ಶುಕ್ರವಾರ, ಏಪ್ರಿಲ್ 16, 2021
21 °C

ಸೇತುವೆ ಬಳಿ ಅಪಘಾತ: ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ಸಿಟಿ ಮತ್ತು ಶಿವಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ನೈಸ್ ರಸ್ತೆಯ ಬೇಗೂರು ಸೇತುವೆ ಬಳಿ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ವಾಸು ಪೂಜಾರಿ (32) ಎಂಬುವರು ಮೃತಪಟ್ಟಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ವಾಸು ಅವರು ನಗರದ ಮೈಸೂರು ರಸ್ತೆಯ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಅಡುಗೆ ಭಟ್ಟರಾಗಿದ್ದ ಅವರು, ಎಲೆಕ್ಟ್ರಾನಿಕ್‌ಸಿಟಿಯಿಂದ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಅವರ ಮೇಲೆ ಅದೇ ವಾಹನ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಂತರ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಇದರಿಂದಾಗಿ ವಾಹನದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಕ್ವೀನ್ಸ್ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ಶೇಖರ್ (49) ಎಂಬುವರು ಸಾವನ್ನಪ್ಪಿದ್ದಾರೆ.ಕ್ವೀನ್ಸ್ ರಸ್ತೆ ಸಮೀಪದ ರಾಜೀವ್‌ಗಾಂಧಿ ಕಾಲೊನಿ ನಿವಾಸಿಯಾದ ಅವರು ಬಿಬಿಎಂಪಿ ಗುತ್ತಿಗೆದಾರರೊಬ್ಬರ ಬಳಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಅವರು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಶೇಖರ್ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಿವಾಜಿನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್ ಸವಾರನನ್ನು ಬಂಧಿಸಿದ್ದಾರೆ.

ಆತ್ಮಹತ್ಯೆಪೀಣ್ಯ ಬಳಿಯ ಮಂಜುನಾಥನಗರದಲ್ಲಿ ಭಾನುವಾರ ರಾತ್ರಿ ಜಬೀವುಲ್ಲಾ ರೆಹಮಾನ್ (26) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಂಠೀರವ ಸ್ಟುಡಿಯೊ ಬಳಿಯ ಪರಿಮಳಾನಗರ ನಿವಾಸಿ ಫಜಲಲ್ ರೆಹಮಾನ್ ಎಂಬುವರ ಮಗನಾದ ಜಬೀವುಲ್ಲಾ, ಎಲೆಕ್ಟ್ರಾನಿಕ್‌ಸಿಟಿಯಲ್ಲಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಹಿಂದೂ ಯುವತಿಯೊಬ್ಬಳನ್ನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಯುವತಿಯ ಜತೆ ಮಂಜುನಾಥನಗರದಲ್ಲಿನ ಹನುಮಂತರಾಯಪ್ಪ ಎಂಬ ಸ್ನೇಹಿತನ ಮನೆಗೆ ಬಂದಿದ್ದ ಅವರು, ಅಲ್ಲಿಯೇ ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲಿ ಹನುಮಂತರಾಯಪ್ಪ ಅವರು ಮನೆಯಲ್ಲಿ ಇರಲಿಲ್ಲ ಮತ್ತು ಜಬೀವುಲ್ಲಾ ಅವರ ಪ್ರೇಯಸಿ ನಿದ್ರೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜಬೀವುಲ್ಲಾ ಹಾಗೂ ಅವರ ಪ್ರೇಯಸಿಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಈ ಕಾರಣದಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೀಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.ಬಂಧನ

ಟ್ಯಾಂಕರ್‌ಗಳಲ್ಲಿ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಹೊಸಕೋಟೆ ತಾಲ್ಲೂಕಿನ ವೆಂಕಟೇಶ್ ಎಂಬಾತನನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಎರಡು ಟ್ಯಾಂಕರ್ ಹಾಗೂ ಡೀಸೆಲ್ ಸೇರಿದಂತೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಡುಗೋಡಿಯ ಶ್ರೀನಿವಾಸರೆಡ್ಡಿ ಎಂಬಾತ ಆರೋಪಿ ವೆಂಕಟೇಶ್ ಮತ್ತು ಶಬರೀಶ ಎಂಬುವರ ಜತೆ ಸೇರಿಕೊಂಡು ಟ್ಯಾಂಕರ್‌ಗಳಲ್ಲಿ ಡೀಸೆಲ್ ಕಳವು ಮಾಡಿಸುತ್ತಿದ್ದ. ವೆಂಕಟೇಶ್, ಟ್ಯಾಂಕರ್ ಚಾಲಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು, ಹೊಸಕೋಟೆ ತಾಲ್ಲೂಕಿನ ದೇವನಗುಂದಿ ಗ್ರಾಮದ ಬಳಿ ಇರುವ ಭಾರತೀಯ ತೈಲ ನಿಗಮದ (ಐಒಸಿ) ಘಟಕದಿಂದ ಹೊಸೂರಿಗೆ ಡೀಸೆಲ್ ಸಾಗಿಸುವ ಟ್ಯಾಂಕರ್‌ಗಳ ಲಾರಿ ಚಾಲಕರನ್ನು ಶಾಮೀಲು ಮಾಡಿಕೊಂಡು ಈ ದಂಧೆ ನಡೆಸುತ್ತಿದ್ದರು. ಟ್ಯಾಂಕರ್ ಚಾಲಕರಿಗೆ ಕಮಿಷನ್ ಕೊಟ್ಟು ಡೀಸೆಲ್ ಕಳವು ಮಾಡುತ್ತಿದ್ದರು. ಆರೋಪಿಗಳಾದ ಶ್ರೀನಿವಾಸರೆಡ್ಡಿ ಮತ್ತು ಶಬರೀಶ ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ 12,000 ಲೀಟರ್ ಡೀಸೆಲ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಟ್ಯಾಂಕರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಸೈಯದ್ ಇಸಾಕ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.