ಮಂಗಳವಾರ, ಏಪ್ರಿಲ್ 20, 2021
29 °C

ಸ್ಮರಣೆಯೊಂದೇ ಸಾಲದು...

ಡಾ. ಎಚ್.ಎಸ್.ಅನುಪಮಾ Updated:

ಅಕ್ಷರ ಗಾತ್ರ : | |

ಏಪ್ರಿಲ್ 14 ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಹಾಗೇ 2011 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವ ವರ್ಷ. ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು ಪ್ರತಿಪಾದಿಸಿದವರು ಅಂಬೇಡ್ಕರ್. ಅವರನ್ನು ನೆನೆಯದಿದ್ದರೆ ಭಾರತದ ಮಹಿಳಾ ಸಬಲೀಕರಣದ ಮಾತುಗಳು ಅಪೂರ್ಣವಾಗುತ್ತವೆ. ಏಕೆಂದರೆ ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು’ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದವರು ಅವರು.ಭಕ್ತಿ ಚಳವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಶಕ್ತಳಾದಳೇ ಹೊರತು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. 19ನೇ ಶತಮಾನದ ಕೊನೆ ಹಾಗೂ 20ನೇ ಶತಮಾನದ ಮೊದಲಿಗೆ ಬಂದ ಸಮಾಜ ಸುಧಾರಕರು ಸ್ತ್ರೀ ಶೋಷಣೆಯ ವಿರುದ್ಧ ಜನಜಾಗೃತಿಗೆ ಶ್ರಮಿಸಿದರು. ಇದಕ್ಕೆ ಭಾಗಶಃ ಸ್ವಾತಂತ್ರ್ಯ ಚಳವಳಿಯ ಕಾವು ಹಾಗೂ ಪಾಶ್ಚಾತ್ಯ ವಿದ್ಯಾಭ್ಯಾಸಗಳು ಪ್ರೇರಣೆ ನೀಡಿರಬಹುದು. 1848ರಲ್ಲಿ  ಜ್ಯೋತಿಬಾ ಫುಲೆಯವರು ಅಸ್ಪೃಶ್ಯರಿಗಾಗಿ ಮತ್ತು ಹೆಣ್ಣುಮಕ್ಕಳಿಗಾಗಿ ಶಾಲೆ ಶುರು ಮಾಡಿದರು. ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿ ಪದ್ಧತಿ, ಶಿಕ್ಷಣ ಹಕ್ಕು ನಿರಾಕರಣೆ, ಆಸ್ತಿ ಹಕ್ಕು ನಿರಾಕರಣೆಯಂತಹ ವಿಷಯಗಳನ್ನು ಸಮಾಜ ಸುಧಾರಕರು ಪರಿಗಣಿಸಿದರು. ಆದರೆ ಮಹಿಳೆಯ ವ್ಯಕ್ತಿತ್ವದ, ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ ಡಾ. ಬಿ.ಆರ್.ಅಂಬೇಡ್ಕರ್. ಹೀಗಾಗಿ ಭಾರತದ ಇಂದಿನ ಮಹಿಳಾ ಹೋರಾಟಗಳ ತಾಯಿಬೇರು ಅಂಬೇಡ್ಕರ್ ಅವರ ಚಿಂತನೆಗಳಲ್ಲಿದೆ.  