ಭಾನುವಾರ, ಮೇ 9, 2021
27 °C

ಸೇನೆಗೆ ಸವಾಲು- ಬಿಕ್ರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಉತ್ತರಾಖಂಡದಲ್ಲಿ ಮತ್ತೆ ಭಾರಿ ಮಳೆಯಾಗುವ ಸಂಭವವಿದೆ ಎಂಬ ಮುನ್ಸೂಚನೆ ಸಿಕ್ಕಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಬಹಳ ಕಡಿಮೆ ಅವಧಿ ಇದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಭೂಸೇನೆ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್ ಶನಿವಾರ ಇಲ್ಲಿ ತಿಳಿಸಿದರು.ಆರಂಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ 500 ಯೋಧರನ್ನು ನಿಯೋಜಿಸಲಾಗಿತ್ತು. ಆದರೆ ಸತ್ತವರ ಮತ್ತು ಗಿರಿಕಂದರಗಳಲ್ಲಿ ಸಿಕ್ಕಿಹಾಕಿಕೊಂಡವರ ಸಂಖ್ಯೆ ದೊಡ್ಡದಿರುವುದರಿಂದ 6 ಸಾವಿರ ಯೋಧರನ್ನು ತಕ್ಷಣ ನಿಯೋಜಿಸಲಾಯಿತು. ನಿರ್ಜನ ಗಿರಿಕಂದರಗಳ ಮಧ್ಯೆ ಯಾತ್ರಾರ್ಥಿಗಳು ಸಿಕ್ಕಿಹಾಕೊಂಡಿರುವ ಸಾಧ್ಯತೆಗಳು ಇರುವುದರಿಂದ ಅಂತಹ ಯಾತ್ರಿಗಳನ್ನು ರಕ್ಷಿಸಲು ಪ್ಯಾರಾಚೂಟ್‌ನಲ್ಲಿ ಯೋಧರು ಪರ್ವತಗಳ ಮೇಲೆ ಇಳಿದು ಶೋಧನಾ ಕಾರ್ಯ ನಡೆಸಿದ್ದಾರೆ ಎಂದರು.ಇಲ್ಲಿನ ವಾಯುದಳ ಅಕಾಡೆಮಿಯಲ್ಲಿ ಸಂಯುಕ್ತ ಪದವಿ ಕವಾಯತು ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ಬಹುತೇಕ ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಸಂತ್ರಸ್ತರನ್ನು ತಲುಪುವುದೇ ದೊಡ್ಡ ಪ್ರಯಾಸದ ಕೆಲಸ, ಆದರೂ ನಮ್ಮ ಯೋಧರು ಜನರ ಜೀವ ರಕ್ಷಿಸಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.ಯೋಧರು ಕ್ಲಿಷ್ಟಕರ ಪ್ರದೇಶಗಲ್ಲಿ ಸಿಲುಕಿ ಹಾಕಿಕೊಂಡವರನ್ನು ರಕ್ಷಿಸಲು ಅಗತ್ಯ ಔಷಧಿ, ಆಹಾರ ಮತ್ತು ಹೊದಿಕೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ವಾಯುದಳ, ಸೇನೆ, ಕೇಂದ್ರ ಗೃಹ ಮತ್ತು ರಕ್ಷಣಾ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ, ಉತ್ತರಾಖಂಡ ಸರ್ಕಾರ ಜಂಟಿಯಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿವೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.