ಸೈನಾ ನೆಹ್ವಾಲ್ ಕರಾಟೆ ಬಿಟ್ಟು ಬ್ಯಾಡ್ಮಿಂಟನ್ ಆಯ್ಕೆ!

7

ಸೈನಾ ನೆಹ್ವಾಲ್ ಕರಾಟೆ ಬಿಟ್ಟು ಬ್ಯಾಡ್ಮಿಂಟನ್ ಆಯ್ಕೆ!

Published:
Updated:
ಸೈನಾ ನೆಹ್ವಾಲ್ ಕರಾಟೆ ಬಿಟ್ಟು ಬ್ಯಾಡ್ಮಿಂಟನ್ ಆಯ್ಕೆ!

ನವದೆಹಲಿ (ಐಎಎನ್‌ಎಸ್): ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಚುರುಕಿನ ಚಲನೆ ಕಂಡಾಗ ಕರಾಟೆಯ ಕೆಲವು ಭಂಗಿಗಳು ನೆನಪಾಗುವುದು ಸಹಜ. ಬಾಲ್ಯದಲ್ಲಿ ಪಡೆದ ಕರಾಟೆ ತರಬೇತಿ ಅವರು ಏಕಾಗ್ರ ಚಿತ್ತದಿಂದ ಹೋರಾಡುವಂಥ ವಿಶ್ವಾಸ ನೀಡಿದೆ ಎನ್ನುವ ಸತ್ಯ ಈಗ ಗೊತ್ತಾಗಿದೆ.



ಬಹುಶಃ ಸೈನಾ ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಂಡಿರದೇ ಇದ್ದರೆ ಕರಾಟೆ ಪಟು ಆಗಿರುತ್ತಿದ್ದರು! ಹೌದು; ವರ್ಷಗಳ ಹಿಂದೆ ಸದಾ ಕರಾಟೆ ಧ್ಯಾನದಲ್ಲಿಯೇ ಇದ್ದ ಈ ಆಟಗಾರ್ತಿಯು ಬ್ಯಾಡ್ಮಿಂಟನ್ ಕಡೆಗೆ ಚಿತ್ತ ಹರಿಸಿದಾಗ ಅವರ ಕ್ರೀಡಾ ಬದುಕಿಗೆ ಹೊಸ ಆಯಾಮ ಸಿಕ್ಕಿತು.



ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಸ್ವರ್ಣ ಗೆಲ್ಲುವ ಕನಸು ಕಂಡಿರುವ ನೆಹ್ವಾಲ್ ಬಗ್ಗೆ ಕ್ರೀಡಾ ಪ್ರೇಮಿಗಳು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಹೊಂದಿರುವುದೂ ಸಹಜ. ಅಂಥ ಮಾಹಿತಿ ಈಗ ಲಭ್ಯವಾಗಿದೆ. ವಿಶ್ವದ ದೊಡ್ಡ ಕ್ರೀಡಾ ಉತ್ಸವಕ್ಕೆ ಹೊರಡುವುದಕ್ಕೆ ಮುನ್ನ ಅವರ ಹಿಂದಿನ ಬದುಕಿನ ಕೆಲವು ಸತ್ಯಗಳನ್ನು ಪುಸ್ತಕವೊಂದು ತೆರೆದಿಟ್ಟಿದೆ.



 





ಮದುವೆಯ ಯೋಚನೆ ಇಲ್ಲ

ಇಪ್ಪತ್ತೆರಡು ವರ್ಷದ ಸೈನಾ ಮದುವೆಯ ಯೋಚನೆ ಮಾಡಿಲ್ಲ. ಅದಕ್ಕೆ ಇನ್ನೂ ಸಾಕಷ್ಟು ಕಾಲವಿದೆ ಎನ್ನುತ್ತಾರೆ ಅವರ ತಂದೆ-ತಾಯಿ.

`ಸದ್ಯ ಬೇರಾವ ಯೋಚನೆ ಇಲ್ಲ. ಕೇವಲ ಬ್ಯಾಡ್ಮಿಂಟನ್.. .ಬ್ಯಾಡ್ಮಿಂಟನ್... ಬ್ಯಾಡ್ಮಿಂಟನ್...~ ಎನ್ನುತ್ತಾರೆ ನೆಹ್ವಾಲ್.

