ಸೋಮವಾರ, ಜೂನ್ 14, 2021
21 °C
ಗ್ರಾಮಾಯಣ

ಸೇಬಿನಕಟ್ಟೆ: ಸಮಸ್ಯೆಗಳ ಸರಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ತಾಲ್ಲೂಕಿನ ಅಂಚಿ­ನಲ್ಲಿ­ರುವ ಸೇಬಿನಟ್ಟೆ ಗ್ರಾಮದಲ್ಲಿ ಪ್ರತಿ­ವರ್ಷ ನಡೆಯುವ ಕಾರ­ಹುಣ್ಣಿಮೆ ಹಾಗೂ ಮಣ್ಣೆತ್ತಿನ ಹಬ್ಬ ಅತ್ಯಂತ ವೈಭವವಾಗಿ ನಡೆಯುತ್ತವೆ. ಆ ದಿನ­ಗಳಲ್ಲಿ ಗ್ರಾಮದ ರೈತರು ತಮ್ಮೆಲ್ಲ ದನ­ಕರುಗಳ ಮೈ ತೊಳೆದು, ಎತ್ತುಗಳ ಕೋಡಿಗೆ ಬಣ್ಣ ಹಚ್ಚಿ, ಮೈತುಂಬ ಚಿತ್ತಾರ ಬಿಡಿಸಿ, ತೊಳೆದು ಸಿಂಗರಿಸಿದ ಚಕ್ಕಡಿಯೊಂದಿಗೆ ಸ್ಪರ್ಧೆಯ ತರಹ ಗ್ರಾಮದ ಮುಂದೆ ತರುತ್ತಾರೆ. ರೈತರಿಗೆ ಅದೆಂತಹ ಖುಷಿ, ನೋಡು­ಗರಿಗಂತೂ ಅದು ಹಬ್ಬವೇ ಸರಿ.ಪ್ರತಿಯೊಂದು ಹಬ್ಬಹರಿದಿನಗಳನ್ನು ಆಚರಿಸಿ ಸಾಂಸ್ಕೃತಿಕ ನೆಲೆಗಟ್ಟನ್ನು ಕಟ್ಟಿ­ಕೊಂಡು ಒಗ್ಗಟ್ಟಾಗಿ ಬೆವರು ಹರಿಸಿ ದುಡಿಯುವ ಈ ಗ್ರಾಮಸ್ಥರಿಗೆ ಮೂಲ ಸೌಲಭ್ಯಗಳೇ ಮರಿಚಿಕೆಯಾಗಿರುವುದು ಗ್ರಾಮದ ಬೀದಿ ಬೀದಿಗಳನ್ನು ನೋಡಿ­ದಾಗ ಕಂಡು ಬರುವ ವಾಸ್ತವ ಚಿತ್ರಣ.ಈ ಹಿಂದೆ ಗ್ರಾಮಕ್ಕೆ ಭದ್ರವಾಗಿ, ಕೋಟೆ ಬಾಗಿಲಿನ ರೀತಿಯಲ್ಲಿ ಗತ್ತಿ­ನಿಂದ ಮೆರೆಯುತ್ತಿದ್ದ ಗ್ರಾಮದ ಅಗಸಿ ಬಾಗಿಲು ಇಂದು ಸದಾ ಕೊಚ್ಚೆ ನೀರು ಹರಿಸುವ ಚರಂಡಿಯಂತೆ ಕಾಣುತ್ತಿದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಅಲ್ಲಲ್ಲಿ ನಿಂತ ನೀರು ಮಲೀನ­ಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ಜನ ಎದುರಿ­ಸುತ್ತಿದ್ದಾರೆ.ಕಬ್ಬರ ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ ಬರುವ ಈ ಗ್ರಾಮಕ್ಕೆ ಪಂಚಾ­ಯಿತಿಯಿಂದ ಯಾವೊಂದು ಅನುಕೂ­ಲತೆಗಳು ದೊರಕಿಲ್ಲ ಎಂಬುದು ಗ್ರಾಮ­ಸ್ಥರ ಒಡಲುರಿ. ಗ್ರಾಮದಲ್ಲಿ ಮೂರು ಜನ ಗ್ರಾಮ ಪಂಚಾಯಿತಿ ಸದಸ್ಯ­ರಿದ್ದರೂ ಗ್ರಾಮದ ಅಭಿವೃದ್ಧಿಗೆ ಇವರ ಕಾಣಿಕೆ ಇವರಿಗೂ ಲವಲೇಶವೂ ಲಭಿಸಿಲ್ಲ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಪಂಚಾಯಿತಿ ರಸ್ತೆಗೆ ಮರಂ ಹಾಕಿಸಿ ಕೈ ತೊಳೆದು­ಕೊಂಡ­ರೆಂದರೆ ಮತ್ತೆ ತಿರುಗಿಯೂ ನೋಡು­ವುದಿಲ್ಲ ಎಂದು ಗ್ರಾಮದ ಮುತ್ತು­ರಾಜ ಅಂಗಡಿ, ಶರಣಪ್ಪ, ಶಿವಕು­ಮಾರ ಆಕ್ರೋಶ ವ್ಯಕ್ತಪಡಿಸುತ್ತಾರೆ.ಸುತ್ತಮುತ್ತಲಿನ ವಿವಿಧ ಗ್ರಾಮ­ಗಳಲ್ಲಿ ಸಿಸಿ ರಸ್ತೆ, ರಸ್ತೆಗೆ ಹಾಸುಬಂಡೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರೆ ಅಂತಹ ಅನುಕೂಲತೆ ನಮ್ಮಲ್ಲಿ ಇಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಾರೆ.ಗ್ರಾಮದಲ್ಲಿ ಕುಡಿಯುವ ನೀರಿನ ತೊಟ್ಟೆಯಿದ್ದು ಅದರ ಸುತ್ತ ಸದಾ ಕೊಳಚೆ ತುಂಬಿಕೊಂಡಿರುತ್ತದೆ. ಈವ­ರೆಗೂ ಒಂದು ಬಾರಿಯೂ ಅದನ್ನು ಸ್ವಚ್ಛ ಮಾಡಿಲ್ಲ, ಅಲ್ಲದೆ ಅದರ ಸುತ್ತ ಮಹಿಳೆಯರು ಬಟ್ಟೆ ತೊಳೆಯುತ್ತಾರೆ, ಪಾತ್ರೆ ತೊಳೆಯುತ್ತಾರೆ, ಬಟ್ಟೆ ತೊಳೆಯುವುದಕ್ಕೆ ದೋಭಿ ಘಾಟ್ ನಿರ್ಮಿಸಿ ಎಂದು ಹಲವಾರು ಬಾರಿ ಹಲುಬಿದರೂ ಆ ವ್ಯವಸ್ಥೆ ಈವರೆಗೂ ಕಲ್ಪಸಿಲ್ಲ ಎಂದು ಶಿವಕುಮಾರ, ಕುಮಾರ, ಚಂದ್ರವ್ವ, ಯಂಕಮ್ಮ ದೂರುತ್ತಾರೆ.‘ಗಮನಹರಿಸಿ’

