ಬುಧವಾರ, ಮೇ 18, 2022
25 °C

ಸೆಣಬು ಚೀಲ ಕಾರ್ಖಾನೆಗೆ ಬೆಂಕಿ: ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ಮಧ್ಯದಲ್ಲಿರುವ ಸೆಣಬಿನ ಚೀಲಗಳನ್ನು ತಯಾರಿಸುವ ಕಾರ್ಖಾನೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ನಡೆದಿದೆ.ತಣ್ಣಿರುಹಳ್ಳದ ಗುಹೆಕಲ್ಲಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ‘ಮಂಜುನಾಥ್ ಎಂಟರ್‌ಪ್ರೈಸಸ್’ ಕಾರ್ಖಾನೆಯಲ್ಲಿ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು.ಈ ಸಂದರ್ಭದಲ್ಲಿ ಕಾರ್ಖಾನೆಯೊಳಗೆ ಸುಮಾರು 35 ಜನರು ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರು ಹೊರಗೆ ಓಡಿ ಪಾರಾಗಿ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಬೆಂಕಿ ಸಾಕಷ್ಟು ಪ್ರದೇಶವನ್ನು ಆವರಿಸಿಕೊಂಡಿತ್ತು.  ಸುಮಾರು ಎರಡು ಗಂಟೆ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು. ಸುಮಾರು ಎಂಟು ಟ್ಯಾಂಕ್ ನೀರು ಸುರಿಯಲಾಗಿದೆ. ಬೆಂಕಿ ಪೂರ್ತಿ ಆರಿಸುವಷ್ಟರಲ್ಲಿ ಸಂಜೆ 6 ಗಂಟೆಯಾಗಿತ್ತು.ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಿಯಂತ್ರಿಸುತ್ತಿದ್ದರೆ, ಕಾರ್ಖಾನೆಯ ನೌಕರರು, ಮಾಲೀಕ ಹರಿಶ್ಚಂದ್ರ (ರಘು) ಅವರ ಪತ್ನಿ ಪ್ರತಿಭಾ ಮುಂತಾದವರು ಹೊರಗೆ ಕಣ್ಣೀರಿಡುತ್ತಿದ್ದರು. ಬಿ.ಎಂ. ರಸ್ತೆಯಲ್ಲಿ ಸುಮಾರು ಅರ್ಧಗಂಟೆ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು.‘ಘಟನೆಯಲ್ಲಿ ಸುಮಾರು 1.5ಕೋಟಿ ರೂಪಾಯಿ ನಷ್ಟ ಉಂಟಾಗಿದೆ’ ಎಂದು ಕಾರ್ಖಾನೆ ಮಾಲೀಕ ಹರಿಶ್ಚಂದ್ರ ನುಡಿದಿದ್ದಾರೆ.ಕಾರ್ಖಾನೆಯ ಅಕ್ಕಪಕ್ಕದಲ್ಲಿ ಅನೇಕ ಮನೆಗಳಿವೆ. ಸಮೀಪದಲ್ಲೇ ಇದೇ ಸಂಸ್ಥೆಯ ಗೋದಾಮು ನಿರ್ಮಾಣವಾಗುತ್ತಿದ್ದು ಅದರ ಅಕ್ಕಪಕ್ಕದಲ್ಲೂ ಮನೆ, ಶಾಲೆಗಳಿವೆ. ‘ಜನವಸತಿ ಪ್ರದೇಶದಲ್ಲಿ ಉದ್ದಿಮೆಗಳಿಗೆ ಅವಕಾಶ ನೀಡಬಾರದು. ಕೈಗಾರಿಕಾ ಪ್ರದೇಶದಲ್ಲಿ ಇರಬೇಕಾದ ಕಾರ್ಖಾನೆಗಳನ್ನು ನಗರದ ಮಧ್ಯದಲ್ಲಿ ತಂದುಹಾಕಿದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.