ಬುಧವಾರ, ಏಪ್ರಿಲ್ 14, 2021
24 °C

ಸೇವಾವಧಿ ಪರಿಗಣಿಸಿ ಪಿಂಚಣಿ : ಭವಿಷ್ಯನಿಧಿ ಕಚೇರಿ ಎದುರು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪಿಂಚಣಿದಾರರು ಭವಿಷ್ಯನಿಧಿ ಕಚೇರಿ ಎದುರು ಧರಣಿ ನಡೆಸಿದರು.ಕಾರ್ಮಿಕ ಪಿಂಚಣಿ ಯೋಜನೆ 1995ರ ಪ್ರಕಾರ 20 ವರ್ಷಗಳ ಪಿಂಚಣಿ ವಂತಿಗೆ ಸಲ್ಲಿಸಿದ ಕಾರ್ಮಿಕರಿಗೆ ಎರಡು ವರ್ಷಗಳ ಸೇವಾವಧಿ ಪರಿಗಣಿಸಿ ಪಿಂಚಣಿ ನಿಗದಿಪಡಿಸಬೇಕು. ಆದರೆ, ಈ ಸೌಲಭ್ಯವನ್ನು ನಿವೃತ್ತ ಕಾರ್ಮಿಕರಿಗೆ ನೀಡಲಾಗುತ್ತಿಲ್ಲ. ಈ ಕುರಿತು ನ್ಯಾಯಾಲಯಗಳಿಂದ ಆದೇಶಗಳು ಇದ್ದರೂ ಪಿಂಚಣಿ ಅಧಿಕಾರಿಗಳು ಸೌಲಭ್ಯ ನೀಡುತ್ತಿಲ್ಲ. ದೇಶದಾದ್ಯಂತ ಐದು ಲಕ್ಷಕ್ಕೂ ಅಧಿಕ ಉದ್ಯಮಗಳ ಸುಮಾರು 5.5 ಕೋಟಿ ಕಾರ್ಮಿಕರನ್ನು ವ್ಯವಸ್ಥಿತವಾಗಿ ವಂಚಿಸ ಲಾಗುತ್ತಿದೆ ಎಂದು  ದೂರಿದರು.ಈ ಹಿಂದಿನ ಕುಟುಂಬ ಪಿಂಚಣಿ ಯೋಜನೆ ಮತ್ತು ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಪಿಂಚಣಿ ಯೋಜನೆ- 1995 ಎರಡೂ ಯೋಜನೆಗಳಲ್ಲಿ ವಂತಿಗೆ ನೀಡಿದ ಕಾರ್ಮಿಕರಿಗೆ ಹಿಂದಿನ ಯೋಜನೆ ಮತ್ತು ಪ್ರಸ್ತುತ ಯೋಜನೆಗಳೆರಡರಲ್ಲೂ ಕನಿಷ್ಠ ಪಿಂಚಣಿಯನ್ನು ಪ್ರತ್ಯೇಕವಾಗಿ ಲೆಕ್ಕಮಾಡಿ ಪಿಂಚಣಿ ನಿಗದಿ ಪಡಿಸಬೇಕು. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಲಯ ತೀರ್ಪು ನೀಡಿದ್ದರೂ ಈ ಸೌಲಭ್ಯ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿ ಕೊಡುವಾಗ ಪ್ರತಿ ವರ್ಷ ತುಟ್ಟಿಭತ್ಯೆ ಸೇರಿಸಿ ಕೊಡುತ್ತಾರೆ. ಆದರೆ ಕಾರ್ಮಿಕರಿಗೆ ಕೊಡುತ್ತಿರುವ ಪಿಂಚಣಿಗೆ ಯಾವುದೇ ರೀತಿಯ ತುಟ್ಟಿ ಭತ್ಯೆ ಸೇರಿಸಲಾಗುತ್ತಿಲ್ಲ. ಹೆಚ್ಚಿನ ಕಾರ್ಮಿಕರು ಮಾಸಿಕ 12 ಮತ್ತು 78 ರೂಪಾಯಿ ಪಡೆಯುತ್ತಿದ್ದರೆ, ಇತ್ತೀಚೆಗೆ 1600 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಈ ಪಿಂಚಣಿ ಹಣದಲ್ಲಿ  ಕಾರ್ಮಿಕ ಮತ್ತು ಅವನ ಪತ್ನಿಯ ಜೀವನ ಸಾಧ್ಯವೇ? ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ 1 ತಿಂಗಳೊಳಗೆ ಪಿಂಚಣಿ ಇತ್ಯರ್ಥ ಮಾಡಬೇಕೆಂಬ ನಿಯಮ ಇದ್ದರೂ ಭವಿಷ್ಯ ನಿಧಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಕೆಲ ಕಾರ್ಮಿಕರು ನಿವೃತ್ತಿಹೊಂದಿ 5 ವರ್ಷ ಕಳೆದರೂ ಪಿಂಚಣಿ ಪಡೆಯದಿರುವ ಉದಾಹಣೆಗಳಿವೆ. ಅಲ್ಲದೆ ಭವಿಷ್ಯನಿಧಿ ಅಧಿಕಾರಿಗಳು ಪಿಂಚಣಿದಾರರೊಡನೆ ಕನಿಷ್ಠ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಆರೋಪಿಸಿದರು.ಇಪಿಎಸ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಮಹಾಜನ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ಬೇಡಿಕೆ ಈಡೇರಿಸಲು ಒತ್ತಾಯಿಸಿ ಆಗಸ್ಟ್ 22ರಂದು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಮರುದಿನ ದೆಹಲಿಯಲ್ಲಿ ಅಖಿಲ ಭಾರತಮಟ್ಟದಲ್ಲಿ ಪಿಂಚಣಿದಾರರ ಸಾಮಾನ್ಯ ಸಭೆ ನಡೆಸಲಾಗಿದೆ ಎಂದರು.ಸಂಘಟನೆಯ ಚಿಕ್ಕಮಗಳೂರು ವಲಯದ ಮುಖಂಡರಾದ ರಾಜು, ನಾಗರಾಜ, ಪುಟ್ಟೇಗೌಡ, ರಾಜೇಗೌಡ, ರಾಮಭದ್ರಯ್ಯ, ದೇವರಾಜಗೌಡ, ಸಣ್ಣೇಗೌಡ, ಹನುಮಂತ, ದೊಡ್ಡಯ್ಯ, ವಿರೂಪಾಕ್ಷ, ಕೃಷ್ಣಮೂರ್ತಿ ಮತ್ತಿತರರು  ಧರಣಿಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.