ಮಂಗಳವಾರ, ಜೂನ್ 22, 2021
27 °C

ಸೇವಾ ಶುಲ್ಕ ಹೆಚ್ಚಳಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ ಪಿ.ಎಂ.ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಬ್ಬಿಣದ ಅದಿರಿನ ಗಣಿಗಾರಿಕೆ ಮೇಲೆ ನಿಷೇಧ ಹೇರಿರುವ ಪರಿಣಾಮವಾಗಿ ತೆರಿಗೆ ಮೂಲದ ರಾಜಸ್ವ ಸಂಗ್ರಹಣೆಯಲ್ಲಿ ಕೊರತೆ ಉದ್ಭವಿಸಿದೆ. ಈ ಕೊರತೆಯನ್ನು ವಿವಿಧ ಸೇವಾ ಶುಲ್ಕಗಳ ಹೆಚ್ಚಳವೂ ಸೇರಿದಂತೆ ತೆರಿಗೆಯೇತರ ಮೂಲಗಳಿಂದ ತುಂಬಲು ಹಣಕಾಸು ಇಲಾಖೆ ಮುಂದಾಗಿದೆ.ಇತ್ತೀಚೆಗೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯೊಂದನ್ನು ರವಾನಿಸಿರುವ ಹಣಕಾಸು ಇಲಾಖೆ, ಸೇವಾ ಶುಲ್ಕಗಳನ್ನು ಹೆಚ್ಚಿಸಲು ಮತ್ತು ತೆರಿಗೆಯೇತರ ಆದಾಯ ಸಂಗ್ರಹಣೆ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಸೂಚಿಸಿದೆ.ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವಂತೆಯೂ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಿಸಿದೆ. ಹಣಕಾಸು ಇಲಾಖೆಯ ಸುತ್ತೋಲೆಯಿಂದಾಗಿ ವಿವಿಧ ಇಲಾಖೆಗಳು ಒದಗಿಸುತ್ತಿರುವ 45 ಸೇವೆಗಳ ಸೇವಾ ಶುಲ್ಕದಲ್ಲಿ ಯಾವುದೇ ಕ್ಷಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಬೋಧನಾ ಶುಲ್ಕ ಹಾಗೂ ಇತರೆ ಶುಲ್ಕಗಳು, ವಿವಿಧ ಕಂದಾಯ ದಾಖಲೆಗಳ ವಿತರಣೆ ಶುಲ್ಕಗಳು, ಮ್ಯುಟೇಷನ್ ಶುಲ್ಕ, ಕೆಪಿಎಸ್‌ಸಿ ಪರೀಕ್ಷಾ ಶುಲ್ಕ, ಸಂಚಾರ ನಿಯಮ ಉಲ್ಲಂಘನೆ ಶುಲ್ಕ, ರಸ್ತೆ ಶುಲ್ಕ ಮತ್ತು ನಗರ ಆರೋಗ್ಯ ಸೇವಾ ಶುಲ್ಕಗಳು ಹೆಚ್ಚಳವಾಗಲಿವೆ.ಅದಿರಿನ ರಾಜಧನ ಬಾಬ್ತು 858 ಕೋಟಿ ರೂಪಾಯಿಯಷ್ಟು ತೆರಿಗೆ ಸಾಮಾನ್ಯವಾಗಿ ಸಂಗ್ರಹವಾಗುತ್ತಿತ್ತು. ಗಣಿಗಾರಿಕೆ ನಿಷೇಧದ ಪರಿಣಾಮವಾಗಿ ರಾಜಧನ ಸಂಗ್ರಹಣೆಯಲ್ಲಿ ರೂ 400 ಕೋಟಿಯಷ್ಟು ಕೊರತೆ ಉದ್ಭವಿಸುವ ಸಂಭವವಿದೆ.ಬಳ್ಳಾರಿಯಲ್ಲಿ ಅದಿರು ಲಾರಿಗಳ ಸಂಚಾರದಲ್ಲಿ ಇಳಿಕೆ ಆಗಿರುವುದರಿಂದ ಡೀಸೆಲ್ ಮಾರಾಟದಲ್ಲಿ ಕಡಿತ ಉಂಟಾಗಿದೆ. ಇದರಿಂದಾಗಿ ಮಾರಾಟ ತೆರಿಗೆಯಲ್ಲೂ ರೂ 200 ಕೋಟಿಯಷ್ಟು ಕೊರತೆ ಆಗಲಿದೆ ಎಂದು ಅಂದಾಜಿಸಲಾಗಿದೆ.2006-07ರಲ್ಲಿ ತೆರಿಗೆಯೇತರ ಆದಾಯದ ಪ್ರಮಾಣ ಶೇಕಡ 13ರಷ್ಟಿತ್ತು. ಆದರೆ 2010-11ರಲ್ಲಿ ಈ ಆದಾಯದ ಪ್ರಮಾಣ ಶೇ 6ಕ್ಕೆ ಕುಸಿದಿದೆ.ಕಡಿಮೆ ಪ್ರಮಾಣದ ಬಾಕಿ ವಸೂಲಿ, ಸಾರ್ವಜನಿಕ ಉದ್ಯಮಗಳ ಕಳಪೆ ನಿರ್ವಹಣೆ, ಸೇವಾ ಶುಲ್ಕಗಳ ಪರಿಷ್ಕರಣೆಯಲ್ಲಿ ವಿಳಂಬ ಮತ್ತಿತರ ಅಂಶಗಳೇ ಈ ಹಿನ್ನಡೆಗೆ ಕಾರಣ ಎಂದು ಅಂದಾಜಿಸಲಾಗಿದೆ. ತೆರಿಗೆಯೇತರ ಆದಾಯ ಸಂಗ್ರಹಣೆಯಲ್ಲಿ ವೃದ್ಧಿ ಆಗದಿರುವುದಕ್ಕೆ ಹಣಕಾಸು ಇಲಾಖೆ ಮೂರು ಪುಟಗಳ ಸುತ್ತೋಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ತೆರಿಗೆಯೇತರ ಆದಾಯದ ಮೂಲಗಳಲ್ಲಿ ಸೇವಾ ಶುಲ್ಕಗಳ ಪಾಲು ಶೇ 9 ಮಾತ್ರ. ಆದರೆ, ಬಾಕಿ ವಸೂಲಿಯಲ್ಲಿನ ವಿಳಂಬ, ಸಾರ್ವಜನಿಕ ಉದ್ಯಮಗಳ ಕಳಪೆ ಪ್ರದರ್ಶನದ ಪರಿಣಾಮವಾಗಿ ಹಣಕಾಸು ಇಲಾಖೆ, ಆದಾಯ ಸಂಗ್ರಹಕ್ಕೆ ಸೇವಾ ಶುಲ್ಕಗಳ ಮೊರೆಹೋಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಅತಿ ಗೋಪ್ಯ: 2012-13ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ ಆದಾಯ ಸಂಗ್ರಹಣೆಗೆ ಬಳಸಿಕೊಳ್ಳಬಹುದಾದ ತೆರಿಗೆ ಮೂಲಗಳ ಕುರಿತು ಪರಿಶೀಲನೆ ನಡೆಸಿ, ತಿಳಿಸುವಂತೆಯೂ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಅಂತಹ ಪ್ರಸ್ತಾವಗಳನ್ನು `ಅತಿ ಗೋಪ್ಯ~ ಎಂಬುದಾಗಿ ಪರಿಗಣಿಸುವ ಭರವಸೆಯನ್ನೂ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.