ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ವರ್ಸಸ್ ಚೀನಾ

Last Updated 20 ಡಿಸೆಂಬರ್ 2010, 13:05 IST
ಅಕ್ಷರ ಗಾತ್ರ

ಬ್ಯಾಡ್ಮಿಂಟನ್ ಕ್ರೀಡೆ ತನ್ನದೇ ಆಸ್ತಿ ಎಂಬ ಹೆಮ್ಮೆಯಿಂದ ಬೀಗುತ್ತಿರುವ ಚೀನಾದ ಆಟಗಾರ್ತಿಯರಿಗೆ ಸೈನಾ ನೆಹ್ವಾಲ್ ಬಲವಾದ ಪೆಟ್ಟು ನೀಡಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಸೂಪರ್ ಸೀರಿಸ್ ಪ್ರಶಸ್ತಿಗಳು ಚೀನಾ, ಇಂಡೋನೇಷ್ಯ ಮತ್ತು ಮಲೇಷ್ಯದ ಸ್ಪರ್ಧಿಗಳಿಗೆ ಮಾತ್ರ ಸೀಮಿತವಾಗಿದ್ದವು. ಈಗ ಈ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿದೆ. ಅದಕ್ಕೆ ಕಾರಣ ಸೈನಾ.

2010ರ ಸಾಲಿನ ಹನ್ನೆರಡು ಸೂಪರ್ ಸೀರಿಸ್ ಟೂರ್ನಿಗಳಲ್ಲಿ ಮೂರು ಟ್ರೋಫಿಗಳು ಸೈನಾ ಖಾತೆಗೆ ಸೇರಿವೆ. ಬೇರೆ ಯಾವುದೇ ದೇಶದ ಆಟಗಾರ್ತಿ ಈ ಋತುವಿನಲ್ಲಿ ಮೂರು ಸೂಪರ್ ಸೀರಿಸ್ ಪ್ರಶಸ್ತಿ ಜಯಿಸಿಲ್ಲ. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. 12 ಟೂರ್ನಿಗಳಲ್ಲಿ ಸೈನಾ ಪಾಲ್ಗೊಂಡದ್ದು ಐದರಲ್ಲಿ ಮಾತ್ರ. ಅದರಲ್ಲಿ ಮೂರರಲ್ಲೂ ಯಶಸ್ಸು ಸಾಧಿಸಿದ್ದಾರೆ.

ಕಳೆದ ವಾರ ನಡೆದ ಹಾಂಕಾಂಗ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಸೈನಾ ಕಿರೀಟ ಮುಡಿಗೇರಿಸಿಕೊಂಡರು. ಈ ವರ್ಷದ ಮೂರನೇ ಸೂಪರ್ ಸೀರಿಸ್ ಪ್ರಶಸ್ತಿ ಇದು. ಜೊತೆಗೆ ಇದೇ ವರ್ಷ ಇಂಡಿಯನ್ ಓಪನ್ ಟೂರ್ನಿಯ ಪ್ರಶಸ್ತಿ ಮತ್ತು ಕಾಮನ್‌ವೆಲ್ತ್ ಕೂಟದ ಚಿನ್ನ ಅವರ ಖಾತೆಗೆ ಸೇರಿವೆ. 2010 ರ ವರ್ಷ ಸೈನಾ ವೃತ್ತಿಜೀವನದ ‘ಟರ್ನಿಂಗ್ ಪಾಯಿಂಟ್’ ಎನ್ನಬಹುದು. ವಿಶ್ವ ರ್ಯಾಂಕಿಂಗ್‌ನಲ್ಲೂ ಅವರು ಎರಡನೇ ಸ್ಥಾನಕ್ಕೇರಿದ್ದರು.
ಎರಡು ದಶಕಗಳ ಹಿಂದೆ ಹರಿಯಾಣದ ಹಿಸ್ಸಾರ್‌ನಲ್ಲಿ ಜನಿಸಿದ ವೇಳೆ ಅಜ್ಜಿಯಿಂದ, ‘ಛೆ.. ಮೊಮ್ಮಗಳು ಹುಟ್ಟಿದಳೇ...’ ಎಂಬ ತೆಗಳಿಕೆಯ ಮಾತುಗಳನ್ನು ಕೇಳಿದ್ದ ಸೈನಾ ಇಂದು ದೇಶದ ಸಾವಿರಾರು ಯುವ ಬ್ಯಾಡ್ಮಿಂಟನ್ ಸ್ಪರ್ಧಿಗಳ ಪ್ರೇರಕ ಶಕ್ತಿ ಎನಿಸಿದ್ದಾರೆ. ಸೈನಾ ಅವರಿಂದ ಉತ್ತೇಜನ ಪಡೆದು ಹಲವರು ತಮ್ಮ ಕನಸುಗಳನ್ನು ಬೆನ್ನಟ್ಟುತ್ತಿದ್ದಾರೆ. ತಮ್ಮ 20ರ ಹರೆಯದಲ್ಲೇ ಅಸಂಖ್ಯ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಕ್ರಿಕೆಟ್ ಕ್ರೇಜ್’ ದೇಶ ಎನಿಸಿದ ಭಾರತದ ಜನರ ಮನಸ್ಸುಗಳಲ್ಲಿ, ಇಲ್ಲಿನ ಮಾಧ್ಯಮಗಳಲ್ಲಿ ಸ್ಥಾನ ಪಡೆಯುವುದು ಸುಲಭದ ವಿಚಾರವಲ್ಲ. ಸೈನಾ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾ ಪ್ರಭುತ್ವಕ್ಕೆ ಧಕ್ಕೆ
ಬ್ಯಾಡ್ಮಿಂಟನ್‌ನಲ್ಲಿ ವಿಶ್ವವನ್ನೇ ಜಯಿಸಬೇಕಾದರೆ ಚೀನಾದ ಆಟಗಾರ್ತಿಯರ ಸವಾಲನ್ನು ಮೆಟ್ಟಿನಿಲ್ಲಬೇಕು ಎಂಬ ಅರಿವು ಸೈನಾಗೆ ಮೊದಲೇ ಇತ್ತು. ಸತತ ಪರಿಶ್ರಮದ ನೆರವಿನಿಂದ ಅವರು ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಾಂಕಾಂಗ್ ಟೂರ್ನಿಯಲ್ಲಿ ಚಾಂಪಿಯನ್ ಆದ ಸಂಭ್ರಮದಲ್ಲಿ ಸೈನಾ, ‘ಚೀನಾದ ಆಟಗಾರ್ತಿಯರನ್ನು ಎದುರಿಸಲು ಈಗ ಯಾವುದೇ ಭಯವಿಲ್ಲ’ ಎಂದಿದ್ದರು. ಭಾರತದ ಬ್ಯಾಡ್ಮಿಂಟನ್‌ಗೆ ಸಂಬಂಧಿಸಿದಂತೆ ಈ ಮಾತು ಶುಭಸೂಚನೆ. ಸೈನಾ ಒಂದು ರೀತಿಯಲ್ಲಿ ಚೀನಾದೊಂದಿಗೆ ಸಮರ ಸಾರಿದ್ದಾರೆ.

ಹಾಂಕಾಂಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಜೊತೆಗೆ ಸೈನಾ ಹಿಂದಿನ ಎರಡು ಸೋಲುಗಳಿಗೆ ಮುಯ್ಯಿ ತೀರಿಸಿಕೊಂಡಿದ್ದರು. ಗುವಾಂಗ್‌ಜೌ ಏಷ್ಯನ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್‌ನಲ್ಲಿ ತನ್ನನ್ನು ಸೋಲಿಸಿದ್ದ ಹಾಂಕಾಂಗ್‌ನ ಪ್ಯು ಯಿನ್ ಯಿಪ್ ಹಾಗೂ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತನಗೆ ನಿರ್ಗಮನದ ಹಾದಿ ತೋರಿಸಿದ್ದ ಚೀನಾದ ಶಿಕ್ಸಿಯಾನ್ ವಾಂಗ್ ಅವರನ್ನು ಮಣಿಸಿ ಸೈನಾ ಪ್ರತೀಕಾರ ತೀರಿಸಿಕೊಂಡರು.

ಈ ದಶಕದ ಮೊದಲ ಎಂಟು ವರ್ಷಗಳ ಅವಧಿಯಲ್ಲಿ ಚಾಂಗ್ ನಿಂಗ್ ಮತ್ತು ಕ್ಸಿ ಕ್ಸಿಂಗ್‌ಫಾಂಗ್ ಅವರು ಮಹಿಳೆಯರ ವಿಭಾಗದ ಎಲ್ಲ ಪ್ರಮುಖ ಪ್ರಶಸ್ತಿಗಳನ್ನು ಚೀನಾಕ್ಕೆ ಗೆದ್ದುಕೊಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಚೀನಾದ ಸ್ಪರ್ಧಿಗಳ ಓಟಕ್ಕೆ ಸೈನಾ ಬ್ರೇಕ್ ಹಾಕಿದ್ದಾರೆ. ಚೀನಾದ ಘಟಾನುಘಟಿ ಎನಿಸಿರುವ ವಾಂಗ್ ಲಿನ್, ವಾಂಗ್ ಶಿಕ್ಸಿಯಾನ್ ಮತ್ತು ಲು ಲಾನ್ ಅವರು ಈಗಾಗಲೇ ಭಾರತದ ಆಟಗಾರ್ತಿಯ ಕೈಯಲ್ಲಿ ಸೋಲಿನ ರುಚಿ ಅನುಭವಿಸಿದ್ದಾರೆ.

