಂಕ್ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಬಳಿಕ ಚಿತ್ರತಂಡ ಪತ್ರಿಕಾ ಮಿತ್ರರೊಂದಿಗೆ ಮಾತಿಗಿಳಿಯಿತು.ಭಾನು ಮತ್ತು ಭೂಮಿಯನ್ನು ಕಲ್ಪನೆಯಲ್ಲಿಟ್ಟುಕೊಂಡು ನವಿರಾದ ಪ್ರೇಮಕಥೆ ಹೆಣೆದಿರುವುದಾಗಿ ಮಲ್ಲಿಕಾರ್ಜುನ್ ವಿವರಿಸಿದರು. ನಾಯಕಿಗಾಗಿ ಸುಮಾರು ಆರು ತಿಂಗಳು ಹುಡುಕಾಡಿದರಂತೆ. 150ಕ್ಕೂ ಅಧಿಕ ನಾಯಕಿಯರ ಚಿತ್ರಗಳನ್ನು ನೋಡಿದರೂ ಯಾರೂ ಇಷ್ಟವಾಗಲಿಲ್ಲ. ಕೊನೆಗೆ ಕೇರಳದ ನಟಿ ಶರಣ್ಯ ಮೋಹನ್ ಕಥೆಗೆ ಸೂಕ್ತ ನಾಯಕಿ ಎಂದು ಅವರನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದರು. ಮಾತು ಮಾತಿಗೂ ಸೂರ್ಯ ಮತ್ತು ಭೂಮಿ ನಡುವಿನ ಪ್ರೇಮದ ಬಗ್ಗೆ ಹೇಳುತ್ತಿದ್ದ ಮಲ್ಲಿಕಾರ್ಜುನ್ ಕಥೆಯ ಎಳೆಯನ್ನು ಬಿಟ್ಟುಕೊಡಲು ಒಪ್ಪಲಿಲ್ಲ.ನಿರ್ದೇಶಕ ಶಶಾಂಕ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಅನುಭವವಿರುವ ವೇಣುಗೋಪಾಲ್ ಕೆ.ಸಿ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನ ಮಾಡಬೇಕೆಂಬ ದೀರ್ಘಕಾಲದ ಕನಸು ಈ ಚಿತ್ರದ ಮೂಲಕ ಸಾಕಾರಗೊಳ್ಳುತ್ತಿದೆ ಎಂದು ಅವರು ಸಂಭ್ರಮಿಸಿದರು. ಕಥೆ ಅದ್ಭುತವಾಗಿದೆ. ಆದರೆ ಅದನ್ನು ದೃಶ್ಯರೂಪಕ್ಕಿಳಿಸುವುದು ಸವಾಲಿನ ಕೆಲಸ ಎಂದು ವೇಣುಗೋಪಾಲ್ ಹೇಳಿದರು.ಕೆಲವು ಚಿತ್ರಗಳಲ್ಲಿ ನಟಿಸಿರುವ ನಟ ಆರ್ಯ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರ ನೋಡಿದ ಬಳಿಕ ಎಲ್ಲರೂ ತಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವ ಮಟ್ಟಿಗೆ ಅವರಲ್ಲಿ ಮನಪರಿವರ್ತನೆಯಾಗುತ್ತದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.ಮಲಯಾಳಂ ನಟಿ ಶರಣ್ಯ ಮೋಹನ್‌ಗೆ ಕನ್ನಡದಲ್ಲಿ ಇದು ನಾಯಕಿಯಾಗಿ ಮೊದಲ ಚಿತ್ರ. ರವಿಚಂದ್ರನ್ ಜೊತೆ `ಪರಮಶಿವ~ ಚಿತ್ರಕ್ಕಾಗಿ ಕನ್ನಡದಲ್ಲಿ ಈಕೆ ಬಣ್ಣಹಚ್ಚಿದ್ದರು.ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವಾಕೆ. ಮೂಲತಃ ನೃತ್ಯಪಟುವಾಗಿರುವ ಶರಣ್ಯ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.`ವೆನ್ನಿಲಾ ಕಬಡ್ಡಿ ಕುಳು~ (ತಮಿಳು), `ಯಾರಡಿ ನೀ ಮೋಹಿನಿ~ (ಮಲಯಾಳಂ) ನಂತಹ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತಮ್ಮದು ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶವಿರುವ ಪಾತ್ರ ಎಂದು ಶರಣ್ಯ ಹೇಳಿಕೊಂಡರು.ಹಿರಿಯ ಛಾಯಾಗ್ರಾಹಕ ಪಿ.ರಾಜನ್ ಕ್ಯಾಮೆರಾ ಹಿಡಿಯಲಿದ್ದಾರೆ. ಎಸ್.ಪ್ರೇಮ್‌ಕುಮಾರ್ ಅವರ ಸಂಗೀತಕ್ಕೆ ಡಾ.ಸಿದ್ದಲಿಂಗಯ್ಯ, ಶಶಾಂಕ್ ಮತ್ತು ಮಲ್ಲಿಕಾರ್ಜುನ್ ಸಾಹಿತ್ಯ ರಚಿಸಲಿದ್ದಾರೆ.ಅಕ್ಟೋಬರ್ ಎರಡನೇ ವಾರದಿಂದ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಕೇರಳಗಳಲ್ಲಿ ಸುಮಾರು 45 ದಿನ ಚಿತ್ರೀಕರಣ ನಡೆಸಲು ಚಿತ್ರತಂಡ ಉದ್ದೇಶಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.