ಭಾನುವಾರ, ಏಪ್ರಿಲ್ 11, 2021
28 °C

ಸೆಂಚುರಿ ಪುಳಕದಲ್ಲಿ ರ‌್ಯಾಂಬೊ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಚುರಿ ಹೊಡೆಯಲಿಕ್ಕೆ ಹೊರಡುವ ಮುನ್ನ ಓರ್ವ ಚಾಂಪಿಯನ್

ಬ್ಯಾಟ್ಸ್‌ಮನ್ ಸುಂದರಿಯರೊಂದಿಗೆ ತಾಲೀಮು ನಡೆಸಿದರೆ ಹೇಗಿರುತ್ತದೆ? ಇಂಥದೊಂದು ಕಲ್ಪನೆಗೆ ಇಂಬು ಕೊಡುವಂತಿದೆ ಶರಣ್ ನಟನೆಯ `ರ‌್ಯಾಂಬೊ~ ಸಿನಿಮಾದ ಚಿತ್ರಗಳು.



`ರ‌್ಯಾಂಬೊ~- ಶರಣ್ ನಾಯಕರಾಗಿ ನಟಿಸುತ್ತಿರುವ ಚಿತ್ರ. ಅಷ್ಟು ಹೇಳಿದರೆ ಸಿನಿಮಾದ ಕುರಿತು ಏನನ್ನೂ ಹೇಳಿದಂತಾಗುವುದಿಲ್ಲ. ಅದು ಶರಣ್ ನಟನೆಯ ನೂರನೇ ಸಿನಿಮಾ. ಅವರು ನಿರ್ಮಿಸುತ್ತಿರುವ ಚಿತ್ರ ಕೂಡ ಹೌದು.

 

ಈ ಮೊದಲು `ಸುಂದರಿ ಗಂಡ ಸದಾನಂದ~ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿದ್ದ ಅವರು, ಇದೀಗ `ರ‌್ಯಾಂಬೊ~ದಲ್ಲಿ ನಾಯಕ. ಶೀರ್ಷಿಕೆ ರಜನೀಕಾಂತರ `ರೋಬೊ~ವನ್ನು ನೆನಪಿಸುತ್ತದಲ್ಲ; ಪೋಸ್ಟರ್‌ಗಳಲ್ಲಿನ ಶರಣ್‌ರನ್ನು ಗಮನಿಸಿದರೆ ಸ್ಟೈಲ್‌ನಲ್ಲಿ ರಜನಿ ಅವರನ್ನೇ ಅನುಕರಿಸಿದಂತಿದೆ.



ಇರಲಿ, ಶರಣ್ ಸಾಗಿಬಂದ ಹಾದಿಯನ್ನೊಮ್ಮೆ ನೋಡೋಣ. ಕಳೆದ ಹತ್ತು ವರ್ಷಗಳಲ್ಲಿ ನೂರು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಅವರದ್ದು. ಮೊದಲು ಬಣ್ಣ ಹಚ್ಚಿದ ಚಿತ್ರ ಕರ್ಪೂರದ ಗೊಂಬೆ (2000). `ಸಾಗಿಬಂದ ಹಾದಿಯನ್ನು ಹಿಂತಿರುಗಿ ನೋಡುವಷ್ಟು ಧೈರ್ಯ ನನಗಿಲ್ಲ.



ತಿರುಗಿ ನೋಡುವಷ್ಟು ಹಾದಿ ಸವೆಸಿದ್ದೇನೆಂದು ನನಗನ್ನಿಸುತ್ತಲೂ ಇಲ್ಲ~ ಎನ್ನುತ್ತಾರೆ ಶರಣ್. ಅವರ ಮಾತಿನಲ್ಲಿ ಹೆಮ್ಮೆಯೂ ಇದೆ, ಅಳುಕೂ ಇದೆ.ಹಿಂದಣ ದಾರಿಯ ಬಗ್ಗೆ ಶರಣ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ಆದರೆ, ತಮ್ಮ ಈವರೆಗಿನ ಸಿನಿಮಾ ಜರ್ನಿ ಸುಲಭದ್ದೇನೂ ಆಗಿರಲಿಲ್ಲ ಎನ್ನುವ ಮಾತನ್ನೂ ಅವರು ಆಡುತ್ತಾರೆ.