ಪ್ರಸಕ್ತ ಅಗ್ರ ರ್ಯಾಂಕ್‌ನಲ್ಲಿರುವ ಆಟಗಾರ್ತಿ ವಾಂಗ್ ಯಿಹಾನ್, ವಾಂಗ್ ಕ್ಸಿನ್ ಮತ್ತು ಜಿಯಾಂಗ್ ಯಾನ್‌ಜಾವೊ ಅವರನ್ನು ಮಣಿಸಲು ಸೈನಾಗೆ ಆಗಿಲ್ಲ. ಇದೇ ಫಾರ್ಮ್ ಮತ್ತು ಫಿಟ್‌ನೆಸ್‌ನ್ನು ಮುಂದುವರಿಸಿದರೆ ಸೈನಾ ಮುಂದಿನ ಋತುವಿನಲ್ಲಿ ಈ ಆಟಗಾರ್ತಿಯರಿಗೂ ‘ಶಾಕ್’ ನೀಡಬಹುದು.

‘ಚೀನಾ ಮಾದರಿ’ ಬೇಕು
ಸೈನಾ ಇನ್ನಷ್ಟು ಯಶಸ್ಸು ಗಳಿಸಬೇಕಾದರೆ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ‘ಚೀನಾ ಮಾದರಿ’ಯನ್ನು ಅನುಸರಿಸಬೇಕು. ಅಲ್ಲಿ ಒಬ್ಬ ಆಟಗಾರ ಅಥವಾ ಆಟಗಾರ್ತಿಯ ಮೇಲೆ ಎಲ್ಲರ ನಿರೀಕ್ಷೆ ಇರುವುದಿಲ್ಲ. ಚಾಂಪಿಯನ್ನರ ಒಂದು ತಂಡವೇ ಅಲ್ಲಿದೆ. ಪುರುಷ ಮತ್ತು ಮಹಿಳೆಯರ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಚೀನಾದ ಕನಿಷ್ಠ ಐದು ಸ್ಪರ್ಧಿಗಳನ್ನು ನಮಗೆ ಕಾಣಲು ಸಾಧ್ಯ.

ಆದರೆ ಭಾರತದ ಪರಿಸ್ಥಿತಿ ಭಿನ್ನವಾಗಿದೆ. ಸೈನಾ ಪ್ರತಿ ಬಾರಿಯೂ ನಿರೀಕ್ಷೆಯ ಅಪಾರ ಭಾರವನ್ನು ಹೊತ್ತುಕೊಂಡೇ ಕಣಕ್ಕಿಳಿಯಬೇಕು. ಚೀನಾದಲ್ಲಿರುವಂತೆ ಸೈನಾಗೆ ಭಾರತದ ಇತರ ಆಟಗಾರ್ತಿಯರಿಂದ ಬೆಂಬಲ ಲಭಿಸುತ್ತಿಲ್ಲ. ಎಲ್ಲ ಪ್ರಮುಖ ಟೂರ್ನಿಗಳಲ್ಲಿ ದೇಶದ ಭರವಸೆಯನ್ನು ಮುನ್ನಡೆಸುವ ಜವಾಬ್ದಾರಿ ಸೈನಾ ಮೇಲಿರುತ್ತದೆ. ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅಂತಹದೇ ನಿರೀಕ್ಷೆಯ ಭಾರ  ಹೊತ್ತುಕೊಂಡು ಈಗ ಮಂಕಾಗಿ ಹೋಗಿದ್ದಾರೆ.

ಬ್ಯಾಡ್ಮಿಂಟನ್‌ನ ‘ಮಿನುಗು ತಾರೆ’ ಸೈನಾ ಅಂತಹ ಅಪಾಯಕ್ಕೆ ಒಳಗಾಗ ಬಾರದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಲ್ಲ ಇನ್ನಷ್ಟು ಸ್ಪರ್ಧಿಗಳನ್ನು ಭಾರತ ಸಿದ್ಧಪಡಿಸಬೇಕು. ಹಾಗಾದಲ್ಲಿ ಸೈನಾಗೆ ಹೆಚ್ಚಿನ ಒತ್ತಡವಿಲ್ಲದೆ ಆಡಲು ಸಾಧ್ಯ.

ಮುಂದಿನ ಋತುವಿನಲ್ಲೂ ಭಾರತದ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸುವ ಗುರಿಯನ್ನು ಸೈನಾ ಹೊಂದಿದ್ದಾರೆ. ಆಲ್ ಇಂಗ್ಲೆಂಡ್ ಓಪನ್ ಗೆಲ್ಲಬೇಕು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಬೇಕು, ಮಾತ್ರವಲ್ಲ ಲಂಡನ್ ಒಲಿಂಪಿಕ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಡಬೇಕು... ಸೈನಾ ಮನದಾಳದ ಬಯಕೆಗಳಿವು. ಈ ಕನಸುಗಳು ಈಡೇರಬಹುದು ಎಂಬ ದೃಢವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಏಕೆಂದರೆ ಇದುವರೆಗೆ ಆಡಿದ್ದನೆಲ್ಲಾ ಸೈನಾ ಮಾಡಿ ತೋರಿಸಿದ್ದಾರೆ. ಅಲ್ಪ ಅವಧಿಯಲ್ಲಿ ಅವರು ಕೂಡಿಹಾಕಿರುವ ಪ್ರಶಸ್ತಿಗಳೇ ಅದಕ್ಕೆ ಸಾಕ್ಷಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT