ಶುಕ್ರವಾರ, ಏಪ್ರಿಲ್ 16, 2021
31 °C

ಸೆಸ್ಕ್ ಕಚೇರಿಗೆ ರೈತರಿಂದ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ ಹೊಮ್ಮ ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸು ವಂತೆ ಆಗ್ರಹಿಸಿ ನಗರದ ಸೆಸ್ಕ್ ವಿಭಾಗೀಯ ಕಚೇರಿಗೆ ಮಂಗಳವಾರ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ಮುತ್ತಿಗೆ ಹಾಕಲಾಯಿತು.ಸಂಘದ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಸೆಸ್ಕ್ ಕಚೇರಿ ಬಳಿಗೆ ತೆರಳಿ ಘೋಷಣೆ ಕೂಗಿದರು. ಗ್ರಾಮದ ಕೆಬ್ಬೆಗದ್ದೆ ವಿದ್ಯುತ್ ಪರಿವರ್ತಕ ಓವರ್‌ಲೋಡ್ ಸಮಸ್ಯೆ ಎದುರಿಸುತ್ತಿದೆ. ಇದರ ವ್ಯಾಪ್ತಿ 30ರಿಂದ 40 ಕೃಷಿ ಪಂಪ್‌ಸೆಟ್‌ಗಳಿವೆ. ಪದೇ ಪದೇ ಪರಿವರ್ತಕ ಸುಟ್ಟುಹೋಗುತ್ತಿದೆ. ಗ್ರಾಮದಲ್ಲಿ ಇನ್ನುಳಿದ ಪರಿವರ್ತಕಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ದೂರಿದರು.ಜತೆಗೆ, ಪ್ರೈಮರಿ ಮತ್ತು ಸೆಕೆಂಡರಿ ಲೈನ್‌ಗಳು ಜೋತು ಬಿದ್ದಿವೆ. ಇದರಿಂದ ಕಬ್ಬಿನ ಬೆಳೆಗೆ ಅಪಾಯ ಎದುರಾಗಿದೆ. ಬೆಳೆ ಬೆಂಕಿಗೆ ಆಹುತಿ ಯಾಗುವ ಸಂಭವ ಹೆಚ್ಚು. ಈ ಬಗ್ಗೆ ಸೆಸ್ಕ್‌ಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ವಿದ್ಯುತ್ ಪೂರೈಕೆ ತಂತಿ ಮತ್ತು ಪರಿವರ್ತಕ ದಲ್ಲಿ ತೊಂದರೆಯಾಗುವುದು ಸಾಮಾನ್ಯ. ಈ ಕುರಿತು ದೂರವಾಣಿ ಮೂಲಕ ಲೈನ್‌ಮನ್ ಗಳನ್ನು ಸಂಪರ್ಕಿಸಿದರೂ ದುರಸ್ತಿಪಡಿಸುವುದಿಲ್ಲ. ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಣ ನೀಡುವಂತೆ ರೈತರನ್ನು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಕರ ನಿರಾಕರಣೆ ಚಳವಳಿ ಮಾಡುತ್ತಿದ್ದಾರೆ. ಆದರೆ, ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಗುಳೆ ಹೋಗುವ ಸ್ಥಿತಿ ಉಂಟಾಗಿದೆ. ಕೂಡಲೇ, ಹೊಮ್ಮ ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಸೆಸ್ಕ್‌ನ ಕಾರ್ಯ ನಿರ್ವಾಹಕ ಎಂಜಿನಿಯರ್ ಉಮೇಶ್ ಮಾತನಾಡಿ, ಹೊಮ್ಮದಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಲು 12 ಲಕ್ಷ ರೂ ಮೊತ್ತದ ಅಂದಾಜುಪಟ್ಟಿ ಸಿದ್ಧಪಡಿಸಲಾ ಗಿದೆ. ಇನ್ನೂ ವಿದ್ಯುತ್ ಕಂಬಗಳು ಬಂದಿಲ್ಲ. ಜತೆಗೆ, ವಿದ್ಯುತ್ ಗುತ್ತಿಗೆದಾರರ ಮೂಲಕವೇ ಕೆಲಸ ಮಾಡಿಸಬೇಕಿದೆ. ಆದರೆ, ಒಂದು ತಿಂಗಳಿ ನಿಂದ ಕಾರ್ಮಿಕರ ಸಮಸ್ಯೆ ಎದುರಾಗಿದೆ ಎಂದರು.ಸೌಲಭ್ಯ ಕಲ್ಪಿಸಲು ತಾರತಮ್ಯ ಮಾಡುವುದಿಲ್ಲ. ಕಂಬಗಳು ಸರಬರಾಜಾದ ನಂತರ ಹೆಚ್ಚುವರಿ ವಿದ್ಯುತ್ ಪರಿರ್ವತಕ ಸೇರಿದಂತೆ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು, ಹೊನ್ನೂರು ಪ್ರಕಾಶ್, ಹೆಬ್ಬಸೂರು ಬಸವಣ್ಣ, ಸಿದ್ದರಾಜು, ಟಿ. ನಂಜುಂಡನಾಯ್ಕ, ರವಿಶಂಕರ್, ರಮೇಶ್, ಕಾಂತರಾಜು, ಕೆ. ನಾಗರಾಜನಾಯಕ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.