ಪ್ರತಿಯೊಬ್ಬ ತಂದೆಗೂ ಇಂಥ ಮಗಳು ಇರಬೇಕು. ನನಗಂತೂ ಮಗಳೆಂದರೆ ಹೆಮ್ಮೆ

- ಹರವೀರ್ ಸಿಂಗ್ (ಸೈನಾ ತಂದೆ)

ದಶಕದ ಹಿಂದೆ ತಾವು ಕರಾಟೆ ಪ್ರೇಮಿ ಆಗಿದ್ದಾಗಿ ಹಾಗೂ ಅದನ್ನು ಬಿಟ್ಟಿದ್ದೇ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳೆಯಲು ಕಾರಣವಾಯಿತೆಂದು ಅವರು ಹೇಳಿಕೊಂಡಿದ್ದು `ಸೈನಾ ನೆಹ್ವಾಲ್: ಆ್ಯನ್ ಇನ್‌ಸ್ಪಿರೇಷನಲ್ ಬಯೊಗ್ರಫಿ~ ಎನ್ನುವ ಪುಸ್ತಕದಲ್ಲಿ ದಾಖಲಾಗಿದೆ. ಈ ಪುಸ್ತಕ ಬರೆದಿರುವುದು ಪತ್ರಕರ್ತ ಟಿ.ಎಸ್. ಸುಧೀರ್.



ಕರಾಟೆಯಿಂದ ಬ್ಯಾಡ್ಮಿಂಟನ್ ಕಡೆಗಿನ ನಡೆಯ ಕುರಿತು ಇದರಲ್ಲಿ ವಿವರಿಸಲಾಗಿದೆ. ಹೈದರಾಬಾದ್‌ನಲ್ಲಿ ಕೋಚ್ ಇಂದ್ರಸೇನ ರೆಡ್ಡಿ ಅವರಿಂದ ಆತ್ಮರಕ್ಷಣಾ ಕಲೆ ಕರಾಟೆ ತರಬೇತಿ ಪಡೆಯುತ್ತಿದ್ದರಂತೆ ಸೈನಾ. ಆಗ ತರಬೇತಿದಾರರಿಗೆ ನೀಡುತ್ತಿದ್ದ ಶುಲ್ಕ ತಿಂಗಳಿಗೆ 100 ರೂಪಾಯಿ. ಕೆಲವು ಸಮಯ ಉತ್ಸಾಹದಿಂದಲೇ ಕರಾಟೆ ಕಲಿತಿದ್ದ ಅವರು ಬ್ಯಾಡ್ಮಿಂಟನ್ ಕಡೆಗೆ ಗಮನ ಕೊಡುವುದಕ್ಕೆ ಘಟನೆಯೊಂದು ಕಾರಣವಾಗಿತ್ತು.



`1998ರ ಡಿಸೆಂಬರ್ ತಿಂಗಳಿನಲ್ಲಿ ನನ್ನ ಕರಾಟೆ ತರಬೇತಿ ಅರ್ಧಕ್ಕೆ ನಿಂತು ಹೋಯಿತು. ಅದಕ್ಕೆ ಕಾರಣವೂ ಇದೆ. ಆ ಅವಧಿಯಲ್ಲಿ ತರಬೇತಿದಾರರು ಕರಾಟೆ ಕಲಿಯುತ್ತಿದ್ದ ಮಕ್ಕಳ ಕೈಗಳು ಎಷ್ಟೊಂದು ಬಲವಾಗಿವೆ ಎನ್ನುವುದನ್ನು ಪ್ರದರ್ಶಿಸಲು ಬಯಸಿದ್ದರು. ಬೈಕ್ ಅನ್ನು ಕೈ ಮೇಲೆ ಓಡಿಸುವ ಪ್ರದರ್ಶನಕ್ಕೆ ಕೂಡ ಸಿದ್ಧತೆ ನಡೆಸಿದ್ದರು. ಅದೇ ಕೊನೆ; ಕರಾಟೆ ಕೈಬಿಟ್ಟೆ~ ಎಂದು ಸೈನಾ ಹೇಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಆ ಸಂದರ್ಭದಲ್ಲಿ ಸೈನಾ ತಂದೆ-ತಾಯಿ ತಮ್ಮ ಮಗಳು ಕರಾಟೆಯಲ್ಲಿ ಮುಂದುವರಿಯಬೇಕೆಂದು ಬಯಸಿದ್ದರು. ಆದರೆ ಸೈನಾ ಅದಕ್ಕೆ ಒಪ್ಪಲಿಲ್ಲ. ರಕ್ಷಣಾ ಕಲೆಗೆ ಸೆಲ್ಯೂಟ್ ಹೊಡೆದರು. ಇದರಿಂದಾಗಿ ಲಾಭವಾಗಿದ್ದು ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ!

 

ಸೈನಾ ಜೀವನ ಚರಿತ್ರೆಯ ಪುಸ್ತಕದಲ್ಲಿರುವ ಅಂಶಗಳು

- ಹುಟ್ಟಿನಿಂದ ಸಸ್ಯಾಹಾರಿ ಆಗಿದ್ದರೂ 2005ರಲ್ಲಿ ಚೀನಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾಂಸಾಹಾರಿ ಆಗಿದ್ದು. ಕೋಚ್ ಪುಲ್ಲೇಲ ಗೋಪಿಚಂದ್ ಸಲಹೆಯಂತೆ ಮೀನು ಹಾಗೂ ಏಡಿಯನ್ನು ತಿಂದಿದ್ದು.