ಮೂಲಸೌಲಭ್ಯಗಳಿಂದ ವಂಚಿತವಾಗಿರುವ ನಮ್ಮ ಗ್ರಾಮಕ್ಕೆ ಗ್ರಂಥಾಲಯ, ಕುಡಿಯುವ ನೀರು, ರಸ್ತೆ ನಿರ್ಮಾಣ ಅವಶ್ಯವಾಗಿದ್ದು, ಅಧಿಕಾರಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ.

- ಮುತ್ತುರಾಜ ಅಂಗಡಿ, ಗ್ರಾಮಸ್ಥ

‘ಕಿವ್ಯಾಗ ಹಾಕ್ಕೊತ್ತಿಲ್ಲ’

ಬಟ್ಟೆ ತೊಳೆಯೋಕೆ ನಮ್ಮೂರಾಗ ವ್ಯವಸ್ಥೆ ಇಲ್ರಿ. ಊರ ಮುಂದ ಹಳ್ಳ ಇಲ್ಲ, ಊರಾಗ ನೀರಿಲ್ಲ ಧೋಬಿ ಘಾಟ್ ಮಾಡ್ರಿ ಅಂತ ಹೇಳಿದ್ರೂ ಯಾರು ಕಿವ್ಯಾಗ ಹಕ್ಕೊತ್ತಿಲ್ಲ.

–ಚಂದ್ರವ್ವ‘ಕೊಳಚೆ ರಸ್ತೆಗಳು’

ಗ್ರಾಮದ ಒಳ ಭಾಗದ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ರಸ್ತೆಗಳೆಲ್ಲ ಚರಂಡಿಯಂತೆ ಕಾಣುತ್ತಿವೆ, ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸಂದರ್ಭ ಬಂದಿದೆ.

–ಶಿವು ಮೇಲಸಕ್ರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.