ಬೆಳ್ಳಿತೆರೆಯಲ್ಲಿ ನಸೀಬು ಖೊಟ್ಟಿ ಅನ್ನಿಸಿದಾಗ ಅವರು ಕಿರುತೆರೆಯಲ್ಲಿ ತೊಡಗಿಕೊಂಡಿದ್ದೂ ಇದೆ. ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ `ಪ್ರೇಮ ಪ್ರೇಮ ಪ್ರೇಮ~ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ ಅವರು, ಈಗ ನೂರರ ಹೊಸ್ತಿಲಲ್ಲಿ ನಿಂತಿದ್ದಾರೆ.



ನೂರೆನ್ನುವುದು ಸಂಭ್ರಮ ಸರಿ. ಆದರೆ ಅದಕ್ಕೆ ಮೊದಲ ಮೆಟ್ಟಿಲುಗಳಲ್ಲಿ ಒಂದೊಂದರದೂ ಒಂದು ಕಥೆ. ಪುಳಕ, ಸಂಕಟ, ತಳಮಳ, ಸಂಭ್ರಮ- ಎಲ್ಲವೂ ಆ ಹಾದಿಯಲ್ಲಿತ್ತು. `ನನ್ನ ಪಾಲಿಗೆ ಎಲ್ಲವೂ ಹೊಸತೇ. ಪ್ರತಿ ಅವಕಾಶ ದೊರೆತಾಗಲೂ ಬೆರಗಿನೊಂದಿಗೆ ಖುಷಿಯೂ ಆಗುತ್ತದೆ~ ಎನ್ನುತ್ತಾರೆ ಶರಣ್.



ಶರಣ್ ಹಾಸ್ಯ ಕಲಾವಿದರಾಗಿ ಪ್ರಸಿದ್ಧರು. `ಸುಂದರಿ ಗಂಡ ಸದಾನಂದ~, `ಮಿ.ಪೇಂಟರ್~, `ಎರಡನೇ ಮದುವೆ~ ರೀತಿಯ ಚಿತ್ರಗಳು ಕಲಾವಿದನಾಗಿ ಶರಣ್‌ಗೆ ಖುಷಿ ಕೊಟ್ಟಿವೆ. `ಮಿ.ಪೇಂಟರ್~ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನು ಆಡುವ ಪಾತ್ರ ಅವರಿಗೆ ಸಿಕ್ಕಾಪಟ್ಟೆ ಸಮಾಧಾನ ತಂದುಕೊಟ್ಟಿದೆ.



ನೂರು ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ನನ್ನ ಗುರಿಯಾಗಿರಲಿಲ್ಲ. ಅಂಥ ಯಾವ ನಿರೀಕ್ಷೆಯೂ ನನ್ನದಾಗಿರಲಿಲ್ಲ. ಈಗಲೂ ಮುಂದೇನು ಎನ್ನುವುದು ತಿಳಿದಿಲ್ಲ ಎನ್ನುತ್ತಾರೆ ಶರಣ್. `ರ‌್ಯಾಂಬೊ~ ನಂತರ ನಾಯಕ ಪಾತ್ರಗಳಲ್ಲಷ್ಟೇ ಮುಂದುವರಿಯುವಿರಾ ಎನ್ನುವ ಪ್ರಶ್ನೆಗೂ ಅವರದ್ದು- `ಮುಂದಿನ ಚಿತ್ರದ ಬಗ್ಗೆ ನಾನಿನ್ನೂ ಯೋಚಿಸಿಲ್ಲ~ ಎನ್ನುವ ಜಾಣ್ಮೆಯ ಉತ್ತರ.



`ರ‌್ಯಾಂಬೊ~ ಸದ್ಯದಲ್ಲೇ ತೆರೆಕಾಣಲಿದೆ. ಚಿತ್ರ ಗೆದ್ದರೆ ನಾಯಕ ನಟನಾಗಿ ಶರಣ್ ಇನ್ನಷ್ಟು ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳಬಹುದು. ಈಗಾಗಲೇ ಕೋಮಲ್ ನಾಯಕರಾಗಿ ತಮ್ಮದೇ ವರ್ಚಸ್ಸು ಹಾಗೂ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಆ ಸಾಲಿಗೆ ಶರಣ್ ಕೂಡ ಸೇರುವರೇ ಎನ್ನುವುದಕ್ಕೆ `ರ‌್ಯಾಂಬೊ~ ಫಲಿತಾಂಶ ಉತ್ತರವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.