ಶುಕ್ರವಾರ, ಮೇ 14, 2021
32 °C

ಸೊರಗಿದ ಕಾಳು ಮೆಣಸು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಕಾಫಿ ಜೊತೆಗೆ ಉಪ ಉತ್ಪನ್ನವಾದ ಕಾಳು ಮೆಣಸು ಕೂಡಾ ಉದುರ ತೊಡಗಿದೆ. ಸೊರಗು ರೋಗಕ್ಕೆ ತುತ್ತಾದ ಬಳ್ಳಿಗಳು ಇದೀಗ ಮಳೆ ಕಡಿಮೆಯಾಗಿ ಬಿಸಿಲು ಕಾಯುತ್ತಿರುವಂತೆ ಅರಿಶಿಣ ಬಣ್ಣಕ್ಕೆ ತಿರುಗುತ್ತಿದ್ದು, ಬಳ್ಳಿಗಳಿಂದ ಫಸಲು ಅಧಿಕ ಪ್ರಮಾಣದಲ್ಲಿ ಉದುರತೊಡಗಿದೆ.ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಳು ಮೆಣಸನ್ನು ತೋಟದ ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಅಡಿಕೆ ತೋಟ ಮತ್ತು ಕಾಫಿ ತೋಟಗಳಲ್ಲಿಯೇ ರಾಜ್ಯದ ಒಟ್ಟು ಕಾಳು ಮೆಣಸಿನ ಶೇ 90ಕ್ಕೂ ಅಧಿಕ ಉತ್ಪಾದನೆಯಾಗುತ್ತಿದೆ.ಕಾಫಿ ತೋಟಗಳಲ್ಲಿ ನೆರಳಿನ ಆಶ್ರಯಕ್ಕೆಂದೇ ಬೆಳೆಸುವ ಸಿಲ್ವರ್ ಓಕ್ ಮರಗಳಿಗೆ ಹಾಗೂ ಇತರ ಮರಗಳಿಗೆ ಮೆಣಸಿನ ಬಳ್ಳಿಯನ್ನು ಹಾಗೂ ಅಡಿಕೆ ತೋಟಗಳಲ್ಲಿ ಅಡಿಕೆ ಮರಕ್ಕೆ ಹಬ್ಬಿಸಲಾಗುತ್ತದೆ. ಈ ಎರಡು ತೋಟಗಳ ಉಪಬೆಳೆಯಾಗಿ ಕಾಳು ಮೆಣಸನ್ನು ಕಡಿಮೆ ಖರ್ಚಿನಲ್ಲಿ ಬೆಳೆಸಲು ಸಾಧ್ಯವಿದೆ. ಬಳ್ಳಿಗಳು ಮೇಲೆ ಹಬ್ಬಿದಂತೆ ಕಾಳಜಿ ವಹಿಸಿದರೆ ಸಾಕು. ಪ್ರತ್ಯೇಕವಾದ ಯಾವ ಕೃಷಿಯೂ ಬೇಕಾಗಿಲ್ಲ. ಆದ್ದರಿಂದಲೇ ಕೃಷಿಕರು ಕಾಳು ಮೆಣಸು ಬೆಳೆಯುವತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಬೆಳೆಗಾರರ ಆಸಕ್ತಿಗೆ ತಣ್ಣೀರೆರಚುವಂತೆ ರೋಗಗಳು ಕಾಳು ಮೆಣಸನ್ನು ಕಾಡುತ್ತಿವೆ. ನೆಟ್ಟ ಬಳ್ಳಿಗಳು ಎರಡು ಮೂರು ವರ್ಷಗಳಲ್ಲಿ ಫಸಲು ಕೊಡುವ ಮೊದಲೇ ಸೊರಗಿ ಹೋಗುತ್ತಿವೆ. ಮಳೆಗಾಲದಲ್ಲಿ ಬಳ್ಳಿಗಳಲ್ಲಿ ಕಾಣುತ್ತಿದ್ದ ಫಸಲು ಈಗ ಕಪ್ಪಾಗಿ ಬೆಳೆಯುವ ಹಂತದಲ್ಲಿ ಉದುರಿ ಹೋಗುತ್ತಿವೆ.ಹಸಿರೆಲೆಗಳು ಕಪ್ಪಾಗಿ ಫಸಲು ಇಲ್ಲದಾಗಿ ಬಳ್ಳಿ ನಾಶವಾಗುತ್ತಿದ್ದು, ಕೃಷಿಕರ ನಿದ್ದೆಗೆಡಿಸಿದೆ. ಶೀಘ್ರ ಕೊಳೆ ರೋಗ ಕರಿಮೆಣಸಿಗೆ ಬರುವ ಮುಖ್ಯವಾದ ರೋಗ. ಮಳೆಗಾಲದ ಸಮಯದಲ್ಲಿ ಪ್ರಾರಂಭವಾಗುವ ಈ ರೋಗದಲ್ಲಿ ಎಲೆಗಳ ಮೇಲೆ ಕಪ್ಪು ಚುಕ್ಕೆ ಕಂಡು ಬಂದು ನಂತರ ರೋಗ ಹರಡಿ ಎಲೆಗಳು ಪೂರ್ತಿಯಾಗಿ ಉದುರುತ್ತವೆ. ರೆಂಬೆಗಳು ಮುರಿದು ಬೀಳುತ್ತವೆ. ಈ ರೋಗದ ಹತೋಟಿಗೆ ಬೋರ್ಡೋ ದ್ರಾವಣವನ್ನು ವರ್ಷಕ್ಕೆರಡು ಬಾರಿ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಲಹೆ ನೀಡುತ್ತಾರೆ.ಮಳೆ ಕಡಿಮೆಯಾಗುತ್ತಿರುವ ಈ ಅವಧಿಯಲ್ಲಿ ಅಲ್ಲಲ್ಲಿ ಕೃಷಿಕರು ಬೋರ್ಡೋ ದ್ರಾವಣ ಸಿಂಪಡಣೆ ಮಾಡುವುದರಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಆದರೆ ಬರಿ ಬೋರ್ಡೋ ದ್ರಾವಣ ಸಿಂಪಡಣೆ  ಕರಿಮೆಣಸಿಗೆ ಬರುವ ರೋಗಗಳ ನಿಯಂತ್ರಣವಾಗುತ್ತಿಲ್ಲ ಎನ್ನುತ್ತಾರೆ ರೈತರು.ಪ್ರಸಕ್ತ ವರ್ಷ ಕಾಳು ಮೆಣಸಿಗೆ ಉತ್ತಮ ದರ ಲಭಿಸುತ್ತಿದೆ. ಈಗ ಮಾರುಕಟ್ಟೆಯಲ್ಲಿ ಕಾಳು ಮೆಣಸಿಗೆ ಕೆ.ಜಿ. ಯೊಂದಕ್ಕೆ ರೂ.300 ದರ. ಉತ್ತಮ ದರವಿರುವುದರಿಂದ ಕಾಳು ಮೆಣಸಿನತ್ತ ಕೃಷಿಕರ ನಿರೀಕ್ಷೆಯೂ ಹೆಚ್ಚಾಗಿದೆ.ಈ ವರ್ಷ ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆ ಆಗಿರುವುದರಿಂದ ಕಾಳು ಮೆಣಸಿನ ಉತ್ತಮ ಫಸಲು ನಿರೀಕ್ಷೆ ಮಾಡಲಾಗಿತ್ತು. ಅದರೆ ಮಳೆಯಿಂದಾಗಿ ಕಾಳು   ಮೆಣಸಿಗೆ ಶಿಲೀಂದ್ರ ರೋಗ ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇದರ ತೀವ್ರತೆ ಹೆಚ್ಚಾಗಿದೆ. ಉಪಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದ್ದ ಕಾಳು    ಮೆಣಸು ಕೂಡಾ ಕೈಕೊಡುತ್ತಿರುವುದರಿಂದ ಮಧ್ಯಮ ವರ್ಗದ ಕೃಷಿಕರು ಚಿಂತಾಕ್ರಾಂತರಾಗಿದ್ದಾರೆ. ಕೆಲವು ಭಾಗಗಳಲ್ಲಿ ಸೊರಗು ರೋಗದಿಂದಾಗಿ ಕಾಳು ಮೆಣಸಿನ ಇಳುವರಿಯಲ್ಲಿ ತೀವ್ರ ಕುಸಿತ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.