ಶನಿವಾರ, ಮೇ 8, 2021
19 °C

ಸ್ಮಾರಕಗಳ ರಕ್ಷಣೆ ಉಪೇಕ್ಷೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐತಿಹಾಸಿಕ ಸ್ಮಾರಕಗಳನ್ನು ಜೋಪಾನ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ, ಸ್ಮಾರಕಗಳ ಸುತ್ತಲಿನ ಪ್ರದೇಶದ ಒತ್ತುವರಿಯನ್ನು ತಡೆಯಲೂ ಆಸಕ್ತಿ ಇಲ್ಲ; ಸ್ಮಾರಕಗಳ ಸಂರಕ್ಷಣೆಗೆ ಸಂಘಟಿತ ಕಾರ್ಯತಂತ್ರ ಬಳಸುತ್ತಿಲ್ಲ, ಅನುದಾನ ಹಂಚಿಕೆಯೂ ಸಮರ್ಪಕವಾಗಿಲ್ಲ ಇತ್ಯಾದಿ ಹಲವು ಲೋಪಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ಇತ್ತೀಚಿನ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.ಸರ್ಕಾರದ ನಿರ್ಲಕ್ಷ್ಯ ಧೋರಣೆ ಆಘಾತಕಾರಿ. ಬಿಜೆಪಿ ಮುಖಂಡರು ದೇಶದ ಸಾಂಸ್ಕೃತಿಕ ವಾರಸುದಾರಿಕೆಯನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ. ಅದೇ ಪಕ್ಷದ ಸರ್ಕಾರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಸ್ಮಾರಕಗಳ ರಕ್ಷಣೆಯ ಕರ್ತವ್ಯವನ್ನೇ ಮರೆತಿದೆ.ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ರಾಜಕೀಯ ಗುಂಪುಗಾರಿಕೆಯಲ್ಲಿ ಮುಳುಗಿರುವ ಸರ್ಕಾರಕ್ಕೆ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಗಮನವಿಲ್ಲ. ಹಿಂದಿನ ಯಾವ ಸರ್ಕಾರಗಳೂ ಈ ವಿಷಯದಲ್ಲಿ ಇಷ್ಟು ಬೇಜವಾಬ್ದಾರಿಯಾಗಿ ವರ್ತಿಸಿರಲಿಲ್ಲ. ಸ್ಮಾರಕಗಳ ಸುತ್ತಲಿನ ಜಾಗವನ್ನು ಒತ್ತುವರಿ ಆಗದಂತೆ ತಡೆಯುವ ವಿಷಯದ್ಲ್ಲಲಿ ಸರ್ಕಾರ ತಾಳಿರುವ ನಿರ್ಲಕ್ಷ್ಯದ ಧೋರಣೆ ಅಕ್ಷಮ್ಯ.ಅತ್ಯಧಿಕ ಸಂರಕ್ಷಿತ ಸ್ಮಾರಕಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ 518 ಸ್ಮಾರಕಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.ಉಳಿದ 763 ಸ್ಮಾರಕಗಳು ರಾಜ್ಯ ಪ್ರಾಚ್ಯ ವಸ್ತು ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತವೆ. ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಒಬ್ಬ ಸಚಿವರಿದ್ದಾರೆ, ನಿರ್ದೇಶನಾಲಯವೂ ಇದೆ. ಜಿಲ್ಲಾ ಮಟ್ಟದಲ್ಲಿ ಕಚೇರಿಗಳಿವೆ. ಸ್ಮಾರಕಗಳ ಒತ್ತುವರಿಯನ್ನು ತಡೆಯುವುದು ಜಿಲ್ಲಾಡಳಿತಗಳ ಕರ್ತವ್ಯ.ಸಂಬಂಧಿಸಿದ ಇಲಾಖೆಗಳು ಒತ್ತುವರಿ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಅದನ್ನು ತಡೆಗಟ್ಟಬೇಕು. ಆದರೆ, ಸೊರಬ, ಶಿಕಾರಿಪುರ, ಸಂಡೂರು, ಗಂಗಾವತಿ ತಾಲ್ಲೂಕುಗಳಲ್ಲಿ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜಾಗದ ಅತಿಕ್ರಮಣ ಆಗಿದೆ. ವಿಶ್ವಪರಂಪರೆಯ ತಾಣವಾದ ಹಂಪಿಯಲ್ಲೂ ಒತ್ತುವರಿ ಆಗಿದೆ.ಮೈಸೂರು ಅರಮನೆಯ ಭದ್ರತಾ ಕೋಣೆಯಲ್ಲಿರುವ ಚಿನ್ನ, ಬೆಳ್ಳಿ, ತಾಮ್ರ ಮತ್ತಿತರ ಲೋಹ ಪರಿಕರಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ಕೆಲಸ ನಡೆಯುತ್ತಿಲ್ಲ. ಈ ವಸ್ತುಗಳ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರ 2008ರಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಕೆಲಸವನ್ನೇ ಆರಂಭಿಸಿಲ್ಲ.ಸರ್ಕಾರ ತಕ್ಷಣವೇ  ಸ್ಮಾರಕಗಳ ಒತ್ತುವರಿಯ ತೆರವಿಗೆ ಗಮನ ಕೊಡಬೇಕು. ಒತ್ತುವರಿಗೆ ಜಿಲ್ಲಾ ಆಡಳಿತಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು. ಸ್ಮಾರಕಗಳು ನಾಶವಾದರೆ ರಾಜ್ಯದ ಸಾಂಸ್ಕೃತಿಕ ಪರಂಪರೆಯೂ ನಾಶವಾಗುತ್ತದೆ ಎಂಬ ಎಚ್ಚರ ಸರ್ಕಾರಕ್ಕೆ ಇರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.