ಭಾರತೀಯ ಸಮಾಜ ಒಂದು ಕೈಯಲ್ಲಿ  ಹೆಣ್ಣನ್ನು ಪೂಜಿಸುತ್ತ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದು ಲಕ್ಷ್ಮಣರೇಖೆಗಳನ್ನು ದಾಟದಂತೆ ನಿರ್ಬಂಧ ವಿಧಿಸಿದೆ. ದಲಿತರು ಮತ್ತು ಮಹಿಳೆಯರ ಸ್ಥಿತಿಗತಿ ಒಂದೇ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು. ವಿದೇಶೀ ವಿದ್ಯಾಭ್ಯಾಸ, ಅದರಲ್ಲೂ ಜರ್ಮನಿಯ ಬಾನ್‌ನಲ್ಲಿ ಕಳೆದ ದಿನಗಳು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗೆ ಅವರನ್ನು ಹತ್ತಿರ ತಂದವು. ಅಧಿಕಾರದ ನೆಲೆಯ ರಾಜಕೀಯ ಮಾರ್ಗ ಸಿಗದೇ ಯಾವುದೂ ಬದಲಾಗುವುದು ಅಷ್ಟು ಸುಲಭವಲ್ಲ ಎಂಬುದನ್ನು ಗುರುತಿಸಿ ಮಹಿಳೆಗೆ ಶಾಸನಸಭೆಗಳಲ್ಲಿ ಮೀಸಲು ಸ್ಥಾನ ಕೊಡಬೇಕೆಂದೂ ಅವರು ಪ್ರತಿಪಾದಿಸಿದ್ದರು.ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ: ಅವರು ಹೊರತರುತ್ತಿದ್ದ ‘ಮೂಕನಾಯಕ’ ಹಾಗೂ ‘ಬಹಿಷ್ಕೃತ ಭಾರತ’ ಪತ್ರಿಕೆಗಳಲ್ಲಿ ಮಹಿಳಾ ಸಮಸ್ಯೆ ಮುಖ್ಯವಾಗಿ ಚರ್ಚಿತವಾಗುತ್ತಿತ್ತು. ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ 500 ಸ್ತ್ರೀಯರು ಪಾಲ್ಗೊಂಡಿದ್ದರು. ಕಾಳಾರಾಂ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡಾ ಮಹಿಳೆಯರಿದ್ದರು. 1927ರಲ್ಲಿ 3000 ಹಿಂದುಳಿದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಾ, ‘ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ. ವಿದ್ಯಾಭ್ಯಾಸ ತುಂಬ ಮುಖ್ಯ. ಕಲಿತ ಮಹಿಳೆ ಮುಂದುವರೆಯುತ್ತಾಳೆ. ಅವಳಂತೆ ಅವಳ ಮಕ್ಕಳೂ ತಯಾರಾಗುತ್ತಾರೆ. ಆದರೆ ಕುಡಿದು ಮನೆಗೆ ಬರುವ ನಿಮ್ಮ ಗಂಡ-ಮಗನನ್ನು ಮಾತ್ರ ಖಂಡಿತಾ ಸಾಕಬೇಡಿ ಎಂದು ಹೇಳಿದ್ದರು.ಅಂಬೇಡ್ಕರ್ ತಾತ್ವಿಕ ಹಾಗೂ ಸಂಘಟನೆಗಳ ಬೆಂಬಲದೊಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯವೇ ಶುರುವಾಯಿತು. ಅದರಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಲ್ಲಿ ಅತೀವ ಆತ್ಮವಿಶ್ವಾಸ ಮೂಡಿತು. ತುಳಸೀಬಾಯಿ ಬಣಸೋಡೆ ಎಂಬಾಕೆ ‘ಚೊಕ್ಕಮೇಲ’ ಎಂಬ ವಾರ್ತಾಪತ್ರಿಕೆ ಶುರುಮಾಡಿದರು. ಮಹಿಳಾ ಹಾಸ್ಟೆಲ್ಲುಗಳು, ಬಾಲಕಿಯರ ಶಾಲೆಗಳು, ಸತ್ಯಾಗ್ರಹ ಎಲ್ಲದರಲ್ಲಿ ದಲಿತ ಮಹಿಳೆಯರು ಮುನ್ನೆಲೆಗೆ ಬಂದರು. ಆತ್ಮಕತೆ, ನಾಟಕಗಳನ್ನು ಬರೆದರು. ಧರ್ಮಪ್ರಸಾರಕರಾದರು.1931ರಲ್ಲಿ ರಾಧಾಬಾಯಿ ವಢಾಳೆ ಎಂಬಾಕೆ ಹೀಗೆ ಹೇಳುತ್ತಾಳೆ: ‘ಹಿಂದೂ ದೇವಸ್ಥಾನ ಪ್ರವೇಶಿಸಲು ಹಾಗೂ ಕುಡಿಯುವ ನೀರಿಗಾಗಿ ಸಾರ್ವಜನಿಕ ಜಲಮೂಲಗಳಿಗೆ ಹೋಗಲು ನಮಗೆ ಹಕ್ಕು ಬೇಕು. ಅಷ್ಟೇ ಅಲ್ಲ ವೈಸರಾಯ್ ಅವರೇ, ಸಾಮಾಜಿಕ ಹಕ್ಕುಗಳ ಜೊತೆ ನಮಗೆ ರಾಜಕೀಯ ಹಕ್ಕುಗಳೂ ಬೇಕು. ಕಠಿಣ ಶಿಕ್ಷೆಗೆಲ್ಲ ನಾವು ಹೆದರುವವರಲ್ಲ. ದೇಶದ ಎಲ್ಲ ಜೈಲುಗಳನ್ನೂ ಬೇಕಾದರೆ ತುಂಬಲು ಸಿದ್ಧರಿದ್ದೇವೆ. ಅವಮಾನ ತುಂಬಿದ ಬದುಕು ಬದುಕುವುದಕ್ಕಿಂತ ನೂರು ಸಲವಾದರೂ ಹೋರಾಡಿ ಸಾಯಲು ನಾವು ಸಿದ್ಧರಿದ್ದೇವೆ.’ ಹೀಗೆ ಕಲಿಯದ ಗ್ರಾಮೀಣ ಮಹಿಳೆಯರೂ ಆತ್ಮವಿಶ್ವಾಸದಿಂದ ಸಾಮಾಜಿಕ ಅನಿಷ್ಟದ ವಿರುದ್ಧ ದನಿಯೆತ್ತುವಂತೆ ಮಾಡಿತು.1928ರಲ್ಲಿ ಹಿಂದುಳಿದ ಮಹಿಳೆಯರ ಸಂಘಟನೆ ಆರಂಭವಾಯಿತು. ಅನೇಕ ಕಡೆಗಳಲ್ಲಿ ದಲಿತ ಮಹಿಳಾ ಸಮಾವೇಶಗಳು, ಸಂಘಗಳು ಹುಟ್ಟಿದವು. 1938ರಷ್ಟು ಹಿಂದೆಯೇ ಕುಟುಂಬ ಯೋಜನಾ ವಿಧಾನವನ್ನು ಸರ್ಕಾರ ಜನಪ್ರಿಯಗೊಳಿಸಬೇಕೆಂದು ಅಂಬೇಡ್ಕರ್ ಮುಂಬಯಿಯ ಶಾಸನಸಭೆಯಲ್ಲಿ ವಾದಿಸಿದರು. ಹೆತ್ತುಹೆತ್ತು ಮಕ್ಕಳನ್ನು ಸಾಕುವುದರಲ್ಲೆ ಹೆಣ್ಣುಮಕ್ಕಳು ಹೈರಾಣಾಗುತ್ತಿದ್ದಾರೆಂದೂ, ಅವರ ಶಕ್ತಿಸಾಮರ್ಥ್ಯವನ್ನು ಸಮಾಜ ಉಪಯೋಗಿಸಿಕೊಳ್ಳಬೇಕೆಂದರೆ ಕುಟುಂಬ ಯೋಜನೆ ಅವಶ್ಯವೆಂದೂ ಪ್ರತಿಪಾದಿಸಿದ್ದರು.1942ರಲ್ಲಿ ದೆಹಲಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಮೊಟ್ಟಮೊದಲ ಬಾರಿಗೆ ಹೆರಿಗೆ ಭತ್ಯೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು.

ಹೀಗೆ ಮಹಿಳಾ ಹಕ್ಕುಗಳ ಕುರಿತಾಗಿ ಸ್ಪಷ್ಟ ಅಭಿಪ್ರಾಯ ಹೊಂದಿದ್ದ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಮಹಿಳೆಯರಿಗೆ ಪುರುಷರಿಗಿರುವ ಎಲ್ಲ ಸವಲತ್ತುಗಳನ್ನೂ ನೀಡಿದೆ. ಜೊತೆಗೆ ವಿಶೇಷ ಸವಲತ್ತುಗಳನ್ನೂ ನೀಡಲು - ಉದಾ: 15(3), 51(ಎ) ಕಲಮುಗಳು - ಅವಕಾಶ ಕಲ್ಪಿಸಲಾಗಿದೆ,ಹಿಂದೂ ಕೋಡ್ ಬಿಲ್: ಹಿಂದೂ ಸಾಮಾಜಿಕ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ತಮ್ಮ ಮಹತ್ವಾಕಾಂಕ್ಷೆಯ ಹಿಂದೂ ಕೋಡ್ ಬಿಲ್ ಅನ್ನು ಮಂಡಿಸಿದ್ದರು. ಸಂವಿಧಾನವು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹಬಾಳ್ವೆಯ ಆಧಾರದ ಮೇಲೆ ರೂಪುಗೊಂಡಿದೆ. ಆದರೆ ಭಾರತೀಯ ಹಿಂದೂ ವಿವಾಹಪದ್ಧತಿ ಮಹಿಳೆಗೆ ಸ್ವಾತಂತ್ರ್ಯವನ್ನೂ ಸಮಾನತೆಯನ್ನೂ ನೀಡಿರಲಿಲ್ಲ.ಮಹಿಳೆಗೆ ದಾಸ್ಯ ಹೇರುವುದಲ್ಲದೇ ವಿಚ್ಛೇದನಕ್ಕೆ ಅವಕಾಶ ನಿರಾಕರಿಸಿ, ಪುರುಷರ ಬಹುಪತ್ನಿತ್ವವನ್ನು ಮಾನ್ಯ ಮಾಡಲಾಗುತ್ತಿತ್ತು. ಹಿಂದೂ ವೈಯಕ್ತಿಕ ಕಾನೂನಿಗೆ ಏಕರೂಪ ಸಂಹಿತೆಯೊಂದನ್ನು ತರಬೇಕೆಂಬುದು ಬ್ರಿಟಿಷ್ ಆಡಳಿತ ಕಾಲದಿಂದಲೂ ನಡೆದ ಪ್ರಯತ್ನವಾಗಿತ್ತು.   1944ರಲ್ಲಿ ತಯಾರಾದ ಹಿಂದೂ ಕೋಡ್ ಬಿಲ್ ಹಲವು ವಿರೋಧಗಳ ನಡುವೆ ಮೂಲೆಗುಂಪಾಗಿತ್ತು. ನೆಹರೂ ಮೊದಲಿನಿಂದಲೂ ಹಿಂದೂ ವೈಯುಕ್ತಿಕ ಕಾನೂನು ಸುಧಾರಣೆ ತನ್ನ ಪ್ರಥಮ ಆದ್ಯತೆ ಎಂದೇ ಹೇಳುತ್ತಿದ್ದರು. ಏಕರೂಪ ಕಾನೂನಿನಿಂದ ಹಿಂದೂ ಎಂಬ ಭಾವನೆಯುಂಟಾಗಿ ರಾಷ್ಟ್ರೀಯತೆಗೆ ಪೂರಕವಾಗಲಿ ಎನ್ನುವುದು ಅವರ ಉದ್ದೇಶ.  ಸ್ವಾತಂತ್ರ್ಯಾನಂತರ 1944ರ ಹಿಂದೂ ಕೋಡ್ ಬಿಲ್ ಅನ್ನು ಪರಿಷ್ಕರಣೆಗಾಗಿ ಕಾನೂನು ಮಂತ್ರಾಲಯಕ್ಕೆ ಕಳಿಸಲಾಯಿತು. ಕಾನೂನು ಮಂತ್ರಿ ಅಂಬೇಡ್ಕರ್ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಹೀಗೆ ಪರಿಷ್ಕರಣಗೊಂಡ ಮಸೂದೆಯು ಎಂಟು ಭಾಗಗಳನ್ನೊಳಗೊಂಡಿತ್ತು. ಈ ಭಾಗದಲ್ಲಿ ಹಿಂದೂ ಯಾರೆಂದು ಚರ್ಚಿಸಲಾಗಿತ್ತು. ಮುಸ್ಲಿಂ, ಪಾರ್ಸಿ,  ಕ್ರಿಶ್ಚಿಯನ್, ಜ್ಯೂ ಅಲ್ಲದೇ ಇರುವ ವ್ಯಕ್ತಿ ಹಿಂದೂ ಎಂದು ಗುರುತಿಸಲಾಗಿತ್ತು. ಅವರೆಲ್ಲ ಏಕರೂಪ ಸಂಹಿತೆಗೆ ಒಳಪಡುತ್ತಿದ್ದರಿಂದ ಇದು ಜಾತಿವ್ಯವಸ್ಥೆಯನ್ನು ಭಗ್ನಗೊಳಿಸುವಂತಿತ್ತು.   ಅಂಬೇಡ್ಕರ್ ಅವರ ಈ ಪರಿಷ್ಕೃತ ಆವೃತ್ತಿಯಲ್ಲಿ ವಿಚ್ಛೇದನಕ್ಕೆ ಅವಕಾಶವಿತ್ತು. ಅಲ್ಲಿಯವರೆಗೆ ಕೆಳಸಮುದಾಯಗಳಲ್ಲಿ ವಿಚ್ಛೇದನವು ಚಾಲ್ತಿಯಲ್ಲಿದ್ದರೂ ಅದನ್ನು ಕಾನೂನಾಗಿ ಮಾನ್ಯ ಮಾಡಿರಲಿಲ್ಲ. ವಿಧವೆಗೆ ಗಂಡನ ಆಸ್ತಿಯ ಪೂರಾ ಹಕ್ಕು ಹಾಗೂ ಮದುವೆಯಾದ ಹೆಣ್ಣುಮಕ್ಕಳಿಗೆ ತವರಿನ ಆಸ್ತಿ ಹಕ್ಕುಗಳು ಪ್ರಸ್ತಾಪಿಸಲ್ಪಟ್ಟಿದ್ದವು. ಅಲ್ಲದೇ ಯಾರು ಹಿಂದೂ ಎಂದು ವಿವರಿಸುವಾಗ ಜೈನ, ಬೌದ್ಧ ಹಾಗೂ ಸಿಖ್ ಧರ್ಮಗಳೂ ಹಿಂದೂ ನೀತಿ ಸಂಹಿತೆಗೇ ಒಳಪಡುವಂತಿತ್ತು. ಇದನ್ನು ಆ ಸಮುದಾಯದವರು ತೀವ್ರವಾಗಿ ವಿರೋಧಿಸಿದರು.ಹಿಂದೂ ಕೋಡ್ ಬಿಲ್ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯುವಂತಿತ್ತು. ಯಾವುದೇ ಸಾಮಾಜಿಕ ಬದಲಾವಣೆ ಬಯಸುವುದಾದರೂ ಅದಕ್ಕೊಂದು ಸೂಕ್ತ ಕಾನೂನು ಚೌಕಟ್ಟು ಒದಗಿಸುವುದು ಅವಶ್ಯ ಎಂಬುದು ಅಂಬೇಡ್ಕರ್ ಅವರ ನಿಲುವು. ಹೀಗೆ ಪುರುಷ ಪ್ರಧಾನ ಸಮಾಜಕ್ಕೂ, ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗೂ ಬದಲಾವಣೆ ತರಬಯಸಿದ್ದ ಹಿಂದೂ ಕೋಡ್ ಬಿಲ್ ಮೂರ್ನಾಲ್ಕು ವರ್ಷ ಸಂಸತ್ತಿನಲ್ಲಿ ಹಲವು ವಿವಾದಗಳು, ಚರ್ಚೆಗಳಿಗೆ ಗುರಿಯಾಯಿತು.ಕಾಂಗ್ರೆಸ್ಸಿನ ಕೆಲವು ಧುರೀಣರೇ ಅದನ್ನು ವಿರೋಧಿಸಿದರು. ನೆಹರೂ ವಿವಾದ ಶಮನಗೊಳಿಸಲು ಭಾಗಶಃ ಅದನ್ನು ಚರ್ಚೆಗೆ ಪರಿಗಣಿಸಬೇಕೆಂದು ಯತ್ನಿಸಿದರು. ಆದರೆ ಅದೂ ಸಾಧ್ಯವಾಗದೇ ಕೊನೆಗೆ ಮತಕ್ಕೆ ಹಾಕಿದಾಗ 28/23 ಅಂತರದಲ್ಲಿ ಬೆಂಬಲವಿಲ್ಲದೇ ತಿರಸ್ಕೃತವಾಯಿತು.ಇದರಿಂದ ಅತೀವ ನೊಂದ ಅಂಬೇಡ್ಕರ್ ‘ಅಳುವವರಿಲ್ಲದೇ ಶೋಕಿಸುವವರಿಲ್ಲದೇ ಹಿಂದೂ ಕೋಡ್ ಬಿಲ್ ಕೊಲೆಯಾಯಿತು’ ಎಂದೇ ಪ್ರತಿಕ್ರಿಯಿಸಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಆದರೆ ಅವರು ಸೂಚಿಸಿದ ಬಹಳಷ್ಟು ಸುಧಾರಣೆಗಳನ್ನು ನೆಹರೂ ಚುನಾವಣೆಗಳ ನಂತರ ರಚಿತವಾದ ಸರ್ಕಾರದ ಮುಖ್ಯ ಆದ್ಯತೆಯನ್ನಾಗಿ ಪರಿಗಣಿಸಿ, ಹಿಂದೂ ಮದುವೆ ಪದ್ಧತಿ, ವಾರಸುದಾರಿಕೆ, ಅಪ್ರಾಪ್ತ ವಯಸ್ಕ ಹಾಗೂ ಪೋಷಕತ್ವ, ಜೀವನಾಂಶ ಎಂಬ ನಾಲ್ಕು ಬೇರೆಬೇರೆ ಮಸೂದೆಗಳನ್ನು ತಂದರು.  ಸಂವಿಧಾನ ಬಂದು ಈಗ್ಗೆ 61 ವರ್ಷಗಳಾದ ನಂತರವೂ ಬೆರಳೆಣಿಕೆಯಷ್ಟು ಮಹಿಳಾ ರಾಜಕಾರಣಿಗಳಿದ್ದಾರೆ. ಶೇ 33 ಮಹಿಳಾ ಮೀಸಲಾತಿ ಬೇಕೆಂದು ಕೇಳುತ್ತಿದ್ದೇವೆ. ಇದು ಏನನ್ನು ತೋರಿಸುವುದೆಂದರೆ ಕಾನೂನಿನ ಒತ್ತಾಯವಿಲ್ಲದಿದ್ದರೆ ರಾಜಕೀಯ ಪಕ್ಷಗಳಾಗಲೀ, ಸಂಘಟನೆಗಳಾಗಲೀ ಯಾವ ಅವಕಾಶವನ್ನೂ ಶೋಷಿತರಿಗೆಂದು ಮೀಸಲಿಡುವ ಬದ್ಧತೆ ತೋರಿಸುವುದಿಲ್ಲ. ಇದನ್ನು ಅಂಬೇಡ್ಕರ್ ಮೊದಲೇ ಊಹಿಸಿದ್ದರು. ಎಂದೇ ಶೋಷಿತರಿಗೆ ಕಾನೂನುಬದ್ಧ ಮೀಸಲಾತಿ ಬೇಕೆಂದು ಒತ್ತಾಯಿಸಿದ್ದರು. ಈ ದೂರದೃಷ್ಟಿಯೇ ಅಂಬೇಡ್ಕರರನ್ನು ಅದ್ವಿತೀಯ ಚಿಂತಕರನ್ನಾಗಿಸಿರುವುದು.ಅಂಬೇಡ್ಕರ್ ದಿನಾಚರಣೆಯ ಹೊತ್ತಲ್ಲಿ ಈ ಎಲ್ಲವನ್ನು ನೆನೆಯುತ್ತ ಅವರ ವ್ಯಕ್ತಿತ್ವದಿಂದ ಎಲ್ಲರೂ, ಅದರಲ್ಲೂ ಮಹಿಳೆಯರು ಒಂದೆರಡು ಸಂಗತಿಗಳನ್ನು ಅವಶ್ಯವಾಗಿ ಕಲಿಯಬೇಕಿದೆ. ಮೊದಲನೆಯದು ನಿಷ್ಠುರತೆ. ರಾಜಿ ಆಮಿಷಗಳಿಗೆ ಬಲಿಯಾಗದಂತೆ ನೈತಿಕತೆಯ ಕಾವಲಿಗಿರುವುದು ನಿಷ್ಠುರತೆ. ನೈತಿಕತೆಯ ಬಗೆಗೆ ಗಮನ ನೀಡದೇ ಹೋದಲ್ಲಿ ಹೆಣ್ಣಿನ ಅನನ್ಯತೆ ಮಾಯವಾಗಿ ಭ್ರಷ್ಟಾತಿಭ್ರಷ್ಟ ಮಹಿಳಾ ರಾಜಕಾರಣಿ, ಅಧಿಕಾರಿಗಳ ಉದಾಹರಣೆಗಳ ಪಟ್ಟಿ ಇನ್ನಷ್ಟು ಉದ್ದವಾಗುವ ಅಪಾಯವಿದೆ.  ಎರಡನೆಯದಾಗಿ ವ್ಯಕ್ತಿಪೂಜೆಯನ್ನು ಅಂಬೇಡ್ಕರ್ ಒಪ್ಪುತ್ತಿರಲಿಲ್ಲ.

 

ಈ ವಿಷಯಕ್ಕೆ ಬುದ್ಧನೂ, ಬೌದ್ಧಧರ್ಮವೂ ಹೊರತಾಗಿರಲಿಲ್ಲ. ಮೂರನೆಯದಾಗಿ ಆತ್ಮಮರುಕದ ಛಾಯೆಯಿಲ್ಲದ ಚಿಂತನೆ. ಶೋಷಿತರು ಆತ್ಮಗೌರವ ಬೆಳೆಸಿಕೊಳ್ಳಬೇಕಾದಲ್ಲಿ ಬಿಡಬೇಕಾದ ಮೊದಲ ಗುಣ ಆತ್ಮಮರುಕ. ಕೌಟುಂಬಿಕವಾಗಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗಲೂ, ಒಂಟಿಯಾದಾಗಲೂ, ಸಂಘಟನೆಯಲ್ಲಿದ್ದಾಗಲೂ ಆತ್ಮಮರುಕದ ಛಾಯೆ ಅಂಬೇಡ್ಕರ್ ವ್ಯಕ್ತಿತ್ವದಲ್ಲಿ ಕಾಣುವುದಿಲ್ಲ. ಈ ಮೂರೂ ಗುಣಗಳು ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳದ ವೈಜ್ಞಾನಿಕ ಮನೋಭಾವವನ್ನೂ, ದೂರದೃಷ್ಟಿಯನ್ನೂ, ಮುಕ್ತಮನಸ್ಥಿತಿಯನ್ನೂ ಬೆಳೆಸುತ್ತವೆ. ಆರೋಪಿಸುತ್ತ ಬೆರಳು ತೋರುವ ಮುನ್ನ ಅದನ್ನು ನಮ್ಮ ಕಡೆಗೇ ತಿರುಗಿಸಿಕೊಳ್ಳುವಷ್ಟು ಆತ್ಮಪರೀಕ್ಷೆಯ ಧೈರ್ಯ ಕೊಡುತ್ತವೆ. ಇವು ಮಹಿಳೆಗೆ ವಿಶಿಷ್ಟವಾದ ಗುಣಗಳೇ. ಅದನ್ನಾಕೆ ಮರೆತಿದ್ದಾಳೆ ಅಷ್ಟೇ. ಆತ್ಮಗೌರವ ಗಳಿಸಿಕೊಳ್ಳುವ ಹಾದಿಯಲ್ಲಿ ಇವನ್ನು ಮೈಗೂಡಿಸಿಕೊಳ್ಳುವುದು ಅಂಬೇಡ್ಕರ್ ಸ್ಮರಣೆಗೆ ನಿಜವಾದ ಅರ್ಥ ತಂದುಕೊಡುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.