-ಮಾಂಸಾಹಾರ ಅಷ್ಟಾಗಿ ಇಷ್ಟಪಡುವುದಿಲ್ಲ. ಮೀನು ಹಾಗೂ ಮಟನ್‌ನಿಂದ ದೂರ. ಆದರೆ ಅನಿವಾರ್ಯ ಎನಿಸಿದಲ್ಲಿ ಚಿಕನ್ ತಿನ್ನುತ್ತಾರೆ. ಊಟದ ತಟ್ಟೆಯಲ್ಲಿ ಹೆಚ್ಚು ಕಾಣಿಸುವುದು ರಾಜ್ಮಾ ಹಾಗೂ ರೋಟಿ.



-ಮೊಟ್ಟ ಮೊದಲ ಬಾರಿಗೆ ದುಬಾರಿ ರ‌್ಯಾಕೆಟ್ ಹಿಡಿದಿದ್ದು 1999ರಲ್ಲಿ. ಚೆನ್ನೈನಲ್ಲಿ ನಡೆದಿದ್ದ 10 ವರ್ಷ ವಯಸ್ಸಿನೊಳಗಿನವರ ಕೃಷ್ಣ ಖೈತಾನ್ ಟೂರ್ನಿಯಲ್ಲಿ.



-ಬಾಲ್ಯದಲ್ಲಿ ಹೈದರಾಬಾದ್‌ನಲ್ಲಿ ತರಬೇತಿ ಪಡೆಯುವುದಕ್ಕಾಗಿ ಪ್ರತಿ ದಿನ 25 ಕಿ.ಮೀ. ದೂರ ಪ್ರಯಾಣ ಮಾಡುತ್ತಿದ್ದರು. ಹೆಚ್ಚು ಬಾರಿ ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಪಯಣ. ತಂದೆ ಹರ್‌ವೀರ್ ಸಿಂಗ್ ಆಗ ಐಸಿಎಆರ್(ಭಾರತೀಯ ಕೃಷಿ ಸಂಶೋಧನಾ ಕೇಂದ್ರ)ನಲ್ಲಿ ರೂ. 12,000 ಸಂಬಳಕ್ಕೆ ಕೆಲಸ ಮಾಡುತ್ತಿದ್ದರು.



-14ನೇ ವಯಸ್ಸಿನಲ್ಲಿಯೇ ಈ ಬ್ಯಾಡ್ಮಿಂಟನ್ ತಾರೆಗೆ ಭಾರತ್ ಪೆಟ್ರೋಲಿಯಂ ಕೆಲಸ ನೀಡುವುದಾಗಿ ಮುಂದೆ ಬಂದಾಗ ಪೋಷಕರಿಗೆ ಭಾರಿ ಅಚ್ಚರಿಯಾಗಿತ್ತು.



-ಮಗಳಿಗೆ ಉತ್ತಮ ತರಬೇತಿ ಕೊಡಿಸಬೇಕು ಎನ್ನುವ ಕಾರಣಕ್ಕಾಗಿ ತಂದೆ ತಮ್ಮ ಭವಿಷ್ಯ ನಿಧಿಯಿಂದ ಮೂರು ಬಾರಿ ಹಣವನ್ನು ತೆಗೆದಿದ್ದರು. ಕಾಲ ಉರುಳಿದಾಗ ಸ್ಥಿತಿ ಬದಲಾಯಿತು. 2010ರಲ್ಲಿ ರೂ.60 ಲಕ್ಷ ಹಾಗೂ 2011ರಲ್ಲಿ 1.5 ಕೋಟಿ ತೆರಿಗೆ ಸಂದಾಯ ಮಾಡುವ ಮಟ್ಟದಲ್ಲಿ ಈ ಆಟಗಾರ್ತಿಯ ಆದಾಯ ಹೆಚ್ಚಿತು.



-ಮಲೇಷ್ಯಾದಲ್ಲಿ ಇದ್ದಾಗ ಆಹಾರ ಕ್ರಮದಲ್ಲಿ ಭಾರಿ ವ್ಯತ್ಯಾಸವಾಗಿ ದೇಹ ತೂಕ ಏಳು ಕೆ.ಜಿ. ಹೆಚ್ಚಿತ್ತು. ಆಗಲೇ ಗಾಯದ ಸಮಸ್ಯೆ ಕಾಡಿದ್ದು.



-ಐಸ್ ಕ್ರೀಮ್, ಚಾಕಲೆಟ್ ಹಾಗೂ ಬಿಸ್ಕಟ್ ಎಂದರೆ ಇಷ್ಟ. ವಿಜಯೋತ್ಸವ ಆಚರಿಸುವುದು ಕೂಡ ಐಸ್ ಕ್ರೀಮ್ ತಿನ್ನುವ ಮೂಲಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry