ಗುರುವಾರ , ಜನವರಿ 30, 2020
19 °C
ಬೆಳಗಾವಿ ಅಧಿವೇಶನ ಕುರಿತು ಬಿ.ಎಸ್.ಯಡಿಯೂರಪ್ಪ ಆಕ್ಷೇಪ

ಸ್ಥಳೀಯ ಸಮಸ್ಯೆ ಚರ್ಚೆ ಇಲ್ಲ, ಹೊಸ ಯೋಜನೆಗಳೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ರಾಜಧಾನಿಯಿಂದ ಹೊರಗಡೆ ಅಧಿವೇಶನ, ಸಚಿವ ಸಂಪುಟ ಸಭೆಗಳು ನಡೆದರೆ, ಅದರಲ್ಲಿ ಸ್ಥಳೀಯ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಬೇಕು. ಆ ಭಾಗಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಕಟಿಸಬೇಕು. ಆದರೆ ಈ ಬೆಳಗಾವಿ ಅಧಿವೇಶನದಲ್ಲಿ ಅಂಥ ಯಾವುದೇ ಬೆಳವಣಿಗೆಗಳು ನಡೆಯಲೇ ಇಲ್ಲ’ ಎಂದು ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ಅಧಿವೇಶನದಲ್ಲಿ ನೆನಪಿಟ್ಟುಕೊಳ್ಳುವಂತಹ ಯಾವುದೇ ವಿಚಾರಗಳು ಚರ್ಚೆಯಾಗಲಿಲ್ಲ. ಯಾವುದೋ ಕೆಲಸಕ್ಕೆ ಬಾರದ ಕಾಯ್ದೆಗಳ ಬಗ್ಗೆ ಉದ್ದುದ್ದ ಭಾಷಣಗಳು ಮೊಳಗಿದವು’ ಎಂದು ಬೇಸರ ವ್ಯಕ್ತಪಡಿಸಿದರು.‘ನನ್ನ  ಆಡಳಿತಾವಧಿಯಲ್ಲಿ ಗುಲ್ಬರ್ಗದಲ್ಲಿ ಸಚಿವ ಸಂಪುಟದ ಸಭೆ ನಡೆದಾಗ,  ಹೈದರಾಬಾದ್‌  ಕರ್ನಾಟಕ ಭಾಗಕ್ಕೆ ₨ 400 ಕೋಟಿಯ  ಯೋಜನೆಗಳನ್ನು ಘೋಷಿಸಿದ್ದೆ. ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿದಾಗ, ನೂರಾರು ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಆ ಭಾಗಕ್ಕೆ ನೀಡಿದೆ. ಆ ಭಾಗದ ಸಮಸ್ಯೆಗಳನ್ನು ದಿನಪೂರ್ತಿ ಚರ್ಚೆ ಮಾಡಿದ್ದೆ. ಅಂಥ ಯಾವುದೇ ಚರ್ಚೆ ಬೆಳಗಾವಿಯ ಅಧಿವೇಶನದಲ್ಲಿ ನಡೆಯಲಿಲ್ಲ’ ಎಂದು ದೂರಿದರು.‘ಬೆಳಗಾವಿಯಲ್ಲಿ ಇಷ್ಟು ಸುಂದರವಾದ ಸುವರ್ಣ ಸೌಧವನ್ನು ಕಟ್ಟಿದ್ದೇವೆ. ಈ ಸರ್ಕಾರಕ್ಕೆ ಬೆಳಗಾವಿ ಭಾಗಕ್ಕೆ ಅಗತ್ಯವಾದ ಕಚೇರಿಗಳನ್ನು ವರ್ಗಾವಣೆ ಮಾಡುವ ಕನಿಷ್ಠ ಕೆಲಸವನ್ನು ಮಾಡಲಿಲ್ಲ. ಈ ವಿಚಾರವಾಗಿ ನಾನು ಗಲಾಟೆ ಮಾಡಿದರೆ ಸಮಿತಿ ರಚನೆ ಮಾಡುತ್ತೇನೆಂದು ಸೋಗು ಹೇಳುತ್ತಾರೆ’ ಎಂದು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.  ‘ಈ ಸುವರ್ಣ ಸೌಧದ ಚಟುವಟಿಕೆ ವೀಕ್ಷಣೆಗೆ ಒಬ್ಬ ಉಸ್ತುವಾರಿ ಸಚಿವರನ್ನಾದರೂ ನೇಮಕ ಮಾಡಬೇಕಿತ್ತು, ಅದೂ ಆಗಿಲ್ಲ’ ಎಂದರು.ನಾಲ್ಕೂವರೆ ವರ್ಷ ಇವರು ನನ್ನನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಧಿಮಾಕಿನಿಂದ ವರ್ತಿಸುತ್ತಿದ್ದಾರೆ. ಬಿದಾಯಿ ಯೋಜನೆಯನ್ನು ಎಲ್ಲ ವರ್ಗವದರಿಗೆ ವಿಸ್ತರಣೆ ಮಾಡಿ ಎಂದು ಕಳೆದ ೨೫ ದಿನಗಳಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದರೆ ತಿರುಗಿ

ನೋಡಲಿಲ್ಲ. ಬೇಕಿದ್ದರೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿಕೋ ಎಂದು ಉದ್ಧಟತನದ ಮಾತು ಆಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.‘ಬೆಳಗಾವಿ ಅಧಿವೇಶನ ನಡೆಯುವ ಸುವರ್ಣಸೌಧದ ಅರ್ಧ ಕಿಲೋ ಮೀಟರ್ ದೂರದಲ್ಲಿ ರೈತರು ಧರಣಿ ಮಾಡುತ್ತಿದ್ದರು. ಅವರೊಟ್ಟಿಗೆ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿದ್ದರೆ ರೈತರೊಬ್ಬರ ಸಾವನ್ನು ತಪ್ಪಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಸತ್ತ ಮೇಲೆ ಆಸ್ಪತ್ರೆಗೆ ಶವ ನೋಡಲು ಮುಖ್ಯಮಂತ್ರಿ ಬಂದರು. ಅಂತ್ಯಸಂಸ್ಕಾರಕ್ಕೆ ಬರಲಿಲ್ಲ’ ಎಂದು ಹೇಳಿದರು.‘ಬಿಜೆಪಿ ಸೇರುವ ವಿಚಾರ ಕೇಳ್ಬೇಡಿ’

‘ಬಿಜೆಪಿ ಸೇರುವ ಕುರಿತು ಷರತ್ತು ಸಡಿಲಿಸಿದ್ದೀರಿ ಎಂಬ ಸುದ್ದಿ ಪ್ರಕಟವಾಗಿದೆ. ಏನು ಷರತ್ತು, ಏನು ಸಡಿಲಗೊಳಿಸಿದ್ದೀರಿ’ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಯಡಿಯೂರಪ್ಪ, ‘ಅಂಥ ಯಾವುದೇ ಆಹ್ವಾನಗಳು ಬಿಜೆಪಿಯಿಂದ ಬಂದಿಲ್ಲ. ಆ ಸುದ್ದಿಗಳೆಲ್ಲ ಏಕಪಕ್ಷೀಯವಾಗಿವೆ. ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ’ ಎಂದು ನೇರವಾಗಿ ಉತ್ತರಿಸಿದರು.ನಂತರ ಅದೇ ವಿಷಯವನ್ನು ಮುಂದುವರಿಸಿದ ಯಡಿಯೂರಪ್ಪ, ‘ಅವರ ಪಕ್ಷಕ್ಕೆ ಯಡಿಯೂರಪ್ಪ ಬೇಕೆಂದರೆ ಕರೆಯುತ್ತಾರೆ. ಅದಕ್ಕೆ ನಾನೇಕೆ ಮುಂದಾಗಬೇಕು. ನಾನೀಗ ಕೆಜೆಪಿ ಕಾರ್ಯಕಾರಿಣಿ ಬಗ್ಗೆ ಚಿಂತಿಸುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.‘ಉತ್ತರದ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ಸೂಚನೆ ಇದೆಯಲ್ಲಾ’ ಎಂದಾಗ, ‘ಮೋದಿ ಪ್ರಧಾನಿಯಾಗಬೇಕು. ನಮ್ಮ ಪಕ್ಷ ಎನ್‌ಡಿಎಗೆ ಬೆಂಬಲ ನೀಡುತ್ತದೆ ಎಂದು ಮೊದಲೇ ಹೇಳಿದ್ದೇವೆ. ಆದರೆ ಬಿಜೆಪಿ ಸೇರುವುದು– ಬಿಡುವುದು ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ನಿರಾಕರಿಸಿದರು.

ಪ್ರತಿಕ್ರಿಯಿಸಿ (+)