ಶನಿವಾರ, ಮಾರ್ಚ್ 6, 2021
18 °C

ಸೇತುವೆ ಮೇಲೆ ನೀರು: ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇತುವೆ ಮೇಲೆ ನೀರು: ಸಂಚಾರ ಸ್ಥಗಿತ

ಶಹಾಪುರ: ಗುಲ್ಬರ್ಗ-ರಾಯಚೂರು ಜಿಲ್ಲೆಯ ರಾಜ್ಯ ಹೆದ್ದಾರಿಯ ಕೊಂಡಿಯಾಗಿರುವ ತಾಲ್ಲೂಕಿನ ಕೊಳ್ಳೂರ(ಎಂ)-ದೇವದುರ್ಗ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಕೃಷ್ಣಾ ನದಿಗೆ ನಿರ್ಮಿಸಿರುವ ಸೇತುವೆ ಮೇಲೆ ನೀರು ಹರಿದು ಬರುತ್ತಿದ್ದು ಶುಕ್ರವಾರ ಬೆಳಿಗ್ಗೆ 11ಗಂಟೆಯಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಕೆ.ಎಲ್.ಭಜಂತ್ರಿ ತಿಳಿಸಿದ್ದಾರೆ.ನಾರಾಯಣಪುರ ಜಲಾಶಯದಿಂದ ಗುರುವಾರ ರಾತ್ರಿ 2.50ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟಿದ್ದರಿಂದ  ಪ್ರವಾಹ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಸಂಚರಿಸುವ ಭಾರಿ ವಾಹನಗಳನ್ನು ನಿಷೇಧಿಸಲಾಗಿದೆ. ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ಯಾವುದೇ ತೊಂದರೆಯಿಲ್ಲ. ನದಿಗೆ ಹೊಂದಿಕೊಂಡ ಜಮೀನುಗಳಿಗೆ ನೀರು ನುಗ್ಗಿವೆ. ಬೆಳೆ ಹಾನಿ ಉಂಟಾಗಿದೆ ಎಂದು ತಹಶೀಲ್ದಾರ್ `ಪ್ರಜಾವಾಣಿ'ಗೆ ವಿವರಿಸಿದ್ದಾರೆ.ನಾರಾಯಣಪುರ ಜಲಾಶಯದ ಎಂಜಿನಿಯರ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಹೆಚ್ಚುವರಿ ನೀರು ಬಿಡುಗಡೆಗೊಳಿಸುವುದಿದ್ದರೆ ಮುನ್ಸೂಚನೆ ನೀಡಬೇಕೆಂದು ಕೇಳಿಕೊಳ್ಳಲಾಗಿದೆ. ಈಗಾಗಲೆ ಪ್ರವಾಹ ಇಳಿಮುಖವಾಗಿದ್ದರಿಂದ ಶುಕ್ರವಾರ ನಾಲ್ಕು ಗಂಟೆಯಿಂದ (ಜು.26) 2.30ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.ತೊಂದರೆ: ತಾಲ್ಲೂಕಿನ ಕೊಳ್ಳೂರ(ಎಂ)-ದೇವದುರ್ಗ ರಾಜ್ಯ ಹೆದ್ದಾರಿಯ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ  ಗುಲ್ಬರ್ಗ-ರಾಯಚೂರಿಗೆ ತೆರಳ ಬೇಕಾದರೆ ಸುರಪುರ ತಾಲ್ಲೂಕಿನ ಮಾರ್ಗವಾಗಿ ತಿಂಥಿಣಿ ಬ್ರೀಜ್ ಮೂಲಕ  ಸಾಗಬೇಕು. ಇದರಿಂದ 45 ಕಿ.ಮೀ. ದೂರ ಕ್ರಮಿಸುವಂತಾಗಿದೆ ಎಂದು ಶಹಾಪುರ ರಸ್ತೆ ಸಾರಿಗೆ ಅಧಿಕಾರಿ ಪಿ.ಎಸ್. ವಸ್ತ್ರದ ತಿಳಿಸಿದ್ದಾರೆ.ಸೇತುವೆ ಮೇಲೆ ಭಾರಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದು ಹತ್ತಿಗುಡೂರ ಕ್ರಾಸ್, ಕೊಳ್ಳೂರ ಗ್ರಾಮದ ಬಳಿ ತಪಾಸಣಾ ತಂಡವನ್ನು ನಿಯೋಜಿಸಲಾಗಿದೆ. ರಾತ್ರಿ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ  ವಾಹನವನ್ನು ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಅನಾಹುತಕ್ಕೆ ಅವಕಾಶ ನೀಡದಂತೆ ಕಟ್ಟೆಚ್ಚರವಹಿಸಲಾಗಿದೆ ಎಂದು ಶಹಾಪುರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ ಮೂಲಿಮನಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.